More

    220 ಕೇಂದ್ರಗಳಿಗೆ ಸ್ವಂತ ಸೂರಿಲ್ಲ, ಬಾಡಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿವೆ ಅಂಗನವಾಡಿಗಳು

    ಹರೀಶ್ ಮೋಟುಕಾನ ಮಂಗಳೂರು

    ಶೈಕ್ಷಣಿಕವಾಗಿ ರಾಜ್ಯದಲ್ಲೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ 220 ಅಂಗನವಾಡಿ ಕೇಂದ್ರಗಳು ಇನ್ನೂ ಸ್ವಂತ ಕಟ್ಟಡ ಹೊಂದಿಲ್ಲ.

    ಜಿಲ್ಲೆಯಲ್ಲಿ ಒಟ್ಟು 2,104 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 1,884 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದ 220 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡ ಅಥವಾ ಸ್ವಯಂ ಸೇವಾ ಸಂಸ್ಥೆ-ದಾನಿಗಳ ಕಟ್ಟಡದಲ್ಲಿವೆ.

    ಮಂಗಳೂರು ನಗರದಲ್ಲೇ ಅಧಿಕ: ಮಂಗಳೂರು ನಗರ ಶೈಕ್ಷಣಿಕವಾಗಿ ಗುರುತಿಸಿಕೊಂಡಿರುವ ಪ್ರದೇಶ. ಇಲ್ಲಿ ಶಿಕ್ಷಣಕ್ಕಾಗಿ ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಪೂರಕವಾಗಿ ಶೈಕ್ಷಣಿಕ ಕೇಂದ್ರಗಳು ಇಲ್ಲಿ ಬಹುದೊಡ್ಡ ಹೆಸರು ಮಾಡಿವೆ. ಇಂಥ ಶೈಕ್ಷಣಿಕ ಹಬ್‌ನಲ್ಲೇ ಶಿಕ್ಷಣದ ಪ್ರಾರಂಭಿಕ ಹೆಜ್ಜೆ ಆಗಿರುವ ಅಂಗನವಾಡಿಗಳ ಪೈಕಿ ಹೆಚ್ಚಿನವುಗಳಿಗೆ ಸ್ವಂತ ಕಟ್ಟಡ ಇಲ್ಲ ಎಂಬುದು ಆಶ್ಚರ್ಯಕರ. ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಅಂಗನವಾಡಿಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಅದರಲ್ಲೂ ಸುಳ್ಯದಲ್ಲಿರುವ ಎಲ್ಲ 165 ಅಂಗನವಾಡಿ ಕೇಂದ್ರಗಳಿಗೂ ಸ್ವಂತ ಕಟ್ಟಡ ಇರುವುದು ವಿಶೇಷ.

    20 ಕಟ್ಟಡಕ್ಕೆ ಸ್ವಂತ ನಿವೇಶನ: ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳ ಪೈಕಿ 20 ಕಟ್ಟಡಗಳಿಗೆ ನಿವೇಶನ ಲಭ್ಯವಿದೆ. ಮಂಗಳೂರು ಗ್ರಾಮಾಂತರ ಭಾಗದ ಕೊಂಡಾಣ, ಗುಂಡೀರು, ಚೆಂಬುಗುಡ್ಡೆ, ಜ್ಯೋತಿನಗರ ಹಾಗೂ ಮಂಗಳೂರು ನಗರದಲ್ಲಿ ಬೀಡು, ಶಿವನಗರ, ಕಾಟಿಪಳ್ಳ 3ನೇ ವಿಭಾಗ, ಜೋಡುಕಟ್ಟೆ ಮರೋಳಿ, ದಯಾಂಬು ಬೋರುಗುಡ್ಡೆ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿದೆ. ಬೆಳ್ತಂಗಡಿಯ ಕೆಲ್ಲಗುತ್ತು, ಸುದೆಮುಗೇರು, ಬಂಟ್ವಾಳದ ಅಡ್ಕ, ಸಜೀಪಮೂಡದ ಕೊಲ್ಯ, ಸಜೀಪಮುನ್ನೂರಿನ ಮರ್ತಾಜೆ, ಪುತ್ತೂರಿನ ವಾಳ್ಯ, ಪಂಜಿಗುಡ್ಡೆ, ವಿಟ್ಲದ ಮಾಣಿಯ ಹಳೀರ, ಕರೋಪಾಡಿಯ ಪದ್ಯಾಣ, ವಿಟ್ಲ ಪಡ್ನೂರಿನ ಬೆದ್ರಕಾಡು ಹಾಗೂ ಕರೋಪಾಡಿಯ ಪಳ್ಳದ ಕೋಡಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿದೆ.

    ಅಂಗನವಾಡಿ ಕಟ್ಟಡ ಎಲ್ಲಿ ಹೇಗೆ?:
    ಪ್ರದೇಶ ಕೇಂದ್ರ ಸ್ವಂತ ಕಟ್ಟಡ ಬಾಡಿಗೆ
    ಮಂಗಳೂರು (ನಗರ) 225 99 126
    ಮಂಗಳೂರು (ಗ್ರಾಮಾಂತರ) 450 389 61
    ಬಂಟ್ವಾಳ 341 321 20
    ಬೆಳ್ತಂಗಡಿ 324 317 7
    ವಿಟ್ಲ 229 225 4
    ಪುತ್ತೂರು 370 368 2
    ಸುಳ್ಯ 165 165 0
    ಒಟ್ಟು 2104 1884 220

    ಉಡುಪಿಯಲ್ಲಿ 26 ಮಾತ್ರ: ಉಡುಪಿ ಜಿಲ್ಲೆಯಲ್ಲಿ 1,191 ಅಂಗನವಾಡಿ ಕೇಂದ್ರಗಳಿದ್ದು, ಪೈಕಿ 26ಕ್ಕೆ ಸ್ವಂತ ಕಟ್ಟಡವಿಲ್ಲ. 76 ಕಟ್ಟಡಗಳು ಸರ್ಕಾರಿ ಶಾಲೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಡೀಮ್ಡ್ ಫಾರೆಸ್ಟ್, ನಗರ ವ್ಯಾಪ್ತಿಯಲ್ಲಿ ಜಾಗದ ಕೊರತೆಯಿಂದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಮಸ್ಯೆಯಾಗಿದೆ. ಪ್ರಸ್ತುತ ಮೂರು ಸ್ವಂತ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಷಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 1884 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿವೆ. 24 ಹೊಸ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕೇಂದ್ರಗಳಲ್ಲಿ ಮಕ್ಕಳಿಗೆ ಸಮಸ್ಯೆ ಆಗದಂತೆ ಕುಡಿಯುವ ನೀರು, ಶೌಚಗೃಹ ಸಹಿತ ಮೂಲಸೌಕರ್ಯವನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ.

    ಪಾಪಾ ಬೋವಿ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts