More

    ವೃಷಭಾವತಿ ನೀರು ಶುದ್ಧೀಕರಿಸಿ ಪೂರೈಸಲು ಚಿಂತನೆ : ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ

    ತಿಪಟೂರು: ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಮೂರು ಯೋಜನೆಗಳ ಮೂಲಕ ಜಿಲ್ಲೆಯ ಎಲ್ಲ ಕೆರೆಗಳನ್ನು ಶೇ.40 ಪ್ರಮಾಣದಲ್ಲಿ ತುಂಬಿಸುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ತಾಲೂಕಿನ ಹೊಸಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗಾಪುರ, ಚಿಕ್ಕ ಕೊಟ್ಟಿಗೆಹಳ್ಳಿ ಮತ್ತು ಹೊಸಹಳ್ಳಿ ಕೆರೆ-ಕಟ್ಟೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಕಲುಷಿತ ನೀರನ್ನು ಸಂಸ್ಕರಿಸಿ ಕೋಲಾರಕ್ಕೆ ಹರಿಸುತ್ತಿರುವ ರೀತಿ, ವೃಷಭಾವತಿ ನದಿ ನೀರು ಶುದ್ಧೀಕರಿಸಿ ತುಮಕೂರು ಭಾಗದವರೆಗೂ ತರುವ ಯೋಚನೆ ಮಾಡಲಾಗುತ್ತಿದೆ ಎಂದರು.

    2024ರೊಳಗೆ ದೇಶದ ಪ್ರತಿ ಗ್ರಾಮಸ್ಥರಿಗೂ ಶುದ್ಧ ನೀರೊದಗಿಸುವ ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಭಾಗವಾಗಿ ಹೊಸಹಳ್ಳಿ, ರಂಗಾಪುರ, ಚಿಕ್ಕ ಕೊಟ್ಟಿಗೇಹಳ್ಳಿ ಗ್ರಾಮದ 2 ಕೆರೆ, 2 ಕಟ್ಟೆಗೆ ನಾರಸೀಕಟ್ಟೆ ಕೆರೆಯಿಂದ ಏತ ನೀರಾವರಿ ಮೂಲಕ ನೀರು ಹರಿಸುವ 4.8 ಕೋ ರೂ., ವೆಚ್ಚದ ಯೋಜನೆ ಇದಾಗಿದೆ ಎಂದು ತಿಳಿಸಿದರು.

    ತಾಲೂಕಿನಲ್ಲಿ ಒಟ್ಟು 6 ಏತ ನೀರಾವರಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದರ ಜತೆಗೆ 180 ಕೋಟಿ ರೂ., ವೆಚ್ಚದ ಸಮಗ್ರ ನೀರಾವರಿ ಯೋಜನೆಗೆ ಇನ್ನು 15 ದಿನಗಳಲ್ಲಿ ಕಾರ್ಯಾದೇಶ ನೀಡಲಾಗುತ್ತದೆ. ಇನ್ನೊಂದು ವರ್ಷದೊಳಗೆ ತಿಪಟೂರು ತಾಲೂಕು ಬೇಡಿಕೆಗಳ ಪಟ್ಟಿಯಿಂದ ಹೊರಬರಲಿದೆ ಎಂಬ ವಿಶ್ವಾಸವನ್ನು ಶಾಸಕ ಬಿ.ಸಿ.ನಾಗೇಶ್ ವ್ಯಕ್ತಪಡಿಸಿದರು.

    ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಂಗಾಪುರ ಗ್ರಾಪಂ ಅಧ್ಯಕ್ಷೆ ಮಂಜುಳಾ, ದಸರೀಘಟ್ಟ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷೆ ಜಿ.ಪಿ.ಪಾರ್ವತಮ್ಮ. ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್, ನಗರಾಧ್ಯಕ್ಷ ಪಿ.ಜೆ.ರಾಮಮೋಹನ್, ಮಖಂಡರಾದ ಬಿಸಲೇಹಳ್ಳಿ ಜಗದೀಶ್, ರಂಗಾಪುರ ಮನು, ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ದೊಡ್ಡಯ್ಯ ಮತ್ತಿತರರು ಉಪಸ್ಥಿತರಿದ್ದರು.

    ಹೈ ವೋಲ್ಟೇಜ್ ಸ್ಕೀಂಗೆ ಚಿಂತನೆ : ತಾಲೂಕಿನ 26 ಸಾವಿರ ಕೃಷಿ ಪಂಪ್ ಸೆಟ್‌ಗಳಿಗೆ 9 ಸಾವಿರ ಪರಿವರ್ತಕಗಳ ಮೂಲಕ ನಿಗದಿತವಾಗಿ ಹೈ ವೋಲ್ಟೇಜ್ ವಿದ್ಯುತ್ ಸರಬರಾಜು ಮಾಡಲು 216 ಕೋ.ರೂ., ಹಣ ಬಿಡುಗಡೆಗೆ ಕೇಂದ್ರವನ್ನು ಒತ್ತಾಯಿಸಲಾಗಿದ್ದು, ಇದು 10 ವರ್ಷ ಹಳೆಯ ಯೋಜನೆ. ಆದರೆ ಇಲ್ಲಿವರೆಗೂ ಯಾರೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಮ್ಮ ಯೋಜನೆ ಹಾಗೂ ಯೋಚನೆ ಸದಾ ರೈತರ ಪರ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಕರೊನಾ, ನೆರೆ ಹಾವಳಿಗೆ ಸಿಕ್ಕಿ ರೈತರ ಆದಾಯ ಕ್ಷೀಣಿಸಿದೆ. ರೈತರ ಜೀವನ 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಶಂಕರೇಶ್ವರನ ಕೃಪೆಯಿಂದ ಉತ್ತಮ ಮಳೆ ಆಗಿ ಡ್ಯಾಂಗಳು ತುಂಬಿ, ಸಚಿವ ಮಾಧುಸ್ವಾಮಿ ಅಪೇಕ್ಷೆಯಂತೆ ನಾಡಿನ ರೈತರು ಸಮೃದ್ಧ ಜೀವನ ನಡೆಸಲಿ, ಹಾಗೆಯೇ ತಮ್ಮಲ್ಲಿರುವ ಜ್ಞಾನ ಬಳಸಿಕೊಂಡು ಜೀವನ ಪರ್ಯಂತ ಸಮೃದ್ಧ ಬದುಕಿನ ದಾರಿ ಕಂಡುಕೊಳ್ಳಲಿ.
    ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ, ಕೆರೆಗೋಡಿ ರಂಗಾಪುರ ಸುಕ್ಷೇತ್ರ

    ಮಾತು ಶ್ರೇಷ್ಠವಲ್ಲ. ಕೆಲಸ ಶ್ರೇಷ್ಠ ಎಂದು ಎಲ್ಲರೂ ಅರಿತು ಕಾರ್ಯ ನಿರ್ವಹಿಸಿದಾಗ ಮಾತ್ರ ನಾಡಿನ ಸಮೃದ್ಧಿ ಸಾಧ್ಯ. ಶರೀರ ಶಕ್ತಿಯಿಂದ ರಾಜಕೀಯ ಮಾಡಲಾಗದು. ಬುದ್ಧಿಶಕ್ತಿ ಬಳಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಬರುವ ಡಿಸೆಂಬರ್-ಜನವರಿ ತಿಂಗಳಲ್ಲಿ ನಾವು ಬರೆದ ಪತ್ರಿಕೆಯ ಮೌಲ್ಯ ಮಾಪನ ನಡೆಯಲಿದೆ. ಆಗ ನೀವೆಲ್ಲರೂ ನಮಗೆ ಒಳ್ಳೆ ಅಂಕ ನೀಡಿ.
    ಜೆ.ಸಿ.ಮಾಧುಸ್ವಾಮಿ, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts