More

    ದಾಹ ನೀಗಿಸದ ನೀರಿನ ಘಟಕ

    | ಸುಯೋಗ ಕಿಲ್ಲೇದಾರ ಬೋರಗಾಂವ

    ಗ್ರಾಮೀಣ ಜನರು ಶುದ್ಧ ನೀರು ಕುಡಿದು ಆರೋಗ್ಯವಾಗಿರಬೇಕೆಂದು ರಾಜ್ಯ ಸರ್ಕಾರ ಪ್ರತಿ ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದೆ. ಆದರೆ, ನಿರ್ವಹಣೆ ಕೊರತೆಯಿಂದ ಆ ಶುದ್ಧ ನೀರಿನ ಘಟಕಗಳು ಬಾಗಿಲು ಮುಚ್ಚಿದ್ದು, ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.

    ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಎಚ್.ಕೆ.ಪಾಟೀಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ವೇಳೆ ಗ್ರಾಮೀಣ ಭಾಗದ ಜನರು ಶುದ್ಧ ಕುಡಿಯುವ ನೀರು ಸೇವಿಸಬೇಕೆಂದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು. ಆದರೆ, ಸ್ಥಾಪಿಸದ ಕೆಲ ತಿಂಗಳು ಚಾಲ್ತಿಯಲ್ಲಿದ್ದ ಶುದ್ಧ ನೀರಿನ ಘಟಕಗಳು ಈಗ ಬಾಗಿಲು ಮುಚ್ಚಿಕೊಂಡಿದ್ದು, ಇದರಿಂದ ಸರ್ಕಾರದ ನೂರಾರು ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ.

    185 ಘಟಕಗಳು: ಚಿಕ್ಕೋಡಿ ತಾಲೂಕಿನ 63 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 185 ಶುದ್ಧ ನೀರಿನ ಘಟಕಗಳು ಇವೆ. ಆದರೆ, ಅರ್ಧಕ್ಕಿಂತ ಹೆಚ್ಚಿಗೆ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಹಾಳು ಬಿದ್ದಿವೆ. ಕೆಲ ಗ್ರಾಮಗಳಲ್ಲಿ ಘಟಕ ಅಳವಡಿಸಿ ಮರಳಿ ಆರಂಭವನ್ನೇ ಮಾಡಿಲ್ಲ. ಸದ್ಯ ತಾಲೂಕಿನ 185ರಲ್ಲಿ ಕೇವಲ 7 ಶುದ್ಧ ನೀರಿನ ಘಟಕಗಳು ಮಾತ್ರ ಬಂದ್ ಆಗಿದ್ದು, ಉಳಿದವೆಲ್ಲವೂ ಚಾಲ್ತಿಯಲ್ಲಿವೆ ಎಂದು ಸ್ಥಳೀಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡುತ್ತಲ್ಲೇ ಬಂದಿದ್ದಾರೆ. ಆದರೆ, ಅಧಿಕಾರಿಗಳ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನು ತಾಲೂಕಿನ ಭೀಮಾಪುರವಾಡಿ, ಡೋಣೆವಾಡಿ, ಕಸನಾಳ, ಬೋರಗಾಂವ ಇಟ್ನಾಳ, ಭೋಜವಾಡಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿ ಹಲವು ವರ್ಷಗಳೇ ಕಳೆದಿವೆ.

    ಘಟಕಗಳಿಗೆ ಬೀಗ: ಆರಂಭದಲ್ಲಿ ಖಾಸಗಿ ಏಜನ್ಸಿಗಳು ನೀರಿನ ಘಟಕಗಳನ್ನು ಅಳವಡಿಸಿ ಗ್ರಾಪಂಗೆ ಹಸ್ತಾಂತರಿಸಿ ಹೋಗಿವೆ. ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಅಳವಡಿಸಿರುವ ಖಾಸಗಿ ಏಜನ್ಸಿಯವರೇ ಮಾಡಬೇಕಿತ್ತು. ಆದರೆ, ಘಟಕಗಳ ನಿರ್ವಹಣೆ ವೆಚ್ಚ ಭರಿಸಲಾಗದೆ ಹಾಳುಬಿದ್ದಿವೆ. ಗ್ರಾಪಂ ಅಧಿಕಾರಿಗಳಂತೂ ನೀರಿನ ಘಟಕಗಳತ್ತ ತಿರುಗಿ ನೋಡಿಲ್ಲ. ಹೀಗಾಗಿ ಬಹುತೇಕ ಘಟಕಗಳಿಗೆ ಬೀಗ ಜಡಿಯಲಾಗಿದೆ. ಕೆಲ ವರ್ಷಗಳ ಹಿಂದೆ ಸರ್ಕಾರ ನೀರಿನ ಘಟಕಗಳ ನಿರ್ವಹಣೆ ಮಾಡಲು ಲ್ಯಾಂಡ್ ಆರ್ಮಿಗೆ ವಹಿಸಿತ್ತು. ಆದರೂ ಅದು ಸಮರ್ಪಕವಾಗಿ ನಿರ್ವಹಣೆ ಆಗಲಿಲ್ಲ. ಈಗ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಜವಾಬ್ದಾರಿ ಹೊತ್ತುಕೊಂಡು ಪಾಳುಬಿದ್ದ ನೀರಿನ ಘಟಕಗಳನ್ನು ದರುಸ್ತಿಗೊಳಿಸುತ್ತಿದ್ದಾರೆ.

    ನಿರ್ವಹಣೆ ಸಮಸ್ಯೆ: ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆಗೆ ಬಹಳಷ್ಟು ಸಮಯ ಬೇಕು. ಖಾಸಗಿ ಸಂಸ್ಥೆಗಳು ಅಳವಡಿಸಿದ ಘಟಕಗಳನ್ನು 5 ವರ್ಷ ಅವರೇ ನಿರ್ವಹಣೆ ಮಾಡಬೇಕಿತ್ತು. ಸಹಕಾರ ಸಂಘಗಳು ಅಳವಡಿಸಿದ್ದ ನೀರಿನ ಘಟಕಗಳನ್ನು ಅವರೇ ನಿರ್ವಹಣೆ ಮಾಡಬೇಕು ಹಾಗೂ ಕೆಆರ್‌ಐಡಿಸಿಲ್ ಅಳವಡಿಸಿರುವ ಘಟಕಗಳನ್ನು ಸ್ಥಳೀಯ ಗ್ರಾಪಂನವರು ನಿರ್ವಹಣೆ ಮಾಡಬೇಕಿತ್ತು. ಆದರೆ, ಘಟಕಗಳ ನಿರ್ವಹಣೆಗೆ ವೆಚ್ಚ ಮತ್ತು ಸಿಬ್ಬಂದಿ ವೇತನ ಭರಿಸಬೇಕಾದ ಹೊರೆ ಗ್ರಾಪಂಗೆ ಬಿದ್ದಿರುವುದರಿಂದ ಅಧಿಕಾರಿಗಳು ಘಟಕಗಳ ನಿರ್ವಹಣೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈಗ ಎಲ್ಲ ಘಟಕಗಳ ನಿರ್ವಹಣೆ ಹೊಣೆಯನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ನೀಡಿದೆ. ಹಾಳಾದ ಘಟಕಗಳನ್ನು ದುರಸ್ತಿಗೊಳಿಸಿ ಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ

    ಚಿಕ್ಕೋಡಿ ತಾಲೂಕಿನಲ್ಲಿ ಅಳವಡಿಸಿರುವ ಬಹುತೇಕ ಶುದ್ಧ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ ಬಂದ್ ಆಗಿವೆ. ಸರ್ಕಾರ ಸೂಕ್ತ ನಿರ್ವಹಣೆ ಮಾಡಿ ಸಾರ್ವಜನಿಕರ ನೀರಿನ ದಾಹ ತೀರಿಸಬೇಕು. ಈ ಕುರಿತು ಜಿಪಂ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಭೋಜ ಜಿಪಂ ಸದಸ್ಯ ರಾಜೇಂದ್ರ ಪವಾರ ಒತ್ತಾಯಿಸಿದ್ದಾರೆ.

    ಚಿಕ್ಕೋಡಿ ತಾಲೂಕಿನಲ್ಲಿ ಕೇವಲ 7 ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿದ್ದು, ಅವುಗಳ ದುರಸ್ತಿ ಮಾಡಬೇಕಿದೆ. ಒಂದು ವಾರದೊಳಗೆ ಎಲ್ಲ ಘಟಕಗಳನ್ನು ದುರಸ್ತಿ ಮಾಡಲಾಗುವುದು. ಸೂಕ್ತ ನಿರ್ವಹಣೆ ಮಾಡಲು ಖಾಸಗಿ ಏಜನ್ಸಿಗೆ ಟೆಂಡರ್ ಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗ್ರಾಮೀಣ ಜನರೂ ಸಹ ಸಮರ್ಪಕವಾಗಿ ನೀರನ್ನು ಬಳಕೆ ಮಾಡಿಕೊಳ್ಳಬೇಕು.
    | ಆನಂದ ಬಣಕಾರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಚಿಕ್ಕೋಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts