More

    ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿ ಟ್ರಾಫಿಕ್​ ಕಂಟ್ರೋಲ್​ಗೆ ಡ್ರೋನ್​ಗಳ ನಿಯೋಜನೆ: ಎರಡೇ ವಾರಗಳಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತೆ?

    ನವದೆಹಲಿ: ಅತಿವೇಗದ ಚಾಲನೆ ತಡೆಗಟ್ಟಲು ಮತ್ತು ರಸ್ತೆ ಸುರಕ್ಷತೆ ಹೆಚ್ಚಿಸಲು ಗುರುಗ್ರಾಮ್ ಪೊಲೀಸರು ಅತ್ಯಾಧುನಿಕ ಆಪ್ಟಿಕಲ್ ಕ್ಯಾಮೆರಾಗಳನ್ನು ಹೊಂದಿರುವ ಡ್ರೋನ್‌ಗಳನ್ನು ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿ ನಿಯೋಜಿಸಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಗುರುತಿಸಿ, ದಂಡ ವಿಧಿಸುವ ಕಾರ್ಯದಲ್ಲಿ ಡ್ರೋನ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ.

    ವಿಶೇಷ ಆಪ್ಟಿಕಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಸ್ವಯಂಚಾಲಿತ ಡ್ರೋನ್‌ಗಳು 2 ಕಿಲೋಮೀಟರ್ ದೂರದಲ್ಲಿರುವ ವಾಹನಗಳ ಸ್ಫಟಿಕ-ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ. ಈ ಡ್ರೋನ್​ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರವಾನಗಿ ಪ್ಲೇಟ್ ಸಂಖ್ಯೆಗಳನ್ನು ಜೂಮ್ ಮಾಡಿ ನಿಖರವಾಗಿ ಗುರುತಿಸಲು ಕೂಡ ಸಾಧ್ಯವಾಗುತ್ತದೆ.

    ಯಾವುದಾದರೂ ವಾಹನವು ನಿಯಮ ಉಲ್ಲಂಘಿಸಿದ್ದರೆ ರಸ್ತೆಯ ಕೊನೆಯಲ್ಲಿ ನಿಯೋಜಿಸಲಾದ ಪೊಲೀಸರಿಗೆ ಡ್ರೋನ್ ಮಾಹಿತಿ ನೀಡುತ್ತದೆ, ನಂತರ ವಾಹನವನ್ನು ನಿಲ್ಲಿಸಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ವಾಹನವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೂ, ಡ್ರೋನ್‌ನಿಂದ ಸೆರೆಹಿಡಿಯಲಾದ ಪರವಾನಗಿ ನಂಬರ್​ ಪ್ಲೇಟ್​ ಆಧರಿಸಿ ದಂಡವನ್ನು ವಿಧಿಸಲಾಗುತ್ತದೆ.

    ಡಿಸೆಂಬರ್ 1 ರಂದು ಡ್ರೋನ್‌ಗಳನ್ನು ಸಕ್ರಿಯವಾಗಿ ಸೇವೆಗೆ ನಿಯೋಜಿಸಲಾಗಿದೆ. ಅಂದಿನಿಂದ 8,377 ವಾಹನಗಳಿಗೆ ಒಟ್ಟು 74,92,900 ರೂಪಾಯಿ ಮೊತ್ತದ ದಂಡವನ್ನು ವಿಧಿಸಲಾಗಿದೆ. ದಂಡ ವಿಧಿಸಿದ ವಾಹನಗಳಲ್ಲಿ 7,060 ಟ್ರಕ್‌ಗಳು, 675 ಪ್ರಯಾಣಿಕ ಬಸ್‌ಗಳು ಮತ್ತು 239 ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಬಸ್‌ಗಳು ಸೇರಿವೆ.

    ಈ ಡ್ರೋನ್‌ಗಳು ಪೂರ್ವ ನಿಗದಿತ ಸಮಯ ಮತ್ತು ಸ್ಥಳಗಳ ಆಧಾರದ ಮೇಲೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿವೆ. ದಟ್ಟಣೆಯ ಸಂಚಾರದ ನಡುವೆಯೂ ಸಲೀಸಾಗಿ ಹಾರುವುದರಿಂದ ಸಂಚಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ.

    ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ ಈ ಎಕ್ಸ್​ಪ್ರೆಸ್​ ವೇನಲ್ಲಿ ಡ್ರೋನ್​ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಟ್ರಾಫಿಕ್ ಪೊಲೀಸರ ಅಂಕಿಅಂಶಗಳ ಪ್ರಕಾರ, ಈ ವರ್ಷ ರಸ್ತೆ ಅಪಘಾತಗಳಲ್ಲಿ 402 ಜನರು ಸಾವನ್ನಪ್ಪಿದ್ದಾರೆ. ಜನವರಿ 1 ರಿಂದ ಡಿಸೆಂಬರ್ 19 ರ ನಡುವೆ ಗುರುಗ್ರಾಮ್‌ನಲ್ಲಿ ದಾಖಲಾದ 945 ಅಪಘಾತಗಳಲ್ಲಿ 800 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts