More

    ವಿಕಾಸದ ಹೊಸ, ಸುಸ್ಥಿರ ಮಾದರಿಗಳತ್ತ ಮರಳುವ ಹೊತ್ತು…

    ಪ್ರಕೃತಿಯೊಡನೆ ಸಾಗುವ ವಿಕಾಸಮಾರ್ಗವೇ ನಿಜವಾದ ಅಭ್ಯುದಯವನ್ನು ತರಬಲ್ಲದು. ಪ್ರಕೃತಿಯನ್ನು ನಿರ್ಲಕ್ಷಿಸಿ ನಡೆಸುತ್ತಿರುವ ಭೌತಿಕ ಅಭಿವೃದ್ಛಿ ಏನೆಲ್ಲ ಹಾನಿಗಳನ್ನು ತಂದೊಡ್ಡುತ್ತಿದೆ ಎಂಬುದಕ್ಕೆ ವರ್ತಮಾನ ಸಾಕ್ಷಿಯಾಗಿದೆ. ತಡವಾಗಿಯಾದರೂ, ನಮ್ಮ ನೆಲದ ಮೂಲ ವಿಕಾಸ ಮಾದರಿಗಳನ್ನು ಅಳವಡಿಸಿಕೊಳ್ಳುವ ಜಾಗೃತಿ ಪರ್ವ ಆರಂಭವಾಗಿದೆ.

    ವಿಕಾಸದ ಹೊಸ, ಸುಸ್ಥಿರ ಮಾದರಿಗಳತ್ತ ಮರಳುವ ಹೊತ್ತು…ಅಭಿವೃದ್ಧಿ ಎಂದರೆ ಅದು ಕೇವಲ ಸುಖ, ಸೌಲಭ್ಯ, ಸವಲತ್ತುಗಳಲ್ಲ! ಇದನ್ನಷ್ಟೇ ಅಭಿವೃದ್ಧಿ ಎಂದು ಭಾವಿಸಿದ ಪಾಶ್ಚಾತ್ಯ ರಾಷ್ಟ್ರಗಳು ‘ನಮಗೆ ಬೇಕಾಗಿರುವುದು ಇನ್ನೇನೋ ಇದೆ’ ಎಂದು ಅರಸುತ್ತ ಶಾಂತಿ, ನೆಮ್ಮದಿಯ ಭಾವಕ್ಕಾಗಿ ಭಾರತದತ್ತ ಮುಖ ಮಾಡಿವೆ. ಸಂತೃಪ್ತಿಯ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಜೀವನಪಾಠವನ್ನು ಇಲ್ಲಿಂದ ಅಳವಡಿಸಿಕೊಳ್ಳುತ್ತಿವೆ. ಮತ್ತೊಂದೆಡೆ, ಸರ್ಕಾರ ಮಾಡಬೇಕಾದ ಅಭಿವೃದ್ಧಿ ಮತ್ತು ಅದರ ಆದ್ಯತೆಗಳು ಬೇರೆಯೇ. ನಿಜಾರ್ಥದಲ್ಲಿ ಪ್ರಭುತ್ವ ಕೂಡ ನಮ್ಮ ಸಂಸ್ಕೃತಿಯ, ನಮ್ಮ ನೆಲಮೂಲದ ವಿಕಾಸ ಮಾದರಿಗಳನ್ನೇ ಆಯ್ದುಕೊಂಡಾಗ ಸುಸ್ಥಿರ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ. ಅಲ್ಲದೆ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸಾಗುತ್ತ ಸಾಧಿಸುವ ಅಭಿವೃದ್ಧಿಯೇ ನಿಜವಾದ ಬದಲಾವಣೆ ಮತ್ತು ಸುಧಾರಣೆ. ಆದರೆ, ಇಡೀ ಸಮಾಜವು ತನ್ನ ಶಕ್ತಿಯನ್ನು ಮರೆತು ಎಲ್ಲ ಕೆಲಸಗಳಿಗೂ ಸರ್ಕಾರದ ಮೇಲೆ ಅವಲಂಬಿತವಾಗುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಮಾಜ ದುರ್ಬಲವಾಗುತ್ತಿದೆ. ಸಮಾಜದ ಬಲದ ಮೇಲೆ ಸಾಕಾರಗೊಳ್ಳಬೇಕಾದ ವಿಕಾಸ ಮೊಟಕುಗೊಂಡಿದೆ.

    ಆಂಜನೇಯನ ಶಕ್ತಿ, ಪರಾಕ್ರಮ ಯಾರಿಗೆ ಗೊತ್ತಿಲ್ಲ ಹೇಳಿ? ಅಂಥ ಆಂಜನೇಯನಿಗೂ, ‘ನಿನ್ನಲ್ಲಿ ಸಮುದ್ರೋಲ್ಲಂಘನ ಮಾಡುವ ಶಕ್ತಿ ಇದೆ’ ಎಂದು ಮತ್ತೊಬ್ಬರು ಜಾಗೃತಗೊಳಿಸಬೇಕಾಯಿತು. ಇದೇ ರೀತಿ, ಸಮಾಜದಲ್ಲಿರುವ (ಜನಬಲ) ಅಪಾರ ಪ್ರಮಾಣದ ಶಕ್ತಿಯನ್ನು ಗುರುತಿಸಿ, ಅದನ್ನು ಜಾಗೃತಗೊಳಿಸುವ ಮತ್ತು ಪ್ರಕೃತಿ ಆಧಾರಿತ ವಿಕಾಸದ ತಾಜಾ ಚಿಂತನೆಗಳನ್ನು ಅನುಷ್ಠಾನಗೊಳಿಸುತ್ತ, ವಿಕಾಸದ ಹೊಸ ಮತ್ತು ಸಶಕ್ತ ಮಾದರಿಯನ್ನು ದೇಶದ ಮುಂದಿರಿಸಿದ ಹೆಗ್ಗಳಿಕೆ ಭಾರತೀಯ ವಿಕಾಸ ಸಂಗಮದ್ದು. ರಾಜಕೀಯದಲ್ಲಿ ಆಯಕಟ್ಟಿನ ಹುದ್ದೆ ತೊರೆದು, ಸಮಾಜ ನಿರ್ವಣದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಮತ್ತು ಬಸವರಾಜ ಪಾಟೀಲ್ ಸೇಡಂ ಅವರೇ ಭಾರತ ವಿಕಾಸ ಸಂಗಮದ ಶಕ್ತಿಗಳು. ಸಾವಯವ ಕೃಷಿ, ಗ್ರಾಮೀಣಾಭಿವೃದ್ಧಿ, ಸ್ವಾವಲಂಬನೆ, ದೇಸಿ ಗೋವುಗಳ ಸಂರಕ್ಷಣೆ, ಮಹಿಳಾ ಮತ್ತು ಯುವ ಸಬಲೀಕರಣ ಸೇರಿ ಹಲವು ಕ್ಷೇತ್ರಗಳಲ್ಲಿ ಇವರು ಕಂಡ ಕನಸು ದೇಶದ ಹಲವು ರಾಜ್ಯಗಳಲ್ಲಿ ನನಸಾಗಿದೆ. ಕೊಲ್ಲಾಪುರ ಬಳಿಯ ಕನೇರಿ ಸಿದ್ಧಗಿರಿ ಆಶ್ರಮದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಂತೂ ಈ ಎಲ್ಲ ಸುಧಾರಣೆಗಳನ್ನು, ಅದೆಷ್ಟು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದರೆ, ಅದನ್ನು ವೀಕ್ಷಿಸಿ, ಪ್ರೇರಣೆ ಪಡೆಯಲು ದೇಶ-ವಿದೇಶಗಳ ಜನರು ಕನೇರಿಗೆ ಭೇಟಿ ನೀಡುತ್ತಿದ್ದಾರೆ.

    ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಈ ಮಾದರಿಯನ್ನು ಅಳವಡಿಸಿಕೊಂಡು. ಅಭಿವೃದ್ಧಿ ನಿಟ್ಟಿನಲ್ಲಿ ಸಾಗಬೇಕಾದ ನೈಜಪಥವನ್ನು ದರ್ಶಿಸಿವೆ. ಸಾಮಾಜಿಕ ಬದಲಾವಣೆಯ ಪ್ರೇರಣಾಸ್ಥಾನಗಳಾಗಿ ಬದಲಾಗಿವೆ. ಇಲ್ಲಿ ಅಭಿವೃದ್ಧಿ ಎಂದರೆ ಬರೀ ಸೌಲಭ್ಯಗಳಷ್ಟೇ ಅಲ್ಲ ಅದರ ಜತೆಗೆ ವ್ಯಕ್ತಿನಿರ್ವಣದ ಕೆಲಸವೂ ನಡೆದು ನೈತಿಕತೆ, ಪ್ರಾಮಾಣಿಕತೆ, ನಿಸ್ವಾರ್ಥ, ಐಕ್ಯತೆಯ ಭಾವಸಂಗಮ ಹೊಸ ಭರವಸೆಯನ್ನೇ ಮೂಡಿಸಿವೆ.

    ಒಮ್ಮೆ ಬರಗಾಲ, ಮತ್ತೊಂದು ವರ್ಷ ಅತಿವೃಷ್ಟಿ, ಸಣ್ಣಪುಟ್ಟ ಯೋಜನೆ-ಕಾರ್ಯಕ್ರಮಗಳ ಅನುಷ್ಠಾನದಲ್ಲೂ ಭ್ರಷ್ಟಾಚಾರ ಹೀಗೆ ಹಲವು ಅಪಸವ್ಯಗಳು ಸುತ್ತುವರಿದಿರುವಾಗ ಪ್ರಕೃತಿಯೊಡನೆ ಬೆಸೆಯುವ, ಆ ಮೂಲಕ ಅಂತರಾತ್ಮದೊಂದಿಗೆ ತಾದಾತ್ಮ್ಯ ಸಾಧಿಸುತ್ತ ಎಲ್ಲರ ಏಳಿಗೆಗೂ ಶ್ರಮಿಸುವ ಸಮಷ್ಠಿ ಭಾವ ಜಾಗೃತಗೊಂಡಿರುವುದು ನವ ಮನ್ವಂತರವೇ ಸರಿ.

    ಈ ಚೇತೋಹಾರಿ ಪಯಣ ಆರಂಭಗೊಂಡ ಬಗೆಯೂ ಸ್ವಾರಸ್ಯಕರ. ಭಾರತದ ಅಭಿವೃದ್ಧಿಗೆ ರಚನಾತ್ಮಕ, ಬೌದ್ಧಿಕ ಮತ್ತು ಆಂದೋಲನಾತ್ಮಕ ಪ್ರಯತ್ನಗಳು ಆರಂಭವಾಗಬೇಕು, ಅಭಿವೃದ್ಧಿಗೆ ವಿದೇಶದ್ದಲ್ಲ ನಮ್ಮದೇ ಆದ ಮಾದರಿ ಅನುಸರಿಸಬೇಕು ಎಂದು ಸಂಕಲ್ಪಿಸಿದ ಕೆ.ಎನ್.ಗೋವಿಂದಾಚಾರ್ಯರು, ‘ಮತ್ತೆಂದೂ ರಾಜಕೀಯಕ್ಕೆ ಮರಳುವುದಿಲ್ಲ’ ಎಂದು ಸಂಕಲ್ಪಿಸಿ 2003ರಲ್ಲಿ ಭಾರತ ವಿಕಾಸ ಸಂಗಮವನ್ನು ಹುಟ್ಟುಹಾಕಿದರು. ಇವರ ಚಿಂತನೆಗಳಿಂದ ಪ್ರಭಾವಿತರಾಗಿ ಬಸವರಾಜ ಪಾಟೀಲ್ ಸೇಡಂ ಜತೆಯಾದರು. ಅದಾಗಿ ಎರಡು ದಶಕಗಳು ಕಳೆದಿವೆ. ‘ನನ್ನ ಗ್ರಾಮ ನನ್ನ ಜಗತ್ತು,’ ‘ನನ್ನ ಜಿಲ್ಲೆ ನನ್ನ ಜಗತ್ತು’ ಎಂಬ ಅವರ ಪರಿಕಲ್ಪನೆ ಪ್ರಸಕ್ತ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದೆ. ಜಿಲ್ಲೆಯ ಬಗ್ಗೆ ಸಮಗ್ರ ಜ್ಞಾನವನ್ನು ಹೊಂದುವುದು, ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು, ಸಾಂಪ್ರದಾಯಿಕ ಕುಲಕಸುಬುಗಳನ್ನು, ಕೃಷಿಯನ್ನು ಪ್ರೋತ್ಸಾಹಿಸುವುದು, ಈ ಮೂಲಕ ಆಯಾ ಗ್ರಾಮದಲ್ಲಿ, ಜಿಲ್ಲೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು, ಮೌಲಸೌಕರ್ಯಗಳನ್ನು ಪೂರೈಸಿಕೊಳ್ಳುವುದು… ಈ ಚಿಂತನೆಯ ಮೂಲ ಉದ್ದೇಶವಾಗಿದ್ದು, ಇದು ಅದ್ಭುತ ಫಲಿತಾಂಶವನ್ನು ನೀಡಿದೆ ಎಂಬುದು ಗಮನಾರ್ಹ.

    ‘ಜನ, ಅರಣ್ಯ, ಮಣ್ಣು, ಪ್ರಾಣಿ, ಜೀವಜಂತುಗಳ ರಕ್ಷಣೆಯೊಂದಿಗೆ ಪ್ರಕೃತಿಯಾಧಾರಿತ ವಿಕಾಸ’, ‘ಸಮೃದ್ಧ ಹಳ್ಳಿ-ಸಮೃದ್ಧ ದೇಶ’ಗಳಂಥ ಅವರ ಪರಿಕಲ್ಪನೆಗಳು ವಿಶಾಲ ತಳಹದಿಯಲ್ಲಿ ಜೀವಂತಿಕೆ ಪಡೆದುಕೊಂಡು ಬೇರುಮಟ್ಟದ ಪರಿವರ್ತನೆಗೆ ಸಾಕ್ಷಿಯಾಗಿವೆ.

    ‘ನನ್ನ ಗ್ರಾಮ-ನನ್ನ ಜಗತ್ತು’ ಪರಿಕಲ್ಪನೆಯಲ್ಲಿ ಇಡೀ ಹಳ್ಳಿಯನ್ನು ಅಲ್ಲಿನ ಜನರ ಸಹಭಾಗಿತ್ವದಿಂದಲೇ ಆಮೂಲಾಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬವನ್ನು ಮೇಲೆತ್ತುವುದು, ಕೃಷಿ ಉತ್ಪಾದನೆ ದ್ವಿಗುಣಗೊಳಿಸುವುದು, ಗೋವು-ಎತ್ತುಗಳ ಸಂಖ್ಯೆ ದ್ವಿಗುಣಗೊಳಿಸುವುದು, ಗ್ರಾಮವನ್ನು ಎಲ್ಲ ರೀತಿಯ ದುಶ್ಚಟ-ವ್ಯಸನಗಳಿಂದ ಮುಕ್ತಗೊಳಿಸುವುದು, ನೈತಿಕತೆ ಹೆಚ್ಚಿಸುವುದು, ಪೌಷ್ಟಿಕಾಂಶ ಕೊರತೆ, ರಕ್ತದ ಕೊರತೆಯಿಂದ ಯಾವುದೇ ಸಾವು ಸಂಭವಿಸದಂತೆ ಕಾಳಜಿ ವಹಿಸುವುದು, ಆಯಾ ಗ್ರಾಮದ ಸಾಂಸ್ಕೃತಿಕ-ಐತಿಹಾಸಿಕ ಪರಂಪರೆ ಕಾಪಾಡುವುದು ಸೇರಿದಂತೆ ಪ್ರಕೃತಿ ಆಧಾರಿತವಾದ ಅಕ್ಷಯ ವಿಕಾಸವನ್ನು ಸಾಧಿಸಲಾಗುತ್ತಿದೆ.

    ಹಳ್ಳಿಗಳ ಖುಷಿ ಕೃಷಿಯಲ್ಲೇ ಇದೆ. ಕೃಷಿಯಾಧಾರಿತ ಕಸುಬುಗಳು ಗ್ರಾಮಗಳಲ್ಲಿನ ನಿರುದ್ಯೋಗ ನಿವಾರಣೆಗೆ ಮದ್ದು ಎಂದು ಸಾರುತ್ತ ಗ್ರಾಮಭಾರತವನ್ನು ಸ್ವಾವಲಂಬಿಯಾಗಿಸುವಲ್ಲಿ ಪರಿಣಾಮಕಾರಿ ಪ್ರಯತ್ನ ಮಾಡಲಾಗಿದೆ. ಹಾಗೆಯೇ ದೇಶದ ಆರು ಲಕ್ಷ ಹಳ್ಳಿಗಳಲ್ಲಿ ಇಂಥ ಬೇರುಮಟ್ಟದ ಬದಲಾವಣೆ ತರುತ್ತಿರುವ ವ್ಯಕ್ತಿ-ಸಂಘಟನೆಗಳು ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು, ಅವರ ಅಭಿವೃದ್ಧಿ ಮಾದರಿಗಳನ್ನು ದೇಶದ ಮುಂದೆ ಪರಿಚಯಿಸಬೇಕು ಆ ಮೂಲಕ ಪ್ರೇರಣೆಯ ಅಲೆಯನ್ನು ಹರಡಬೇಕು ಎಂಬ ಉದ್ದೇಶಕ್ಕಾಗಿ ಭಾರತ ವಿಕಾಸ ಸಂಗಮ ಕಾರ್ಯನಿರ್ವಹಿಸುತ್ತಿದೆ. ಸಮಾಜ ನಿರ್ವಣದಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳು ಭಾರತ ವಿಕಾಸ ಸಂಗಮದ ಮೂಲಕ ತಮ್ಮ ಕಾರ್ಯಕ್ಷಮತೆ ಮತ್ತು ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದ್ದು, ಚಿಂತನೆಯ ಕೊಡುಕೊಳ್ಳುವಿಕೆ ಕೂಡ ಸಕಾರಾತ್ಮಕ ಬದಲಾವಣೆಗೆ ಮುನ್ನುಡಿ ಬರೆದಿವೆ. ಗ್ರಾಮ-ಜಿಲ್ಲೆ ಸ್ವಾವಲಂಬನೆ, ಸಾವಯವ ಕೃಷಿಯ ವಿಸ್ತಾರ, ಸಾಂಸ್ಕೃತಿಕ ರಾಷ್ಟ್ರವಾದದ ಅನುಷ್ಠಾನದ ಮಹತ್ವಪೂರ್ಣ ಕಾರ್ಯಗಳ ಜತೆಗೆ ದೇಸಿ ಗೋವುಗಳ ಸಂರಕ್ಷಣೆ, ಗ್ರಾಮ್ಯ ಆರ್ಥಿಕತೆಯ ಉತ್ತೇಜನ, ಭಾರತೀಯ ಮೌಲ್ಯಗಳು-ಸ್ವದೇಶಿ ಚಿಂತನೆಯ ವಿಸ್ತಾರದಲ್ಲಿ ತೊಡಗಿರುವ ಒಂದು ಸಾವಿರ ಸಂಘಟನೆಗಳು ಭಾರತ ವಿಕಾಸ ಸಂಗಮದೊಂದಿಗೆ ಜೋಡಿಸಿಕೊಂಡಿವೆ. ದೇಶದಲ್ಲಿ ಸಾತ್ವಿಕ ಶಕ್ತಿಗಳ ನಡುವಿನ ದೊಡ್ಡ ಕೊಂಡಿಯಾಗಿ, ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತ ವಿಕಾಸ ಸಂಗಮ, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ-ಸಂಸ್ಥೆಗಳಿಗೆ ವೈಚಾರಿಕ ಮಾರ್ಗದರ್ಶನದ ಜತೆಗೆ ತಲುಪಬೇಕಾದ ಗುರಿ, ಅದಕ್ಕಾಗಿ ಸಾಗಬೇಕಾದ ದಾರಿಯನ್ನೂ ದರ್ಶಿಸುತ್ತಿದೆ.

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗಿರುವ ಬದಲಾವಣೆಯೇ ಹೊಸ ಆಶಾವಾದವನ್ನು ಸೃಷ್ಟಿಸಿದೆ. ಕಳೆದ ಒಂದು ದಶಕದಲ್ಲಿ ಈ ಭಾಗದಲ್ಲಿ 220 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಾಜನಿರ್ವಣದ ಕೆಲಸಗಳು (ಸರ್ಕಾರದಿಂದ ಅನುದಾನ ಪಡೆಯದೆ) ನಡೆದಿವೆ. ಮುಖ್ಯವಾಗಿ, ಬಯಲುಸೀಮೆ ಪ್ರದೇಶದಲ್ಲಿ ಹಸಿರು ವಿಸ್ತರಿಸುವ ಕಾರ್ಯ. ಕಳೆದ ಹತ್ತು ವರ್ಷಗಳಲ್ಲಿ 40 ಲಕ್ಷ ಗಿಡಮರಗಳನ್ನು ಬೆಳೆಸಲಾಗಿದೆ. ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ 1500 ಊರುಗಳಲ್ಲಿ 6 ಸಾವಿರ ಬಡ ಹೆಣ್ಣುಮಕ್ಕಳಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಿಸಲಾಗಿದ್ದು, 3 ಲಕ್ಷ ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗ ದೇಸಿ ಹಸುಗಳ ಸಂಖ್ಯೆ 1 ಲಕ್ಷವನ್ನು ದಾಟಿದ್ದು, ದೇಸಿ ಹಸುಗಳ ತಳಿ ಅಭಿವೃದ್ಧಿಗೆ 16 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾವಯವ ಕೃಷಿಯ ಪ್ರಮಾಣ ಗಣನೀಯವಾಗಿ ಏರಿಕೆ ಆಗಿದೆ. ವ್ಯಕ್ತಿತ್ವನಿರ್ವಣದಲ್ಲಿ ಸಾಹಿತ್ಯದ ಮಹತ್ವವನ್ನು ಮನಗಂಡು, ಮೂರೂವರೆ ಕೋಟಿ ರೂಪಾಯಿ ಮೌಲ್ಯದ ಮೌಲಿಕ ಕೃತಿಗಳನ್ನು ಮಾರಾಟ ಮಾಡಲಾಗಿದೆ. 3500 ಶಾಲೆಗಳ ವಾಚನಾಲಯಗಳಿಗೆ ತಲಾ 3 ಸಾವಿರ ರೂ. ಮೌಲ್ಯದ ಪುಸ್ತಕ ವಿತರಿಸಲಾಗಿದ್ದು, 400 ಶಾಲೆಗಳಿಗೆ 3,250 ಕಂಪ್ಯೂಟರ್​ಗಳನ್ನು ನೀಡಲಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಜತೆಗೆ ವ್ಯಕ್ತಿತ್ವ ವಿಕಸನ. ವೃತ್ತಿಕೌಶಲ ತರಬೇತಿ ಶಿಬಿರಗಳನ್ನು ನಡೆಸಲಾಗಿದೆ.

    ಈ ಎಲ್ಲ ಅಭಿವೃದ್ಧಿ ಮಾದರಿಗಳ ಯಶೋಗಾಥೆಗಳನ್ನು ಸಮಾಜಕ್ಕೆ ಪರಿಚಯಿಸಲೆಂದೇ ಮೂರ್ನಾಲ್ಕು ವರ್ಷಗಳಿಗೊಮ್ಮೆ ಭಾರತ ವಿಕಾಸ ಸಂಗಮದ ಬೃಹತ್ ಸಮಾವೇಶ ಏರ್ಪಡುತ್ತದೆ. 2010-11ರಲ್ಲಿ ಗೋವಿಂದಾಚಾರ್ಯರು ಮತ್ತು ಬಸವರಾಜ ಪಾಟೀಲ್ ಸೇಡಂರ ಸಾರಥ್ಯದಲ್ಲಿ ನಡೆದ ‘ಕಲಬುರಗಿ ಕಂಪು’ ಎಂಬ ಜಾಗೃತಿಜಾತ್ರೆ ಬದಲಾವಣೆಯ ಹೊಸ ಹೊಳಹುಗಳನ್ನು ಪರಿಚಯಿಸಿತು. ರೈತರ ಶ್ರೇಯೋಭಿವೃದ್ಧಿ, ಸ್ವಯಂಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ಕೌಶಲಾಭಿವೃದ್ಧಿ ಸೇರಿದಂತೆ ಅಭಿವೃದ್ಧಿಯ ನೈಜ ಮುಖವನ್ನು ತೆರೆದಿಟ್ಟಿತು. 2015ರಲ್ಲಿ ಕೊಲ್ಲಾಪುರ ಜಿಲ್ಲೆಯ ಕನೇರಿಯ ಸಿದ್ಧಗಿರಿ ಮಠದಲ್ಲಿ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ‘ಭಾರತೀಯ ಸಂಸ್ಕೃತಿ ಉತ್ಸವ’ದಲ್ಲಿ ಮತ್ತೆ ಸ್ವಾವಲಂಬನೆಯ ಶಕ್ತಿಯನ್ನು ರಾಷ್ಟ್ರದ ಮುಂದೆ ಪ್ರದರ್ಶಿಸಲಾಯಿತು. ಸಾವಿರಕ್ಕೂ ಅಧಿಕ ಸಂಘಸಂಸ್ಥೆಗಳು ಈ ಮಾದರಿಯಿಂದ ಪ್ರೇರಣೆ ಪಡೆದು ತಮ್ಮಲ್ಲಿ ಅನುಷ್ಠಾನಕ್ಕೆ ತರುತ್ತಿರುವುದು ಗೋವಿಂದಾಚಾರ್ಯರ ಶ್ರಮಕ್ಕೆ ಸಿಕ್ಕ ಜಯ. ವಿಜಯಪುರದ ಕಗ್ಗೋಡಿನಲ್ಲಿ 2018ರಲ್ಲಿ ಐದನೇ ಭಾರತೀಯ ಸಂಸ್ಕೃತಿ ಉತ್ಸವ, ತೆಲಂಗಾಣದ ಕಲ್ವಕುರ್ತಿಯಲ್ಲಿ ಆರನೇ ಭಾರತೀಯ ಸಂಸ್ಕೃತಿ ಉತ್ಸವ ಸಂಪನ್ನಗೊಂಡವು.

    ನಮ್ಮಲ್ಲಿ ಅಂದರೆ ಸಮುದಾಯದಲ್ಲಿ ಬೇಡವಾಗಿದ್ದರೂ ನಕಾರಾತ್ಮಕ ಸಂಗತಿಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಆದರೆ, ಒಳ್ಳೆಯ, ರಚನಾತ್ಮಕ ಕಾರ್ಯಗಳ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆಯಬೇಕು, ಅದನ್ನು ಸಾಧ್ಯವಾಗಿಸಿದ ವ್ಯಕ್ತಿ-ಶಕ್ತಿಗಳನ್ನು ಸಮಾಜದ ಮುಂದೆ ಪರಿಚಯಿಸಬೇಕು ಎಂಬ ಉದ್ದೇಶದಿಂದಲೇ ಏಳನೇ ಭಾರತೀಯ ಸಂಸ್ಕೃತಿ ಉತ್ಸವ 2025ರ ಜನವರಿ 29ರಿಂದ ಫೆಬ್ರವರಿ 6ರವರೆಗೆ 9 ದಿನಗಳ ಕಾಲ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ 240 ಎಕರೆ ಪ್ರದೇಶದಲ್ಲಿ ನಡೆಯಲಿದೆ. 1974ರಲ್ಲಿ ಕೇವಲ ಐದು ಮಕ್ಕಳಿಂದ ಪ್ರಾರಂಭವಾಗಿ, ಶೈಕ್ಷಣಿಕ ಸುಧಾರಣೆಯ ಮೈಲಿಗಲ್ಲುಗಳನ್ನು ಸಾಧಿಸುತ್ತ, ಪ್ರಸ್ತುತ ಒಂಬತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣಜಯಂತಿ ಕಾರ್ಯಕ್ರಮವೂ ಸಂಯುಕ್ತವಾಗಿ ನಡೆಯಲಿದೆ. 24 ಎಕರೆ ವಿಸ್ತೀರ್ಣದಲ್ಲಿ ಜ್ಞಾನಲೋಕ, 11 ಎಕರೆಯಲ್ಲಿ ಕೃಷಿ ಲೋಕ, 8 ಎಕರೆಯಲ್ಲಿ ಸೃಜನ ಲೋಕ, 6 ಎಕರೆ ಪ್ರದೇಶದಲ್ಲಿ ವಿಜ್ಞಾನ-ತಂತ್ರಜ್ಞಾನ ಲೋಕ, 2 ಎಕರೆಯಲ್ಲಿ ಮಕ್ಕಳ ಲೋಕ, 2 ಎಕರೆಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಲೋಕ, 8 ಎಕರೆಯಲ್ಲಿ ವ್ಯಾವಹಾರಿಕ ಲೋಕ ತಲೆಎತ್ತಲಿವೆ. ಪ್ರತಿನಿತ್ಯ ಮೂರು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ‘ವಿಕಾಸದ ಮಹಾಕುಂಭಮೇಳವಾಗಿ ಮಾರ್ಪಡುವ ಈ ಕಾರ್ಯಕ್ರಮ ಸಮಾಜದ ಎಲ್ಲ ರಂಗಗಳಿಗೂ ಶಕ್ತಿ ತುಂಬುವುದಲ್ಲದೆ, ಮುಂದೆ ಸಾಗಬೇಕಾದ ದಾರಿಯನ್ನೂ ಸ್ಪಷ್ಟವಾಗಿ ತೋರಲಿದೆ’ ಎಂಬ ವಿಶ್ವಾಸ ಬಸವರಾಜ ಪಾಟೀಲ್ ಸೇಡಂ ಅವರದ್ದು. ‘ದೇಶದಂತೆ ವ್ಯವಸ್ಥೆ ರೂಪುಗೊಳ್ಳಬೇಕೆ ವಿನಾ ವ್ಯವಸ್ಥೆಯಂತೆ ದೇಶವನ್ನು ರೂಪಿಸಲು ಹೋದರೆ ಎಡವಿ ಬೀಳುತ್ತೇವೆ. ಸಮಾಜ ಮುಂದೆ, ಅಧಿಕಾರ (ಸರ್ಕಾರ, ಆಡಳಿತ) ಇದರ ಹಿಂದೆ ಇರಬೇಕು. ಆದರೆ ಈಗ ಅಧಿಕಾರದ ಹಿಂದೆ ಸಮಾಜ ಓಡುತ್ತಿರುವುದರಿಂದ ಸ್ವಾರ್ಥ, ಲೋಭ, ಭ್ರಷ್ಟಾಚಾರದಂಥ ಅಪಸವ್ಯಗಳನ್ನು ಕಾಣುತ್ತಿದ್ದೇವೆ’ ಎಂಬ ಸ್ಪಷ್ಟ ಚಿಂತನೆಯನ್ನು ಗಟ್ಟಿದನಿಯಲ್ಲಿ ಮೊಳಗಿಸುತ್ತಿರುವ ಕೆ.ಎನ್.ಗೋವಿಂದಾಚಾರ್ಯರು, ದೇಶದಲ್ಲಿ ಸಾತ್ವಿಕ ಶಕ್ತಿಗಳು ಮತ್ತಷ್ಟು ಸಂಘಟಿತವಾಗಲು ಶ್ರಮಿಸುತ್ತಿದ್ದಾರೆ.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts