More

    ಖಲಿಸ್ತಾನಿ ಉಗ್ರ ಪನ್ನುನ್​ ಕೊಲೆ ಸಂಚು ಆರೋಪ: ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು?

    ನವದೆಹಲಿ: ಅಮೆರಿಕ-ಕೆನಡಾ ಪ್ರಜೆ ಹಾಗೂ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚನ್ನು ಭಾರತೀಯ ಪ್ರಜೆಯೊಬ್ಬರು ರೂಪಿಸಿದ್ದರು ಎಂಬ ಆರೋಪ ಕುರಿತು ಪರಿಶೀಲನೆ ನಡೆಸಲಾಗುವುದು. ಆದರೆ, ಕೆಲವು ಘಟನೆಗಳು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಹಳಿತಪ್ಪಿಸಲಾರವು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

    ಕಳೆದ ತಿಂಗಳು ಅಮೆರಿಕದ ಸರ್ಕಾರಿ ವಕೀಲರು ಭಾರತದ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಪನ್ನುನ್​ ಕೊಲೆ ಸಂಚು ಆರೋಪ ಹೊರಿಸಿದ ನಂತರ ಇದೇ ಮೊದಲ ಬಾರಿಗೆ ಮೋದಿ ಅವರು ಈ ವಿಷಯ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.

    “ಯಾರಾದರೂ ನಮಗೆ ಯಾವುದೇ ಮಾಹಿತಿಯನ್ನು ನೀಡಿದರೆ, ನಾವು ಅದನ್ನು ಖಂಡಿತವಾಗಿ ಪರಿಶೀಲಿಸುತ್ತೇವೆ” ಎಂದು ಪ್ರಧಾನಿ ಮೋದಿ ಅವರು ಬ್ರಿಟನ್ನಿನ ದಿನಪತ್ರಿಕೆ ಫೈನಾನ್ಷಿಯಲ್ ಟೈಮ್ಸ್​ಗೆ ತಿಳಿಸಿದ್ದಾರೆ, ಗುಪ್ತಾ ವಿರುದ್ಧದ ಕೊಲೆ ಆರೋಪ ಸಂಚು ಸುದ್ದಿಯನ್ನು ಮೊಟ್ಟಮೊದಲು ಈ ಪತ್ರಿಕೆಯೇ ಬಹಿರಂಗಪಡಿಸಿತ್ತು.

    “ನಮ್ಮ ನಾಗರಿಕರು ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡಿದ್ದರೆ, ಅದನ್ನು ಪರಿಶೀಲಿಸಲು ನಾವು ಸಿದ್ಧರಿದ್ದೇವೆ. ಕಾನೂನಿನ ನಿಯಮವೇ ನಮ್ಮ ಬದ್ಧತೆ.” ಎಂದು ಪ್ರಧಾನಿ ಹೇಳಿದ್ದಾರೆ.

    “ಭಾರತ-ಅಮೆರಿಕ ಸಂಬಂಧದ ಬಲವರ್ಧನೆಗೆ ಬಲವಾದ ಉಭಯ ಪಕ್ಷೀಯ ಬೆಂಬಲವಿದೆ, ಇದು ಪ್ರಬುದ್ಧ ಮತ್ತು ಸ್ಥಿರ ಪಾಲುದಾರಿಕೆಯ ಸ್ಪಷ್ಟ ಸೂಚಕವಾಗಿದೆ” ಎಂದು ಪ್ರಧಾನ ಮಂತ್ರಿ ತಿಳಿಸಿದರು,

    52 ವರ್ಷದ ನಿಖಿಲ್ ಗುಪ್ತಾ ಮತ್ತು ಸಿಸಿ-1 ಎಂಬ ಕೋಡ್ ಹೆಸರಿನ ಭಾರತೀಯ ಸರ್ಕಾರಿ ಸಿಬ್ಬಂದಿ ಮೇ ತಿಂಗಳಿನಿಂದ ಟೆಲಿಫೋನಿಕ್ ಮತ್ತು ಎಲೆಕ್ಟ್ರಾನಿಕ್ ಸಂವಹನಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ಆರೋಪಿದ್ದಾರೆ, ಕೊಲೆಯ ಸಂಚು ರೂಪಿಸಲು ಗುಪ್ತಾ ಅವರಿಗೆ ಈ ಸರ್ಕಾರಿ ಸಿಬ್ಬಂದಿ ತಿಳಿಸಿದ್ದರು ಎಂಬ ಆಪಾದನೆ ಮಾಡಲಾಗಿದೆ. ಇದಕ್ಕೆ ಬದಲಾಗಿ, ಭಾರತದಲ್ಲಿ ಗುಪ್ತಾ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕೈಬಿಡಲು ಸಹಾಯ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ. ಇಬ್ಬರೂ ದೆಹಲಿಯಲ್ಲಿ ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಪನ್ನುನ್‌ ಕೊಲೆ ಮಾಡಲು ಗುಪ್ತಾ ಅವರು ಕೊಲೆ ಮಾಡುವವನೊಬ್ಬನನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಗುಪ್ತಾ ನೇಮಿಸಲು ಮುಂದಾಗಿದ್ದ ವ್ಯಕ್ತಿಯು ಅಮೆರಿಕ ಸರ್ಕಾರದ ಏಜೆಂಟ್ ಆಗಿದ್ದ.

    ಬಾಡಿಗೆಗಾಗಿ ಕೊಲೆ ಮತ್ತು ಪಿತೂರಿ ಆರೋಪಗಳ ಅಪರಾಧ ಸಾಬೀತಾದರೆ ಗುಪ್ತಾ ಅವರು 20 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

    ಆರೋಪಗಳಿಗೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯವು “ಭಾರತವು ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ” ಎಂದು ಹೇಳಿದೆ.

    ಹತ್ಯೆಯಲ್ಲಿ ಭಾಗಿಯಾದವರನ್ನು ಹೊಣೆಗಾರರನ್ನಾಗಿ ಮಾಡಲು ಶ್ವೇತಭವನವು ಭಾರತಕ್ಕೆ ಕರೆ ನೀಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಭಾರತ ಸರ್ಕಾರದ ವಿಚಾರಣೆಯ ಫಲಿತಾಂಶಗಳನ್ನು ಅಮೆರಿಕ ಎದುರು ನೋಡುತ್ತಿದೆ ಎಂದಿದ್ದಾರೆ.

    ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಪನ್ನುನ್‌ನನ್ನು ಕೊಲ್ಲಲು ಹಂತಕನಿಗೆ 1 ಲಕ್ಷ ಡಾಲರ್​ ಪಾವತಿಸಲು ಗುಪ್ತಾ ಒಪ್ಪಿಕೊಂಡಿದ್ದ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಮತ್ತು ಜೆಕ್ ರಿಪಬ್ಲಿಕ್ ನಡುವಿನ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅನುಸಾರವಾಗಿ ಜೆಕ್ ಅಧಿಕಾರಿಗಳು ಜೂನ್ 30 ರಂದು ಗುಪ್ತಾನನ್ನು ಬಂಧಿಸಿದ್ದಾರೆ. ಪನ್ನುನ್‌ನನ್ನು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಯುಎಸ್‌ನ ಕೋರಿಕೆಯ ಮೇರೆಗೆ ಗುಪ್ತಾ ಅವರನ್ನು ಜೆಕ್ ರಿಪಬ್ಲಿಕ್‌ನಲ್ಲಿ ಬಂಧಿಸಲಾಗಿದೆ.

    ಅಮೆರಿಕಕ್ಕೆ ಹಸ್ತಾಂತರಿಸಬೇಕಿರುವ ಗುಪ್ತಾ ಅವರು ಜೆಕ್ ಗಣರಾಜ್ಯದ ಜೈಲಿನಲ್ಲಿದ್ದಾರೆ. ಗುಪ್ತಾ ಅವರು ಕಳೆದ ವಾರ ಭಾರತದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಧಾರ್ಮಿಕ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಆಧರೆ, ನ್ಯಾಯಾಲಯವು ತಕ್ಷಣದ ಪರಿಹಾರ ನೀಡಲು ನಿರಾಕರಿಸಿದ್ದು, ವಿಚಾರಣೆಯ ಮುಂದಿನ ದಿನಾಂಕವನ್ನು ಜನವರಿ 4 ಕ್ಕೆ ನಿಗದಿಪಡಿಸುವ ಮೊದಲು ಸರ್ಕಾರಕ್ಕೆ ಮನವಿ ಸಲ್ಲಿಸಲು ತಿಳಿಸಿದೆ.

    ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿ ಟ್ರಾಫಿಕ್​ ಕಂಟ್ರೋಲ್​ಗೆ ಡ್ರೋನ್​ಗಳ ನಿಯೋಜನೆ: ಎರಡೇ ವಾರಗಳಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts