More

    ಎರಡು ಕೋಟಿ ಜನರಿಗೆ ಲಾಕ್: ಚೀನಾದಲ್ಲಿ ಲಾಕ್​ಡೌನ್ ನಗರಗಳ ಸಂಖ್ಯೆ ಮೂರಕ್ಕೆ ಏರಿಕೆ

    ಬೀಜಿಂಗ್: ಕೋವಿಡ್ ಪ್ರಕರಣಗಳ ಆಸ್ಪೋಟದ ಹಿನ್ನೆಲೆಯಲ್ಲಿ ಚೀನಾದಲ್ಲಿ ಇನ್ನೊಂದು ನಗರದಲ್ಲಿ ಲಾಕ್​ಡೌನ್ ಹೇರಲಾಗಿದೆ. 55 ಲಕ್ಷ ಜನಸಂಖ್ಯೆಯ ಅನ್​ಯಾಂಗ್ ಲಾಕ್ ಆದ ನಗರವಾಗಿದ್ದು ಮೂರು ನಗರಗಳಲ್ಲಿ ಒಟ್ಟು ಸುಮಾರು ಎರಡು ಕೋಟಿಗೂ ಹೆಚ್ಚಿನ ಜನರು ಮನೆಗಳಲ್ಲೇ ಉಳಿಯುವ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಕರೊನಾ ಪತ್ತೆಗಾಗಿ ನಗರದಲ್ಲಿ ಸಾಮೂಹಿಕ ಪರೀಕ್ಷೆ ನಡೆಸಲಾಗುತ್ತಿದೆ. ಸೋಮವಾರ ಎರಡು ಒಮಿಕ್ರಾನ್ ಕೇಸ್ ದೃಢಪಟ್ಟಿದ್ದರಿಂದ ಅನ್​ಯಾಂಗ್ ನಗರವನ್ನು ಲಾಕ್ ಮಾಡಲಾಗಿದೆ.

    1.30 ಕೋಟಿ ಜನವಸತಿಯ ಕ್ಸಿಯಾನ್ ಮತ್ತು 11 ಲಕ್ಷ ಜನಸಂಖ್ಯೆಯ ಯುಝೋ ಲಾಕ್ ಮಾಡಲಾಗಿರುವ ಇತರ ಎರಡು ಪ್ರಮುಖ ನಗರಗಳು. ಫೆಬ್ರವರಿ 4ರಿಂದ ಚಳಿಗಾಲದ ಒಲಿಂಪಿಕ್ಸ್ ಆಯೋಜಿಸಲಿರುವ ತಿಯಾನ್​ಜಿನ್ ನಗರದಲ್ಲಿ ಕೂಡ ನಿರ್ಬಂಧಗಳನ್ನು ಹೇರಲಾಗಿದೆ. ಸೋಂಕು ಹರಡುವುದನ್ನು ತಡೆಯಲು ಕ್ರೀಡಾಕೂಟದಲ್ಲಿ ಭಾಗವಹಿಸುವ ಅಥ್ಲೀಟ್​ಗಳು ಮತ್ತು ಅಧಿಕಾರಿಗಳ ಸಹಕಾರ ಮುಖ್ಯ ಎಂದು ರೋಗ ನಿಯಂತ್ರಣ ಇನ್​ಚಾರ್ಜ್ ಅಧಿಕಾರಿ ಹುವಾಂಗ್ ಚುನ್ ಹೇಳಿದ್ದಾರೆ.

    ಡಬ್ಲ್ಯುಎಚ್​ಒ ಎಚ್ಚರಿಕೆ: ಕೋವಿಡ್ ಸೋಂಕನ್ನು ಮಹಾಮಾರಿಯೆಂದು (ಪಾಂಡೆಮಿಕ್) ಪರಿಗಣಿಸದೆ ಸ್ಥಳೀಯ (ಎಂಡೆಮಿಕ್) ಜ್ವರಕ್ಕೆ ನೀಡುವ ರೀತಿಯಲ್ಲಿ ಚಿಕಿತ್ಸೆ ಮಾಡುವುದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಎಚ್ಚರಿಕೆ ನೀಡಿದೆ.

    ಭಾರತದಲ್ಲಿ ಕರೊನಾ ಪ್ರಕರಣಗಳ ಸುನಾಮಿಗೆ ಒಮಿಕ್ರಾನ್ ಕಾರಣವಿರಬಹುದು. ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ನೆರವಾಗುತ್ತದೆ.

    | ಎನ್.ಕೆ. ಅರೋರಾ ಲಸಿಕೆ ಸಲಹಾ ಗುಂಪಿನ ಮುಖ್ಯಸ್ಥ

    ಅಮೆರಿಕದಲ್ಲಿ 10.35 ಲಕ್ಷ ಸೋಂಕು: ಅಮೆರಿಕದಲ್ಲಿ ಸೋಮವಾರ ಒಂದೇ ದಿನ ಕರೊನಾ ಸೋಂಕಿನ 10.35 ಲಕ್ಷ ಕೇಸ್​ಗಳು ದೃಢಪಟ್ಟಿದ್ದು ದೈನಿಕ ಕೇಸ್​ನಲ್ಲಿ ಇದೊಂದು ಜಾಗತಿಕ ದಾಖಲೆಯಾಗಿದೆ. ಜನವರಿ 3ರಂದು 10.03 ಲಕ್ಷ ಪ್ರಕರಣ ದೃಢಪಟ್ಟಿತ್ತು. ಯುರೋಪ್​ನಲ್ಲಿ ಜನವರಿ ಮೊದಲ ವಾರ 70 ಲಕ್ಷಕ್ಕೂ ಅಧಿಕ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಇದು ಕೇವಲ ಎರಡೇ ವಾರಗಳಲ್ಲಿ ಎರಡು ಪಟ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಮಂಗಳವಾರ ತಿಳಿಸಿದ್ದಾರೆ. ಯುರೋಪ್​ನ 26 ದೇಶಗಳಲ್ಲಿ ಶೇಕಡ ಒಂದಕ್ಕಿಂತ ಹೆಚ್ಚಿನ ಜನಸಂಖ್ಯೆಗೆ ಪ್ರತಿವಾರ ಕೋವಿಡ್ ಸೋಂಕು ತಗುಲುತ್ತಿದೆ ಎಂದವರು ಹೇಳಿದ್ದಾರೆ. ಮುಂದಿನ ಆರೆಂಟು ವಾರಗಳಲ್ಲಿ ಪಶ್ಚಿಮ ಯುರೋಪ್​ನ ಅರ್ಧದಷ್ಟು ಜನಸಂಖ್ಯೆ ಕರೊನಾ ಸೋಂಕಿಗೆ ತುತ್ತಾಗಲಿದ್ದಾರೆ ಎಂದಿದ್ದಾರೆ.

    ಭಾರತದಲ್ಲಿ ಕೇಸ್ ಉಬ್ಬರ: ದೇಶದಲ್ಲಿ ಮಂಗಳವಾರ ಬೆಳಿಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ 1,68,063 ಹೊಸ ಪ್ರಕರಣ ದೃಢಪಟ್ಟಿದೆ. 277 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 3,58,75,790, ಬಲಿಯಾದವರ ಸಂಖ್ಯೆ 4,84,213ಕ್ಕೆ ಏರಿದೆ. ದೇಶದಲ್ಲಿ 8,21,446 ಸಕ್ರಿಯ ಕೇಸ್​ಗಳಿವೆ.

    ಪ್ರಯಾಣಿಕರಿಗೆ ನಿರ್ಬಂಧ ಜಾರಿ: ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಘೋಷಿಸಲಾಗಿ ರುವ ಹೊಸ ನಿಯಮಗಳು ಮಂಗಳವಾರ ಜಾರಿಗೆ ಬಂದಿವೆ. ಹೊಸ ಮಾರ್ಗಸೂಚಿ ಅನ್ವಯ, ‘ಹೆಚ್ಚಿನ ಅಪಾಯವಿರುವ’ (ಅಟ್ ರಿಸ್ಕ್) ದೇಶದಿಂದ ಭಾರತಕ್ಕೆ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಬಂದಾಕ್ಷಣ ಕಡ್ಡಾಯವಾಗಿ ಆರ್​ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಅವರು ವಿಮಾನ ನಿಲ್ದಾಣದಿಂದ ತೆರಳಲು ಅಥವಾ ಸಂಪರ್ಕ ವಿಮಾನ ಏರಲು ಪರೀಕ್ಷಾ ವರದಿ ಬರುವವರೆಗೆ ಕಾಯಬೇಕು. ಈ ಪ್ರಯಾಣಿಕರು 7 ದಿನ ಮನೆಯಲ್ಲಿ ಕ್ವಾರಂಟೈನ್​ಗೆ ಒಳಪಟ್ಟು 8ನೇ ದಿನ ಆರ್​ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಆರೋಗ್ಯ ಸಚಿವಾಲಯ ಅಟ್ ರಿಸ್ಕ್ ದೇಶಗಳ ಪಟ್ಟಿಯನ್ನು 12ರಿಂದ 19ಕ್ಕೆ ಏರಿಸಿದೆ.

    • ಜನವರಿ 14ರ ಮಕರ ಸಂಕ್ರಾಂತಿಯಂದು ಪುಣ್ಯ ಸ್ನಾನ ಮಾಡುವುದನ್ನು ಹರಿದ್ವಾರ ಜಿಲ್ಲಾಡಳಿತ ನಿಷೇಧಿಸಿದೆ. ‘ಹರ್ ಕೀ ಪೌಡಿ’ ಪ್ರದೇಶಕ್ಕೆ ಭಕ್ತರ ಪ್ರವೇಶವನ್ನೂ ನಿರ್ಬಂಧಿಸಿದೆ.
    • ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯ ದಾಲುಪುರ ಗ್ರಾಮದಲ್ಲಿ ಕೋತಿ ಅಂತ್ಯಸಂಸ್ಕಾರದಲ್ಲಿ ಕರೊನಾ ನಿಯಮಾವಳಿ ಉಲ್ಲಂಘಿಸಿ ಸುಮಾರು 1,500 ಜನರು ಪಾಲ್ಗೊಂಡ ಪ್ರಕರಣ ವರದಿಯಾಗಿದೆ.

    ದಿಲ್ಲಿಯಲ್ಲಿ ನಿತ್ಯ 60 ಸಾವಿರ ಕೇಸ್?

    ದೆಹಲಿಯಲ್ಲಿ 21,259 ದೈನಿಕ ಕೇಸ್ ಮಂಗಳವಾರ ವರದಿಯಾಗಿದ್ದು, 23 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇ. 25.65ಕ್ಕೆ ಏರಿದೆ. ಸೋಂಕು ಪ್ರಸರಣ ಇದೇ ರೀತಿ ಏರುತ್ತಿದ್ದರೆ ಜನವರಿ ಅಂತ್ಯದೊಳಗೆ ಪ್ರತಿ ದಿನ 58,000ದಿಂದ 60,000ಕ್ಕೂ ಹೆಚ್ಚು ಕೇಸ್​ಗಳು ದೃಢಪಡಬಹುದು. ಬಸ್, ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ದೆಹಲಿಯ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಪೈಕಿ 75ರಷ್ಟು ಜನರು ಒಮಿಕ್ರಾನ್ ಪೀಡಿತರಾಗಿದ್ದಾರೆ.

    ಲತಾ ಮಂಗೇಶ್ಕರ್ ಆಸ್ಪತ್ರೆಗೆ: ಕರೊನಾ ಪಾಸಿಟಿವ್ ಆಗಿರುವ ಖ್ಯಾತ ಗಾಯಕಿ, ಲತಾ ಮಂಗೇಶ್ಕರ್ (92) ಅವರನ್ನು ಮುಂಬೈಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಅವರ ಸಂಬಂಧಿ ರಚನಾ ಮಂಗಳವಾರ ತಿಳಿಸಿದ್ದಾರೆ. ಐಸಿಯುನಲ್ಲಿರುವ ಮಂಗೇಶ್ಕರ್ ಸೌಮ್ಯ ರೋಗ ಲಕ್ಷಣ ಹೊಂದಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಂದು ವರ್ಷದ ಮಗುವಿಗೆ ವಿಷ ಉಣಿಸಿ ಅಪ್ಪ-ಅಮ್ಮ ಆತ್ಮಹತ್ಯೆ; ‘ಮೂವರನ್ನೂ ಒಟ್ಟಿಗೇ ಮಣ್ಣು ಮಾಡಿ, ಖುಷಿಯಿಂದ ಕಳಿಸಿಕೊಡಿ..’

    ಯುವಕನನ್ನು ಸಾರ್ವಜನಿಕವಾಗಿ ಬೆತ್ತಲಾಗಿಸಿದ ಗುಂಪು; ಯುವತಿಯ ಮೈಮುಟ್ಟಿದ ಎಂದು ಬಟ್ಟೆ ಬಿಚ್ಚಿಸಿ ಹಲ್ಲೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts