More

    ದೊಡ್ಡ ಸಂಖ್ಯೆಯಲ್ಲಿ ಸಂಸದರ ಅಮಾನತು ಇದೇ ಮೊದಲೇನಲ್ಲ: ಹಿಂದೆಯೂ ಈ ರೀತಿ ಆಗಿದ್ದು ಯಾವಾಗ?

    ನವದೆಹಲಿ: ವ್ಯಕ್ತಿಗಳಿಬ್ಬರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಲೋಕಸಭೆಯ ಚೇಂಬರ್​ಗೆ ನುಗ್ಗಿದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಂಸತ್​ ಭದ್ರತಾ ಲೋಪ ಕುರಿತು ಗೃಹ ಸಚಿವ ಅಮಿತ್​ ಶಾ ಅವರ ಹೇಳಿಕೆಗೆ ಆಗ್ರಹಿಸಿ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳಲ್ಲಿ ಕೋಲಾಹಲ ಸೃಷ್ಟಿಸಿದ ವಿರೋಧ ಪಕ್ಷಗಳ ಸಂಸದರನ್ನು ದೊಡ್ಡ ಪ್ರಮಾಣದಲ್ಲಿ ಅಮಾನತು ಮಾಡಲಾಗಿದೆ. ಈಗ ಸಸ್ಪೆಂಡ್​ ಆದ ಸಂಸದರ ಒಟ್ಟು ಸಂಖ್ಯೆ 143ಕ್ಕೆ ತಲುಪಿದೆ.

    ಸಂಸದರು ದೊಡ್ಡ ಸಂಖ್ಯೆಯಲ್ಲಿ ಅಮಾನತು ಆಗಿರುವುದು ಇದೇ ಮೊದಲೇನಲ್ಲ. 1989ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ ಕೂಡ ಅಮಾನತುಗೊಂಡ ಸಂಸದರ ಸಂಖ್ಯೆ 63 ಮೀರಿತ್ತು ಎಂಬುದನ್ನು ಸಂಸತ್ತಿನ ಇತಿಹಾಸ ತಿಳಿಸುತ್ತದೆ.

    ಆಗ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಕುರಿತಾದ ಠಕ್ಕರ್ ಆಯೋಗದ ವರದಿಯು ಸಂಸತ್ತಿನಲ್ಲಿ ಬಿರುಗಾಳಿ ಎಬ್ಬಿಸಿತ್ತು, ಇದು ಸಂಸತ್ತಿನ 63 ಸದಸ್ಯರ ಅಮಾನತಿಗೆ ಕಾರಣವಾಯಿತು. ಆಯೋಗದ ಸಂಶೋಧನೆಗಳು, ಅದರಲ್ಲೂ ವಿಶೇಷವಾಗಿ ಇಂದಿರಾ ಗಾಂಧಿಯವರ ವಿಶೇಷ ಸಹಾಯಕ ಆರ್.ಕೆ.ಧವನ್ ಭಾಗಿಯಾಗಿರುವ ಕುರಿತ ಅನುಮಾನಗಳು ಬೆಂಕಿಗೆ ತುಪ್ಪ ಸುರಿದಿದ್ದವು.

    ದಿವಂಗತ ಪ್ರಧಾನಿ ಹತ್ಯೆಯ ಸಂಚಿನಲ್ಲಿ ಆರ್.ಕೆ. ಧವನ್ ಪಾತ್ರದ ಬಗ್ಗೆ ಗಂಭೀರ ಅನುಮಾನಗಳನ್ನು ಸಮಿತಿಯ ವರದಿಯು ಹುಟ್ಟುಹಾಕಿತ್ತು. “ದಿವಂಗತ ಪ್ರಧಾನ ಮಂತ್ರಿಯವರ ಹತ್ಯೆಯ ಸಂಚಿನಲ್ಲಿ ಪ್ರಧಾನ ಮಂತ್ರಿಯ ವಿಶೇಷ ಸಹಾಯಕ ಆರ್.ಕೆ. ಧವನ್ ಅವರ ಸಹಭಾಗಿತ್ವ ಮತ್ತು ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಗಂಭೀರವಾದ ಅನುಮಾನಗಳನ್ನು ಉಂಟು ಮಾಡುವ ಬಲವಾದ ಸೂಚನೆಗಳು ಮತ್ತು ಹಲವಾರು ಅಂಶಗಳಿವೆ” ಎಂದು ವರದಿಯಲ್ಲಿ ಹೇಳಲಾಗಿತ್ತು.

    ಠಕ್ಕರ್ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುತ್ತಿದ್ದಂತೆ, ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ಮಾಡಿದವು. ಏಕೆಂದರೆ, ಆರ್.ಕೆ.ಧವನ್ ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ತಂಡದ ಭಾಗವಾಗಿದ್ದರು. ನಂತರ ಕಾಂಗ್ರೆಸ್ ಪಕ್ಷ ಸೇರಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು.

    ಆಗ ಅಮಾನತುಗೊಂಡ ಸದಸ್ಯರಲ್ಲಿ ತೆಲುಗು ದೇಶ ಪಾರ್ಟಿ (ಟಿಡಿಪಿ), ಜನತಾ ಪಕ್ಷ ಮತ್ತು ಸಿಪಿಎಂ ಮೊದಲಾದ ಪಕ್ಷಗಳ ಸಂಸದರು ಇದ್ದರು.

    ವಿರೋಧ ಪಕ್ಷದ ಸದಸ್ಯ ಸೈಯದ್ ಶಹಾಬುದ್ದೀನ್ ಅವರು ತಮ್ಮ ವಿಚಿತ್ರ ನಡೆಯ ಮೂಲಕ ಗಮನಸೆಳೆದಿದ್ದರು. ಆ ಸಂದರ್ಭದಲ್ಲಿ ಅವರನ್ನು ಅಮಾನತುಗೊಳಿಸಿರಲಿಲ್ಲ. ಆದರೂ ತಮ್ಮನ್ನು ಅಮಾನತು ಮಾಡಿದ್ದಾರೆಂದು ಪರಿಗಣಿಸಬೇಕೆಂದು ಹೇಳಿ, ಸ್ವಯಂಪ್ರೇರಿತರಾಗಿ ಸದನದಿಂದ ಹೊರನಡೆದಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿ ಇತರ ಮೂವರು ಸದಸ್ಯರಾದ ಜಿಎಂ ಬನಾತ್ವಾಲ್ಲಾ, ಎಂ.ಎಸ್. ಗಿಲ್ ಮತ್ತು ಶಮೀಂದರ್ ಸಿಂಗ್ ಕೂಡ ಹೊರನಡೆದಿದ್ದರು.

    ಈ ಸಾಮೂಹಿಕ ಅಮಾನತು ಕ್ರಮವು ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಸಂಸದರನ್ನು ಅಮಾನತುಗಳಿಸಿದ್ದಕ್ಕಾಗಿ ಆ ಸಮಯದಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಆದರೆ, ಅಮಾನತುಗೊಂಡ ಸಂಸದರು ಮರುದಿನವೇ ಸಭಾಧ್ಯಕ್ಷರಲ್ಲಿ ಕ್ಷಮೆ ಯಾಚಿಸಿದರು. ಹೀಗಾಗಿ, ಅವರ ಅಮಾನತು ರದ್ದುಪಡಿಸಿ, ಮತ್ತೆ ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿತ್ತು.

    ಜೆಎನ್​.1 ಪ್ರಕರಣಗಳ ಸಂಖ್ಯೆಯಲ್ಲಿ ಗೋವಾ ಈಗ ನಂಬರ್​ 1: ಕೇರಳದಲ್ಲಿ ಮೂವರ ಬಲಿ, ಭಾರತದಲ್ಲಿ ಕೋವಿಡ್​ ಹೊಸ ರೂಪಾಂತರದ ಭೀತಿ

    ಬುಧವಾರವೂ ಮುಂದುವರಿದ ಸಂಸದರ ಅಮಾನತು ಕ್ರಮ: ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟು ಗೊತ್ತೆ?

    ಖಲಿಸ್ತಾನಿ ಉಗ್ರ ಪನ್ನುನ್​ ಕೊಲೆ ಸಂಚು ಆರೋಪ: ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts