More

    ಬೈಡೆನ್ ಆಡಳಿತದ ಅವಾಂತರಗಳು ಮತ್ತು ಪಾಕ್ ಅದೃಷ್ಟ

    ಜಾಗತಿಕ ವಾಸ್ತವಗಳ ಕುರಿತಾಗಿನ ಡೆಮೋಕ್ರಾಟಿಕ್ ಪಕ್ಷದ ಚಿಂತನೆ ಇನ್ನೂ ಶೀತಲಸಮರದ ಕೆಸರಿನಲ್ಲೇ ಸಿಲುಕಿಕೊಂಡಿದೆ. ಆ ಪಕ್ಷದ ಪ್ರಕಾರ ರಷ್ಯಾವೇ ಈಗಲೂ ಅಮೆರಿಕಕ್ಕೆ ಪ್ರಬಲ ಶತ್ರು. ಈ ಮನೋಭಾವದಿಂದ ಎಂದೋ ಹೊರಬಂದ ರಿಪಬ್ಲಿಕನ್ ಪಕ್ಷ ಕಳೆದ 3 ದಶಕಗಳಲ್ಲಿ ಬದಲಾಗುತ್ತಿರುವ ಜಾಗತಿಕ ಭೂ-ರಾಜಕೀಯ ವಾಸ್ತವವನ್ನು ಸರಿಯಾಗಿ ಗಮನಿಸಿ ಅಮೆರಿಕದ ಪ್ರಮುಖ, ಪ್ರಬಲ ಶತ್ರು ಕಮ್ಯೂನಿಸ್ಟ್ ಚೀನಾ ಎಂದು ಗುರುತಿಸಿದೆ.

    ಜಗದಗಲಇಪ್ಪತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಮೂಲಭೂತವಾದಿ ತಾಲಿಬಾನ್ ಅನ್ನು ಸೃಷ್ಟಿಸಿ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೇರಿಸಿದ್ದು ಪಾಕಿಸ್ತಾನ, ಅದರ ಹಿಂದಿದ್ದದ್ದು ಅಮೆರಿಕ, ಅದೇ ಅಮೆರಿಕದ ವಿರೋಧಿ, ಅಲ್-ಖಯೀದಾಗೆ ಆಶ್ರಯ ನೀಡಿದ್ದು ತಾಲಿಬಾನ್. ಇಪ್ಪತ್ತೊಂದನೆಯ ಶತಮಾನ ಆರಂಭವಾಗುತ್ತಿದ್ದಂತೆ ಅಲ್-ಖಯೀದಾ ಎಸಗಿದ 9/11 ದಾಳಿಗಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನದ ಮೇಲೆ ಎರಗಿದ ಅಮೆರಿಕ ಅಲ್ಲಿದ್ದ ಅಲ್-ಖಯೀದಾ ಜತೆ ತಾಲಿಬಾನ್ ಸರ್ಕಾರವನ್ನೂ ಕಿತ್ತೊಗೆ ಯಿತು. ಅಮೆರಿಕ ಆರಂಭಿಸಿದ ಆ ‘ಭಯೋತ್ಪಾದನೆ ವಿರುದ್ಧದ ಸಮರ’ದಲ್ಲಿ ಆ ದೇಶದ ಜತೆ ಸೇರಿದಂತೆ ನಟಿಸಿ, ಒಳಗೊಳಗೇ ತಾಲಿಬಾನ್​ಗೆ ತನ್ನ ನೆಲದಲ್ಲಿ ಆಶ್ರಯ ನೀಡಿ ಪೋಷಿಸಿದ್ದು ಮತ್ತು ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕ ಆರಂಭವಾಗುತ್ತಿದ್ದಂತೆ ಅಫ್ಘಾನಿಸ್ತಾನವನ್ನು ತಾಲಿಬಾನ್​ಗೇ ಬಿಟ್ಟುಕೊಟ್ಟು ಅಮೆರಿಕ ಓಡಿಹೋದಾಗ ಸಂಭ್ರಮಿಸಿದ್ದು, ಕಾಬೂಲ್​ನಲ್ಲಿ ತಾಲಿಬಾನ್ ಸರ್ಕಾರವನ್ನು ಗಟ್ಟಿಯಾಗಿ ನೆಲೆಯೂರಿಸಿದ್ದು ಪಾಕಿಸ್ತಾನ. ಇಂದು ಅದೇ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ, ಪಾಕಿಸ್ತಾನಗಳ ನಡುವೆ ಘರ್ಷಣೆ ಆರಂಭವಾಗಿದೆ, ಅಫ್ಘನ್ ತಾಲಿಬಾನ್​ನಿಂದ ಬೆಂಬಲ ಪಡೆದ ಪಾಕ್ ತಾಲಿಬಾನ್ ಗಡಿಭಾಗದ ಖೈಬರ್ ಪಖ್ತೂನ್​ಖ್ವಾ ಪ್ರಾಂತ್ಯದಲ್ಲಿ ರಾಜಾರೋಷವಾಗಿ ದಾಂಧಲೆ ಎಸಗುತ್ತಿದೆ, ಪಾಕ್ ಸೈನಿಕರನ್ನು ಕೊಲ್ಲುತ್ತಿದೆ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನ ಉತ್ತರದ ನೆರೆನಾಡಿನ ಮೇಲೆ ವಾಯುದಾಳಿ ಎಸಗಿ ನಾಗರಿಕರನ್ನು ಕೊಂದಿದೆ. ಇದಕ್ಕೆ ಅಮೆರಿಕದ ಬೆಂಬಲವಿದೆ.

    ಏನಾಗುತ್ತಿದೆ ಎಂದು ನಿಮಗೆ ಗೊಂದಲವಾಗುತ್ತಿದೆಯೇ? ಯಾರ ಶತ್ರು ಅಥವಾ ಮಿತ್ರ ಯಾರು ಎಂದು ತಿಳಿಯದಾಗುತ್ತಿದೆಯೇ? ಇರಿ, ನಿಮ್ಮ ಗೊಂದಲವನ್ನು ನಾನು ಇನ್ನಷ್ಟು ಹೆಚ್ಚಿಸುತ್ತೇನೆ. ಕಾಲು ಶತಮಾನದ ಹಿಂದೆ ಅಫ್ಘನ್ ತಾಲಿಬಾನ್ ಪಾಕಿಸ್ತಾನದ ಬಂಟನಂತೆ ವರ್ತಿಸಿ ಹಾನಿಯೆಸಗಿದ್ದು ಭಾರತಕ್ಕೆ. ಡಿಸೆಂಬರ್ 1999ರ ಇಂಡಿಯನ್ ಏರ್​ಲೈನ್ಸ್ ಐಸಿ-814 ವಿಮಾನಾಪಹರಣ ನೆನಪಿದೆಯಲ್ಲ? ಬಾಮಿಯನ್ ಬುದ್ಧನಿಗೆ ಏನಾಯಿತೆಂದೂ ಗೊತ್ತಿರಬೇಕಲ್ಲ? ಇಂದು ಅದೇ ತಾಲಿಬಾನ್ ಅದೇ ಪಾಕಿಸ್ತಾನದ ವಿರುದ್ಧ ಕತ್ತಿ ಝುಳಪಿಸುತ್ತಿದೆ ಮತ್ತು ಭಾರತದ ಬಗ್ಗೆ ಸದ್ಭಾವನೆ ತೋರುತ್ತಿದೆ. ಅಫ್ಘನ್ ತಾಲಿಬಾನ್ ಭಾರತದ ಜತೆ ಸ್ನೇಹಸಹಕಾರಕ್ಕಾಗಿ ಹಾತೊರೆಯುತ್ತಿದ್ದರೆ ಅದರ ಬಂಟ ಪಾಕ್ ತಾಲಿಬಾನ್ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ವಾಪಸಾಗಬೇಕೆಂದು ಹೇಳುತ್ತದೆ.

    ಅಂತಾರಾಷ್ಟ್ರೀಯ ಸಂಬಂಧಗಳು ಅಂದರೆ ಹೀಗೆಯೇ. ಅದು ಮರಳುಗಾಡಿನ ಮೇಲ್ಮೈಯಂತೆ ಸದಾ ಬದಲಾಗುತ್ತಲೇ ಇರುತ್ತದೆ, ಗಾಳಿ ಬೀಸಿದಂತೆ ಮರಳುಮಡಿಕೆಗಳು ಆಕಾರ ಮತ್ತು ದಿಕ್ಕುಗಳನ್ನೂ ಬದಲಿಸುತ್ತಿರುತ್ತವೆ, ಇಲ್ಲಿದ್ದ ಮರಳು ದಿಬ್ಬ ಅಲ್ಲಿ ಹೋಗಿ ಕೂರುತ್ತದೆ, ನೋಡುನೋಡುತ್ತಿರುವಂತೇ ನೋಟ ಬದಲಾಗಿಬಿಡುತ್ತದೆ. ದಕ್ಷಿಣ ಏಷ್ಯಾದ ದೇಶಗಳ ನಡುವಿನ ಸಂಬಂಧಗಳೂ ಹೀಗೇ ನಿರಂತರವಾಗಿ ಬದಲಾಗುತ್ತಲೇ ಇವೆ. ಈಗ ಇಲ್ಲಿ ‘ಸದ್ಯಕ್ಕೆ’ ಅದೃಷ್ಟ ಖುಲಾಯಿಸುತ್ತಿರುವಂತೆ ಕಾಣುತ್ರಿರುವುದು ಭಾರತಕ್ಕೆ. ನಾವೀಗ ಅದರ ಬಗ್ಗೆ ಗಮನ ಹರಿಸೋಣ. ಅಫ್ಥನ್ ತಾಲಿಬಾನ್ ಮತ್ತು ಪಾಕ್ ತಾಲಿಬಾನ್​ಗಳೆರಡೂ ಭಾರತದ ಪರವಾಗಿ ನಿಂತಿರುವ ಗಳಿಗೆಯಲ್ಲೇ, ಅವೆರಡರ ಜತೆ ಬಡಿದಾಡುತ್ತಿರುವ ಪಾಕಿಸ್ತಾನವೂ ನಮ್ಮ ಜತೆ ಸಂಬಂಧ ಸುಧಾರಿಸಿಕೊಳ್ಳಲು ದಾರಿಗಳನ್ನು ಹುಡುಕುತ್ತಿದೆ ಅಥವಾ ಹುಡುಕುವಂತೆ ಅಮೆರಿಕ ಅದಕ್ಕೆ ಅಪ್ಪಣೆ ಮಾಡಿದೆ. ಇದೇನು ಕಥೆ! ಭಾರತಕ್ಕೆ ಹಾನಿಯಾಗುವ ಮಟ್ಟಿಗೆ ಪಾಕಿಸ್ತಾನವನ್ನು ಪ್ರಬಲ ಸೇನಾಶಕ್ತಿಯಾಗಿಸಿ ಭಾರತವನ್ನು ಹೆದರಿಸಲು ತನ್ನ ಅತಿ ದೊಡ್ಡ ನೌಕಾಸೇನೆಯನ್ನು ಬಂಗಾಳ ಕೊಲ್ಲಿಗೆ ಕಳುಹಿಸಿದ ಅಮೆರಿಕ ಇಂದು ‘ಭಾರತದೊಂದಿಗೆ ಸ್ನೇಹ ಬೆಳೆಸು’ ಎಂದು ಪಾಕಿಸ್ತಾನಕ್ಕೆ ಅಪ್ಪಣೆ ಮಾಡುತ್ತಿದೆಯೆಂದರೆ ಜಾಗತಿಕ ಭೂ-ರಾಜಕೀಯದಲ್ಲಿ, ಅಮೆರಿಕದ ಸಾಮರಿಕ ನೀತಿಗಳಲ್ಲಿ ಅದೆಂತಹ ಬದಲಾವಣೆಗಳು ಕಾಣಿಸಿಕೊಂಡಿರಬಹುದು?

    ಲೇಖನದ ಪ್ರಾರಂಭದಲ್ಲಿ ನಾನು ನಿಮ್ಮ ಮುಂದಿರಿಸಿದ ಗೊಂದಲಗಳನ್ನು ನೆನಪಿಸಿಕೊಳ್ಳುತ್ತಲೇ ಇರಿ ಎಂದು ಹೇಳುತ್ತಲೇ ಭಾರತಕ್ಕೆ ತೆರೆದುಕೊಂಡಿರುವ ಹೊಸ ಅವಕಾಶಗಳ ಪರಿಚಯವನ್ನು ಮಾಡಿಕೊಡಲು ಪ್ರಯತ್ನಿಸುತ್ತೇನೆ. 1947ರಲ್ಲಿ ಪಾಕಿಸ್ತಾನ ಸೃಷ್ಟಿಯಾದಾಗ ಅದರ ಎರಡು ಭಾಗಗಳು ಭಾರತೀಯ ಉಪಖಂಡದ ಆಚೀಚಿನ ಬದಿಗಳಲ್ಲಿದ್ದವು. ಅಂದರೆ ಪಾಕಿಸ್ತಾನಕ್ಕೆ ಸಿಕ್ಕಿದ್ದು ಎರಡು ಕಾರ್ನರ್ ಸೈಟ್​ಗಳು! ತಾನು ಸೃಷ್ಟಿಸಿದ ಹೊಸ ರಾಷ್ಟ್ರದ ಭೌಗೋಳಿಕ ಸ್ಥಾನವನ್ನೇ ಒಂದು ಅವಕಾಶವನ್ನಾಗಿ ಬಳಸಿಕೊಂಡು ಅಮೆರಿಕದ ಗಮನ ಸೆಳೆದು ಅದರಿಂದ ಅಗತ್ಯ ಸೇನಾಸಹಾಯವನ್ನು ಪಡೆದುಕೊಳ್ಳಲು ಹರಿತ ತಲೆಯ ತಂತ್ರಗಾರ ಮಹಮದ್ ಆಲಿ ಜಿನ್ನಾ ಮೊದಲ ಗಳಿಗೆಯಿಂದಲೇ ಪ್ರಯತ್ನ ಆರಂಭಿಸಿದ್ದರು. ಪಶ್ಚಿಮ ಪಾಕಿಸ್ತಾನದಿಂದ ಸೋವಿಯೆತ್ ಯೂನಿಯನ್ ಕಡೆಗೂ, ಪೂರ್ವ ಪಾಕಿಸ್ತಾನದಿಂದ ಚೀನಾ ಕಡೆಗೂ ಕಣ್ಣಿಡಬಹುದಾದಂತಹ ನೆಲೆಗಳನ್ನು ಸ್ಥಾಪಿಸಿಕೊಳ್ಳಬಹುದಾದ ಸಾಧ್ಯತೆಗಳನ್ನು ಕಂಡ ಅಮೆರಿಕ ಸಿಕ್ಕಿದ ಅವಕಾಶವನ್ನು ಬಾಚಿಕೊಂಡಿತು. ಹೀಗೆ ಎರಡೂ ದೇಶಗಳ ನಡುವೆ ಸಾಮರಿಕ ಹಾಗೂ ಸೇನಾ ಹೊಕ್ಕುಬಳಕೆ ಶೀತಲಸಮರದುದ್ದಕ್ಕೂ ಅವ್ಯಾಹತವಾಗಿ ಸಾಗಿತು. ಸೋವಿಯೆತ್ ಯೂನಿಯನ್ ಪರ ವಾಲಿದ ಭಾರತ ಸಹಜವಾಗಿಯೇ ಅಮೆರಿಕದ ಅಪಕೃಪೆಗೆ ಪಾತ್ರವಾಯಿತು. ಇಷ್ಟಾಗಿಯೂ ಭಾರತದ ಸೇನಾ ಸಹಕಾರ ಮತ್ತು ಸೋವಿಯೆತ್ ಯೂನಿಯನ್​ನ ರಾಜತಾಂತ್ರಿಕ ಸಹಕಾರದಿಂದ ಪೂರ್ವ ಪಾಕಿಸ್ತಾನ 1971ರಲ್ಲಿ ಪ್ರತ್ಯೇಕಗೊಂಡು ಸ್ವತಂತ್ರ ಬಾಂಗ್ಲಾದೇಶವಾಗಿ ತಲೆಯೆತ್ತಿದಾಗ ಪಾಕಿಸ್ತಾನ ತನ್ನ ಪೂರ್ವದ ಕಾರ್ನರ್ ಸೈಟ್ ಅನ್ನು ಕಳೆದುಕೊಂಡಿತು. ಆ ಬೆಳವಣಿಗೆ ಪಾಕಿಸ್ತಾನ ಮತ್ತು ಅಮೆರಿಕಗಳ ವಿರುದ್ಧ ಭಾರತ ಮತ್ತು ಸೋವಿಯೆತ್ ಯೂನಿಯನ್​ಗಳಿಗೆ ದಕ್ಕಿದ ಮಹತ್ತರ ಗೆಲುವು.

    ಮರುವರ್ಷವೇ, ಅಂದರೆ 1972ರಲ್ಲಿ ಅಮೆರಿಕ ಮತ್ತು ಸೋವಿಯೆತ್ ಯೂನಿಯನ್ ಖಅಔಖ 1 (ಖಠ್ಟಿಚಠಿಛಿಜಜ್ಚಿ ಅಞಠ ಔಜಿಞಜಿಠಿಚಠಿಜಿಟ್ಞ ಖಚ್ಝkಠ 1) ಒಪ್ಪಂದಗಳನ್ನು ಮಾಡಿಕೊಂಡು ಶೀತಲಸಮರವನ್ನು ಅಂತ್ಯಗೊಳಿಸಿಕೊಂಡಾಗ ವಾಷಿಂಗ್​ಟನ್ ಪ್ರಭುಗಳ ಹೊಸ ಲೆಕ್ಕಾಚಾರದಲ್ಲಿ ಪಾಕಿಸ್ತಾನದ ಸಾಮರಿಕ ಮಹತ್ವ ಕುಗ್ಗಿಹೋಯಿತು. ಪರಿಣಾಮವಾಗಿ ಪಾಕಿಸ್ತಾನ ಕೆಲವರ್ಷಗಳು ಅನಾಥಪ್ರಜ್ಞೆಯಲ್ಲಿ ಬಳಲಿದ್ದುಂಟು. ಆದರೆ 1979ರಲ್ಲಿ ಸೋವಿಯೆತ್ ಸೇನೆ ಅಫ್ಘಾನಿಸ್ತಾನಕ್ಕೆ ನುಗ್ಗಿದಾಗ ಪಾಕಿಸ್ತಾನದ ಅದೃಷ್ಟ ಮತ್ತೆ ಖುಲಾಯಿಸಿತು. ಸೋವಿಯೆತ್ ಸೇನೆ ಅಫ್ಘಾನಿಸ್ತಾನದಲ್ಲಿ ಭದ್ರವಾಗಿ ನೆಲೆಗೊಂಡುಬಿಟ್ಟರೆ ಅನತಿಕಾಲದಲ್ಲೇ ಅದು ಪಾಕಿಸ್ತಾನದ ಬಲೂಚಿಸ್ತಾನಕ್ಕೂ ಪ್ರವೇಶಿಸಿ ಗ್ವಾದಾರ್ ಬಂದರನ್ನು ತನ್ನದಾಗಿಸಿಕೊಂಡು ಹಿಂದೂ ಮಹಾಸಾಗರದಲ್ಲಿ ತನ್ನ ನೌಕಾಸೇನಾ ಹಾಜರಿಗೆ ಸವಾಲೊಡ್ಡಬಹುದೆಂದು ರ್ತಸಿದ ಅಮೆರಿಕ ಅಂತಹ ಸ್ಥಿತಿ ನಿರ್ವಣವಾಗುವುದನ್ನು ಶತಾಯಗತಾಯ ತಡೆಯಬೇಕೆಂದು ತೀರ್ವನಿಸಿತು. ಸೋವಿಯೆತ್ ಸೇನೆಗೆ ಅಫ್ಘಾನಿಸ್ತಾನದಲ್ಲಿ ಸೋವಿಯೆತ್ ಸೇನೆಗೆ ಇನ್ನಿಲ್ಲದ ಕಾಟ ಕೊಟ್ಟು ಅದು ಅಲ್ಲಿಂದ ಓಡಿಹೋಗುವಂತೆ ಮಾಡಬೇಕೆಂದು ತಂತ್ರ ರೂಪಿಸಿದ ಅಮೆರಿಕ ತನ್ನ ಯೋಜನೆಯಲ್ಲಿ ಪಾಕಿಸ್ತಾನವನ್ನು ಮುಂಚೂಣಿ ರಾಷ್ಟ್ರವಾಗಿ ಆಯ್ದುಕೊಂಡಿತು, ಎರಡನೆಯ ಶೀತಲಸಮರ ಆರಂಭವಾಯಿತು, ಪಾಕಿಸ್ತಾನ ಮತ್ತೆ ಅಮೆರಿಕಕ್ಕೆ ಮುಖ್ಯವೆನಿಸಿತು. ಇತಿಹಾಸ ಪುನರಾವರ್ತಿಸಿ ಪಾಕಿಸ್ತಾನಕ್ಕೆ ಬೇಕಾದ್ದೆಲ್ಲವೂ ಹೆಚ್ಚಾಗಿಯೇ ಸಿಗತೊಡಗಿತು.

    ದಶಕದ ನಂತರ ಅಫ್ಘಾನಿಸ್ತಾನದಿಂದ ಸೋವಿಯೆತ್ ಸೇನೆ ಕಾಲ್ತೆಗೆದು ಅಮೆರಿಕದ ಆತಂಕ ದೂರವಾದಾಗ ವಾಷಿಂಗ್​ಟನ್ ಪ್ರಭುಗಳ ದೃಷ್ಟಿಯಲ್ಲಿ ಪಾಕಿಸ್ತಾನದ ಮಹತ್ವ ಮತ್ತೆ ಕುಗ್ಗಿಹೋಯಿತು ಮತ್ತು ಆಗಷ್ಟೇ ಆರ್ಥಿಕ ಉದಾರೀಕರಣದ ದಾರಿಗಿಳಿದ ಭಾರತದತ್ತ ಆಸೆಗಣ್ಣಿನಿಂದ ನೋಡತೊಡಗಿತು. ‘ಇನ್ನು ಪಾಕಿಸ್ತಾನದ ಜತೆಗಿನ ಸೇನಾ ಸಹಕಾರವನ್ನು ಮಿತಿಗೊಳಿಸಿ ಭಾರತದೊಂದಿಗೆ ಘನಿಷ್ಟ ಆರ್ಥಿಕ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವುದು ಅಮೆರಿಕದ ನೀತಿಯಾಗುತ್ತದೆ’ ಎಂಬ ಅಭಿಪ್ರಾಯ ಜಾಗತಿಕವಾಗಿ ಸಾರ್ವತ್ರಿಕವಾಗತೊಡಗಿದ ಸಮಯ ಅದು. ಆದರೆ ಆ ಎಲ್ಲ ನಿರೀಕ್ಷೆಗಳನ್ನೂ 9/11 ದಾಳಿಗಳು ಹುಸಿಯಾಗಿಸಿಬಿಟ್ಟವು.

    ತನ್ನ ಹಿಂದಿನ ಬಲಿಷ್ಠ ಶತ್ರುಗಳಾದ ಜಪಾನ್, ಜರ್ಮನಿ ಮತ್ತು ಸೋವಿಯೆತ್ ಯೂನಿಯನ್ ಮಾಡಲಾಗದ ಪ್ರಮಾಣದ ಹಾನಿಯನ್ನು ತನಗೆ ತಂದಿಟ್ಟ ಅಲ್-ಖಯೀದಾವನ್ನು ಶಿಕ್ಷಿಸಲು ಅದು ಆಶ್ರಯ ಪಡೆದಿದ್ದ ಅಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿಯೆಸಗಿತು. ಅಮೆರಿಕದ ಸಾಮರಿಕ ಚಿಂತನೆಯಲ್ಲಿ ಪಾಕಿಸ್ತಾನದ ಭೌಗೋಳಿಕ ಸ್ಥಾನ ಮತ್ತೆ ಮುನ್ನೆಲೆಗೆ ಬಂತು. ಅಮೆರಿಕದ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮುಂಚೂಣಿ ರಾಷ್ಟ್ರ ಮತ್ತು ಅದಕ್ಕೆ ಮತ್ತೆ ಶಸ್ತ್ರಾಸ್ತ್ರ ಹಾಗೂ ಡಾಲರ್​ಗಳ ಸುರಿಮಳೆ. ಎರಡೂವರೆ ವರ್ಷಗಳ ಹಿಂದೆ ಅಫ್ಘಾನಿಸ್ತಾನದಿಂದ ಅಮೆರಿಕ ಕಾಲ್ತೆಗೆಯಿತಷ್ಟೇ. ಆಗ ಪಾಕಿಸ್ತಾನದ ಸಾಮರಿಕ ಮಹತ್ವ ಮತ್ತೆ ಕುಗ್ಗಿಹೋಗುವುದು ಸಹಜವೆನಿಸಿತ್ತು. ಆದರೆ ಈಗ ರಂಗಸ್ಥಳದಲ್ಲಿ ಮತ್ತೊಬ್ಬ ಪಾತ್ರಧಾರಿ ಅವತರಿಸಿದೆ, ಅಮೆರಿಕಕ್ಕೆ ಪಾಕಿಸ್ತಾನದ ಅಗತ್ಯ ಬೇರೊಂದು ಬಗೆಯಲ್ಲಿ ಎದ್ದುನಿಂತಿದೆ. ಆದರೆ ಇಲ್ಲಿ ಹೆಚ್ಚಿನವರು ಗುರುತಿಸಲಾಗದೇ ಹೋಗುತ್ತಿರುವ ವಾಸ್ತವವೆಂದರೆ ಪಾಕಿಸ್ತಾನದ ಮರುಮಹತ್ವಕ್ಕೆ ನಿಜವಾದ ಕಾರಣ ಅಮೆರಿಕದ ಪ್ರಸಕ್ತ ಆಡಳಿತಾರೂಢ ಡೆಮೋಕ್ರಾಟಿಕ್ ಪಕ್ಷದ ಅಪಕ್ವ ಹಾಗೂ ಅವಾಸ್ತವಿಕ ಚಿಂತನೆಗಳು.

    ಜಾಗತಿಕ ವಾಸ್ತವಗಳ ಕುರಿತಾಗಿನ ಡೆಮೋಕ್ರಾಟಿಕ್ ಪಕ್ಷದ ಚಿಂತನೆ ಇನ್ನೂ ಶೀತಲಸಮರದ ಕೆಸರಿನಲ್ಲೇ ಸಿಲುಕಿಕೊಂಡಿದೆ. ಆ ಪಕ್ಷದ ಪ್ರಕಾರ ಹಿಂದಿನ ಸೋವಿಯೆತ್ ಯೂನಿಯನ್​ನ ಉತ್ತರಾಧಿಕಾರಿಯಾದ ರಷ್ಯಾವೇ ಈಗಲೂ ಅಮೆರಿಕಕ್ಕೆ ಪ್ರಥಮ ಹಾಗೂ ಪ್ರಬಲ ಶತ್ರು. ಈ ಮನೋಭಾವದಿಂದ ಎಂದೋ ಹೊರಬಂದ ರಿಪಬ್ಲಿಕನ್ ಪಕ್ಷ ಕಳೆದ ಮೂರು ದಶಕಗಳಲ್ಲಿ ಬದಲಾಗುತ್ತಿರುವ ಜಾಗತಿಕ ಭೂ-ರಾಜಕೀಯ ವಾಸ್ತವಗಳನ್ನು ಸರಿಯಾಗಿ ಗಮನಿಸಿ ಅಮೆರಿಕದ ಪ್ರಮುಖ ಹಾಗೂ ಪ್ರಬಲ ಶತ್ರು ಕಮ್ಯೂನಿಸ್ಟ್ ಚೀನಾ ಎಂದು ಗುರುತಿಸಿದೆ. ಹಿರಿಯ ಮತ್ತು ಕಿರಿಯ ಜಾರ್ಜ್ ಬುಷ್ ಆಡಳಿತಾವಧಿಯಲ್ಲಿ ಬೆಳೆಯುತ್ತ ಬಂದ ಈ ಸರಿಯಾದ ತಿಳಿವಳಿಕೆ ಮತ್ತು ಅದರ ಪರಿಣಾಮವಾದ ವಾಸ್ತವವಾದಿ ನೀತಿ ಬಿಲ್ ಕ್ಲಿಂಟನ್ ಹಾಗೂ ಬರಾಕ್ ಒಬಾಮ ಕಾಲದಲ್ಲಿ ಕ್ಷತಿಗೊಂಡರೂ ಡೊನಾಲ್ಡ್ ಟ್ರಂಪ್ ಕಾಲದಲ್ಲಿ ಅಮೆರಿಕದ ವಿದೇಶಾಂಗ, ಆರ್ಥಿಕ ಹಾಗೂ ಸಾಮರಿಕ ನೀತಿಯ ಪ್ರಮುಖ ರೂಪವಾಗಿ ಜಗತ್ತಿಗೆ ಪರಿಚಯಗೊಂಡಿತು. ಚೀನಾವನ್ನು ಹಣಿಯಲು ಟ್ರಂಪ್ ರೂಪಿಸಿದ ಕಾರ್ಯಯೋಜನೆಗಳು ಪಾಕಿಸ್ತಾನಕ್ಕೂ ಬಿಸಿ ಮುಟ್ಟಿಸಿದವು. ಚೀನಾದೊಂದಿಗೆ ಲಾಗಾಯ್ತಿನಿಂದಲೂ ಸ್ನೇಹವನ್ನು ಬೆಳೆಸಿಕೊಂಡ ಪಾಕಿಸ್ತಾನ ತಮಗೆ ಯೋಗ್ಯ ಸಹಯೋಗಿ ಆಗಲಾರದು ಎಂದು ಟ್ರಂಪ್ ಕಂಡುಕೊಂಡಿದ್ದರು. ಜತೆಗೆ, ಹಿಂದೆ ಅಮೆರಿಕ ಜತೆ ಇರುವಂತೆ ನಟಿಸುತ್ತಲೇ ತಾಲಿಬಾನ್​ಗೆ ಆಶ್ರಯ ಹಾಗೂ ಬೆಂಬಲ ನೀಡಿ, ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಸೇನೆಯ ಹಿನ್ನೆಡೆಗೆ ಮುಖ್ಯ ಕಾರಣವಾದ ಪಾಕಿಸ್ತಾನ ನಂಬಿಕೆಗೆ ಎಂದಿಗೂ ಅರ್ಹವಲ್ಲ ಎಂದೂ ವ್ಯವಹಾರಕುಶಲಿ ಟ್ರಂಪ್ ಅರಿತಿದ್ದರು. ಹೀಗಾಗಿ ಅವರು ಚೀನಾದ ಜತೆ ಪಾಕಿಸ್ತಾನವನ್ನೂ ಶಿಕ್ಷಿಸುವ ಹಲವು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಂಡಿದ್ದರು. ಆದರೆ ಡೆಮೋಕ್ರಾಟಿಕ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೊಡನೆ ಎಲ್ಲವೂ ಬದಲಾಗಿಹೋಯಿತು. ಆಂಟನಿ ಬ್ಲಿಂಕನ್ ವಿದೇಶಾಂಗ ಕಾರ್ಯದರ್ಶಿಯಾದದ್ದು ಅಮೆರಿಕದ ವಿದೇಶಾಂಗ ನೀತಿಯಲ್ಲಿ ವಾಸ್ತವವಾದವನ್ನು ಮಣ್ಣುಗೂಡಿಸಿಬಿಟ್ಟಿತು. ಚೀನಾವನ್ನು ಮರೆತು ರಷ್ಯಾವನ್ನು ಅಮೆರಿಕದ ಪ್ರಮುಖ ವಿರೋಧಿ ಎಂಬ ಅಭಿಪ್ರಾಯದೊಂದಿಗೆ ಅಧಿಕಾರಕ್ಕೆ ಬಂದ ಅವರು ಮತ್ತು ಉಪ ವಿದೇಶಾಂಗ ಕಾರ್ಯದರ್ಶಿ ವಿಕ್ಟೋರಿಯಾ ನ್ಯೂಲ್ಯಾಂಡ್ ಒಟ್ಟುಗೂಡಿ ಟ್ರಂಪ್ ದಿನಗಳಲ್ಲಿ ಇಂಡೋ-ಪೆಸಿಫಿಕ್ ಕಡೆಗಿದ್ದ ಅಮೆರಿಕದ ಸಾಮರಿಕ ಗಮನವನ್ನು ಯೂರೋಪ್ ಕಡೆ ತಿರುಗಿಸಿಬಿಟ್ಟರು, ರಷ್ಯಾ ವಿರುದ್ಧ ಯೂಕ್ರೇನ್ ಅನ್ನು ಎತ್ತಿಕಟ್ಟಿದರು. ಅದರ ದುಷ್ಪರಿಣಾಮವನ್ನು ಎರಡು ವರ್ಷಗಳಿಂದಲೂ ಇಡೀ ಜಗತ್ತೇ ನೋಡುತ್ತಿದೆ. ಬದಲಾವಣೆಯನ್ನು ಗುರುತಿಸಲಾಗದ ಹಾಗೂ ಹೊಸದನ್ನು ಒಪ್ಪಿಕೊಳ್ಳಲಾಗದ, ದೂರಗಾಮಿ ದೃಷ್ಟಿಕೋನವಿಲ್ಲದ, ಸೀಮಿತ ವಿವೇಚನೆಯ ವ್ಯಕ್ತಿಗಳು ಇತಿಹಾಸದ ಚಕ್ರವನ್ನು ಹಿಂದಕ್ಕೆಳೆದು ಎಂತಹ ಹಾನಿಯನ್ನು ಜಗತ್ತಿಗೆ ತರಬಲ್ಲರು ಎನ್ನುವುದಕ್ಕೆ ಈ ಇಬ್ಬರು ‘ನೇತಾರರು’ ಇಂದಿನ ಜಗತ್ತಿನಲ್ಲಿ ಸೂಕ್ತ ಉದಾಹರಣೆಯಾಗಿ ನನಗೆ ಕಾಣುತ್ತಾರೆ.

    ಅಧಿಕಾರಕ್ಕೆ ಬಂದು ಎರಡು ವರ್ಷಗಳ ನಂತರ ಕೊನೆಗೂ ಚೀನಾ ಸಹ ಅಮೆರಿಕಕ್ಕೆ ಪ್ರಮುಖ ವಿರೋಧಿ ಎನ್ನುವುದನ್ನು ಅರಿತುಕೊಂಡ ಬೈಡೆನ್ ಸರ್ಕಾರ ಆ ಕಮ್ಯೂನಿಸ್ಟ್ ದೇಶದ ವಿರುದ್ಧ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸಿತೇನೋ ನಿಜ. ಚೀನಾದ ವಿರುದ್ಧ ನೀತಿಗಳನ್ನು ರೂಪಿಸತೊಡಗಿದರೂ, ಅವುಗಳಲ್ಲಿ ಪಾಕಿಸ್ತಾನವನ್ನು ಸಹಯೋಗಿಯಾಗಿ ಪರಿಗಣಿಸಿದ್ದು ಮಾತ್ರ ವಿಷಾದಕರ. ಟ್ರಂಪ್ ದೂರವಿಟ್ಟಿದ್ದ ಪಾಕಿಸ್ತಾನವನ್ನು ಮತ್ತೆ ಹತ್ತಿರಕ್ಕೆಳೆದುಕೊಂಡ ಬೈಡೆನ್ ಸರ್ಕಾರ ಇಸ್ಲಾಮಾಬಾದ್​ನಲ್ಲಿ ತನಗೆ ಬೇಕಾದವರನ್ನು ಕೂರಿಸಿದರೆ ಕೆಲಸವಾಗುತ್ತದೆ ಎಂದು ತಿಳಿದಂತಿದೆ. ಅದಕ್ಕಾಗಿ ಎರಡು ವರ್ಷಗಳ ಹಿಂದೆ ಏನೇನೋ ಕಸರತ್ತು ಮಾಡಿ ಇಮ್ರಾನ್ ಖಾನ್​ರನ್ನು ಇಳಿಸಿ ಶೆಹ್ಬಾಜ್ ಶರೀಫ್​ರನ್ನು ಅಧಿಕಾರಕ್ಕೆ ತಂದಾಯಿತು. ಈಗ ಅದೇ ಕಸರತ್ತನ್ನು ಮತ್ತೊಮ್ಮೆ ಮಾಡಿದೆ. ಇಲ್ಲಿ ಸಂತಸಪಡಬಹುದಾದ ಒಂದೇ ವಿಷಯವೆಂದರೆ ಚೀನೀ-ಪರ ದಂಡನಾಯಕ ಆಸಿಫ್ ಮೂನೀರ್​ರನ್ನು ಅಮೆರಿಕ ತನ್ನ ಕಡೆಗೆ ತಿರುಗಿಸಿಕೊಂಡಿರವುದು. ಆದರೆ ಇದೆಷ್ಟು ದಿನಗಳವರೆಗಿನ ಆಟ? ಹಿಂದೆ ಅಮೆರಿಕದ ಜತೆಗಿರುವಂತೇ ನಟಿಸಿ ತೆರೆಯ ಹಿಂದೆಯೇ ತಾಲಿಬಾನ್ ಅನ್ನು ಎತ್ತಿಕಟ್ಟಿದ ಹಿಂದಿನ ಪಾಕ್ ಸೇನಾ ದಂಡನಾಯಕರುಗಳ ಚಾಳಿಯನ್ನೇ ಮುನೀರ್ ಸಹಾ ಅನುಸರಿಸಿ ರಹಸ್ಯವಾಗಿ ಚೀನಾದ ಪರವಾಗಿಯೇ ಕೆಲಸ ಮಾಡುತ್ತ ಹೋದರೆ ಅಮೆರಿಕಕ್ಕೆ ಮತ್ತೆ ನಷ್ಟ.

    ಇಲ್ಲಿ ಮುಖ್ಯವಾಗುವ ಒಂದು ವಿಷಯವೆಂದರೆ ಚೀನಾ ವಿರುದ್ಧ ಹೋರಾಡಲು ಭಾರತದ ಸಹಕಾರ ಅತ್ಯಗತ್ಯ ಎಂದು ಈಗ ಅರಿತಿರುವ ಬೈಡೆನ್ ಸರ್ಕಾರ ಅದಕ್ಕಾಗಿ ಭಾರತ ಮತ್ತು ಪಾಕಿಸ್ತಾನಗಳನ್ನು ಹತ್ತಿರವಾಗಿಸಲು ಪ್ರಯತ್ನಿಸುತ್ತಿದೆ. ಇದೂ ಎಷ್ಟು ದಿನದ ಆಟ ಎಂದು ಹೇಳಲಾಗದು. ಆದರೆ ಸದ್ಯಕ್ಕೆ ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಂಡು ನಮ್ಮ ಹಿತಾಸಕ್ತಿಗಳನ್ನು ವೃದ್ಧಿಸಿಕೊಳ್ಳುವುದು ನವದೆಹಲಿಯ ಮುಂದಿರುವ ಆಯ್ಕೆ. ಇದಕ್ಕಿರುವ ಸಾಧಕಬಾಧಕಗಳೇನು ಎನ್ನವುದು ಭಾರತದ ವಿದೇಶಾಂಗ ಮತ್ತು ರಕ್ಷಣಾ ವಲಯಗಳಲ್ಲಿ ಗಂಭೀರ ಮನಮಂಥನದ ವಿಷಯ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ರಾಜ್ಯ ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆ ಅಂತಿಮ; ಸಂಭಾವ್ಯರ ಪಟ್ಟಿ ಹೀಗಿದೆ

    ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮಾಜಿ ದಂಪತಿ; ಮತ್ತೆ ಒಂದಾಗ್ತಾರ ಈ ಸ್ಟಾರ್​ ಕಪಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts