ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್​ಗೆ ಗಂಭೀರ ಗಾಯ

cm jagan
Published on

ವಿಜಯವಾಡ: ವಿಜಯವಾಡದಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್​ ಮೋಹನ್ ರೆಡ್ಡಿ ಅವರು ಆಯೋಜಿಸಿದ್ದ 'ಸಿದ್ಧಂ' ಬಸ್ ಯಾತ್ರೆಯಲ್ಲಿ ಕೆಲ ದುಷ್ಕರ್ಮಿಗಳು ಮುಖ್ಯಮಂತ್ರಿ ಜಗನ್​ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸಿಎಂ ಎಡಕಣ್ಣಿನ ಹುಬ್ಬಿನ ಬಳಿ ಗಂಭೀರ ಗಾಯವಾಗಿದೆ.

ವಿಜಯವಾಡದ ಸಿಂಗ್‌ನಗರದ ಡಾಬಾ ಕೋಟ್ಲಾ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಬಸ್​ನಿಂದ ಹೊರಬಂದು ಜನರತ್ತ ಕೈ ಬೀಸುವ ವೇಳೆ ದುಷ್ಕರ್ಮಿಗಳು ಕಲ್ಲು ಎಸೆದು ಪೈಶಾಚಿಕ ಕೃತ್ಯ ವೆಸಗಿದ್ದಾರೆ.

ವೇಗವಾಗಿ ಎಸೆದ ಕಲ್ಲು ನೇರವಾಗಿ ಸಿಎಂ ಜಗನ್‌ ಮೋಹನ್​ ರೆಡ್ಡಿ ಎಡ ಕಣ್ಣಿನ ಹುಬ್ಬಿಗೆ ಬಿದ್ದಿದೆ. ಇದರಿಂದ ಕಣ್ಣಿನ ಬಳಿ ರಕ್ತ ಬಂದಿದ್ದು, ಊತ ಬಂದಿದೆ. ವೈದ್ಯರು ಜಗನ್‌ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಬಸ್ ಪ್ರಯಾಣ ಎಂದಿನಂತೆ ಮುಂದುವರಿಸಿದರು.

ಇದೇ ವೇಳೆ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ಅವರು ಕೂಡ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಿಎಂ ಜಗನ್ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿ ಒಂದು ಕಡೆ ಶಾಲೆ, ಮತ್ತೊಂದು ಕಡೆ ಎರಡು ಅಂತಸ್ತಿನ ಕಟ್ಟಡಗಳಿವೆ. ದಾಳಿ ವೇಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕೂಡ ಉಂಟಾಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net