More

    ಎಲ್ಲೆಡೆ ಮುಗಿಲು ಮುಟ್ಟಿದ ಸಂಭ್ರಮ

    ಯಳಂದೂರು : ತಾಲೂಕಿನಾದ್ಯಂತ ಹೊಸ ವರ್ಷಾಚರಣೆ ನಿಮಿತ್ತ ಸೋಮವಾರ ಯುವಜನರ ಸಂಭ್ರಮ ಮುಗಿಲು ಮುಟ್ಟಿತು. ಭಾನುವಾರ ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯುವಕರು ಪಟಾಕಿ, ಸಿಡಿಸಿ, ನೃತ್ಯ ಮಾಡಿ ಸಂಭ್ರಮಿಸಿ ನವ ವರ್ಷಕ್ಕೆ ಸ್ವಾಗತ ಕೋರಿದರು.

    ತಾಲೂಕಿನ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂನಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಸೋಮವಾರ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡಿ ವಾಹನಗಳನ್ನು ಬಿಟ್ಟಿದ್ದರೂ, ಮದ್ಯಪ್ರಿಯರ ಗುಂಡಿನ ಪಾರ್ಟಿಗೆ ಕಡಿವಾಣ ಹಾಕಲು ಪೊಲೀಸ್ ಮತ್ತು ಅರಣ್ಯ ಇಲಾಖೆಯಿಂದ ಸಾಧ್ಯವಾಗಲಿಲ್ಲ. ಬೆಟ್ಟದ ಬಸ್ ನಿಲ್ದಾಣ, ದೊಡ್ಡ ತೇರಿನ ಬೀದಿ, ಬಿಳಿಗಿರಿಭವನದ ಮುಂಭಾಗ ಯುವಕರು ಕುಡಿದು, ಕುಣಿದು ಕುಪ್ಪಳಿಸುವ ಮೂಲಕ ನೂತನ ವರ್ಷವನ್ನು ಸಂಭ್ರಮಿಸಿದರು. ಬೆಟ್ಟದಲ್ಲಿರುವ ಬಹುತೇಕ ಎಲ್ಲ ಪ್ರವಾಸಿಮಂದಿರಗಳು, ಲಾಡ್ಜ್‌ಗಳು ತುಂಬಿ ತುಳುಕುತ್ತಿದ್ದವು.

    ಬೆಳಗ್ಗೆಯಿಂದಲೇ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತು. ವಾಹನ ದಟ್ಟಣೆಯಿಂದ ಕೆಲ ಕಾಲ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು. ವಾಹನವನ್ನು ಪಾರ್ಕ್ ಮಾಡಲು ಕೆಲವರು ಪರದಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತಿತ್ತು. ಯಳಂದೂರು ಪಟ್ಟಣದಲ್ಲೂ ಹೊಸ ವರ್ಷದ ನಿಮಿತ್ತ ಕಂದಹಳ್ಳಿ ಮಹದೇಶ್ವರ, ಅಂಬಳೆ ಚಾಮುಂಡೇಶ್ವರಿ, ಎಳ್ಳೇಪಿಳ್ಳಾರಿ ವಿನಾಯಕ ಸೇರಿದಂತೆ ವಿವಿಧ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣದಿಂದ ಬಹುತೇಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸಿದರು. ಹೊಸ ವರ್ಷದ ನಿಮಿತ್ತ ಯಳಂದೂರು ಪಟ್ಟಣದ ಬಾರ್ ಮುಂದೆ, ಬೇಕರಿಗಳು, ಹಣ್ಣಿನ ಅಂಗಡಿಗಳಲ್ಲಿ ಜನಜಂಗುಳಿ ಹೆಚ್ಚಾಗಿ ಕಂಡುಬಂದಿದ್ದರಿಂದ ಇಲ್ಲಿನ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts