More

    ಲಕ್ಷ ಕೋಟಿ ರೂ. ಬರೆ: ಈ ವರ್ಷ 50 ವರ್ಷಗಳಲ್ಲೇ ಅತ್ಯಂತ ಭೀಕರ ಬರ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯದ ರೈತರ ಪಾಲಿನ ಸಂಕಷ್ಟಗಳು ಬಗೆ ಹರಿಯುತ್ತಿಲ್ಲ. ಸತತ ಬರ ಅಥವಾ ಪ್ರವಾಹದಿಂದ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ವರ್ಷ ಕಂಡು ಕೇಳರಿಯದ ಭೀಕರ ಬರದಿಂದಾಗಿ ರೈತರಿಗೆ ಒಂದು ಲಕ್ಷ ಕೋಟಿ ರೂ.ಗಳಿಗೂ ಅಧಿಕ ನಷ್ಟ ಆಗಿದೆ. ಸರ್ಕಾರಗಳು ಕೈ ಹಿಡಿದರಷ್ಟೇ ಅವರಿಗೀಗ ಉಳಿಗಾಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಮೊದಲ ಮನವಿಯ ಪ್ರಕಾರ ಬೆಳೆ ಹಾನಿ ಅಂದಾಜು 30 ಸಾವಿರ ಕೋಟಿ ರೂ. ಇದೀಗ ಎರಡನೇ ಮನವಿಯನ್ನು ಸಲ್ಲಿಸಲು ಸಿದ್ಧತೆ ನಡೆದಿದ್ದು, ಮೊತ್ತ ಹೆಚ್ಚಾಗಲಿದೆ. ಆದರೆ, ಕೇಂದ್ರಕ್ಕೆ ಸಲ್ಲಿಸುವ ಮನವಿಗೂ ವಾಸ್ತವ ನಷ್ಟಕ್ಕೂ ಅಜಗಜಾಂತರವಿದೆ ಎಂಬುದು ತಜ್ಞರ ಅಭಿಪ್ರಾಯ.

    ರಾಜ್ಯ ಸರ್ಕಾರ ಮಳೆ ಕೊರತೆಯನ್ನು ಆಧರಿಸಿ ಮೊದಲಿಗೆ 161 ತೀವ್ರ ಹಾಗೂ 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಎರಡನೇ ಪಟ್ಟಿಯಲ್ಲಿ 21 ತಾಲೂಕುಗಳನ್ನು ಬರಪೀಡಿತವೆಂದು ಸೇರಿಸಿದೆ. ಪ್ರತಿವರ್ಷ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 111 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾದರೆ, ಈ ವರ್ಷ 67.95 ಲಕ್ಷ ಹೆಕ್ಟೇರ್​ನಲ್ಲಿ ಆಗಿದ್ದು, ಬಿತ್ತನೆಯಾಗದಿರುವ ಪ್ರದೇಶವನ್ನು ನಷ್ಟಕ್ಕೆ ಸೇರಿಸಬೇಕಾಗಿದೆ ಎಂಬ ಒತ್ತಾಯವೂ ಇದೆ. ಗ್ರೌಂಡ್ ಥ್ರೂಟಿಂಗ್ ಮಾಡುವ ಮೂಲಕ ಬೆಲೆ ಹಾನಿಯನ್ನು ಲೆಕ್ಕ ಹಾಕಲಾಗಿದೆ. ಅದರ ಆಧಾರದಲ್ಲಿ ಆಹಾರ ಧಾನ್ಯ ಶೇ.50 ರಷ್ಟು ಉತ್ಪಾದನೆಯಾಗುವುದಿಲ್ಲವೆಂದು ಸರ್ಕಾರ ಹೇಳುತ್ತಿದೆ.

    ವಾಸ್ತವ ಲೆಕ್ಕವಿಲ್ಲ: ಸರ್ಕಾರ ಬೆಳೆ ಹಾನಿಯನ್ನಷ್ಟೇ ಲೆಕ್ಕ ಹಾಕುತ್ತಿದೆ. ಆದರೆ ಉಳುಮೆ, ರಸಗೊಬ್ಬರ, ಬಿತ್ತನೆ ಬೀಜ, ರೈತರ ಶ್ರಮ, ವೆಚ್ಚವನ್ನು ಪರಿಗಣಿಸಿಲ್ಲ. ಅದೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡು ನಷ್ಟದ ಅಂದಾಜು ಮಾಡಬೇಕು ಎಂಬ ಬೇಡಿಕೆ ಇದೆ. ಅದರಿಂದಲೇ ನಷ್ಟದ ಅಂದಾಜು ಸರ್ಕಾರ ಹೇಳುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂಬುದು ಕೃಷಿ ತಜ್ಞರ ವಾದ. ರಾಜ್ಯದಲ್ಲಿ ಯಾವಾಗಲೂ ಶೇ.75 ರಷ್ಟು ಬಿತ್ತನೆ ಮುಂಗಾರು ಹಂಗಾಮಿನಲ್ಲಿಯೂ, ಶೆ.20 ರಷ್ಟು ಹಿಂಗಾರಿನಲ್ಲಿಯೂ ಹಾಗೂ ಶೇ.5 ರಷ್ಟು ಬೇಸಿಗೆಯಲ್ಲಿಯೂ ಆಗುತ್ತದೆ. ಈಗಾಗಲೇ ಹಿಂಗಾರು ಸಹ ಕೈ ಕೊಟ್ಟಿದೆ. ಅದರ ನಷ್ಟವನ್ನು ಸಹ ಅಂದಾಜಿಸಬೇಕಿದೆ. ರಕ್ಷಣಾತ್ಮಕ ನೀರಾವರಿ ಇರುವ ಪ್ರದೇಶ ಹೊರತುಪಡಿಸಿದರೆ ಬೇರೆ ಕಡೆ ಯಾವುದೇ ಬೆಳೆ ಬರುತ್ತಿಲ್ಲ. ಮೇವಿನ ಕೊರತೆ, ಹಾಲಿನ ಉತ್ಪಾದನೆ ಕಡಿಮೆಯಾಗಿ ಹೈನೋದ್ಯಮದ ಆದಾಯಕ್ಕೂ ಕುತ್ತು ಬಂದಿದೆ. ಇಂತಹ ಆದಾಯ ಕೊರತೆಯ ಲೆಕ್ಕವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ. ಲಭ್ಯ ಮಾಹಿತಿಯ ಪ್ರಕಾರ 10 ಲಕ್ಷ ಲೀಟರ್ ಹಾಲು ಉತ್ಪಾದನೆ ಕುಸಿದಿದೆ. ಇದು ಇನ್ನಷ್ಟು ಹೆಚ್ಚಾಗುವ ಅಂದಾಜಿದೆ.

    ಆರಂಭವಾಗಿದೆ ಗುಳೆ
    ಭೀಕರ ಬರ ಇದ್ದರೂ ಸಹ ಹಿಂದೆ ಆಗುತ್ತಿದ್ದ ಪ್ರಮಾಣದಲ್ಲಿ ಗುಳೆ ಕಂಡುಬಂದಿಲ್ಲ, ಆದರೆ, ಗುಳೆ ಹೋಗುವುದು ಆರಂಭವಾಗಿದೆ. ಲಭ್ಯ ಮಾಹಿತಿಯೊಂದರ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿಯೇ ಸಾಕಷ್ಟು ಜನ ಗುಳೆ ಹೋಗಿದ್ದಾರೆ. ವಿಜಯಪುರ, ಗದಗ, ಯಾದಗಿರಿ, ರಾಯಚೂರು ಹೀಗೆ ವಿವಿಧ ಜಿಲ್ಲೆಗಳಿಂದ ನೆರೆ ರಾಜ್ಯಗಳು ಅಥವಾ ಬೆಂಗಳೂರು ಕಡೆ ಗುಳೆ ಬರಲಾರಂಭಿಸಿದ್ದಾರೆ. ಸರ್ಕಾರದ ಗ್ಯಾರಂಟಿಗಳಿಂದ ಇನ್ನೂ ದೊಡ್ಡ ಪ್ರಮಾಣದ ಗುಳೆ ಕಂಡುಬಂದಿಲ್ಲವೆಂಬುದು ಅಧಿಕಾರಿಗಳ ಹೇಳಿಕೆ.

    ನಷ್ಟದ ಅಂದಾಜು ಹೇಗೆ ಆಗಬೇಕು?
    ರೈತರಿಗೆ ಆಗುವ ನಷ್ಟವನ್ನು ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಆಳುಕಾಳುಗಳಿಗೆ ಮಾಡಿರುವ ವೆಚ್ಚವನ್ನು ತೆಗೆದುಕೊಳ್ಳಬೇಕು. ಏಪ್ರಿಲ್, ಮೇ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಕೆಲವು ಬೆಳೆಗಳು ರೈತರ ಕೈಗೆ ಸಿಕ್ಕಿಲ್ಲ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

    ರೈತರ ನಿರೀಕ್ಷೆಗಳೇನು

    * ರೈತರ ಸಾಲ ರೀ-ಶೆಡ್ಯೂಲ್ ಮಾಡಬೇಕು

    * ಹೊಸ ಸಾಲ ಸಿಗುವಂತೆ ವ್ಯವಸ್ಥೆ ರೂಪಿಸಬೇಕು

    * ಸಾಲ ವಸೂಲಾತಿಗೆ ಕೂಡಲೇ ಬ್ರೇಕ್ ಹಾಕಬೇಕು

    * ಬ್ಯಾಂಕ್​ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು

    * ಕೃಷಿ ಹೊಂಡ ಯೋಜನೆಗೆ ವೇಗ ನೀಡಬೇಕು

    * ಮೇವು ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ ರೂಪಿಸಬೇಕು

    * ತೋಟಗಾರಿಕೆಯಂತೆ ಕೃಷಿಗೂ ನರೇಗಾ ಹಣ ಬಳಕೆ ವಿಸ್ತರಿಸಬೇಕು

    * ಉದ್ಯೋಗ ಖಾತ್ರಿಯಲ್ಲಿ ಬೀಜ, ರಸಗೊಬ್ಬರ ನೀಡಬೇಕು

    * ಪ್ರತ್ಯೇಕ ವಿಮಾ ಯೋಜನೆ ರೂಪಿಸಬೇಕು, ಅದು ರೈತಸ್ನೇಹಿಯಾಗಿರಬೇಕು

    * ಕೇಂದ್ರಕ್ಕೆ ಕಾಯದೇ ರಾಜ್ಯದಿಂದಲೇ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು, ಆ ಮೊತ್ತ ಹೆಚ್ಚಿಸಬೇಕು

    * ಕೃಷಿ ಬೆಳೆ ಆಯೋಗ ನೀಡಿರುವ ಶಿಫಾರಸಿನಂತೆ ನಷ್ಟ ಅಂದಾಜು ಮಾಡಬೇಕು

    ಶಾಶ್ವತ ಪರಿಹಾರ
    ಜಾಗತಿಕ ತಾಪಮಾನದಿಂದಾಗಿ ಮುಂದಿನ ವರ್ಷಗಳಲ್ಲಿ ಬರ ಅಥವಾ ನೆರೆ ಕಾಡಲಿದೆ ಎಂಬುದು ತಜ್ಞರ ಅಭಿಪ್ರಾಯ. ಜಾಗತಿಕ ತಾಪಮಾನ ತಗ್ಗಿಸುವ ಪ್ರಯತ್ನ ನಡೆಯಬೇಕಾಗಿದೆ. ಅದಕ್ಕಾಗಿ ರೂಪಿಸಿರುವ ಕ್ರಿಯಾ ಯೋಜನೆ ಎಲ್ಲ ರಾಜ್ಯಗಳಲ್ಲಿಯೂ ತುರ್ತಾಗಿ ಜಾರಿಗೆ ಬರಬೇಕಾಗಿದೆ. ಇಲ್ಲದಿದ್ದರೆ ಬರ ಅಥವಾ ನೆರೆಯನ್ನು ತಪ್ಪಿಸಲು ಸಾಧ್ಯವೇ ಇಲ್ಲ.

    50 ವರ್ಷದಲ್ಲಿ ಮೂರನೇ ಭೀಕರ ಬರ
    ರಾಜ್ಯವನ್ನು ಕಳೆದ ಐವತ್ತು ವರ್ಷಗಳಲ್ಲಿ ಕಾಡಿದ ಅತ್ಯಂತ ಭೀಕರ ಬರ ಇದಾಗಿದೆ. 1973ರಿಂದ ರಾಜ್ಯವನ್ನು ಕಾಡಿದ ಮೂರನೇ ಅತ್ಯಂತ ಕರಾಳ ಬರ ಈ ವರ್ಷ ರಾಜ್ಯದಲ್ಲಿ ಉಂಟಾಗಿದೆ.

    ರೈತರಿಗೆ ಬಹಳಷ್ಟು ನಷ್ಟವಾಗಿದೆ. ಮುಂದಿನ ಬದುಕು ಕಷ್ಟ ಎಂಬ ಪರಿಸ್ಥಿತಿ ಇದೆ. ಹಿಂಗಾರು ಸಹ ಕೈ ಕೊಟ್ಟಿದೆ. ಆದ್ದರಿಂದ ಸರ್ಕಾರ ಕೇವಲ ಬೆಳೆ ನಷ್ಟ ಲೆಕ್ಕ ಹಾಕದೇ ವಾಸ್ತವ ನಷ್ಟ ಪರಿಗಣಿಸಬೇಕು. ಕೂಡಲೇ ಪರಿಹಾರ ನೀಡಬೇಕು.

    | ಹನುಮನಗೌಡ ಬೆಳಗುರ್ಕಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

    ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಕಿತ್ತಾಟ ನಡೆಯುವಂತಾಗಬಾರದು. ಶಾಸನಾತ್ಮಕ ಕಾನೂನು ರೂಪುಗೊಳ್ಳಬೇಕು. ತಕ್ಷಣ ಪರಿಹಾರ ಸಿಗುವಂತಾಗಬೇಕು. ನಷ್ಟದ ಅಂದಾಜು ಸಹ ವಾಸ್ತವವಾಗಿರಬೇಕು.

    -ಡಾ. ಪ್ರಕಾಶ್ ಕಮ್ಮರಡಿ, ಕೃಷಿ ಆರ್ಥಿಕ ತಜ್ಞ

    ಕೆಲವೆಡೆ ಮುಂಚಿತವಾಗಿ ನಾಟಿಯಾಗಿದ್ದರೆ, ಇನ್ನೂ ಕೆಲವೆಡೆ ನಾಟಿಯೇ ಆಗಿಲ್ಲ. ಅದರಿಂದ ಆಗಿರುವ ನಷ್ಟವನ್ನೂ ಅಂದಾಜು ಮಾಡಬೇಕು. ಸಾಲ ವಸೂಲಾತಿಯ ಕಿರುಕುಳ ತುಂಬಾ ಅಗಿರುವುದರಿಂದ ಬ್ಯಾಂಕ್​ಗಳಿಗೆ ಸರ್ಕಾರ ಎಚ್ಚರಿಕೆ ನೀಡಬೇಕಾಗಿದೆ. ಮೇವಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು.

    | ಕುರುಬೂರು ಶಾಂತಕುಮಾರ್

    ಏನೇನು ನಷ್ಟ?
    ತೊಗರಿ, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಹತ್ತಿ, ಹೆಸರು, ಉದ್ದು, ಬಿಳಿಜೋಳ, ಭತ್ತ, ರಾಗಿ, ಸೋಯಾಬಿನ್, ಎಳ್ಳು ಮುಂಗಾರಿನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ರಾಜ್ಯದಲ್ಲಿ 70 ಲಕ್ಷ ಟನ್ ಭತ್ತ ಬೆಳೆಯಲಾಗುತ್ತದೆ. ಮೆಕ್ಕೆಜೋಳ 45 ಲಕ್ಷ ಟನ್, 8 ಲಕ್ಷ ಟನ್ ತೊಗರಿ… ಹೀಗೆ ಹಲವು ಬೆಳೆಗಳು ನಷ್ಟವಾಗಿವೆ. ಭತ್ತ ಬೆಳೆಯಲು ಎಕರೆಗೆ 25 ಸಾವಿರ ರೂ., ಬಿಳಿಜೋಳಕ್ಕೆ 15 ಸಾವಿರ ರೂ. ವೆಚ್ಚವಾಗುತ್ತದೆ. ಈ ವೆಚ್ಚವನ್ನು ನಷ್ಟದಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ರೈತರು ಈಗ ತಮ್ಮ ಕೈಯಲ್ಲಿ ಇರುವುದು ಕಳೆದುಕೊಂಡಿದ್ದಾರೆ. ಬರುವುದು ಬರುತ್ತಿಲ್ಲ. ಆದ್ದರಿಂದ ರೈತರಲ್ಲಿ ದಸರಾ ಅಥವಾ ದೀಪಾವಳಿಯ ಖುಷಿ ಉಳಿದಿಲ್ಲ.

    ಬರ ವರ್ಷಗಳು ಯಾವುವು?

    ರಾಜ್ಯವನ್ನು ಬರ 2001-04, 2006, 2008-09, 2011-16, 2018-19 ಮತ್ತು 2023 ರಲ್ಲಿ ಕಾಡಿದೆ. ಉಳಿದ ವರ್ಷಗಳಲ್ಲಿ ಪ್ರವಾಹದಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.

    ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ ಜೈಲಿನ ಅಧಿಕಾರಿಗಳು

    ಬಿಕ್ಕಟ್ಟು: ಇಂಧನ ಕೊರತೆಯಿಂದ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನ ಏರ್‌ಲೈನ್ಸ್, 26 ವಿಮಾನಗಳ ಹಾರಾಟ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts