More

    ಬರ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಶಾಸಕರ ಮನೆಗೆ ಮುತ್ತಿಗೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದ್ದು ಯಾವುದೆ ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದೇ ಧೋರಣೆ ಮುಂದುವರಿದಲ್ಲಿ ಐದೂ ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ತಿಳಿಸಿದರು.
    ಮಳೆ ಇಲ್ಲದೆ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ಹಸಿರು ಮೇವು ಸಿಗುತ್ತಿಲ್ಲ. ಚುನಾಯಿತ ಶಾಸಕರು ಇದಕ್ಕೂ ನಮಗೂ ಏನು ಸಂಬಂಧ ಇಲ್ಲವೆಂಬಂತೆ ಕೇವಲ ಗ್ಯಾರಂಟಿ ಯೋಜನೆಗಳ ಭಜನೆ ಮಾಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಬರ ಪರಿಸ್ಥಿತಿ ನಿಭಾಯಿಸಲು ನೀರು-ಮೇವು ಒದಗಿಸಲು ರಾಜ್ಯ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿ ಬರ ಪರಿಸ್ಥಿತಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
    ಜಾನುವಾರುಗಳಿಗೆ ಒಣಹುಲ್ಲು ದಾಸ್ತಾನು ಮಾಡಿರುವ ವಿವರ ನೀಡುತ್ತಿಲ್ಲ. ಹಸಿರು ಮೇವು ಎಲ್ಲೂ ಸಿಗುತ್ತಿಲ್ಲ. ಮೇವು ಬೆಳೆಯಲು ಜಿಲ್ಲಾಡಳಿತದಿಂದ ಮೇವಿನಬೀಜ ವಿತರಣೆ ಮಾಡುತ್ತಿಲ್ಲ. ಜನ-ಜಾನುವಾರುಗಳಿಗೆ ನೀರು-ಮೇವು ಇಲ್ಲದೆ ಹಾಹಾಕಾರ ಸೃಷ್ಟಿಯಾಗಿದೆ ಎಂದರು.
    ಪರಿಸ್ಥಿತಿ ಇಷ್ಟೊಂದು ತೀವ್ರವಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯ ಐದೂ ಶಾಸಕರು ಗಮನ ಹರಿಸುತ್ತಿಲ್ಲ. ಇದೇ ರೀತಿ ಮೌನವಾಗಿದ್ದರೆ ಜಾನುವಾರುಗಳ ಸಹಿತ ಶಾಸಕರ ಮನೆ ಮುಂದೆ ವಿನೂತನ ಪ್ರತಿಭಟನೆ, ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
    ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಬಿಡುಗಡೆ ಮಾಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ನಾಯಕರು ಈ ಬಗ್ಗೆ ಮಾತನಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮೊದಲು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿ ನಂತರ ಕೇಂದ್ರ ಸರ್ಕಾರದ ಹಣ ಬಿಡುಗಡೆ ಆದ ಮೇಲೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿತ್ತು. ಈಗಲೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಹಣಕ್ಕೆ ಕಾಯದೆ ತುರ್ತಾಗಿ ಹಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
    ಜೂ.4ರಂದು ನಡೆಯಲಿರುವ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದು ಮಾಜಿ ಶಾಸಕ ಸಿ.ಟಿ.ರವಿ ಸೇರಿದಂತೆ ಜಿಲ್ಲೆಯ ಮತ್ತು ರಾಜ್ಯದ ಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
    ನಾನು ಒಬ್ಬ ಶಿಕ್ಷಕನ ಪುತ್ರನಾಗಿದ್ದು ಶಿಕ್ಷಕರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ನನಗೆ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟರೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
    ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಅವರು ಮೈತ್ರಿ ಅಭ್ಯರ್ಥಿ ಆಗುವರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಲ್ಮರುಡಪ್ಪ, ಅಂತಹ ಸಂದರ್ಭದಲ್ಲಿ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್.ಪ್ರೇಮ್‌ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕವೀಶ್, ಎಸ್ಸಿ ಮೋರ್ಚಾ ಕಾರ್ಯದರ್ಶಿ ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts