More

    ಸೋಮವಾರಪೇಟೆ ಭಾಗದಲ್ಲಿ ಸಾಧಾರಣ ಮಳೆ

    ಸೋಮವಾರಪೇಟೆ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಇದರಿಂದ ಕಾಫಿ ಬೆಳೆಗಾರರು ಆತಂಕದಲ್ಲಿದ್ದರೆ, ಹಸಿಮೆಣಸಿನಕಾಯಿ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಮಾರ್ಚ್‌ನಲ್ಲಿ ಒಂದೂವರೆಯಿಂದ ಎರಡು ಇಂಚು ಒಂದೆರಡು ದಿನಗಳ ಅಂತರದಲ್ಲಿ ಮಳೆ ಬಿದ್ದರೆ ಮಾತ್ರ ಕಾಫಿ ಬ್ಲಾಸಂ ಆಗುತ್ತದೆ. ಕಡಿಮೆ ಮಳೆ ಬಿದ್ದರೆ ಅರ್ಧ ಹೂ ಅರಳಿ ದೊಡ್ಡ ಮಟ್ಟದಲ್ಲಿ ಫಸಲು ನಷ್ಟ ಅನುಭವಿಸಬೇಕಾಗುತ್ತದೆ.

    ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ, ಸುಂಠಿಕೊಪ್ಪ ಹೋಬಳಿಗಳಲ್ಲಿ ಅತಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯುತ್ತಿದ್ದು, ಬೆಳೆಗಾರರು ಒಂದೆರಡು ಇಂಚು ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಭಾನುವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ 20 ರಿಂದ 30 ಸೆಂಟ್ ಮಳೆಯಾಗಿದೆ. ಇನ್ನೆರಡು ದಿನಗಳಲ್ಲಿ ಒಂದು ಇಂಚು ಮಳೆ ಬೀಳದಿದ್ದರೆ ನಷ್ಟ ಗ್ಯಾರೆಂಟಿ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
    ನೀರಿನ ಸೌಲಭ್ಯವಿದ್ದವರು ಕಾಫಿ ಗಿಡಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಲು ಬೆಳೆಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಬೋರ್‌ವೆಲ್‌ಗಳಿಗೆ ಅಕ್ರಮವಾಗಿ ಅಳವಡಿಸಿಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಇತ್ತೀಚೆಗೆ ಸೆಸ್ಕ್ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಈಗ ಅನೇಕ ಸಣ್ಣ ಕಾಫಿ ಬೆಳೆಗಾರರು ತೋಟಗಳಿಗೆ ನೀರನ್ನು ಹಾಯಿಸಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ.
    ಗೌಡಳ್ಳಿ, ಬೇಳೂರು, ತೋಳೂರು ಶೆಟ್ಟಳ್ಳಿ, ನೇರುಗಳಲೆ, ಶಾಂತಳ್ಳಿ, ಗರ್ವಾಲೆ ಸೇರಿದಂತೆ ಇನ್ನಿತರ ಗ್ರಾಪಂ ವ್ಯಾಪ್ತಿಯಲ್ಲಿ ಹತ್ತರಿಂದ ಮೂವತ್ತು ಸೆಂಟ್ಸ್‌ನಷ್ಟು ಮಳೆ ಬಿದ್ದಿದೆ.

    ಕೃಷಿಕರಿಗೆ ನೆಮ್ಮದಿ: ತರಕಾರಿ ಬೆಳೆಗೆ ಈ ಮಳೆಯಿಂದ ಉಪಯೋಗವಾಗಿದೆ. ಕೆಲ ಕಡೆ ನೀರಿನ ಅಭಾವದಿಂದ ಹಸಿ ಮೆಣಸಿನಕಾಯಿ ಗಿಡಗಳ ಬೆಳವಣಿಗೆ ಕುಂಠಿತವಾಗಿತ್ತು. ಈಗ ಮಣ್ಣು ಹದವಾಗಿರುವುದರಿಂದ ಗಿಡಗಳು ಆರೋಗ್ಯದಿಂದ ಬೆಳೆಯುತ್ತವೆ.
    ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ, ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಸಿಮೆಣಸಿನಕಾಯಿ ಬೆಳೆಯಲಾಗಿದೆ. ಕೆಲವು ಕಡೆ ಫಸಲು ಕೊಯ್ಲು ಮಾಡಲಾಗುತ್ತಿದೆ. ಕೊಳವೆಬಾವಿ, ಕೆರೆಗಳಲ್ಲಿ ನೀರು ಕಡಿಮೆಯಾಗಿದ್ದು, ನೀರು ಹಾಯಿಸಲು ಸಮಸ್ಯೆಯಾಗಿದೆ. ವಾರಕೊಮ್ಮೆ ಮಳೆ ಸುರಿದರೆ, ಉತ್ತಮ ಫಸಲು ಸಿಗಲಿದೆ ಎಂದು ಮೆಣಸಿನಕಾಯಿ ಬೆಳೆಗಾರ ಬಿ.ಎನ್.ವಸಂತ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts