More

  ತೊಕ್ಕೊಟ್ಟು ಮಾರುಕಟ್ಟೆ ಶನಿಕಾಟಮುಕ್ತ!: ಬಾಡಿಗೆ ನಿರ್ಧಾರ

  ವಿಜಯವಾಣಿ ಸುದ್ದಿಜಾಲ ಉಳ್ಳಾಲ

  ತೊಕ್ಕೊಟ್ಟು ಭಾಗದ ಜನರ ಬಹುವರ್ಷಗಳ ಕನಸಾಗಿದ್ದ ಸುಸಜ್ಜಿತ ಮಾರುಕಟ್ಟೆ ಕಟ್ಟಡಕ್ಕೆ ಅಂಟಿದ್ದ ಶನಿಕಾಟದಿಂದ ಮುಕ್ತಗೊಂಡಿದೆ. ಕಟ್ಟಡದಲ್ಲಿರುವ ಕೋಣೆಗಳಲ್ಲಿ ಹಳಬರಿಗೆ ಬಹುಪಾಲು ಮೀಸಲಿಡಲಾಗಿದ್ದು, ಉಳಿದದ್ದನ್ನು ಹೊಸಬರಿಗೆ ಹಂಚಲಾಗಿದ್ದು, ಬಾಡಿಗೆ ದರ ಫೆ.3ರಂದು ನಿಗದಿಯಾಗಲಿದೆ.
  ತೊಕ್ಕೊಟ್ಟು ಉಳ್ಳಾಲದ ಹೃದಯ ಭಾಗ. ಉಳ್ಳಾಲ ತಾಲೂಕಿಗೂ ಇದುವೇ ಕೇಂದ್ರ ಸ್ಥಾನ. ತೊಕ್ಕೊಟ್ಟು ಒಳಪೇಟೆಯಲ್ಲಿ ಹಿಂದಿನಿಂದಲೂ ಇದ್ದ ಮೀನು, ಮಾಂಸ, ತರಕಾರಿ, ಹಣ್ಣು ಮಾರಾಟದ ಮಾರುಕಟ್ಟೆ ಅತ್ಯಂತ ಇಕ್ಕಟ್ಟು, ಅಶುಚಿತ್ವದಿಂದ ಕೂಡಿ ಅಸಹ್ಯ ಎನಿಸಿತ್ತು.

  ಇಲ್ಲೊಂದು ಸುಸಜ್ಜಿತ ಮಾರುಕಟ್ಟೆ ಕಟ್ಟಡ ಬೇಕೆನ್ನುವ ಸಾರ್ವಜನಿಕರ ಬೇಡಿಕೆಯಂತೆ ನಗರೋತ್ಥಾನ ಅನುದಾನದಡಿ ಒಂದು ಕೋಟಿ ರೂ. ಅನುದಾನ ಮೀಸಲಿಟ್ಟು ವಿಶಾಲ ಜಾಗದ ಹುಡುಕಾಟ ನಡೆಸಿದರೂ ಪ್ರಯೋಜನ ಆಗಲಿಲ್ಲ. ಈ ಹಿನ್ನೆಲೆಯಲ್ಲಿ 2020ರಲ್ಲೇ ಹಳೇ ಕಟ್ಟಡ ಕೆಡವಲಾಗಿದ್ದು. ಅದೇ ವರ್ಷ ಡಿ.19ರಂದು ಶಾಸಕ ಯು.ಟಿ.ಖಾದರ್ ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಹಳೇ ಕಟ್ಟಡ ಕೆಡವುವ ಸಂದರ್ಭ ಇಲ್ಲಿ ಮೀನು ಮಾರುಕಟ್ಟೆ, ಎರಡು ಮಟನ್ ಸ್ಟಾಲ್, ಮೂರು ಬೀಫ್ ಸ್ಟಾಲ್‌ಗಳು, ಹೂವಿನ ಅಂಗಡಿ, ಚಿಕನ್ ಸ್ಟಾಲ್, ತರಕಾರಿ ಅಂಗಡಿಗಳಿದ್ದವು. ಆ ವೇಳೆ ನಗರಸಭೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ದಿನಸಿ ಅಂಗಡಿಗಳು ಪಕ್ಕದ ಕಟ್ಟಡಕ್ಕೂ, ತರಕಾರಿ ವ್ಯಾಪಾರ ಅಂಬೇಡ್ಕರ್ ಮೈದಾನಕ್ಕೂ ಶಿಫ್ಟ್ ಆಗಿತ್ತು. ಕೋಳಿ ಮತ್ತು ಇತರ ವ್ಯಾಪಾರಿಗಳು ಪಕ್ಕದಲ್ಲಿದ್ದ ಖಾಸಗಿ ಜಮೀನಿನನ್ನು ಬಾಡಿಗೆಯಾಧಾರದಲ್ಲಿ ಪಡೆದು ಸ್ವಂತ ಹಣದಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಮೂರು ಬೀಫ್ ಸ್ಟಾಲ್‌ಗಳು ಪಕ್ಕದಲ್ಲೇ ಇರುವ ರೈಲ್ವೆ ಜಾಗದಲ್ಲಿ ತಗಡಿನ ಚಪ್ಪರ ಹಾಕಿ ವ್ಯಾಪಾರ ಆರಂಭಿಸಿದಾಗ, ರಾತೋರಾತ್ರಿ ಕಿಡಿಗೇಡಿಗಳು ಬೆಂಕಿ ಕೊಟ್ಟು ಸುಟ್ಟು ಹಾಕಿದ್ದರು. ನಗರಸಭೆಯ ಮುತುವರ್ಜಿಯಲ್ಲಿ ಮತ್ತದೇ ಜಾಗದಲ್ಲಿ ಸ್ಟಾಲ್‌ಗಳು ನಿರ್ಮಾಣಗೊಂಡಿದ್ದವು.

  See also  ಅಂಚೆ ಕಚೇರಿಗಿಲ್ಲ ಸೂರು

  ಹಳೇ ಮಾರುಕಟ್ಟೆ ಹೊಂದಿದ್ದ ಜಾಗ ಒಂದಷ್ಟು ರೈಲ್ವೆ ಇಲಾಖೆಗೆ ಸಂಬಂಧಪಟ್ಟಿದ್ದಲ್ಲದೆ, ರೈಲು ಹಳಿ ಸನಿಹದಲ್ಲೇ ಇದೆ. ಇಲ್ಲಿ ಬಹುಮಹಡಿಯ ಕಟ್ಟಡ ನಿರ್ಮಿಸಿದರೆ ಬಿರುಕು ಬೀಳುವ ಆತಂಕದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಒಂದಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡದ ತಳ ಅಂತಸ್ತಿನಲ್ಲಿ 12 ದೊಡ್ಡ, ಎರಡು ಸಣ್ಣದಾದ ಅಂಗಡಿ ಕೋಣೆಗಳು, ಒಂದು ಬದಿಯಲ್ಲಿ ಕೋಳಿ, ಮೀನು, ಆಡು, ಬೀಫ್ ಸ್ಟಾಲ್ ಸಹಿತ 23 ಕೋಣೆಗಳಿವೆ. ಆರಂಭದಲ್ಲಿ ಇಂಜಿನಿಯರ್ ತಯಾರಿಸಿದ ನಕ್ಷೆಯ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮರು ವಿನ್ಯಾಸ ಮಾಡಲಾಗಿದೆ.

  ಸರ್ಕಾರದ ನಿಯಮ ಪಾಲನೆ!

  ಹೊಸ ಕಟ್ಟಡ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದಿವೆ. ಆದರೆ ಕೆಲವರ ಲಾಬಿ, ಒತ್ತಡದಿಂದ ಹಿಂದಿನ ಪೌರಾಯುಕ್ತರು ಹರಾಜಿಗೆ ಹಿಂದೇಟು ಹಾಕಿದ್ದರಿಂದ ಅಡ್ಡಿಯಾಗಿ ನಗರಸಭೆ ಆದಾಯಕ್ಕೂ ಕುತ್ತು ಬಂದಿತ್ತು. ಕಳೆದ ವರ್ಷ ಪೌರಾಡಳಿತ ಸಚಿವ ರಹೀಂ ಖಾನ್ ನಗರಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದಾಗ ಕೌನ್ಸಿಲರ್‌ಗಳೇ ವಿಷಯ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ತಕ್ಷಣ ಹರಾಜಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಹಾಲಿ ಪೌರಾಯುಕ್ತರು ಸರ್ಕಾರದ ಸೂಚನೆ ಪಾಲನೆಗೆ ಮುಂದಾಗಿದ್ದು ಈಗಾಗಲೇ ಪ್ರಕಟಣೆ ಹೊರಡಿಸಿದ್ದಾರೆ. ಬೇಡಿಕೆಯಂತೆ ಕಟ್ಟಡದಲ್ಲಿರುವ 23 ಕೋಣೆಗಳ ಪೈಕಿ 16ರನ್ನು ಹಿಂದೆ ಇದ್ದವರಿಗೇ ನೀಡಲಾಗುತ್ತದೆ. ಉಳಿದ ಏಳು ಕೋಣೆಗಳು ಎಸ್ಸಿ-ಎಸ್ಟಿ, ಸಾಮಾನ್ಯ, ಅಂಗವಿಕಲರಿಗೆ ಮೀಸಲಿಡಲಾಗಿದ್ದು, ಮೀನು ಮಾರುಕಟ್ಟೆ ಸಾರ್ವಜನಿಕವಾಗಿ ನಡೆಯಲಿದೆ. ಇವೆಲ್ಲಾ ಪ್ರಕ್ರಿಯೆ ಫೆ.3ರಂದು ನಡೆಯಲಿದೆ.

  ಕಳೆದ ನಾಲ್ಕು ವರ್ಷಗಳಿಂದ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಸರ್ಕಾರದ ನಿಯಮ ಪಾಲಿಸಿ ಹರಾಜು ಕರೆಯಲು ನಿರ್ಧರಿಸಲಾಗಿದೆ. ಪರಿಶಿಷ್ಟ ಜಾತಿ ಪಂಗಡ, ವಿಕಲಚೇತನರು, ಸಾಮಾನ್ಯ ಎಂದು ಮಳಿಗೆ ಮೀಸಲಿಡಲಾಗಿದೆ. ಈ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ನಿಯಮ ಉಲ್ಲಂಘನೆ ಆಗಿಲ್ಲ.

  -ವಾಣಿ ವಿ.ಆಳ್ವ, ಪೌರಾಯುಕ್ತೆ, ಉಳ್ಳಾಲ ನಗರಸಭೆ

  ಹಿಂದಿನ ಜಿಲ್ಲಾಧಿಕಾರಿ ಮತ್ತು ಪೌರಾಡಳಿಯ ಸಚಿವರು ಮಳಿಗೆ ಹರಾಜು ಹಾಕುವಂತೆ ಸೂಚಿಸಿದಾಗ ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರಿಗೆ ಮೀಸಲಿಡುವಂತೆ ಒತ್ತಾಯಿಸಿದ್ದೆ. ಅದರಂತೆ 16 ಮಳಿಗೆಗಳನ್ನು ಹಳಬರಿಗೆ ಮೀಸಲಿಟ್ಟು ಉಳಿದಿರುವುದನ್ನು ಸರ್ಕಾರದ ನಿಯಮದಂತೆ ಹರಾಜು ಹಾಕಲಾಗುತ್ತಿದೆ.

  -ಯು.ಪಿ.ಅಯೂಬ್ ಮಂಚಿಲ, ನಿಕಟಪೂರ್ವ ಉಪಾಧ್ಯಕ್ಷ, ನಗರಸಭೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts