More

    ಜ್ಞಾನದ ಕಣಜ, ಅರಿವಿನ ಬೆಳಕು ಡಾ. ಬಿ.ಆರ್. ಅಂಬೇಡ್ಕರ್

    | ಪ್ರೋ. ಶಾಂತಾದೇವಿ ಟಿ.

    ಜ್ಞಾನದ ಕಣಜ, ಅರಿವಿನ ಬೆಳಕು ಡಾ. ಬಿ.ಆರ್. ಅಂಬೇಡ್ಕರ್ ಮೌಢ್ಯತೆಯ ಅಂಧಕಾರ, ಅಪಮಾನ ಗಳಿಂದ ವಿಮುಕ್ತಿಗೊಳಿಸಲು ಈ ಧರೆಗೆ ಬಂದ ಅವತಾರ ಪುರುಷ, ಅನ್ಯಾಯ- ಅಸಮಾನತೆಯ ಸಂಕೋಲೆಗಳಿಂದ ಬಿಡುಗಡೆಗೊಳಿಸಿದ ನ್ಯಾಯವಾದಿ, ಆರ್ಥಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಅರ್ಥಶಾಸ್ತ್ರಜ್ಞ, ಸರ್ವಧರ್ಮ ಸಮನ್ವಯದ ಅರ್ಥ ತಿಳಿಸಿದ ದಾರ್ಶನಿಕ, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಸಮಾಜಶಾಸ್ತ್ರಜ್ಞ, ಅದೆಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಿ ಎಂದು ಕರೆ ನೀಡಿದ ಮಹಾಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್. ಬಾಬಾಸಾಹೇಬರ ಜೀವನ, ತತ್ವ-ಸಿದ್ಧಾಂತ ಪ್ರತಿ ಹೆಜ್ಜೆಗೂ, ಪ್ರತಿ ಕ್ಷಣಕ್ಕೂ ಪ್ರಸ್ತುತ. ‘ಒಂದು ಜಾತಿ- ಜನಾಂಗಕ್ಕೋಸ್ಕರ ನಾನು ಕೆಲಸ ಮಾಡಿಲ್ಲ. ಭಾರತದ ಪ್ರತಿಯೊಬ್ಬ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ. ಸಂಶಯವಿದ್ದರೆ ಸಂವಿಧಾನ ಓದಿಕೊಳ್ಳಿ’ ಎಂಬ ಬಾಬಾಸಾಹೇಬರ ಮಾತು ಅವರ ಜೀವನ ಚರಿತೆಯನ್ನು ತೆರೆದಿಡುತ್ತದೆ.

    ಯಾವ ವ್ಯಕ್ತಿಯನ್ನು ಅಸ್ಪಶ್ಯ, ಅಜ್ಞಾನಿ ಎಂದು ಹೀಯಾಳಿಸಿ ಶಿಕ್ಷಣ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ಸೌಲಭ್ಯ ಎಲ್ಲದರಿಂದಲೂ ವಂಚಿತರನ್ನಾಗಿ ಮಾಡಿ ನಾನಾ ಹಿಂಸೆಗಳನ್ನು ಕೊಟ್ಟು ದೌರ್ಜನ್ಯ ಎಸಗಿದ ಅಂದಿನ ಸಾಮಾಜಿಕ ವ್ಯವಸ್ಥೆಗೆ ಚಾಟಿ ಏಟು

    ಕೊಟ್ಟಂತೆ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿದವರು ಅಂಬೇಡ್ಕರ್. ಇಂದು ಪಾರ್ಲಿಮೆಂಟಿನಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅವರ ಕೊಡುಗೆಯಾದ ಸಂವಿಧಾನದ ಆಧಾರದ ಮೇಲೆ ಇಡೀ ದೇಶ ಕಾರ್ಯಪ್ರವೃತ್ತವಾಗಿದೆ. ಸುಮಾರು 52ಕ್ಕೂ ಹೆಚ್ಚಿನ ದೇಶಗಳಲ್ಲಿ ಅವರ ಪ್ರತಿಮೆಗಳಿವೆ.

    ಅವರು ಜ್ಞಾನಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದರು. ಜ್ಞಾನದಿಂದಲೇ ಮೌಢ್ಯಗಳನ್ನು ಹೊಡೆದೋಡಿಸಿ, ದೀನ-ದಲಿತರ ಉದ್ಧಾರ ಮಾಡಲು ಸಾಧ್ಯ ಎಂದು ಅರಿತುಕೊಂಡಿದ್ದರು. ನಾವು ಅಭಿವೃದ್ಧಿ ಹೊಂದಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು, ಆ ಮೂಲಕ ವಿಶ್ವದ ಜ್ಞಾನ ಪಡೆಯಬೇಕು, ಅದನ್ನು ಬಳಸಿ ಕುಟುಂಬದ, ಸಮಾಜದ, ದೇಶದ ಒಳಿತನ್ನು ಸಾಧಿಸಬೇಕು.

    ಬಾಬಾಸಾಹೇಬರ ಜ್ಞಾನ ದಾಹ ಎಷ್ಟಿತ್ತೆಂಬುದನ್ನು ಅವರು ದೇಶ ವಿದೇಶಗಳಲ್ಲಿ ಬಳಸಿದ ಗ್ರಂಥಾಲಯಗಳು, ಅವರು ಓದಿ ಸಂಗ್ರಹಿಸಿದ ಪುಸ್ತಕಗಳನ್ನು ನೋಡಿ ತಿಳಿದುಕೊಳ್ಳಬೇಕು. 64 ವಿಷಯಗಳಿಗೆ ಸಂಬಂಧಿಸಿದ ಸುಮಾರು 50,000ಕ್ಕಿಂತ ಹೆಚ್ಚಿನ ಹಿಂದಿ, ಉರ್ದು, ಸಂಸ್ಕೃತ, ಪಾಲಿ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಗುಜರಾತಿ, ಮರಾಠಿ, ಪರ್ಷಿಯನ್, ಹೀಗೆ ಅನೇಕ ಭಾಷೆಗಳ ಪುಸ್ತಕಗಳನ್ನು ಅವರ ರಾಜಗೃಹದಲ್ಲಿನ ಖಾಸಗಿ ಗ್ರಂಥಾಲಯದಲ್ಲಿ ಕಾಣಬಹುದು. ‘ಬಾಬಾಸಾಹೇಬರ ವೈಯಕ್ತಿಕ ಗ್ರಂಥಾಲಯ ವಿಶ್ವದ ಅತ್ಯಂತ ದೊಡ್ಡ ಖಾಸಗಿ ಗ್ರಂಥಾಲಯ ಮತ್ತು ಇದು ಕೇವಲ ಪ್ರದರ್ಶನಕ್ಕೆ ಅಥವಾ ತೋರಿಕೆಗಾಗಿ ಮಾಡಿದ್ದಲ್ಲ, ಅಲ್ಲಿರುವ ಪ್ರತಿ ಪುಸ್ತಕವನ್ನು ಬಾಬಾಸಾಹೇಬರು ಅಭ್ಯಸಿಸಿದ್ದಾರೆ. ಇದು ಅವರ ಜ್ಞಾನದ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ’ ಎಂದು ಜಾನ್ ಗುಂತೆರ್ ತಮ್ಮ ‘ಇನ್ಸೈಡರ್ ಏಷ್ಯಾ’ ಪುಸ್ತಕದಲ್ಲಿ ಬರೆದಿದ್ದಾರೆ. ಆದ್ದರಿಂದಲೇ ಇಂದು ಇಡೀ ವಿಶ್ವ ಅವರನ್ನು ಜ್ಞಾನದ ಸಂಕೇತವೆಂದು ಹೊಗಳುತ್ತದೆ.

    ಬಾಬಾಸಾಹೇಬರು ರಚಿಸಿದ ರೂಪಾಯಿ ಸಮಸ್ಯೆಗಳು, ಶೂದ್ರರು ಯಾರು?, ಅಸ್ಪೃಶ್ಯರು, ಅವರ ಆತ್ಮಚರಿತ್ರೆ ವೇಟಿಂಗ್ ಫಾರ್ ಎ ವೀಸಾ, ಹಿಂದು ಧರ್ಮದ ತತ್ವಗಳು, ಬುದ್ಧ ಮತ್ತು ಧರ್ಮ ಇತ್ಯಾದಿ ಪುಸ್ತಕಗಳು, ಮೂಕನಾಯಕ, ಬಹಿಷ್ಕೃತ ಭಾರತ, ಜನತಾ, ಪ್ರಬುದ್ಧ ಭಾರತ, ಸಮತಾ ಮುಂತಾದ ಪತ್ರಿಕೆಗಳು, ಅನೇಕ ಬರಹಗಳು, ಭಾಷಣಗಳು, ಇವೆಲ್ಲಕ್ಕಿಂತ ಹೆಚ್ಚಾಗಿ ಭಾರತದ ಸಂವಿಧಾನ- ಇವು ಅವರ ಜ್ಞಾನ ಕಣಜಕ್ಕೆ ಸಾಕ್ಷಿಯಾಗಿವೆ.

    ಬಾಬಾಸಾಹೇಬರು ಒಂದು ಕೃತಿಯನ್ನು ರಚಿಸಬೇಕಾದರೆ ಅವರು ಬಳಸಿಕೊಳ್ಳುತ್ತಿದ್ದ ಮೂಲಾಧಾರಗಳ ಪಟ್ಟಿ ಎಂತಹವರನ್ನೂ ಬೆರಗುಗೊಳಿಸುತ್ತದೆ. ಒಂದು ಕೃತಿಯನ್ನು ರಚಿಸಲು ಅವರು ಅನೇಕ ಬಗೆಯ ಮೂಲಾಧಾರಗಳು, ಆಯಾ ವಿಷಯಕ್ಕೆ ಸಂಬಂಧಿಸಿದ ಐತಿಹಾಸಿಕ ಹಾಗೂ ಪ್ರಸ್ತುತ ಕಾಲಘಟ್ಟಕ್ಕೆ ಸಂಬಂಧಿಸಿದ ಸ್ಥಳೀಯ, ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಪುಸ್ತಕಗಳು, ವರದಿಗಳು, ಸರಕಾರಿ ಆದೇಶಗಳು, ಕಾನೂನಿನ ಅಂಶಗಳು, ಪತ್ರ-ಲೇಖನಗಳು, ನಡಾವಳಿ, ನಿಯತಕಾಲಿಕೆಗಳು ಹೀಗೆ ಅನೇಕ ರೀತಿಯ ಮೂಲಾಧಾರಗಳ ಉಲ್ಲೇಖಗಳ ಸಹಿತ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವಿಷಯಗಳನ್ನು ಪ್ರತಿಪಾದಿಸುವ ಅವರ ಬರವಣಿಗೆಯ ವೈಖರಿ ನಿಜಕ್ಕೂ ಒಂದು ವೈಜ್ಞಾನಿಕ ಸತ್ಯಶೋಧನೆ, ಸಂಶೋಧಕರಿಗೆ ಕೈಪಿಡಿ.

    ಇಂದಿನ ಜನಾಂಗ ಅವೈಜ್ಞಾನಿಕ, ಅನವಶ್ಯಕ ಮಾಹಿತಿಯ ಹರಿವಿನಿಂದ ದಾರಿ ತಪ್ಪುತ್ತಿದೆ. ಜ್ಞಾನ ಸಾಗರವಿದೆ, ಬಳಸಿಕೊಳ್ಳಲು ಸುಲಭ ಮಾರ್ಗಗಳಿವೆ. ಆದರೆ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದೆ. ಬಾಬಾಸಾಹೇಬರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಜ್ಞಾನವಂತರಾಗಿ ಬೆಳೆದು ಮಹತ್ತರವಾದ ಗುರಿಯನ್ನು ಸಾಧಿಸಬೇಕಾಗಿದೆ. ಇದು ನಾವು ಅವರಿಗೆ ಸಲ್ಲಿಸುವ ಹುಟ್ಟು ಹಬ್ಬದ ಕೊಡುಗೆಯಾಗಿದೆ.

    (ಲೇಖಕರು ಅಕ್ಕಮಹಾದೇವಿ ಮಹಿಳಾ ವಿವಿ ಪ್ರಾಧ್ಯಾಪಕರು ಮತ್ತು ಸಮಾಜ ವಿಜ್ಞಾನ ನಿಕಾಯದ ಡೀನ್)

    ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್​ಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts