More

    ನಾಡಿನ ಅನರ್ಘ್ಯ ರತ್ನ ಜಾನಪದ

    ಕಡೂರು: ಜಾನಪದ ಎಂಬುದು ನಮ್ಮ ನಾಡಿನ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಅನರ್ಘ್ಯ ರತ್ನವಿದ್ದಂತೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.

    ತಾಲೂಕಿನ ಯಗಟಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ದ್ವಿತೀಯ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
    ಜಾನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳಿವೆ. ಜಾನಪದ ನಮ್ಮ ಗ್ರಾಮೀಣ ಬದುಕಿನ ಪ್ರತೀಕ. ಇಂದಿಗೂ ಗ್ರಾಮೀಣ ಭಾಗದಲ್ಲಿ ಆಚರಣೆಗಳಿವೆ. ನಮ್ಮ ಗ್ರಾಮದೇವತೆಗಳು ಜ್ವಲಂತ ಪ್ರತಿನಿಧಿಗಳು. ದೇವರ ಜತೆ ಪ್ರೀತಿಯಿಂದ, ಭಾವನಾತ್ಮಕವಾಗಿ ಮಾತನಾಡುವ, ಬಯ್ಯುವ, ಚೇಡಿಸುವ ಶಕ್ತಿಯಿರುವುದು ನಮ್ಮ ಜಾನಪದರಿಗೆ ಮಾತ್ರ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳು ಮುಸುಕಾಗುತ್ತಿದೆಯೆಂಬ ಬೇಸರ ಕಾಡುತ್ತಿದೆ. ಆದರೆ ಜಾನಪದಕ್ಕೆ ಎಂದಿಗೂ ಅಳಿವಿಲ್ಲ ಎಂದರು.
    ಜಾನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಅದು ಮನುಷ್ಯನಿಗೆ ಬದುಕುವ ದಾರಿಯನ್ನು ತೋರಿಸುತ್ತದೆ ಎಂದು ಹಿರಿಯ ಜಾನಪದ ತಜ್ಞ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು. ಪ್ರಧಾನ ಉಪನ್ಯಾಸ ನೀಡಿದ ಅವರು, ಜಾನಪದರು ಎಲ್ಲರಿಗೂ ಒಳಿತನ್ನೇ ಬಯಸಿದರು. ಜನರು ಯಾವ ರೀತಿ ಜೀವಿಸಬೇಕು, ಯಾವುದು ತಪ್ಪು, ಯಾವುದು ಸರಿ, ಸಾಮಾಜಿಕ ಜವಾಬ್ದಾರಿಗಳೇನು, ಧಾರ್ಮಿಕ, ವೈಜ್ಞಾನಿಕವಾಗಿ ಹೇಗೆ ಜೀವಿಸಬೇಕು ಎಂಬುದನ್ನು ಸಮರ್ಥವಾಗಿ ಜಾನಪದ ಸಾಹಿತ್ಯ ತಿಳಿಸುತ್ತದೆ. ಜಾನಪದ ನಮ್ಮ ತಾಯಿಬೇರು. ಅದನ್ನು ಆಳವಾಗಿ ಅಭ್ಯಾಸ ಮಾಡಿದಷ್ಟೂ ನಮ್ಮ ಜ್ಞಾನದ ಮಟ್ಟ ಹೆಚ್ಚುತ್ತದೆ ಎಂದು ಬಣ್ಣಿಸಿದರು.
    ಜಾನಪದ ಎಂಬುದು ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಗ್ರಾಮೀಣ ಬದುಕಿನ ಕೈಗನ್ನಡಿಯಾದ ಜಾನಪದ ಕಲೆಗಳು ಇಂದು ನೇಪಥ್ಯಕ್ಕೆ ಸರಿಯುತ್ತಿವೆ. ಆಧುನೀಕರಣದ ಭರಾಟೆಯಲ್ಲಿ ಜಾನಪದ ಸಂಸ್ಕೃತಿ ಅವಗಣನೆಗೆ ಒಳಗಾಗಿದೆ ಎಂದು ತಾಲೂಕು ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಕುಂಕನಾಡು ಓಂಕಾರಮೂರ್ತಿ ಬೇಸರ ವ್ಯಕ್ತಪಡಿಸಿದರು. ಇಂದಿನ ಯುವಪೀಳಿಗೆಯಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಜಾನಪದ ಗೀತೆಗಳಲ್ಲಿರುವ ಜೀವನಾನುಭವ ನಮ್ಮ ಯುವಜನತೆಗೆ ದಾರಿದೀಪವಾಗಬೇಕು. ಅರ್ಥವಿಲ್ಲದ ರಚನೆಗಳಿಗೆ ಮೈಮರೆಯುವ ಬದಲು ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಕಲೆ, ಗೀತೆಗಳು, ಆಚರಣೆಗಳನ್ನು ಉಳಿಸಿಕೊಡಬೇಕು. ಈ ಮೂಲಕ ಜಾನಪದವನ್ನು ಜೀವಂತವಾಗಿಡಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
    ಜಾನಪದ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಮೂಲ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಹೆಕ್ಕಿ ತೆಗೆದು ಸಂಗ್ರಹಿಸಿದರೆ ಅದನ್ನು ಭವಿಷ್ಯದ ಪೀಳಿಗೆಯವರೆಗೂ ತಲುಪಿಸಲು ಸಾಧ್ಯ. ಇಂತಹ ರಚನಾತ್ಮಕ ಕೆಲಸದಲ್ಲಿ ಇಂದಿನ ಯುವಪೀಳಿಗೆ ಹೆಚ್ಚು ತೊಡಗಿಸಿಕೊಳ್ಳಬೇಕಿದೆ. ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧ ಇದೆ. ನಡೆ, ನುಡಿ ಸೇರಿ ವಿವಿಧ ಪ್ರಕಾರಗಳಲ್ಲಿ ಜಾನಪದ ಸಾಹಿತ್ಯಾತ್ಮಕ ಕಲೆಗಳು ಅಡಗಿದೆ ಎಂದರು.
    ಕಜಾಪ ತಾಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿ, ತಾಲೂಕಿನಲ್ಲಿ ಹಿರಿಯ ಜಾನಪದ ಕಲಾವಿದರನ್ನು ಒಂದೇ ವೇದಿಕೆಯಡಿ ಕರೆತರುವ ಪ್ರಯತ್ನದೊಂದಿಗೆ ಘಟಕವು ಕಾರ್ಯೋನ್ಮುಖವಾಗಿದ್ದು, ಸಮ್ಮೇಳನದಲ್ಲಿ ಸಾಕಾರಗೊಳಿಸಲಾಗಿದೆ. ಇದರ ಜತೆಗೆ ಕಲಾವಿದರನ್ನು ಗೌರವಿಸುವ ಮೂಲಕ ಜಾನಪದ ಕಲೆಗಳಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂದು ಹೇಳಿದರು.
    ಸಮ್ಮೇಳನಾಧ್ಯಕ್ಷ ಕುಂಕನಾಡು ಓಂಕಾರಮೂರ್ತಿ ಅವರನ್ನು ಅಲಂಕೃತ ಸಾರೋಟಿನಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಯಗಟಿ ಗ್ರಾಪಂ ಅಧ್ಯಕ್ಷೆ ಕಲಾವತಿ ವೆಂಕಟೇಶ್ ಮೆರವಣಿಗೆಯನ್ನು ಉದ್ಘಾಟಿಸಿದರು. ಭಜನಾ ತಂಡದ ಮಹಿಳಾ ಪದಾಧಿಕಾರಿಗಳು ಪೂರ್ಣಕುಂಭದೊಂದಿಗೆ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿದರು. ಜಾನಪದ ವಸ್ತುಗಳ ಪ್ರದರ್ಶನ ಸಾರ್ವಜನಿಕರ ಗಮನಸೆಳೆಯಿತು.
    ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ, ಎಸ್.ಎಸ್.ವೆಂಕಟೇಶ್, ನಿವೃತ್ತ ತಹಸೀಲ್ದಾರ್ ಡಾ. ಲಕ್ಷ್ಮೀನಾರಾಯಣಪ್ಪ, ಎಸ್.ಸಿ ಲೊಕೇಶ್, ವೈ.ಎಸ್.ರವಿಪ್ರಕಾಶ್, ಜಾನಪದ ಕಲಾವಿದರಾದ ಚಿಕ್ಕಬಾಸೂರು ಚೌಡಮ್ಮ, ಡಾ. ಮಾಳೇನಹಳ್ಳಿ ಬಸಪ್ಪ, ಯರದಕೆರೆ ರಾಜಪ್ಪ, ಕೋಡಿಹಳ್ಳಿ ಮಹೇಶ್ವರಪ್ಪ, ಚನ್ನಪಿಳ್ಳೆ ಗೋವಿಂದಪ್ಪ, ಚಿಕ್ಕನಲ್ಲೂರು ಜಯಣ್ಣ, ತಿಪ್ಪೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts