More

    ಯುಪಿಎಸ್ಸಿ ಆಕಾಂಕ್ಷಿಗಳ ಪ್ರಶ್ನೆಗಳಿಗೆ ವಿಜಯವಾಣಿ ಫೋನ್​ ಇನ್​ನಲ್ಲಿ ಟಾಪರ್​ಗಳು ನೀಡಿದ ಉತ್ತರಗಳಿವು

    ಬೆಂಗಳೂರು: ದೇಶದಲ್ಲಿ 2019ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಿ ಭಾರತೀಯ ಆಡಳಿತ ಸೇವೆ (ಐಎಎಸ್)ಗೆ ಹುದ್ದೆ ಪಡೆಯುವುದು ಪ್ರತಿಯೊಬ್ಬ ಪದವಿ ಪಡೆದ ವಿದ್ಯಾರ್ಥಿಯ ಕನಸಾಗಿರುತ್ತದೆ. ಈ ನಿಟ್ಟಿನಲ್ಲಿ ಐಎಎಸ್ ಕನಸನ್ನು, ನನಸು ಮಾಡಿಕೊಂಡ ಯುಪಿಎಸ್​ಸಿ ಟಾಪರ್​ಗಳ ಜತೆಗೆ ವಿಜಯವಾಣಿ, ದಿಗ್ವಿಜಯ 27/7 ನ್ಯೂಸ್ ಚಾನಲ್ ವತಿಯಿಂದ ಶನಿವಾರ ನೇರ ಫೋನ್​ಇನ್ ಕಾರ್ಯಕ್ರಮದ ಮೂಲಕ ಐಎಎಸ್ ಆಕಾಂಕ್ಷಿಗಳು ಮಾತನಾಡಲು ವೇದಿಕೆ ಕಲ್ಪಿಸಿಕೊಟ್ಟಿತ್ತು.

    ರಾಜ್ಯದ ಯುಪಿಎಸ್​ಸಿ ಟಾಪರ್​ಗಳಾದ ಎಂ.ಆರ್. ಕೌಶಿಕ್, ಕೆ.ಟಿ. ಮೇಘನಾ, ಎನ್. ವಿವೇಕರೆಡ್ಡಿ ಹಾಗೂ ದರ್ಶನ್ ಅವರೊಂದಿಗೆ ನೇರ ಫೋನ್​ಇನ್ ಮೂಲಕ ರಾಜ್ಯದಾದ್ಯಂತ 40ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕರೆ ಮಾಡಿ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರು ಏನು ಪ್ರಶ್ನೆ ಕೇಳಿದ್ದಾರೆ, ಅವರಿಂದ ಏನು ಸಲಹೆಗಳನ್ನು ಪಡೆದುಕೊಂಡಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

    # ನರಸಿಂಹ, ಕೊಪ್ಪಳ: ಎಂ.ಕಾಂ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆರ್ಥಿಕ ತೊಂದರೆಯಿದೆ. ಹೀಗಾಗಿ ಉದ್ಯೋಗ ಮಾಡಿಕೊಂಡು ಕನ್ನಡದಲ್ಲಿ ಯುಪಿಎಸ್​ಸಿ ಪರೀಕ್ಷೆ ಬರೆಯಲು ಯಾವ ಕ್ರಮ ಅನುಸರಿಸಬೇಕು?

    ಬಹುತೇಕ ಯುಪಿಎಸ್​ಸಿ ಉತ್ತೀರ್ಣರಾದ ಸಿಬ್ಬಂದಿ ಬದಲಿ ಉದ್ಯೋಗ ಮಾಡುತ್ತಿದ್ದು, ನಿರಂತರ ಅಭ್ಯಾಸದ ಮೂಲಕ ಯುಪಿಎಸ್​ಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಉದ್ಯೋಗದಲ್ಲಿದ್ದರೂ, ಸತತ ಅಭ್ಯಾಸದ ಮೂಲಕ ಪರೀಕ್ಷೆ ಬರೆಯಬೇಕು. ಜತೆಗೆ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುವುದು ಒಂದು ಮಾರ್ಗವಾಗಿದ್ದು, ವೈಯಕ್ತಿಕ ಅಭ್ಯಾಸದ ಮೂಲಕ ಅಗತ್ಯ ಪುಸ್ತಕಗಳು, ಡಿಜಿಟಲ್ ಸಂಪನ್ಮೂಲ, ಆನ್​ಲೈನ್ ಮಾದರಿ ಪರೀಕ್ಷೆಗಳನ್ನು ಎದುರಿಸುವ ಮೂಲಕ ಪರೀಕ್ಷೆಗೆ ಸಿದ್ಧರಾಗಬಹುದು.

    # ಸಿದ್ಲಿಂಗಪ್ಪ ಅಂಗಡಿ, ಹುಬ್ಬಳ್ಳಿ : ಯುಪಿಎಸ್​ಸಿ ಪರೀಕ್ಷೆಗೆ ಕಠಿಣ ಶ್ರಮ ಹೇಗೆ ಹಾಕಬೇಕು?

    ಈ ಪರೀಕ್ಷಗೆ ಕಠಿಣ ಶ್ರಮಪಡುವುದು ತುಂಬಾ ಅಗತ್ಯವಾಗಿದೆ. ಆದರೆ, ಪುಸ್ತಕದ ಹುಳುವಾಗದೆ ಓದಿನಲ್ಲಿ ಚತುರತೆಯನ್ನು(ಸ್ಮಾರ್ಟ್ ವರ್ಕ್) ಅಳವಡಿಸಿಕೊಳ್ಳಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಮೂಲಕ, ಪ್ರಚಲಿತ ಘಟನೆಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಬೇಕು.

    # ಸ್ವಾತಿ, ಖಾನಾಪುರ: ಯುಪಿಎಸ್​ಸಿ ತಯಾರಿಗೆ ವಿದ್ಯಾಭ್ಯಾಸದಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು?

    ನೀವು ಯಾವ ವಿಷಯ ಆಯ್ಕೆ ಮಾಡಿಕೊಂಡು ಪದವಿ ಪೂರ್ಣಗೊಳಿಸಿದರೂ, ಯುಪಿಎಸ್​ಸಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತೀರಿ. ಆದರೆ, ಯುಪಿಎಸ್​ಸಿ ಸಿಗದಿದ್ದರೂ ಬದಲು ಹುದ್ದೆ ಪಡೆಯುವ ಆಕಾಂಕ್ಷೆಯಿದ್ದರೆ, ತಾಂತ್ರಿಕ ಪದವಿ ಮಾಡಿ. ಇಲ್ಲದಿದ್ದರೆ ಕಲಾ ವಿಭಾಗದಲ್ಲಿ ಪದವಿ ಮಾಡಿ ಏಎಎಸ್ ಹುದ್ದೆ ಪಡೆಯುವ ಕನಸು ನನಸಾಗಿಸಿಕೊಳ್ಳಬಹುದು.

    # ಪ್ರೀತಿ, ಧಾರವಾಡ: ಓದಿಗೆ ಸಮಯ ಹೇಗೆ ಮೀಸಲಿಡಬೇಕು?

    ನಮ್ಮ ಆಸಕ್ತಿ ಹಾಗೂ ಗ್ರಹಣಶಕ್ತಿಗನುಗುಣವಾಗಿ ವಿಷಯಗಳನ್ನು ಅಭ್ಯಾಸ ಮಾಡಬೇಕು. ಬೆಳಗ್ಗೆ ಕ್ಲಿಷ್ಟಕರ ವಿಷಯ, ಮಧ್ಯಾಹ್ನ ಇಷ್ಟದ ವಿಷಯ ಹಾಗೂ ರಾತ್ರಿ ವೇಳೆ ಪ್ರಶ್ನೆ ಪತ್ರಿಕೆ ಬಿಡಿಸುವುದು, ಲೆಕ್ಕ ಸಮಸ್ಯೆ ಪರಿಹಾರದ ಕಾರ್ಯವನ್ನು ಮಾಡಬೇಕು. ಪ್ರತಿನಿತ್ಯ ಅಭ್ಯಾಸ ನಿರಂತರವಾಗಿರಬೇಕು.

    # ಅಮರೇಶ್ ಹಿರೇಮಠ, ರಾಯಚೂರು: ಈದಿದ್ದನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ?

    ನಮಗೆ ಇಷ್ಟವಾದ ಸ್ನೇಹಿತರು ಹಾಗೂ ಮನೆಯವರ ಹೆಸರನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆಯೊ ಹಾಗೆ, ಪುಸ್ತಕ ಮತ್ತು ಅದಲ್ಲಿನ ವಿಷಯಗಳನ್ನು ಇಷ್ಟದಿಂದ ಅಭ್ಯಾಸ ಮಾಡಬೇಕು. ಅಭ್ಯಾಸ ವೇಳೆ ಆಸಕ್ತಿ ಮತ್ತು ತಾಳ್ಮೆಯಿರಬೇಕು. ಒಂದು ವಿಷಯವನ್ನು 10 ಬಾರಿ ಅಥವಾ ಇನ್ನು ಹೆಚ್ಚು ಸಮಯ ಸಿಕ್ಕರೆ 11 ಬಾರಿ ಪುನರಾವರ್ತನೆ ಅಭ್ಯಾಸ ಮಾಡಬೇಕು. ನಾವು ಹೆಚ್ಚು ಪುನರಾವರ್ತನೆಯಾಗಿ ಅಭ್ಯಾಸ ಮಾಡಿದಷ್ಟು ನಮ್ಮ ನೆನಪಿನಲ್ಲಿ ಉಳಿಯುತ್ತದೆ.

    # ಸಂತೋಷ್, ಬಳ್ಳಾರಿ: ಐಎಎಸ್ ಹುದ್ದೆಗೆ ದೈಹಿಕ ಅರ್ಹತೆ ಅಗತ್ಯವಿದೆಯೇ?

    ಯುಪಿಎಸ್​ಸಿ ವತಿಯಿಂದ ಐಎಎಸ್ ಹುದ್ದೆಗಳಿಗೆ ನಡೆಸುವ ಪರೀಕ್ಷೆ ಅಥವಾ ಹುದ್ದೆಗಳಿಗೆ ಆಯ್ಕೆಯಾಗಲು ಯಾವುದೇ ದೈಹಿಕ ಅರ್ಹತೆ ಮಾನದಂಡ ಬೇಕಿಲ್ಲ. ದೈಹಿಕವಾಗಿ ಆರೋಗ್ಯವಾಗಿದ್ದರೆ, ಉತ್ತಮವಾಗಿ ಅಭ್ಯಾಸ ಮಾಡಬಹುದು. ಹೀಗಾಗಿ, ಆರೋಗ್ಯ ಕಾಳಜಿ ಮೂಲಕ ನಿರಂತರ ಅಭ್ಯಾಸ ಮಾಡುವುದು ಅಗತ್ಯವಾಗಿದೆ.

    # ವಚನಾ, ಧಾರವಾಡ: ದಿನಪತ್ರಿಕೆಗಳ ಅಭ್ಯಾಸ ಹೇಗೆ ಮಾಡಬೇಕು?

    ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ದಿನಪತ್ರಿಕೆಗಳ ಓದುವಿಕೆ ಮುಖ್ಯವಾಗಿದೆ. ದಿನಪತ್ರಿಕೆಗಳನ್ನು ಪುಸ್ತಕಗಳ ಓದದೆ, ವಿಷಯ ಏನಿದೆ?, ಯಾಕೆ ವಿಷಯವನ್ನು ಅಳವಡಿಕೆ ಮಾಡಿದ್ದಾರೆ?, ಅದರಿಂದಾಗುವ ಪರಿಣಾಮಗಳೇನು? ಎಂಬುದರ ಬಗ್ಗೆ ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡಬೇಕು. ಜತೆಗೆ, ಅದನ್ನು ಪಟ್ಟಿ ಮಾಡಿ ಸಂಗ್ರಹಿಸಿಟ್ಟುಕೊಳ್ಳಬೇಕು.

    # ಲಕ್ಷ್ಮೀ ಸಾಗರ್, ಚನ್ನಪಟ್ಟಣ: ಐಚ್ಛಿಕ ವಿಷಯ ಆಯ್ಕೆಗೆ ಅವಕಾಶವಿದೆಯೇ?

    ಯುಪಿಎಸ್​ಸಿ ಪರೀಕ್ಷೆಗೆ ಫೊರೆನ್ಸಿಕ್ ಸೈನ್ಸ್ ಐಚ್ಛಿಕ ವಿಷಯವಿಲ್ಲ. ನೀವು ಪರೀಕ್ಷೆಗೆ ಅಭ್ಯಾಸ ಆರಂಭಿಸುವುದಕ್ಕೆ ಮುನ್ನ ಪಠ್ಯಕ್ರಮವನ್ನು ಆನ್​ಲೈನ್​ನಲ್ಲಿ ನೋಡಬೇಕು. ನಂತರ ನಿಮಗೆ ಆಸಕ್ತಿಯಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

    # ಪ್ರವೀನ್, ವಿಜಯಪುರ: ಯಾವ ಭಾಷೆಯಲ್ಲಿ ಪರೀಕ್ಷೆ ಬರೆದರೆ ಹೆಚ್ಚು ಅಂಕ ಬರುತ್ತವೆ?

    ಯಾವಾಗಲೂ ನಮಗೆ ಯಾವ ಭಾಷೆಯ ಮೇಲೆ ಹೆಚ್ಚಿನ ಹಿಡಿತವಿರುತ್ತದೆಯೊ, ಆ ಭಾಷೆಯಲ್ಲಿ ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಹೆಚ್ಚಿನ ವಿಷಯವನ್ನು ಕೇವಲ ಕಡಿಮೆ ಪದಗಳಲ್ಲಿ ಭಾವನಾತ್ಮಕವಾಗಿ ಅಭಿವ್ಯಕ್ತಪಡಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಿಮಗೆ ಅನುಕೂಲವಾದ ಭಾಷೆ ಆಯ್ಕೆ ಮಾಡಿಕೊಳ್ಳಬೇಕು.

    # ಖುಷಿಕುಮಾರ್, ಬಾಗಲಕೋಟೆ: ಎಷ್ಟು ವರ್ಷ ಪರೀಕ್ಷೆ ಬರೆಯಬಹುದು, ಮೀಸಲಾತಿವಾರು ಮಾಹಿತಿ ತಿಳಿಸಿ?

    ಪದವಿ ಪೂರ್ಣಗೊಳಿಸಿದ 21 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಯುಪಿಎಸ್​ಸಿ ಪರೀಕ್ಷೆ ಬರೆಯಬಹುದಾಗಿದೆ. ಸಾಮಾನ್ಯ ವರ್ಗದವರಿಗೆ 6 ಬಾರಿ ಅಥವಾ 32 ವರ್ಷದೊಳಗೆ, ಹಿಂದುಳಿದ ವರ್ಗದವರಿಗೆ 8 ಬಾರಿ ಅಥವಾ 35 ವರ್ಷದೊಳಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 38 ವರ್ಷದವರೆಗೆ ಅನಿಮಿಯಮಿತವಾಗಿ ಪರೀಕ್ಷೆ ಬರೆಯಬಹುದಾಗಿದೆ.

    # ಗಣೇಶ್, ಮಂಡ್ಯ: ಎನ್​ಸಿಸಿ ಮೀಸಲಾತಿ ಇದೆಯೆ?

    ಯುಪಿಎಸ್​ಸಿ ಪರೀಕ್ಷೆಯಲ್ಲಿ ಎನ್​ಸಿಸಿ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯಿಲ್ಲ. ನೀವು ಮೀಸಲಾತಿ ಚಿಂತನೆ ಮಿಟ್ಟು ಜನರಲ್ ಮೆರಿಟ್ ಪಡೆದು ಐಎಎಸ್ ಹುದ್ದೆ ಪಡೆಯುವ ಗುರಿಯಿಟ್ಟುಕೊಂಡು ಅಭ್ಯಾಸ ಮಾಡಬೇಕು.

    # ಭರತ್ ರಜಪೂತ್, ಹುಬ್ಬಳ್ಳಿ: ಯುಪಿಎಸ್​ಸಿ ಪರೀಕ್ಷೆಗೆ ಅನುಕೂಲವಾಗಲು ಪದವಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು?

    ಯುಪಿಎಸ್​ಸಿ ಪರೀಕ್ಷೆ ಎದುರಿಸಿ ಐಎಎಸ್ ಮಾಡಿಸಲೇಬೇಕು ಎನ್ನುವ ನಿರ್ದಿಷ್ಟ ಗುರಿಯಿದ್ದರೆ, ಅವರಿಗೆ ಕಲಾ ವಿಭಾಗದಲ್ಲಿ ಪದವಿ ಮಾಡಿಸಬಹುದು. ಆದರೆ, ಯುಪಿಎಸ್​ಸಿ ಪರೀಕ್ಷೆ ಜತೆಗೆ ಯಾವುದಾದರೂ ಬೇರೆ ಕ್ಷೇತ್ರದಲ್ಲಿ ಉದ್ಯೋಗ ಮಾಡುವುದಿದ್ದರೆ ವಿಜ್ಞಾನ ಅಥವಾ ವೃತ್ತಿಪರ ಕೋರ್ಸ್​ಗಳಲ್ಲಿ ಪದವಿ ಮಾಡಬಹುದು.

    # ಸಂಕಲ್ಪ, ಹಂಪಿ: (ಎಸ್​ಎಸ್​ಎಲ್​ಸಿ ವಿದ್ಯಾರ್ಥಿ) ಹೈಸ್ಕೂಲ್ ಹಂತದಿಂದ ಯುಪಿಎಸ್​ಸಿ ತಯಾರಿ ಹೇಗೆ ಮಾಡಬೇಕು?

    ದೇಶದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್​ಸಿಇಆರ್​ಟಿ) ಪ್ರಕಟಿಸುವ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಪುಸ್ತಕಗಳನ್ನು ಅಭ್ಯಾಸ ಮಾಡಬೇಕು. ಹೀಗಾಗಿ, ನೀನು ಪ್ರೌಢಶಾಲೆಯಲ್ಲಿ ಉತ್ತಮವಾಗಿ ಅಭ್ಯಾಸ ಮಾಡುವ ಜತೆಗೆ, ಪದವಿ ಮುಗಿಸಿದ ನಂತರ ಮತ್ತೊಮ್ಮೆ ಅಭ್ಯಾಸ ಮಾಡಬೇಕು. ನಿನ್ನ ಪುಸ್ತಕಗಳನ್ನು ಯಾರಿಗೂ ಕೊಡದೆ, ನಿರಂತರ ಓದಬೇಕು.

    # ನಾಸಿರುದ್ದೀನ್, ಜೇವರ್ಗಿ: ಪ್ರಶ್ನೆ ಪತ್ರಿಕೆಗಳನ್ನು ಹೇಗೆ ಬಿಡಿಸಬೇಕು?

    ಮೊದಲು ಯುಪಿಎಸ್​ಸಿ ವೆಬ್​ಸೈಟ್​ನಲ್ಲಿ ಪಠ್ಯಕ್ರಮ ಮತ್ತು ಲಭ್ಯವಿರುವ ಹಿಂದಿನ ಮೂರು ವರ್ಷದ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಳ್ಳಬೇಕು. ಜತೆಗೆ, ಆನ್​ಲೈನ್​ನಲ್ಲಿ ಮಾದರಿ ಪರೀಕ್ಷೆಗಳನ್ನು ನಡೆಸುವ ಹಲವು ಸಂಸ್ಥೆಗಳಿದ್ದು, ಅವುಗಳನ್ನು ನಿರಂತರವಾಗಿ ಅಟೆಂಡ್ ಮಾಡಬೇಕು. ಆಗ, ಯಾವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ, ನಾಲ್ಕು ಉತ್ತರಗಳಲ್ಲಿ ಸಂಬಂಧಪಡದ ಉತ್ತರಗಳನ್ನು ತೆಗೆದುಹಾಕುವ ಜ್ಞಾನ ಬೆಳೆಯುತ್ತದೆ.

    # ಪೂಜಾ, ಧಾರವಾಡ: ಮನಸ್ಸಿನ ನಿಯಂತ್ರಣ ಹೇಗೆ ಕಾಪಾಡಿಕೊಳ್ಳಬೇಕು?

    ಯುಪಿಎಸ್​ಸಿ ಪರೀಕ್ಷೆ ಉತ್ತೀರ್ಣರಾಗಲೇಬೆಕು ಎಂಬ ಛಲವನ್ನು ಮೊದಲು ಮನಸ್ಸಿನಲ್ಲಿ ಗಟ್ಟಿಗೊಳಿಸವಬೇಕು. ಒಂದು, ಎರಡು, ಮೂರು ಅಥವಾ ನಿರಂತರವಾಗಿ ವಿಫಲವಾದರೂ, ಬಿಡದೇ ಕೊನೆಯ ಪ್ರಯತ್ನದವರೆಗೂ ಛಲಬಿಡದೇ ಅಭ್ಯಾಸ ಮಾಡಬೇಕು. ಅಂತಹ ಸಾಮರ್ಥ್ಯವಿದ್ದರೆ ಮಾತ್ರ ಪರೀಕ್ಷೆ ಪಾಸಾಗಬಹುದು.

    # ವೈಶಾಲಿ, ಹಟ್ಟಿ: ದಿನಪತ್ರಿಕೆಯಲ್ಲಿ ಪರೀಕ್ಷೆಗೆ ಪೂರಕ ಅಂಶಗಳನ್ನು ಹೇಗೆ ಗುರುತಿಸಬೇಕು?

    ನಾವು ಪರೀಕ್ಷಗೆ ಪುಸ್ತಕಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೇವೆಯೋ, ಅದೇ ರೀತಿ ಕನ್ನಡ ಮತ್ತು ಇಂಗ್ಲೀಷ್​ನ ತಲಾ ಒಂದು ಪತ್ರಿಕೆಗಳನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಜತೆಗೆ, ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಪರೀಕ್ಷೆಗೆ ಪೂರಕವಾಗಿ ಓದಬೇಕು.

    ಯುಪಿಎಸ್​ಸಿ ಕಷ್ಟವಲ್ಲ ಈಸಿ: ಇಲ್ಲಿವೆ ರಾಜ್ಯದ ಸಾಧಕರು ಕೊಟ್ಟಿರುವ ಟಿಪ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts