More

    ನ್ಯಾನೋಗೆ ಟಾಟಾ ಹೇಳಿದ್ದ ಸಿಂಗೂರಲ್ಲಿ ತ್ರಿಕೋನ ಕದನ

    | ರಾಘವ ಶರ್ಮ ನಿಡ್ಲೆ ಸಿಂಗೂರು (ಪ.ಬಂಗಾಳ)

    ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾದಿಂದ 45 ಕಿಮೀ ದೂರದ ಹೂಗ್ಲಿ ಜಿಲ್ಲೆಯಲ್ಲಿದೆ ಸಿಂಗೂರು ಗ್ರಾಮ. ಇಲ್ಲಿನ 997.11 ಎಕರೆ ಕೃಷಿ ಜಮೀನಲ್ಲಿ ಟಾಟಾ ಸಂಸ್ಥೆ ನ್ಯಾನೋ ಕಾರು ನಿರ್ಮಾಣ ಕಾರ್ಖಾನೆ ಸ್ಥಾಪಿಸುವುದರ ವಿರುದ್ಧ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ರಣಚಂಡಿಯಂತೆ ಹೋರಾಟ ಮಾಡಿದ್ದರು. ಎಡಪಕ್ಷಗಳ ನಾಯಕ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಸರ್ಕಾರವನ್ನು ರಾಜ್ಯದಲ್ಲಿ ಕಿತ್ತೊಗೆದು, 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬರಲು ನಂದಿಗ್ರಾಮ ಹೋರಾಟದಂತೆ, ಸಿಂಗೂರು ಜಮೀನು ರಕ್ಷಣೆ ಚಳವಳಿ ವಹಿಸಿದ್ದ ಪಾತ್ರ ಈಗ ಇತಿಹಾಸ.

    2005ರಿಂದ 2021ರ ಅವಧಿಯಲ್ಲಿ ಬಂಗಾಳದ ಹೂಗ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 10 ವರ್ಷಗಳ ಕಾಲ ತಂತಿ ಬೇಲಿಗಳಿಂದ ಪ್ರವೇಶ ನಿಷೇಧದ ವಲಯವಾಗಿದ್ದ ಜಮೀನಿನ ಕೆಲವು ಕಡೆ ಈಗ ರೈತರು ಕೃಷಿಯಲ್ಲಿ ತೊಡಗಿಕೊಂಡಿದ್ದರೆ, ಮತ್ತೆ ಕೆಲವೆಡೆ ಖಾಲಿ ಭೂಮಿ ಎದ್ದುಕಾಣುತ್ತದೆ. ಆರಂಭಿಕ ವರ್ಷಗಳಲ್ಲಿ ನ್ಯಾನೋ ಫ್ಯಾಕ್ಟರಿ ಕೆಲಸ ಆರಂಭಿಸಿದ್ದರಿಂದ ಅಲ್ಲಿನ ಕಾಂಕ್ರೀಟಿಕರಣದ ಪರಿಣಾಮ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಪರಿಣಾಮ ಆ ಜಮೀನಲ್ಲಿ ಏನು ಬೆಳೆದರೂ ಫಲ ಸಿಗುತ್ತಿಲ್ಲ. ಮತ್ತೆ ಕೆಲವೆಡೆ ಆಲೂಗಡ್ಡೆ, ಅಕ್ಕಿ, ಜೋಳ, ಎಳ್ಳು ಸೇರಿದಂತೆ ವಿವಿಧ ತರಕಾರಿಗಳ ಕೃಷಿ ಮಾಡುತ್ತಾ, ರೈತರು ತೃಪ್ತಿಕರ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಕೈಗಾರಿಕೆಯೂ ಬರಬೇಕು, ತಮ್ಮ ವಿದ್ಯೆಗೆ ತಕ್ಕಂತೆ ನೌಕರಿ ಸಿಗಬೇಕು ಎಂಬ ಆಶಯವನ್ನು ಯುವಕರು ವ್ಯಕ್ತಪಡಿಸುತ್ತಾರೆ.

    ನ್ಯಾನೋಗೆ ಟಾಟಾ ಹೇಳಿದ್ದ ಸಿಂಗೂರಲ್ಲಿ ತ್ರಿಕೋನ ಕದನ2006ರಲ್ಲಿ ಟಾಟಾ ಸಂಸ್ಥೆಗೆ ಕೆಲ ರೈತರು ಸ್ವಇಚ್ಛೆಯಿಂದ ಜಮೀನು ನೀಡಿದ್ದರೆ, ಮತ್ತೆ ಕೆಲವರು ಸಾಧ್ಯವೇ ಇಲ್ಲ ಎಂದು ಪ್ರತಿಭಟನೆಗಿಳಿದಿದ್ದರು. ಅವರ ಬೆಂಬಲಕ್ಕೆ ನಿಂತ ಮಮತಾ, 25 ದಿನಗಳ ಕಾಲ ನಡೆಸಿದ್ದ ಐತಿಹಾಸಿಕ ಉಪವಾಸವನ್ನಂತೂ ಬಂಗಾಳ ಮರೆಯಲು ಸಾಧ್ಯವಿಲ್ಲ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಉಪವಾಸ ಕೈಬಿಡುವಂತೆ ದೀದಿಗೆ ಕೋರಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಪತ್ರ ಬರೆದು, ಉಪವಾಸ ನಿಲ್ಲಿಸಲು ವಿನಂತಿಸಿಕೊಂಡಿದ್ದರು. 2008ರಲ್ಲಿ ಸಿಂಗೂರು ಫ್ಯಾಕ್ಟರಿ ಯೋಜನೆ ಕೈಬಿಟ್ಟ ಟಾಟಾ ಸಂಸ್ಥೆಗೆ ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿ ಆಹ್ವಾನ ನೀಡಿದ್ದರಿಂದ ನ್ಯಾನೋ ಕಾರ್ಖಾನೆ ಗುಜರಾತ್​ನಲ್ಲಿ ತಲೆಯೆತ್ತಿತು.

    ‘ಇದು ಕೃಷಿ ಭೂಮಿಯಾಗಿದ್ದರೂ, ಸಿಪಿಎಂ ಸರ್ಕಾರದ ಗೂಂಡಾಗಳು ನಮ್ಮಿಂದ ಒತ್ತಾಯಪೂರ್ವಕವಾಗಿ ಭೂಮಿ ಕಸಿದುಕೊಂಡಿದ್ದರು. ಹಿಂಸಾಚಾರ ಜೋರಾಗಿ ನಾನು 2 ವರ್ಷದ ಮಗಳನ್ನು ಎತ್ತಿಕೊಂಡು ಈ ಸ್ಥಳದಿಂದ ಕಾಲ್ಕಿತ್ತಿದ್ದೆ. ಅಂಥ ಭಯಾನಕ ವಾತಾವರಣದಲ್ಲಿ ದೀದಿ ದುರ್ಗೆಯಂತೆ ಬಂದು ನಮ್ಮನ್ನು ಕಾಪಾಡಿದರು’ ಎಂದು ನೆನೆಯುತ್ತಾರೆ ವಿಕಾಸ್ ದಾಸ್. ತನ್ನ 2 ಎಕರೆ ಜಮೀನಿನಲ್ಲಿ ಆಲೂ, ಅಕ್ಕಿ ಬೆಳೆಯುತ್ತಿರುವ ದಾಸ್, ‘2011ರಲ್ಲಿ ಅಧಿಕಾರಕ್ಕೆ ಬಂದಲ್ಲಿಂದ ನಮಗೆ (ಸಿಂಗೂರು ರೈತರಿಗೆ) ತಿಂಗಳಿಗೆ 2000 ರೂ. ಮತ್ತು 16 ಕೆ.ಜಿ. ಅಕ್ಕಿಯನ್ನು ಟಿಎಂಸಿ ಸರ್ಕಾರ ನೀಡುತ್ತಿದೆ’ ಎಂದರು. ‘ಸಿಪಿಎಂನವರು ನಮ್ಮಿಂದ ಕನಿಷ್ಠ ಬೆಲೆಗೆ ಭೂಮಿ ಪಡೆದು ಅದನ್ನು ದುಪ್ಪಟ್ಟು ದರಕ್ಕೆ ಕಂಪನಿಗೆ ಮಾರಿದ್ದರು. ನಮಗೆ ಕೊಟ್ಟ ಹಣದ ಬಗ್ಗೆ ಯಾವುದೇ ದಾಖಲೆಪತ್ರಗಳನ್ನು ಕೊಟ್ಟಿರಲಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

    ನ್ಯಾನೋಗೆ ಟಾಟಾ ಹೇಳಿದ್ದ ಸಿಂಗೂರಲ್ಲಿ ತ್ರಿಕೋನ ಕದನರೈತರ ಜಮೀನು ವಾಪಸಾತಿಗೆ ಸಂಬಂಧಿಸಿ 2016ರಲ್ಲಿ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿತ್ತು. ಕನ್ನಡದವರೇ ಆದ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪು ಬರೆದಿತ್ತು. 2011ರಲ್ಲಿ ಚುನಾವಣೆ ಗೆದ್ದ 25 ದಿನಗಳಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ, ಸಿಂಗೂರು ಜಮೀನು ಪುನರುಜ್ಜೀವನ ಮತ್ತು ಅಭಿವೃದ್ಧಿ ವಿಧೇಯಕವನ್ನು ಅನುಮೋದಿಸಿತ್ತು. ಆದರೆ ಈ ವಿಧೇಯಕವನ್ನು ರಾಜ್ಯ ಹೈಕೋರ್ಟ್ ಅಸಾಂವಿಧಾನಿಕ ಎಂದು ಸಾರಿತು. ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿ 2016ರಲ್ಲಿ ಯಶಸ್ಸು ಕಂಡಿತು. ಆದರೆ, 10 ವರ್ಷಗಳ ಕಾಲ ಖಾಲಿ ಬಿದ್ದಿದ್ದ ಜಮೀನಲ್ಲಿ ಕೃಷಿ ಸುಲಭವೇನಾಗಿರಲಿಲ್ಲ. ಕೊಲ್ಕತಾ ಸೇರಿ ಬೇರೆ ಬೇರೆ ನಗರ, ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲ ಕೃಷಿಕರು ಮೂಲ ವೃತ್ತಿಗೆ ವಾಪಸಾದರು. ಕಲ್ಲು, ಸಿಮೆಂಟ್, ಕಬ್ಬಿಣದ ತುಂಡುಗಳಿಂದ ತುಂಬಿದ್ದ ಜಮೀನನ್ನು ಸ್ವಚ್ಛಗೊಳಿಸಿದರು. ‘25-30 ಸಾವಿರ ರೂ. ಖರ್ಚು ಮಾಡಿ ಭೂಮಿ ಸರಿಮಾಡಿ ಈಗ ಅಕ್ಕಿ, ಆಲೂಗಡ್ಡೆ ಬೆಳೆಯುತ್ತಿದ್ದೇನೆ. 10 ವರ್ಷ ಕೊಲ್ಕತ್ತಾದಲ್ಲಿ ಬೇರೆ ಕೆಲಸ ಮಾಡುತ್ತಿದ್ದೆ’ ಎಂದರು 63 ವರ್ಷದ, ಪಕ್ಕದ ಬೇರಾಬೇರಿ ಗ್ರಾಮದ ಅಶೋಕ್ ಕುಮಾರ್ ದಾಸ್. ಕೆಲ ಜಮೀನಲ್ಲಿ ಕೃಷಿ ಅಸಾಧ್ಯವಾಗಿರುವುದರಿಂದ ಆ ರೈತರು ಭೂಮಿಯ ಮಾರಾಟಕ್ಕೂ ಮುಂದಾಗಿದ್ದಾರೆ.

    ಜಮೀನು ನೀಡಲು ಹಿಂದೇಟು ಹಾಕಿದ್ದ ಮಾಲೀಕರು ಮತ್ತು ಅಲ್ಲಿ ದುಡಿಯುತ್ತಿದ್ದ ಬಹುತೇಕ ಕಾರ್ವಿುಕರು, ‘ನಮ್ಮ ಮತ ದೀದಿಗೇ’ ಎನ್ನುತ್ತಾರೆ. ಆದರೆ, ಸಿಂಗೂರು ಅಭಿವೃದ್ಧಿಯೆಡೆಗೆ ಮುಖ ಮಾಡಲೇ ಇಲ್ಲ ಎಂದು ವಾದಿಸುವ ಬಿಜೆಪಿ ಮತ್ತು ಸಿಪಿಎಂ, ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿ ವಿದ್ಯಾವಂತ ಯುವಕರಿಗೆ ನೌಕರಿ ಕೊಡುವ ಭರವಸೆ ನೀಡುತ್ತಿವೆ.

    ಸಿಂಗೂರು ಹೋರಾಟದಲ್ಲಿ ಮಮತಾ ಜತೆಗಿದ್ದು, ಹಲವು ಬಾರಿ ಶಾಸಕರಾಗಿದ್ದ 89 ವರ್ಷದ ರವೀಂದ್ರನಾಥ್ ಭಟ್ಟಾಚಾರ್ಯ ಈ ಬಾರಿ ಬಿಜೆಪಿ ಸೇರಿದ್ದಾರೆ. ಸ್ಥಳೀಯ ಟಿಎಂಸಿ ಮುಖಂಡ ಬೇಚರಮ್ ಮನ್ನಾಗೆ (52) ಟಿಕೆಟ್ ನೀಡಿದ್ದರಿಂದ ಸಿಟ್ಟಾದ ಭಟ್ಟಾಚಾರ್ಯ ಕಮಲದಿಂದ ಕಣಕ್ಕಿಳಿದಿದ್ದಾರೆ. ‘ಭಟ್ಟಾಚಾರ್ಯಗೆ ನಡೆಯಲೂ ಆಗುವುದಿಲ್ಲ. ಇಬ್ಬರು ಕೈ ಹಿಡಿದು ವೇದಿಕೆ ಹತ್ತಿಸಬೇಕು. ಬೇರೆಯವರಿಗೆ ಅವಕಾಶ ನೀಡಬಾರದೆ? ಹಣಕ್ಕಾಗಿ ಟಿಎಂಸಿ ಬಿಟ್ಟು ವಿಶ್ವಾಸದ್ರೋಹ ಎಸಗಿದ ಅವರನ್ನು ಎಂದಿಗೂ ಒಪ್ಪಲಾರೆವು’ ಎಂದರು ಸಿಂಗೂರಿನ ರೈತ ಆನಂದ್ ದಾಸ್. ಅವರ 7 ಎಕರೆ ಜಮೀನಲ್ಲಿ ಕೆಲಸ ಮಾಡಲು ಪಕ್ಕದ ವರ್ಧಮಾನ್ ಜಿಲ್ಲೆಯಿಂದ ಕಾರ್ವಿುಕರು ಬರುತ್ತಾರೆ. 300 ರೂ. ದಿನಗೂಲಿ ನೀಡಲಾಗುತ್ತಿದೆ. ‘ರವೀಂದ್ರನಾಥ್ ಭಟ್ಟಾಚಾರ್ಯ-ಬೇಚರಮ್ ಮನ್ನಾ ಇಬ್ಬರೂ ಸಿಪಿಎಂ ಗೂಂಡಾಗಳ ವಿರುದ್ಧ ಹೋರಾಡಿ ನಮಗೆ ನ್ಯಾಯ ಒದಗಿಸಿದರು. ಈಗ ಇಬ್ಬರೂ ಚುನಾವಣೆ ಗೆಲುವಿಗಾಗಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಯಾರಿಗೆ ಮತ ನೀಡುವುದು ಗೊತ್ತಾಗುತ್ತಿಲ್ಲ’ ಎಂದು ಗೋಪಾಲ್​ನಗರ ನಿವಾಸಿ ಜೈದೀಪ್ ಬೇಸರ ವ್ಯಕ್ತಪಡಿಸುತ್ತಾರೆ.

    ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟದಿಂದ ಸಿಪಿಐ-ಎಂ ಅಭ್ಯರ್ಥಿ 37 ವರ್ಷದ ಶ್ರೀಜನ್ ಭಟ್ಟಾಚಾರ್ಯ ಕಣದಲ್ಲಿದ್ದು, ಇಲ್ಲಿನ ಶೇ.12ರಷ್ಟಿರುವ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದು ಮತಗಳು ಬಿಜೆಪಿ ಮತ್ತು ಟಿಎಂಸಿ ಮಧ್ಯೆ ವಿಭಜನೆಗೊಳ್ಳಲಿದ್ದು, ಸಿಪಿಐ-ಎಂಗೆ ಲಾಭವಾಗಲಿದೆ ಎಂದು ನಂಬಿದ್ದಾರೆ. ಟಿಎಂಸಿ ಅಭ್ಯರ್ಥಿ ಮನ್ನಾ ಸ್ಥಳೀಯರಾಗಿದ್ದರೂ, ರೈತರ ಮನದಲ್ಲಿ ದೀದಿಯೇ ತುಂಬಿಕೊಂಡಿದ್ದಾರೆ. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಹೂಗ್ಲಿ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಗೆದ್ದಿದ್ದರು. ಅಲ್ಲದೆ, ಸಿಂಗೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಗಿಂತ ಬಿಜೆಪಿ 10 ಸಾವಿರ ಮತಗಳಿಂದ ಮುಂದಿತ್ತು. ಆದರೆ, ವಿಧಾನಸಭೆ ಚುನಾವಣೆಯನ್ನು ಮತದಾರರು ಬೇರೆಯದೇ ದೃಷ್ಟಿಯಿಂದ ನೋಡುವುದರಿಂದ 2019ರ ಮಾದರಿಯಲ್ಲೇ ವೋಟು ಹಾಕುತ್ತಾರೆ ಎನ್ನಲಾಗದು.

    ಅತ್ಯಾಚಾರ ಎಸಗಿ ಸುಟ್ಟು ಹಾಕಿದ್ದರು: ‘ಟಾಟಾ ಸಂಸ್ಥೆಗೆ ಜಮೀನು ನೀಡಲ್ಲ ಎಂದಿದ್ದಕ್ಕೆ 2006ರಲ್ಲಿ ಸಿಪಿಎಂ ಗೂಂಡಾಗಳು 17 ವರ್ಷದ ತಾಪಸಿ ಮಲಿಕ್ ಎಂಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಸಿಂಗೂರು ಜಮೀನಲ್ಲಿ ಆಕೆಯ ಸುಟ್ಟು ಹೋದ ದೇಹ ಪತ್ತೆಯಾಗಿತ್ತು. ಅದಕ್ಕೇ ದೀದಿ 25 ದಿನ ಉಪವಾಸ ಕೂತರು. ನಾನೂ ಅದಕ್ಕೆ ಸಾಕ್ಷಿಯಾಗಿದ್ದೆ’ ಎನ್ನುವ ಬೇರಾಬೇರಿ ಗ್ರಾಮದ ಸ್ವಪನ್ ಬಾಗ್, ‘ನಾನು ವಾಜಪೇಯಿ ಅಭಿಮಾನಿ. ಆದರೆ, ಈಗಿನ ಪ್ರಧಾನಿ ಬಗ್ಗೆ ಅದೇ ಅಭಿಪ್ರಾಯ ಹೊಂದಿಲ್ಲ. ಸಿಪಿಎಂ ಗೂಂಡಾಗಳನ್ನು ಓಡಿಸಿದ ಈ ರಾಜ್ಯಕ್ಕೆ ದೀದಿಯೇ ಸೂಕ್ತ’ ಎಂದರು. ತಾಪಸಿ ಮಲಿಕ್ ತಂದೆ ಮನೋರಂಜನ್ ಮಲಿಕ್ ಕೂಡ ದೀದಿಯನ್ನು ಶ್ಲಾಘಿಸಿ, ‘ನನ್ನ ಇಬ್ಬರು ಗಂಡು ಮಕ್ಕಳಿಗೆ ಕೆಲಸ ಕೊಡಿಸಿದ್ದಲ್ಲದೆ, ಸರ್ಕಾರಿ ಭೂಮಿಯಲ್ಲಿ ಅಂಗಡಿ ತೆರೆಯಲು ಅವಕಾಶ ಮಾಡಿದರು. ಹಾಗಂತ, ಟಿಎಂಸಿಯ ಉಳಿದ ನಾಯಕರು ದೀದಿಯಂತೆ ಸರಳ, ಉದಾರ ವ್ಯಕ್ತಿಗಳಲ್ಲ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts