More

    ತೊಕ್ಕೊಟ್ಟು ಹೊಸ ಮಾರ್ಕೆಟ್ ಕೆಲಸ ಶುರು

    ಉಳ್ಳಾಲ: ತೊಕ್ಕೊಟ್ಟು ಭಾಗದ ಜನರ ಬಹುವರ್ಷಗಳ ಕನಸಾಗಿದ್ದ ಸುಸಜ್ಜಿತ ಮಾರುಕಟ್ಟೆ ಕಟ್ಟಡ ಕಾಮಗಾರಿ ಶಿಲಾನ್ಯಾಸ ನಡೆದ ಕೆಲವೇ ದಿನಗಳಲ್ಲಿ ಆರಂಭಗೊಂಡಿದ್ದು, ಕೆಲವೇ ತಿಂಗಳುಗಳಲ್ಲಿ ಕಟ್ಟಡ ಎದ್ದು ನಿಲ್ಲುವ ನಿರೀಕ್ಷೆ ಹೊಂದಲಾಗಿದೆ.

    ಉಳ್ಳಾಲ ಕ್ಷೇತ್ರಕ್ಕೆ ಹೃದಯ ಭಾಗವಾಗಿದ್ದ ತೊಕ್ಕೊಟ್ಟು ಮುಂದಿನ ದಿನಗಳಲ್ಲಿ ಉಳ್ಳಾಲ ತಾಲೂಕಿಗೂ ಕೇಂದ್ರಸ್ಥಾನ ಎನಿಸಲಿದೆ. ಈ ನಿಟ್ಟಿನಲ್ಲಿ ಹೊಸ ಮಾರ್ಕೆಟ್ ಮಹತ್ವ ಪಡೆಯಲಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿ ಹಿಂದಿನಿಂದಲೂ ಮೀನು, ಮಾಂಸ, ತರಕಾರಿ, ಹಣ್ಣು ಮಾರಾಟದ ಮಾರುಕಟ್ಟೆ ಇತ್ತಾದರೂ ಅತ್ಯಂತ ಇಕ್ಕಟ್ಟಾಗಿಯೂ, ಅಶುಚಿತ್ವದಿಂದಲೂ ಕೂಡಿತ್ತು. ಇದರಿಂದ ಈ ಮಾರುಕಟ್ಟೆ ಪ್ರವೇಶಿಸುವುದಕ್ಕೇ ಹೆಚ್ಚಿನವರು ಹಿಂದೆ ಮುಂದೆ ನೋಡುತ್ತಿದ್ದರು.

    ಇಲ್ಲಿಗೂ ಸುಸಜ್ಜಿತ ಮಾರುಕಟ್ಟೆ ಕಟ್ಟಡ ಬೇಕೆನ್ನುವ ಸಾರ್ವಜನಿಕರ ಬೇಡಿಕೆಯಂತೆ ನಗರೋತ್ಥಾನ ಅನುದಾನದಡಿ ಒಂದು ಕೋಟಿ ರೂ. ಅನುದಾನ ಮೀಸಲಿಟ್ಟು ವಿಶಾಲ ಜಾಗದ ಹುಡುಕಾಟ ನಡೆಸಿದ್ದರೂ ಪ್ರಯೋಜನ ಆಗಿರಲಿಲ್ಲ. ಇದರಿಂದ ಹಳೇ ಕಟ್ಟಡ ಕೆಡವುದೊಂದೇ ದಾರಿ ಎನಿಸಿ, ಅದನ್ನೂ ಪೂರೈಸಲಾಗಿತ್ತು. ಡಿಸೆಂಬರ್ 19ರಂದು ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದ್ದರು.

    ವ್ಯಾಪಾರಿಗಳು ಚಲ್ಲಾಪಿಲ್ಲಿ: ಹಳೇ ಕಟ್ಟಡ ಕೆಡವಿದ ಬಳಿಕ ಇಲ್ಲಿನ ವ್ಯಾಪಾರಿಗಳು ಚಲ್ಲಾಪಿಲ್ಲಿಯಾಗಿದ್ದಾರೆ. ದಿನಸಿ ಅಂಗಡಿ ಪಕ್ಕದ ಕಟ್ಟಡಕ್ಕೂ, ತರಕಾರಿ ವ್ಯಾಪಾರ ಅಂಬೇಡ್ಕರ್ ಮೈದಾನಕ್ಕೂ ಶಿಫ್ಟ್ೃ ಆಗಿದೆ. ಕೋಳಿ ಮತ್ತು ಇತರ ವ್ಯಾಪಾರಿಗಳು ಪಕ್ಕದಲ್ಲಿದ್ದ ಖಾಸಗಿ ಜಮೀನನ್ನು ಬಾಡಿಗೆಯಾಧಾರದಲ್ಲಿ ಪಡೆದು ಸ್ವಂತ ಹಣದಲ್ಲಿ ಅಂಗಡಿ ನಿರ್ಮಿಸಿದ್ದಾರೆ. ಮೂರು ಬೀಫ್ ಸ್ಟಾಲ್ಗಳು ಪಕ್ಕದಲ್ಲೇ ಇರುವ ರೈಲ್ವೆ ಜಾಗದಲ್ಲಿ ತಗಡಿನ ಚಪ್ಪರ ಹಾಕಿ ವ್ಯಾಪಾರ ನಡೆಸುತ್ತಿದ್ದರೂ ಕಿಡಿಗೇಡಿಗಳು ಬೆಂಕಿ ಕೊಟ್ಟು ವಿವಾದ ಸೃಷ್ಟಿಸಿದ್ದಾರೆ.

    ಹೊಸ ಕಟ್ಟಡಕ್ಕೂ ರೈಲ್ವೆ ಕಂಟಕ?
    ಹಳೇ ಮಾರುಕಟ್ಟೆ ಹೊಂದಿದ್ದ ಜಾಗ ಒಂದಷ್ಟು ರೈಲ್ವೆ ಇಲಾಖೆಗೆ ಸಂಬಂಧಪಟ್ಟಿತ್ತು. ಪ್ರಸಕ್ತ ಹೊಸ ಕಟ್ಟಡ ನಿರ್ಮಾಣ ಆಗುವ ಜಾಗಕ್ಕೆ ತಾಗಿಕೊಂಡೇ ರೈಲ್ವೆ ಇಲಾಖೆ ಜಾಗದ ಗುರುತು ಇದೆ. ಇನ್ನು ಈ ಭಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾದರೂ ರೈಲು ಸಂಚಾರದಿಂದ ಬಿರುಕು ಬೀಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಒಂದಸ್ತಿನ ಕಟ್ಟಡ ಮಾತ್ರ ನಿರ್ಮಾಣ ಆಗಲಿದೆ.

    ಕಟ್ಟಡದಲ್ಲಿ ಏನೆಲ್ಲ ಇರಲಿದೆ?
    ಒಂದೇ ಹಂತದಲ್ಲಿ ನಿರ್ಮಾಣವಾಗುವ ಕಟ್ಟಡದ ತಳ ಅಂತಸ್ತಿನಲ್ಲಿ 12 ದೊಡ್ಡ, ಎರಡು ಸಣ್ಣದಾದ ಅಂಗಡಿ ಕೋಣೆಗಳು, ಒಂದು ಬದಿಯಲ್ಲಿ ಕೋಳಿ, ಮೀನು, ಆಡು, ಬೀಫ್ ಸ್ಟಾಲ್ ಜತೆ ಪ್ರತ್ಯೇಕ ಶೌಚಗೃಹ ಇರಲಿವೆ. ಮೇಲಿನ ಅಂತಸ್ತಿನಲ್ಲಿ 12 ದೊಡ್ಡ ಹಾಗೂ ನಾಲ್ಕು ಸಣ್ಣ ಅಂಗಡಿ ಕೋಣೆಗಳು ಇರಲಿವೆ. ಇಂಜಿನಿಯರ್ ತಯಾರಿಸಿದ ನಕ್ಷೆ ಬಗ್ಗೆ ಅಸಮಾಧಾನ ಹೊಂದಿದ್ದ ಶಾಸಕರು ಪ್ರತ್ಯೇಕ ವಿನ್ಯಾಸಗಾರರಿಂದ ನಕ್ಷೆ ತಯಾರಿಸಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ.

    ತೊಕ್ಕೊಟ್ಟಿನಲ್ಲಿ ನೂತನ ಮಾರುಕಟ್ಟೆ ಕಟ್ಟಡಕ್ಕೆ ಮೂರು ವರ್ಷಗಳ ಹಿಂದೆಯೇ ಒಂದು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಆದರೆ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ತಡವಾಗಿ ಕಾಮಗಾರಿ ಆರಂಭಗೊಂಡಿದೆ. ಕಟ್ಟಡ ಎಂಟು ತಿಂಗಳಲ್ಲಿ ನಿರ್ಮಾಣ ಆಗಲಿದ್ದು, ಹಿಂದೆ ಇದ್ದ ವ್ಯಾಪಾರಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
    ಯು.ಟಿ.ಖಾದರ್, ಶಾಸಕ

    ಹಲವು ವರ್ಷಗಳಿಂದ ಮಾರುಕಟ್ಟೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು, ನಗರೋತ್ಥಾನ ಅನುದಾನದಲ್ಲಿ ರೂಪಿಸಿದ ಯೋಜನೆ ಕಾರ್ಯಗತವಾಗಬೇಕು ಎನ್ನುವ ನೆಲೆಯಲ್ಲಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಕಟ್ಟಡ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಬೇಡಿಕೆ.
    ಚಂದ್ರಕಾಂತ, ಒಳಪೇಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts