More

    30 ವರ್ಷದ ಕಟ್ಟಡಕ್ಕಿಲ್ಲ ಬೆಲೆ!: ಸವಕಳಿ ದರ ಪರಿಷ್ಕರಣೆಗೆ ನಿರ್ಧಾರ; ಹಳೇ ಬಿಲ್ಡಿಂಗ್ ಖರೀದಿದಾರರಿಗೆ ಸಿಹಿ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ವರ್ಷದಿಂದ ವರ್ಷಕ್ಕೆ ಹಳೆಯದಾಗುವ ಕಟ್ಟಡಗಳಿಗೆ ನಿಗದಿ ಮಾಡುವ ಸವಕಳಿ ದರ (ಡಿಫ್ರಿಷಿಯೇಷನ್ ರೇಟ್) ಪರಿಷ್ಕರಣೆಗೆ ಸರ್ಕಾರ ಮುಂದಾಗಿದ್ದು, ಹಳೆಯ ಕಟ್ಟಡಗಳ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದೆ.

    ಯಾವುದೇ ಕಟ್ಟಡ ಹಳೆಯದಾದಂತೆ ಅದರ ಮೌಲ್ಯ ಕಡಿಮೆಯಾಗುತ್ತ ಹೋಗಬೇಕು. ಆದರೆ, ಈಗ ಸವಕಳಿ ದರ ಸರಿಯಾಗಿ ಪಾಲನೆಯಾಗುತ್ತಿಲ್ಲ. ಆದ್ದರಿಂದಲೇ ಸರ್ಕಾರ ದರ ಪರಿಷ್ಕರಣೆಗೆ ಮುಂದಾಗಿದೆ.

    ಎಷ್ಟು ವರ್ಷಕ್ಕೆ ಸವಕಳಿ?: ರಾಜ್ಯದಲ್ಲಿ ಈಗ ಕಟ್ಟಡಗಳ ಸವಕಳಿ ವಯಸ್ಸು 60 ವರ್ಷಕ್ಕೆ ನಿಗದಿಯಾಗಿದೆ. ವಿದೇಶಿ ಸಂಸ್ಥೆಯ ಅಧ್ಯಯನದ ಪ್ರಕಾರ ಸಿಮೆಂಟ್ ಮತ್ತು ಕಬ್ಬಿಣದ ಆಯಸ್ಸು 60 ವರ್ಷ ಎಂಬ ಕಾರಣಕ್ಕೆ ಅಷ್ಟು ವರ್ಷಗಳಿಗೆ ನಿಗದಿಯಾಗಿದೆ. ಯಾವ ವರ್ಷ ಎಷ್ಟು ಪ್ರಮಾಣದಲ್ಲಿ ದರ ಕಡಿಮೆಯಾಗುತ್ತ ಹೋಗಬೇಕು ಎಂಬುದನ್ನು ಸಹ ನಿರ್ಧರಿಸಲಾಗಿದೆ. ಆದರೆ, ಸರ್ಕಾರ ಸವಕಳಿ ವರ್ಷವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಕಂದಾಯ ಇಲಾಖೆಯಿಂದ ಲಭ್ಯ ಮಾಹಿತಿಯ ಪ್ರಕಾರ ಕಟ್ಟಡದ ಆಯಸ್ಸನ್ನು 30 ವರ್ಷಗಳಿಗೆ ಇಳಿಕೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ.

    ಯಾವ ದರ ನಿಗದಿ?: ಲೋಕೋಪಯೋಗಿ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಗಳಲ್ಲಿ ಕಟ್ಟಡದ ಸವಕಳಿಯನ್ನು ಲೆಕ್ಕ ಹಾಕುವ ಪದ್ಧತಿ ಇದೆ. ಸರ್ಕಾರ ಎರಡೂ ಕಡೆಯಿಂದ ಮಾಹಿತಿ ಪಡೆದಿದೆ. ಆದಾಯ ತೆರಿಗೆ ಇಲಾಖೆಯದ್ದು ಸ್ವಲ್ಪ ಕ್ಲಿಷ್ಟ ಇರುವುದರಿಂದ ಲೋಕೋಪಯೋಗಿ ಇಲಾಖೆಯ ದರವನ್ನೇ ಪರಿಷ್ಕರಿಸಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ವರದಿಗೆ ಸೂಚನೆ: ಸವಕಳಿ ದರವನ್ನು 30 ವರ್ಷಕ್ಕೆ ಶೂನ್ಯಕ್ಕೆ ಬರುವ ರೀತಿಯಲ್ಲಿ ಪರಿಷ್ಕರಣೆ ಮಾಡಿ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಲೋಕೋಪಯೋಗಿ ಇಲಾಖೆ ಲೆಕ್ಕ ಹಾಕಿ ಕೊಡುವ ವರದಿಯನ್ನು ಆಧರಿಸಿ ನಿಯಮಗಳನ್ನು ಪರಿಷ್ಕರಣೆ ಮಾಡಿ ಸಚಿವ ಸಂಪುಟದ ಮುಂದೆ ಮಂಡಿಸಿ ಒಪ್ಪಿಗೆ ಪಡೆದು ಹೊಸ ದರಗಳನ್ನು ಜಾರಿಗೆ ತರಲಾಗುತ್ತದೆ.

    ಕಾರಣಗಳೇನು?: ಈಗ ಸವಕಳಿ ದರಗಳನ್ನು 60 ವರ್ಷಕ್ಕೆ ಲೆಕ್ಕ ಹಾಕಲಾಗುತ್ತಿದೆ. ಹಳೆಯ ಕಟ್ಟಡಗಳ ನೋಂದಣಿಯ ಸಂದರ್ಭದಲ್ಲಿ ಸವಕಳಿ ದರವನ್ನು ಸರಿಯಾಗಿ ಲೆಕ್ಕ ಹಾಕುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಹೀಗಾಗಿ ಕಂದಾಯ ಸಚಿವ ಆರ್. ಅಶೋಕ್ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಯಾವಾಗ ಬರಬಹುದು ವರದಿ?: ಹದಿನೈದು ದಿನಗಳಲ್ಲಿ ಪರಿಷ್ಕೃತ ದರಗಳ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ. ಅಕ್ಟೋಬರ್ ಕೊನೆಯ ವಾರದೊಳಗೆ ವರದಿ ಬರಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ. ವರದಿ ಬಂದ ನಂತರವಷ್ಟೇ ಮುಂದಿನ ಕ್ರಮಗಳನ್ನು ಸರ್ಕಾರ ಜರುಗಿಸಲಿದೆ.

    ಹಳೆಯದಾದ ಕಟ್ಟಡಗಳಿಗೆ ಐವತ್ತು ವರ್ಷವಾದರೂ ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕುತ್ತ ಕೂರುವುದು ಸರಿಯಲ್ಲ. ಮೂವತ್ತು ವರ್ಷದ ನಂತರ ಕಟ್ಟಡ ಮೌಲ್ಯ ಲೆಕ್ಕ ಹಾಕಬಾರದು. ಆದ್ದರಿಂದ ಸವಕಳಿ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಆದಾಯ ತೆರಿಗೆ ಮತ್ತು ಲೋಕೋಪಯೋಗಿ ಇಲಾಖೆಯ ಪದ್ಧತಿ ಅಧ್ಯಯನ ಮಾಡಿದ ನಂತರ ಲೋಕೋಪಯೋಗಿ ಇಲಾಖೆಯ ದರಗಳನ್ನೇ ಪರಿಷ್ಕರಣೆ ಮಾಡಿ ವರದಿ ನೀಡಲು ಸೂಚನೆ ನೀಡಲಾಗಿದೆ.

    | ಆರ್. ಅಶೋಕ್ ಕಂದಾಯ ಸಚಿವ

    ಲೆಕ್ಕ ಹಾಕುವುದು ಹೇಗೆ?

    ಕಟ್ಟಡಗಳನ್ನು ಐದು ರೀತಿಯಲ್ಲಿ ವಿಂಗಡಿಸಿ ವರ್ಷದ ಲೆಕ್ಕದಲ್ಲಿ ಸವಕಳಿ ದರ ನಿಗದಿ ಮಾಡಲಾಗುತ್ತದೆ. ಇಟ್ಟಿಗೆ ಸಿಮೆಂಟ್ ಜತೆಗೆ ತೇಗದ ಮರ ಹೆಚ್ಚು ಬಳಕೆ ಮಾಡಿದ್ದರೆ ಶೇ.1; ಇಟ್ಟಿಗೆ, ಸಿಮೆಂಟ್ ಗಾರೆಯ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ತೇಗ ಬಳಸಿದ್ದರೆ ಶೇ.1.5; ಇಟ್ಟಿಗೆ, ಸಿಮೆಂಟ್ ಜತೆಗೆ ಸ್ಥಳೀಯ ಮರ ಬಳಕೆ ಮಾಡಿದ್ದರೆ ಶೇ.2; ಮಣ್ಣು, ಕಡಿಮೆ ಬೆಲೆಯ ಮರ ಬಳಕೆ ಮಾಡಿದ್ದರೆ ಶೇ.5; ಆರ್​​ಸಿಸಿ ಹಾಕಿರುವ ಮನೆಗಳಾದರೆ ಶೇ.0.75.

    ಕಟ್ಟಡ ಬೆಲೆಗೆ ನಿರ್ಣಾಯಕ: ಭೂಮಿಯ ಬೆಲೆ, ಕಟ್ಟಡದ ಆಯಸ್ಸು, ಸವಕಳಿ ದರದ ಮೇಲೆ ಕಟ್ಟಡದ ಬೆಲೆಯನ್ನು ಅಂದಾಜು ಮಾಡುವ ಮೂಲಕ ನಿರ್ಧರಿಸಲಾಗುತ್ತದೆ.

    ಅನುಕೂಲ
    • ಹಳೆಯ ಕಟ್ಟಡಗಳನ್ನು ಖರೀದಿಸುವವರಿಗೆ ಅನುಕೂಲ
    • ನೋಂದಣಿ ಸಂದರ್ಭದಲ್ಲಿ ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕುವುದು ತಪು್ಪತ್ತದೆ
    • 30 ವರ್ಷದ ನಂತರ ನಿವೇಶನದ ಬೆಲೆ ಮಾತ್ರ ಉಳಿಯುತ್ತದೆ
    • ಸವಕಳಿ ಭೀತಿಯಲ್ಲಿ ಬಿಲ್ಡರ್​ಗಳು ಮನೆಗಳ ತ್ವರಿತ ಮಾರಾಟ ಮುಂದಾಗುತ್ತಾರೆ
    ಅನನುಕೂಲ
    • ಮನೆ ಮಾರಾಟ ಮಾಡುವವರಿಗೆ ಕಷ್ಟವಾಗುತ್ತದೆ
    • ನಿವೇಶನದ ಬೆಲೆ ಮಾತ್ರ ಲಭ್ಯವಾಗುತ್ತದೆ
    • ಮತ್ತೆ ಬೇರೆ ಕಡೆ ಖರೀದಿಗೆ ಹಣ ತೆರಬೇಕಾಗುತ್ತದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts