More

    ಹಿಜಾಬ್​ ಕುರಿತ ತೀರ್ಪು; ಕರ್ನಾಟಕ ಬಂದ್​ಗೆ ಕರೆ ನೀಡಿದ್ದವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ?

    ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪು ಟೀಕಿಸಿದ್ದಲ್ಲದೆ, ತೀರ್ಪು ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಜ್ಯ ಅಡ್ವೊಕೇಟ್ ಜನರಲ್‌ಗೆ ಮನವಿ ಸಲ್ಲಿಕೆಯಾಗಿದೆ.

    ಬೆಂಗಳೂರಿನ ವಕೀಲ ಎನ್.ಪಿ. ಅಮೃತೇಶ್ ಸೋಮವಾರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರ ಕಚೇರಿಗೆ ತೆರಳಿ, ಕೋರ್ಟ್ ಆದೇಶ ಧಿಕ್ಕರಿಸುವ ಮೂಲಕ ನ್ಯಾಯಾಂಗದ ಘನತೆ ಕುಗ್ಗಿಸಲು ಯತ್ನಿಸುತ್ತಿರುವವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

    ನ್ಯಾಯಾಂಗದ ಘನತೆಗೆ ಧಕ್ಕೆ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೂರ್ಣ ಪೀಠ, ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಮ್​ನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಅಭಿಪ್ರಾಯ ಪಟ್ಟು, ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿ ಕುರಿತು ಫೆ.5ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು.

    ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾತ್ಕಾಲಿಕ ದಿನಾಂಕ ನಿಗದಿ..

    ಒಂದು ವೇಳೆ, ಹೈಕೋರ್ಟ್ ತೀರ್ಪಿಗೆ ಯಾವುದೇ ಆಕ್ಷೇಪಣೆ ಇದ್ದರೆ, ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿದೆ. ಹೀಗಿದ್ದರೂ, ಅರ್ಜಿ ಸಲ್ಲಿಸಿದ್ದ ವ್ಯಕ್ತಿಗಳು ನ್ಯಾಯಾಲಯ ಮತ್ತದರ ತೀರ್ಪನ್ನು ಟೀಕಿಸುತ್ತ ವೈಯಕ್ತಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜತೆಗೆ, ನ್ಯಾಯಮೂರ್ತಿಗಳ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸುತ್ತಿದ್ದಾರೆ. ಈ ಮೂಲಕ ನ್ಯಾಯಾಂಗದ ಘನತೆಯನ್ನು ಕುಗ್ಗಿಸುವ ಯತ್ನ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

    ಇದನ್ನೂ ಓದಿ: ಸಿಎಂಗೆ ಅವಾಚ್ಯವಾಗಿ ನಿಂದಿಸಿದ್ದ ಶಾಬಾಜ್‌ ಖಾನ್ ಕೊನೆಗೂ ಪೊಲೀಸ್ ವಶಕ್ಕೆ..

    ಅನುಮತಿ ನೀಡಲು ಎಜಿಗೆ ಮನವಿ: ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರು ಹಾಗೂ ಕೆಲ ಸಂಘಟನೆಗಳು ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ, ಕರ್ನಾಟಕ ಬಂದ್‌ಗೆ ಕರೆ ನೀಡುವ ಮಟ್ಟಕ್ಕೆ ಹೋಗಿದ್ದಾರೆ. ಮಾ.17ರಂದು ಮುಸ್ಲಿಂ ಸಮುದಾಯದ ಕೆಲವರು ತಮ್ಮ ವ್ಯಾಪಾರ-ವಹಿವಾಟುಗಳನ್ನು ಸ್ಥಗಿತಗೊಳಿಸಿ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ವಿರುದ್ಧ ಮಾಧ್ಯಮ-ಜಾಲತಾಣಗಳಲ್ಲಿ ವೈಯಕ್ತಿಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಇವರ ಈ ವರ್ತನೆ ಸ್ಪಷ್ಟವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಿದೆ. ತಪ್ಪಿತಸ್ಥರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ಗೆ ಮಾ.19ರಂದು ದೂರು ನೀಡಲಾಗಿತ್ತು. ಅದನ್ನು ಪರಿಶೀಲಿಸಿದ ರಿಜಿಸ್ಟ್ರಾರ್, ನ್ಯಾಯಾಂಗ ನಿಂದನೆ ಪ್ರಕ್ರಿಯೆಯಡಿ ಕ್ರಮ ಜರುಗಿಸಲು ಅಡ್ವೊಕೇಟ್ ಜನರಲ್ ಅವರ ಅನುಮತಿ ಪಡೆಯುವಂತೆ ತಿಳಿಸಿ, ಮಾ.24ರಂದು ಹಿಂಬರಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಖಲೆಗಳ ಸಹಿತ ಮನವಿ ಸಲ್ಲಿಸಲಾಗುತ್ತಿದೆ. ಅವುಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಲು ಅನುಮತಿ ನೀಡಬೇಕು ಎಂದು ಅಡ್ವೊಕೇಟ್ ಜನರಲ್ ಅವರನ್ನು ಕೋರಲಾಗಿದೆ.

    ಇದನ್ನೂ ಓದಿ: ಜನ್ಮದಿನದಂದೇ ಮರಣ: ಬೈಕ್​ನಲ್ಲಿ ಹೋಗುವಾಗ ತಲೆ ಮೇಲೇ ಬಿದ್ದ ಮರ..!

    ಯಾರ್ಯಾರ ವಿರುದ್ಧ ದೂರು?: ಹಿಜಾಬ್ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರಾದ ರೇಶಮ್, ಆಯೇಶಾ ಹಾಜೀರಾ ಅಲ್ಮಾಸ್, ಅಲಿಯಾ ಅಸಾದಿ ಶಾ, ಮುಸ್ಕಾನ್ ಜೈನಾಬ್, ಐಶತ್ ಶಿಫಾ, ತೈರಿನ್ ಬೇಗಮ್, ಶಹೀನಾ, ಶಿಫಾ ಮಿನಾಜ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ಕೋರಲಾಗಿದೆ. ಜತೆಗೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆ್ ಇಂಡಿಯಾ, ಸ್ಟೂಡೆಂಟ್ ಕ್ರಿಶ್ಚಿಯನ್ ಮೂವ್‌ಮೆಂಟ್ ಆ್ ಇಂಡಿಯಾ, ದಲಿತ ವಿದ್ಯಾರ್ಥಿ ಪರಿಷತ್, ಕಲೆಕ್ಟೀವ್, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್, ಜಮಾತ್-ಐ-ಉಲಮಾ ಹಿಂದ್ ಕರ್ನಾಟಕ, ಜಮಾತ್-ಎ-ಇಸ್ಲಾಮಿ ಹಿಂದ್, ಲ್‌ಮಲತ್-ಎ-ಅಹ್ಲೆ ಹದೀಸ್, ಜಮಾತ್-ಎ-ಅಹ್ಲೆ ಸುನ್ನತ್ ಕರ್ನಾಟಕ, ಕರ್ನಾಟಕ ಮುತ್ತಾಹಿದ ಮುಸ್ಲಿಂ ಮಹಜ್, ಪಾಪ್ಯುಲರ್ ಫ್ರಂಟ್​ ಆಫ್​ ಇಂಡಿಯಾ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್, ಫಾರ್ವರ್ಡ್​ ಟ್ರಸ್ಟ್, ಕ್ಯಾಂಪಸ್ ಫ್ರಂಟ್​ ಆಫ್​ ಇಂಡಿಯಾ ಸಂಘಟನೆಗಳು ಹಾಗೂ ಇಮಾರತ್-ಎ-ಷರಿಯಾದ ಮೌಲಾನಾ ಸಗೀರ್ ಅಹ್ಮದ್ ರಶದಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅನುಮತಿ ಕೋರಲಾಗಿದೆ.

    ಆಸ್ಕರ್​ ಪ್ರಶಸ್ತಿ 2022: ಚೊಚ್ಚಲ ಆಸ್ಕರ್​ ಪ್ರಶಸ್ತಿ ಗೆದ್ದ ನಟ ವಿಲ್​ ಸ್ಮಿತ್, ವಿಜೇತರ​ ಸಂಪೂರ್ಣ ಪಟ್ಟಿ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts