More

    ಜಗತ್ತಿನಲ್ಲಿ ತುಂಬಿದೆ ಅಜ್ಞಾನ, ಅಧರ್ಮ

    ಹಿರೀಸಾವೆ: ಮನುಷ್ಯನನ್ನು ಆವರಿಸಿರುವ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಶಕ್ತಿ ಇರುವುದು ಗುರುವಿಗೆ ಮಾತ್ರ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.


    ಹಿರೀಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ 92ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ 110ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


    ಅಜ್ಞಾನ ಹಾಗೂ ಅಧರ್ಮದೊಂದಿಗೆ ತುಂಬಿ ತುಳುಕಾಡುತ್ತಿರುವ ಜಗತ್ತಿನಲ್ಲಿ ಯಾವುದೇ ಮನುಷ್ಯನ ಮುಖ ನೋಡಿ ಏನನ್ನೂ ಹೇಳಲಾಗುವುದಿಲ್ಲ. ಸದಾ ಆತನ ಒಡನಾಟದಲ್ಲಿದ್ದರೂ ಒಂದಲ್ಲ ಒಂದು ರೀತಿ ಪರೀಕ್ಷಿಸಿ ಸ್ನೇಹ, ಸಂಬಂಧವನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.


    ಕನಸು ಎಂದಿಗೂ ಕನಸೇ ಹೊರತು ನಿಜವಾಗಲು ಸಾಧ್ಯವಿಲ್ಲ. ಕನಸಿನಲ್ಲಿ ಎಲ್ಲವೂ ನಿಜವಾಗಿರುತ್ತದೆ. ಆದರೆ ಎಚ್ಚರವಾದ ಮೇಲೆ ಎಲ್ಲವೂ ತಿಳಿಯಲಿದೆ. ಇನ್ನು ಕೇವಲ ಮಾತಿನಿಂದ ಏನೂ ಆಗುವುದಿಲ್ಲ. ಮಾತನಾಡಿದರೂ ಅದರಲ್ಲಿ ಅರ್ಥ-ತಾತ್ಪರ್ಯವಿರಬೇಕು. ಅರ್ಥವಿಲ್ಲದ ಮಾತು ಆಡಿದರೆ ತೂತು ಮಡಿಕೆಗೆ ನೀರು ತುಂಬಿಸಿದಂತಾಗುತ್ತದೆ. ಮಾತು ನೇರ ಅಂತಃಕರಣ ತಲುಪಬೇಕೆಂದರೆ ಗುರುವಿನ ದೃಷ್ಟಿ ಹಾಗೂ ಕೃಪೆ ಇರಬೇಕು ಎಂದು ತಿಳಿಸಿದರು.


    ಚಿತ್ರದುರ್ಗದ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ದೇವರ ಅನುಗ್ರಹವಿಲ್ಲದೆ ಭೂಮಿ ಮೇಲೆ ಒಂದು ಹುಲ್ಲು ಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ. ದೇವರ ಪರಿಕಲ್ಪನೆಯಲ್ಲಿ ಸೃಷ್ಟಿಯಾಗಿರುವ ಭೂಮಂಡಲದಲ್ಲಿ ನಡೆಯುವ ವಿಸ್ಮಯಗಳು ಅಪಾರ. ಮಾನವನ ಬದುಕಿನ ಬಂಡಿಯು ಹುಟ್ಟಿದ ದಿನದಿಂದಲೇ ಸಾವಿನ ಕಡೆಗೆ ಪಯಣ ಸಾಗಲಿದ್ದು ಸಾವು ಎಂಬುದು ನಮ್ಮ ನೆರಳಿನಂತೆಯೇ ಹಿಂಬಾಲಿಸಲಿದೆ. ನಡುವೆ ಇದ್ದಷ್ಟು ದಿನಗಳಲ್ಲಿ ಹೆಸರು ಉಳಿಯುವಂತಹ ದಾನ, ಧರ್ಮ ಹಾಗೂ ಸಾಧನೆಯ ಕೆಲಸಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.


    ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಶೃಂಗೇರಿ ಶಾಖಾಮಠದ ಶ್ರೀ ಗುಣನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿಯ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ.ಮದನಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಬೊಮ್ಮೇಗೌಡ, ಕುಣಿಗಲ್ ನಗರಸಭೆ ಅಧ್ಯಕ್ಷ ಹರೀಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts