

ಸಾಕಷ್ಟು ಜನರಿಗೆ ಜೀವನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಐಎಸ್-ಐಪಿಎಸ್ ಆಗುವ ಕನಸು ಇರುತ್ತದೆ. ಆದರೆ, ಆ ಕನಸು ನನಸು ಮಾಡಿಕೊಳ್ಳುವವರು ಕೆಲವರು ಮಾತ್ರ. ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುವುದು ಹೇಗೆ?, ಓದಬೇಕಾದ ಪುಸ್ತಕಗಳು ಯಾವುವು?, ಆಯ್ಕೆ ಮಾಡಿಕೊಳ್ಳಬೇಕಾದ ವಿಷಯ ಯಾವುದು?, ಸಂದರ್ಶನ ಎದುರಿಸುವುದು ಹೇಗೆ? ಎಂಬುದರ ಜತೆಗೆ ಪಾಸ್ ಆಗಲು ಬೇಕಾದ ಟಿಪ್ಸ್ಗಳನ್ನು ಯುಪಿಎಸ್ಸಿ ಸಾಧಕರಾದ ಎಚ್.ಆರ್. ಕೌಶಿಕ್, ಕೆ.ಟಿ. ಮೇಘನಾ, ಎನ್. ವಿವೇಕ್ ರೆಡ್ಡಿ, ಎಚ್.ಜಿ. ದರ್ಶನ್ ಕುಮಾರ್ ಅವರು ವಿಜಯವಾಣಿ ಆಯೋಜಿಸಿದ್ದ ಫೋನ್ ಇನ್ನಲ್ಲಿ ಕೊಟ್ಟಿದ್ದಾರೆ. ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆಯುವ ಕನಸು ಕಾಣುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇವರ ಮಾತುಗಳು ಸ್ಪೂರ್ತಿದಾಯಕ.
ವಿಜಯವಾಣಿ ಪ್ರೇರಣೆ ಆಶಯ
ಪ್ರತಿ ವರ್ಷ ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯದಿಂದ ಅರ್ಹತೆ ಪಡೆದವರನ್ನು ಕಚೇರಿಗೆ ಕರೆಸಿ, ಸಮಾಜಕ್ಕೆ, ಮಕ್ಕಳಿಗೆ, ಆಕಾಂಕ್ಷಿಗಳಿಗೆ ಪ್ರೇರೇಪಣೆ ನೀಡುವ ಸಂಪ್ರದಾಯವನ್ನು ‘ವಿಜಯವಾಣಿ’ ಪಾಲಿಸಿಕೊಂಡು ಬಂದಿದೆ. ಈ ಬಾರಿ ದೇಶಾದ್ಯಂತ 6 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ ಅಂತಿಮವಾಗಿ ಆಯ್ಕೆಯಾಗಿದ್ದು, 829 ಮಂದಿ ಮಾತ್ರ. ಅವರ ಪೈಕಿ ಕರ್ನಾಟಕದ ಸಾಧಕರು 40ಕ್ಕೂ ಹೆಚ್ಚು ಮಂದಿ. ಅವರ ಪೈಕಿ ನಾಲ್ವರು ತಮ್ಮ ಅನುಭವ ಹಂಚಿಕೊಂಡರು.
ಜಾಲತಾಣ ಬಳಕೆಗೆ ಮಿತಿ ಸೂಕ್ತ
ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುವವರು ಸಾಮಾಜಿಕ ಜಾಲತಾಣ ಬಳಸದಿರುವುದೇ ಸೂಕ್ತ. ಒಂದು ವೇಳೆ ಬಳಕೆ ಮಾಡುವುದೇ ಆದರೆ ಅದಕ್ಕೆ ಮಿತಿ ನಿಗದಿ ಮಾಡಿಕೊಳ್ಳಬೇಕು. ಫೇಸ್ಬುಕ್, ವಾಟ್ಸ್ ಆಪ್, ಇನ್ಸ್ಟಾಗ್ರಾಮ್ಳಿಂದ ಉಪಯೋಗಕ್ಕಿಂತ ಸಮಯ ವ್ಯರ್ಥವಾಗುವುದೇ ಹೆಚ್ಚು. ವಾಟ್ಸ್ಆಪ್ ಗ್ರೂಪ್ ಮಾಡಿಕೊಂಡು ಅಭ್ಯಾಸ ನಡೆಸುವುದು ಒಂದು ಮಟ್ಟಕ್ಕೆ ಒಳ್ಳೆಯದು. ಆದರೆ, ಅದರಲ್ಲೇ ಕಾಲ ಕಳೆಯುವುದು ಸರಿಯಲ್ಲ ಎಂದು ಯುಪಿಎಸ್ಸಿ ಅಭ್ಯರ್ಥಿಗಳು ಸಲಹೆ ನೀಡಿದ್ದಾರೆ.
ಗೊಂದಲ ಬೇಡ, ಗುರಿ ಸ್ಪಷ್ಟವಿರಲಿ
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಬೇಕೆಂಬ ಬಹುತೇಕ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುನಲ್ಲಿ ಮತ್ತು ಪದವಿಯಲ್ಲಿ ಯಾವ ವಿಷಯ ಆರಿಸಿಕೊಳ್ಳಬೇಕೆಂಬುದೇ ದೊಡ್ಡ ಗೊಂದಲ ಆಗಿರುತ್ತದೆ. ಅಂಥ ವಿದ್ಯಾರ್ಥಿಗಳು ಮೊದಲು ತಮ್ಮ ಗುರಿ ಸ್ಪಷ್ಟಪಡಿಸಿಕೊಳ್ಳಬೇಕು. ಯುಪಿಎಸ್ಸಿ ಹೊರತಾಗಿ ಬೇರೇನೂ ಬೇಡ ಎಂದರೆ, ಕಲಾ ನಿಕಾಯ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ, ಯುಪಿಎಸ್ಸಿನಲ್ಲಿ ಮತ್ತೆ ಅದೇ ವಿಷಯಗಳನ್ನೇ ಓದಬೇಕಾಗಿರುತ್ತದೆ. ಯುಪಿಎಸ್ಸಿ ಪಾಸ್ ಆಗಿಲ್ಲವೆಂದರೆ ನನಗೊಂದು ಕೆಲಸ ಬೇಕು ಎಂಬುವರು ಸಾಮಾನ್ಯವಾಗಿ ಇಂಜಿನಿಯರಿಂಗ್, ಎಂಬಿಬಿಎಸ್ ಈ ರೀತಿ ವೃತ್ತಿಪರ ಕೋರ್ಸ್ ಆರಿಸಿಕೊಳ್ಳುವುದು ಉತ್ತಮ ಎಂದು ಅಭ್ಯರ್ಥಿಗಳು ತಿಳಿಸಿದರು.
ಎಲ್ಲರೂ ಹನುಮಂತರೇ. ಉತ್ತೇಜಿಸಲು ರಾಮ ಬರಬೇಕಷ್ಟೆ. ಹುರಿದುಂಬಿಸುವ ಕೆಲಸವಾದರೆ ಖಂಡಿತ ಕನ್ನಡದಲ್ಲೇ ಪರೀಕ್ಷೆ ಎದುರಿಸಿ ಪಾಸ್ ಆಗಬಹುದು. | ದರ್ಶನ್
ದೆಹಲಿಗೆ ಹೋಗಬೇಕಾಗಿಲ್ಲ
ಯುಪಿಎಸ್ಸಿ ಪರೀಕ್ಷೆಗೆ ತೆಗೆದುಕೊಳ್ಳುವವರು ಎಂದರೆ ಅವರೆಲ್ಲ ಹೈದರಾಬಾದ್ ಅಥವಾ ದೆಹಲಿ ಯಲ್ಲಿ ತರಬೇತಿ ಪಡೆಯಬೇಕೆಂಬ ಕಾಲ ಒಂದಿತ್ತು. ಇಂದು ಬೆಂಗಳೂರಿನಲ್ಲೇ ಉತ್ತಮ ತರಬೇತಿ ನೀಡುವ ಕೇಂದ್ರಗಳಿವೆ. 24 ಗಂಟೆಗಳ ಗ್ರಂಥಾಲಯಗಳಿವೆ. ಇಂಟರ್ನೆಟ್ ಇರುವುದರಿಂದ ಅದರ ಮೂಲಕ ವೆಬ್ಸೈಟ್ನಲ್ಲಿ ಸಿಗುವ ಮಾಹಿತಿ ಯಿಂದಲೂ ಅಭ್ಯಾಸ ನಡೆಸಬಹುದಾಗಿದೆ ಎನ್ನುತ್ತಾರೆ ಈ ಸಾಧಕರು.
ಯಶಸ್ಸಿನ ನವ ಸೂತ್ರ
2. ಕೋಚಿಂಗ್ಗೆ ಹೋಗಲೇಬೇಕೆಂದಿಲ್ಲ, ಹೋದರೆ ಮಾರ್ಗದರ್ಶನ ಸಿಗುತ್ತದೆ. ಈಗ ಡಿಜಿಟಲ್ ರೂಪದಲ್ಲಿ ಎಲ್ಲವೂ ಲಭ್ಯ.
3. ಪ್ರಸಕ್ತ ವಿದ್ಯಮಾನ ತಿಳಿಯಲು ಕನ್ನಡ, ಇಂಗ್ಲಿಷ್ ಪತ್ರಿಕೆ ಓದು ಮುಖ್ಯ. ರಾಜ್ಯಸಭಾ ಟಿವಿ, ಯೂಟ್ಯೂಬ್ ಉಪಯುಕ್ತ. ಸಾಮಾಜಿಕ ಜಾಲತಾಣದಿಂದ ದೂರ ಇರುವುದು ಉತ್ತಮ.
4. ಅನಗತ್ಯ ಓದು ಬೇಕಿಲ್ಲ. ಯಾವ ವಿಚಾರದಲ್ಲಿ ಹಿಂದಿದ್ದೇವೆಂದು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ
ನಾನು ನಿತ್ಯ ವಿಜಯವಾಣಿ, ವಿದ್ಯಾರ್ಥಿ ಮಿತ್ರ ಓದುತ್ತೇನೆ. ಇದರಿಂದ ಹೆಚ್ಚಿನ ಅನುಕೂಲವಾಗಿದೆ. ಆಕಾಂಕ್ಷಿಗಳು ಇದನ್ನು ಅನುಸರಿಸಿದರೆ ಉಪಯೋಗವಾಗಬಹುದು. | ಎಚ್.ಆರ್.ಕೌಶಿಕ್
ಯುಪಿಎಸ್ಸಿಗೆ ಉಪಯುಕ್ತ ಪುಸ್ತಕಗಳು
ಎಚ್.ಆರ್. ಕೌಶಿಕ್
ಹಾರ್ಡ್ ಆಂಡ್ ಸ್ಮಾರ್ಟ್
ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಬೇಕಾದರೆ ಕಠಿಣ ಪರಿಶ್ರಮ ಪಡಲೇಬೇಕು. ಜತೆಗೆ ಸ್ಮಾರ್ಟ್ವರ್ಕ್ ಕೂಡ ಅಷ್ಟೇ ಮುಖ್ಯ. ಬಹುತೇಕ ಅಭ್ಯರ್ಥಿಗಳಿಗೆ ಯಾವೆಲ್ಲ ವಿಷಯ ಓದಬೇಕು ಎಂಬುದಕ್ಕಿಂತ ಯಾವ ವಿಷಯ ಓದಬಾರದು ಎಂಬ ಅರಿವು ಇರಬೇಕು. ಸಿಕ್ಕ ಸಮಯವನ್ನು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಬಳಸಿಕೊಳ್ಳಬೇಕು. ಪತ್ರಿಕೆಗಳನ್ನು ಮತ್ತು ಎನ್ಸಿಇಆರ್ಟಿ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ಓದಬೇಕು. ಇದರ ಜತೆಗೆ ಪತ್ರಿಕೆಗಳನ್ನು ಓದುವಾಗ ವಿಷಯ ಏನು? ಇದರಿಂದ ಪ್ರಯೋಜನವೇನು? ಅನುಷ್ಠಾನ ಹೇಗೆ? ಎಂಬ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಓದಬೇಕು ಎಂದು ಕೌಶಿಕ್ ಹೇಳಿದರು.
ಕೆ.ಟಿ. ಮೇಘನಾ
ನಮ್ಮ ಗುರಿ ಬಿಡಬಾರದು
ಯುಪಿಎಸ್ಸಿ ಪಾಸ್ ಆಗಬೇಕೆಂಬ ಗುರಿ ನಿಮ್ಮಲ್ಲಿರಲಿ. ಫೇಲ್ ಆಗಲು ಕುಟುಂಬದ ಆರ್ಥಿಕ ವ್ಯವಸ್ಥೆ, ದೈಹಿಕ ಸಮಸ್ಯೆ ಅಡ್ಡಿ ಅಲ್ಲ ಎಂಬುದನ್ನು ಚೆನ್ನಾಗಿ ಅರಿತಿರಿ. ಒಮ್ಮೆ ಪಾಸ್ ಆಗಿಲ್ಲ ಎಂಬ ಕಾರಣಕ್ಕೆ ಪ್ರಯತ್ನ ಬಿಡಬಾರದು, ಮತ್ತೆ ಮತ್ತೆ ಪ್ರಯತ್ನಿಸುತ್ತಿರಿ. ಪ್ರತಿ ಪ್ರಯತ್ನದಲ್ಲೂ ನೀವು ಸುಧಾರಿಸಿಕೊಳ್ಳಬೇಕು. ಜೀವನದಲ್ಲಿ ಸಣ್ಣ ವಿಷಯ ಕಷ್ಟ ಎಂದುಕೊಂಡರೆ ಎಲ್ಲವೂ ಕಷ್ಟವೇ ಆಗಿರುತ್ತದೆ. ಇದನ್ನು ಮೆಟ್ಟಿ ನಿಲ್ಲುವ ಶಕ್ತಿ ರೂಢಿಸಿಕೊಳ್ಳಿ ಎಂದರು ಮೇಘನಾ.
ಎನ್. ವಿವೇಕ್ ರೆಡ್ಡಿ
ಕೋಚಿಂಗ್ ಬೇಕಾ?
ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅರಿವಿಲ್ಲದವರಿಗೆ ಕೋಚಿಂಗ್ ಅಗತ್ಯ. ಏಕೆಂದರೆ, ಇಲ್ಲಿ ಪರೀಕ್ಷೆ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಜತೆಗೆ ಯಾವ ರೀತಿಯಲ್ಲಿ ಓದಬೇಕು, ಏನನ್ನು ಓದಬೇಕು ಎಂಬುದನ್ನು ತಿಳಿಸಿಕೊಡುತ್ತಾರೆ. ಇದಾದ ನಂತರ ನೀವು ಸ್ನೇಹಿತರೆಲ್ಲರೂ ಸೇರಿ ಒಗ್ಗೂಡಿ ಓದಿಕೊಳ್ಳಬಹುದು. ಯುಟ್ಯೂಬ್, ವೆಬ್ಸೈಟ್ಗಳಲ್ಲಿ ಸಿಗುವ ಮಾಹಿತಿ ಜತೆಗೆ ಅಭ್ಯಸಿಸುವುದು ಉತ್ತಮ ಎಂದು ವಿವೇಕ್ ತಿಳಿಸಿದರು.
ದರ್ಶನ್ ಕುಮಾರ್
ಜ್ಞಾನ ದರ್ಶನ
ಯುಪಿಎಸ್ಸಿ ಚೆನ್ನಾಗಿ ಆಂಗ್ಲ ಭಾಷೆ ಬಲ್ಲ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಎಂಬುದು ಸುಳ್ಳು. ನಾನು ಕನ್ನಡದಲ್ಲೇ ಬರೆದು ಪಾಸ್ ಆಗಿದ್ದೇನೆ. ಜತೆಗೆ ಕನ್ನಡಿಗರು ಹೆಚ್ಚು ಯುಪಿಎಸ್ಸಿ ಪಾಸ್ ಆಗಬೇಕೆಂಬುದೇ ನನ್ನ ಆಸೆ. ಕನ್ನಡದಲ್ಲಿ ಪರೀಕ್ಷೆ ಬರೆಯುವವರಿಗೆಂದೇ ‘ಜ್ಞಾನ ದರ್ಶನ’ www.jnanadarshana.com ಎಂಬ ಹೆಸರಿನಲ್ಲಿ ಯೂ-ಟ್ಯೂಬ್ ಚಾನೆಲ್, ಟೆಲಿಗ್ರಾಂ ವೇದಿಕೆ ಕಲ್ಪಿಸಿದ್ದೇವೆೆ ಎನ್ನುತ್ತಾರೆ ದರ್ಶನ್.