More

    ದುಬೈ ರಾಜಕುಮಾರಿಯ ಪಲಾಯನದ ಕಥೆ-ವ್ಯಥೆ

    ಜಾಗತಿಕ ಮನ್ನಣೆ ಇರುವ ‘ದಿ ನ್ಯೂಯಾರ್ಕರ್’ ಎಂಬ ಅಮೆರಿಕದ ವಾರಪತ್ರಿಕೆಯಲ್ಲಿನ ಇತ್ತೀಚಿನ ವರದಿಯೊಂದು ದುಬೈನ ಅಮೀರ್ (ಅರಬ್ ಸಂಯುಕ್ತ ಸಂಸ್ಥಾನ ರಾಷ್ಟ್ರದಲ್ಲಿನ ದುಬೈ ರಾಜ್ಯದ ಮುಖ್ಯಸ್ಥ) ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ ಶೇಖಾ ಲತೀಫಾ ಬಿಂತ್ ಮೊಹಮ್ಮದ್ ಅಲ್ ಮಕ್ತೌಮ್ ಅವರ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ. ‘ದಿ ಫ್ಯುಗಿಟಿವ್ ಪ್ರಿನ್ಸೆಸ್ ಆಫ್ ದುಬೈ’ (ಪಲಾಯನಗೈದ ದುಬೈ ರಾಜಕುಮಾರಿ) ಎಂಬ ಶೀರ್ಷಿಕೆಯುಳ್ಳ ಲೇಖನವು ಲತೀಫಾ, ತಂದೆಯ ವಿರುದ್ಧದ ದಂಗೆ, ದುಬೈನಿಂದ ತಪ್ಪಿಸಿಕೊಳ್ಳುವ ಪ್ರಯತ್ನ, ಅಪಹರಣ ಮತ್ತು ಸೆರೆಹಿಡಿಯುವಿಕೆಯ ಕಥೆಯನ್ನು ವಿವರಿಸುತ್ತದೆ. ದುಬೈನ ಲಿಂಗ ಸಮಾನತೆಯ ಪ್ರತಿಪಾದನೆ ಮತ್ತು ಅಮೀರನ ಆಧುನಿಕತಾವಾದಿ ದೃಷ್ಟಿಕೋನಗಳ ವಿಷಾದಕರ ಚಿತ್ರಣವನ್ನು ವರದಿ ಬಿಂಬಿಸಿದೆ.

    ಲತೀಫಾ ಸಂಕಟವು ದುಬೈನ ರಾಜಮನೆತನದ ಅನೇಕ ಮಹಿಳೆಯರಂತೆಯೇ ಇದೆ. ಹೊರನೋಟಕ್ಕೆ ಅವರು ಎಲ್ಲವನ್ನೂ ಹೊಂದಿದ್ದಾರೆ. ಲಂಡನ್​ನಲ್ಲಿ ಉನ್ನತ ವಲಯಗಳಲ್ಲಿ ಓಡಾಡುತ್ತಾರೆ; ವೈಭವದ ಜೀವನ ನಡೆಸುತ್ತಾರೆ. ಆದರೆ, ತಮ್ಮ ಜೀವನವನ್ನು ನಿರ್ಧರಿಸುವ ಸ್ವಾತಂತ್ರ್ಯ ಅವರಿಗಿಲ್ಲ. ದುಬೈನ ರಾಜಮನೆತನದ ನಿರ್ಬಂಧಿತ ಗಡಿಗಳನ್ನು ಮೀರಿ ಹೆಜ್ಜೆ ಹಾಕಲಾಗದು. ಮುಖ್ಯವಾಗಿ ಅಮೀರ್ ಶೇಖ್ ಮೊಹಮ್ಮದ್​ಗೆ ಅವಿಧೇಯರಾಗುವುದಂತೂ ಸಾಧ್ಯವೇ ಇಲ್ಲ.

    ಸೋದರಿಗೂ ಸಮಸ್ಯೆ: ಲತೀಫಾ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕುವ ಮೊದಲು, ಆಕೆಯ ಸಹೋದರಿ ಶಮ್ಸಾ ಕೂಡ ಇದೇ ರೀತಿ ಪ್ರಯತ್ನಿಸಿ ಸಿಕ್ಕಿಬಿದ್ದು ಒಂದು ವರ್ಷ ಜೈಲಿನಲ್ಲಿದ್ದರು. ಆಕೆ ಜೈಲುವಾಸದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡಿದ್ದಳು ಎನ್ನುತ್ತಾರೆ ಲತೀಫಾ.

    2021ರಲ್ಲಿ ಯುರೋಪ್​ನ ಸಾರ್ವಜನಿಕ ಸ್ಥಳಗಳಲ್ಲಿ ಲತೀಫಾ ಅವರ ಛಾಯಾಚಿತ್ರಗಳನ್ನು ಕ್ಲಿಕ್ಕಿಸಲಾಗಿದೆ. ತಂದೆ ಜತೆ ರಾಜಿ ಮಾಡಿಕೊಂಡ ನಂತರ ದುಬೈನಲ್ಲಿ ಅವರು ವಾಸಿಸುತ್ತಿದ್ದಾರೆ. ಈ ವರದಿಯಲ್ಲಿ ಲತೀಫಾ ಮಾತನಾಡುತ್ತಿರುವ ಹಳೆಯ ವೀಡಿಯೊಗಳನ್ನು ಹಾಗೂ ಸ್ನೇಹಿತರೊಂದಿಗೆ ನಡೆಸಿದ ಪತ್ರ ವ್ಯವಹಾರವನ್ನು ಬಳಸಿಕೊಳ್ಳಲಾಗಿದೆ.

    ಲತೀಫಾ ಹದಿಹರೆಯದಲ್ಲಿದ್ದಾಗ 2002ರಲ್ಲಿ ತಂದೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಮೊದಲ ಪ್ರಯತ್ನ ನಡೆಸಿದ್ದರು. ಓಮನ್ ದೇಶಕ್ಕೆ ಪರಾರಿಯಾಗಿ, ಆ ಸಮಯದಲ್ಲಿ ಜೈಲಿನಲ್ಲಿದ್ದ ಸಹೋದರಿ ಶಮ್ಸಾಳನ್ನು ಬಿಡುಗಡೆ ಮಾಡಲು ವಕೀಲರ ಸಹಾಯ ಪಡೆಯಲು ಯೋಜಿಸಿದ್ದರು. ಸಿಕ್ಕಿಬಿದ್ದ ನಂತರ ಆಕೆಗೆ ಹೊಡೆಯಲಾಗಿತ್ತು. ಅಲ್ಲದೆ, ಮೂರು ವರ್ಷಗಳ ಕಾಲ ಸೆರೆಯಲ್ಲಿಟ್ಟಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

    ಸೆರೆಯಿಂದ ಬಿಡುಗಡೆಯಾದ ನಂತರವೂ ಲತೀಫಾ ಸಂಪೂರ್ಣ ಸ್ವಾತಂತ್ರ್ಯ ಹೊಂದಿರಲಿಲ್ಲ. ನಿರಂತರ ಕಣ್ಗಾವಲಿನಲ್ಲಿದ್ದರು. ಅವರ ಭೇಟಿಗಳನ್ನೆಲ್ಲ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಇದರಿಂದ ಲತೀಫಾ ಮತ್ತೆ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿ, ತಯಾರಿಗೆ ಮುಂದಾದರು. ಕಠಿಣ ದೈಹಿಕ ತರಬೇತಿ ಪಡೆದುಕೊಂಡರು. ಈ ಹಿಂದೆ ದುಬೈನಿಂದ ತಪ್ಪಿಸಿಕೊಂಡ ಮಹಿಳೆ ಜತೆ ಸ್ನೇಹ ಬೆಳೆಸಿದರು.

    ಅಂತಿಮವಾಗಿ 2018ರಲ್ಲಿ, ಲತೀಫಾ ತನ್ನ ತರಬೇತುದಾರಳಾದ ಆಪ್ತ ಸ್ನೇಹಿತೆ ಟಿನಾ ಜೌಹಿಯಾನೆನ್ ಜತೆಗೆ ದುಬೈನಿಂದ ಪಲಾಯನ ಪ್ರಯತ್ನವನ್ನು ಮಾಡಿದರು. ಅವರು ಓಮನ್​ಗೆ ಕಾರಿನ ಡಿಕ್ಕಿಯಲ್ಲಿ ಪ್ರಯಾಣಿಸಿದರು. ಅಲ್ಲಿಂದ ಇಬ್ಬರೂ ರಬ್ಬರ್ ಬೋಟ್​ನಲ್ಲಿ ಸಾಗಿ, ನಾಸ್ಟ್ರೋಮೋ ಎಂಬ ವಿಹಾರ ನೌಕೆಯನ್ನು ಏರಿದರು.

    ನಾಸ್ಟ್ರೋಮೊಗೆ ಹತ್ತುವ ಮೊದಲು ಲತೀಫಾ ತನ್ನ ತಂದೆಯನ್ನು ಟೀಕಿಸುವ ಹಲವಾರು ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದರು. ಬೌಚ್ರಾ ಕೊಲೆ, ಶಮ್ಸಾ ಮತ್ತು ತಮ್ಮನ್ನು ಅಪಹರಿಸಿ ಚಿತ್ರಹಿಂಸೆ ಸೇರಿದಂತೆ ಅನೇಕ ಅಪರಾಧಗಳನ್ನು ಎಸಗಿರುವ ಆರೋಪ ಮಾಡಿದ್ದರು. ಈ ವೀಡಿಯೋಗಳು ನಂತರ ಜಾಗತಿಕವಾಗಿ ಗಮನ ಸೆಳೆದವು.

    ಲತೀಫಾ ಭಾರತ ಮತ್ತು ಶ್ರೀಲಂಕಾಕ್ಕೆ ತೆರಳಲು ಯೋಜನೆ ರೂಪಿಸಿಕೊಂಡಿದ್ದರು. ಇಲ್ಲಿ ನಕಲಿ ಪಾಸ್​ಪೋರ್ಟ್ ಬಳಸಿ ಅಮೆರಿಕಕ್ಕೆ ತೆರಳಿ ಆಶ್ರಯ ಪಡೆಯುವುದು ಈ ಯೋಜನೆಯಲ್ಲಿತ್ತು. ಆದರೆ, ಯೋಜನೆ ವಿಫಲವಾಯಿತು. ಲತೀಫಾ ಪರಾರಿಯಾಗಿದ್ದಾಳೆ ಎಂದು ತಿಳಿದ ನಂತರ ದುಬೈ ಅಧಿಕಾರಿಗಳು ಪತ್ತೆ ಹಚ್ಚಲು ತೀವ್ರ ಪ್ರಯತ್ನ ಆರಂಭಿಸಿದರು. ಗೋವಾದ ಕರಾವಳಿಯಿಂದ ಅಂದಾಜು 50 ಕಿ.ಮೀ. ಅಂತರದಲ್ಲಿರುವಾಗ ವಿಹಾರ ನೌಕೆ ಪತ್ತೆಯಾಯಿತು.

    ಗೋವಾ ಬಳಿ ಕಮಾಂಡೊಗಳಿಂದ ಸೆರೆ?

    ಗೋವಾ ಬಳಿ ವಿಹಾರ ನೌಕೆಯನ್ನು ಪತ್ತೆ ಮಾಡಿದ ನಂತರ ಶೇಖ್ ಮೊಹಮ್ಮದ್ ಅವರು ಭಾರತ ಸರ್ಕಾರದ ಜತೆ ಮಾತನಾಡಿದರು. ತಮ್ಮ ಮಗಳನ್ನು ಸೆರೆಹಿಡಿದುಕೊಡುವ ಬದಲಾಗಿ ದುಬೈ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿಯನ್ನು ಹಸ್ತಾಂತರಿಸಲು ಒಪ್ಪಿಕೊಂಡರು. ಭಾರತ ಸರ್ಕಾರವು ದೋಣಿಗಳು, ಹೆಲಿಕಾಪ್ಟರ್​ಗಳು ಮತ್ತು ಶಸ್ತ್ರಸಜ್ಜಿತ ಕಮಾಂಡೋಗಳ ತಂಡವನ್ನು ಲತೀಫಾರನ್ನು ಸೆರೆಹಿಡಿಯಲು ನಿಯೋಜಿಸಿತು ಎಂದು ವರದಿ ಹೇಳಿದೆ. ಗೋವಾದ ಬಳಿ ವಶಕ್ಕೆ ಪಡೆದ ನಂತರ ಲತೀಫಾ ಅವರನ್ನು ಸಮಾಧಾನಪಡಿಸಿ ತಂದೆಯ ಬಳಿಗೆ ಕರೆದೊಯ್ಯಲಾಯಿತು. ಟಿನಾ ಜೌಹಿಯಾನೆನ್ ಅವರು ಇಂಗ್ಲೆಂಡ್​ಗೆ ತೆರಳಿ, ಲತೀಫಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮುಂದುವರಿಸಿದರು.

    ಲೈಂಗಿಕ ವಿಕೃತಿಯ ಆರೋಪ

    ಅನೇಕ ಮಹಿಳೆಯರು, ಅಪ್ರಾಪ್ತ ವಯಸ್ಸಿನ ಹುಡುಗಿಯರ ಚಿತ್ರಹಿಂಸೆ ಮತ್ತು ಅತ್ಯಾಚಾರ ಸೇರಿದಂತೆ ಶೇಖ್​ನ ಲೈಂಗಿಕ ವಿಕೃತಿಗಳ ಬಗ್ಗೆಯೂ ನ್ಯೂಯಾರ್ಕರ್ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 26 ವರ್ಷದ ಮಹಿಳೆಯೊಬ್ಬರು ಬ್ರಿಟನ್​ನಲ್ಲಿರುವ ಶೇಖ್​ಗೆ ಸೇರಿದ ಕಟ್ಟಡದಲ್ಲಿ ಬಂಧಿಯಾಗಿದ್ದರು. ಅಲ್ಲದೆ, ದುಬೈ ರಾಜಮನೆತನದ ಸದಸ್ಯರಿಂದ ಪದೇಪದೆ ಅತ್ಯಾಚಾರಕ್ಕೊಳಗಾಗಿದ್ದರು ಎಂದು ವರದಿಯಾದರೂ ಬ್ರಿಟಿಷ್ ಆಡಳಿತದ ಪ್ರತಿಕ್ರಿಯೆ ನೀರಸವಾಗಿತ್ತು. ಸರ್ಕಾರಗಳ ಮಟ್ಟದಲ್ಲಿ ಈ ವಿಷಯವನ್ನು ಇತ್ಯರ್ಥಪಡಿಸಲಾಯಿತು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ. ಇದಾದ ನಂತರವೂ ಶೇಖ್ ಅವರು ಬ್ರಿಟನ್ನಿನ ಕುದುರೆ ರೇಸ್ ಕೋರ್ಸ್​ಗಳಲ್ಲಿ, ಅಲ್ಲಿ ರಾಜಮನೆತನಕ್ಕೆ ಮೀಸಲಾದ ಬಾಕ್ಸ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

    ಕೊಲೆಯಾದರೆ ಬೌಚ್ರಾ?

    ಪತ್ರಿಕೆಯ ವರದಿಯು ಲತೀಫಾಳ ಚಿಕ್ಕಮ್ಮ ಬೌಚ್ರಾ ಅವರ ಕಥೆಯನ್ನೂ ಹೇಳುತ್ತದೆ. ಅವರು ಶೇಖ್ ಮೊಹಮ್ಮದ್ ಅವರ ಹಿರಿಯ ಸಹೋದರನನ್ನು ಮದುವೆಯಾಗಿದ್ದರು. ದುಬೈನಲ್ಲಿನ ನಿರ್ಬಂಧದಿಂದಾಗಿ ಅವರು ಎಂದಿಗೂ ಸುಖವಾಗಿ ಇರಲು ಸಾಧ್ಯವಾಗಲಿಲ್ಲ. ಅಲ್ಲದೆ, ಅವರ ಉಲ್ಲಂಘನೆಗಳನ್ನು ಸಹಿಸಲು ಕಷ್ಟಕರವಾದಾಗ ಶೇಖ್ ಮೊಹಮ್ಮದ್ ಆದೇಶದ ಮೇರೆಗೆ ಬೌಚ್ರಾರನ್ನು ಕೊಲ್ಲಲಾಯಿತು ಎಂದು ಆರೋಪಿಸಲಾಗಿದೆ.

    ನಿರ್ಲಕ್ಷ್ಯ ತೋರಿದ ಜಗತ್ತು

    ದುಬೈ ಮತ್ತು ಯುಎಇಯನ್ನು ಮಧ್ಯಪ್ರಾಚ್ಯದಲ್ಲಿನ ಆಧುನಿಕತೆಯ ಕೇಂದ್ರಗಳಾಗಿ ಜಗತ್ತು ಸ್ವೀಕರಿಸಿದೆ. ಹೀಗಾಗಿ, ಇಲ್ಲಿನ ಆಡಳಿತವು ಜನರ ದಮನ ಮಾಡುವುದನ್ನು ವಿಶೇಷವಾಗಿ, ರಾಜ ಮನೆತನದೊಳಗಿನ ದಬ್ಬಾಳಿಕೆಯನ್ನು ಜಗತ್ತು ನಿರ್ಲಕ್ಷಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2000ರ ದಶಕದ ಆರಂಭದಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಶಮ್ಸಾ ಪದೇಪದೆ ಸಂರ್ಪಸಿದ್ದರು. ಅವರು ತಪ್ಪಿಸಿಕೊಂಡು ಆಶ್ರಯ ಪಡೆಯಲು ಪ್ರಯತ್ನಿಸಿದ್ದರು. ಲತೀಫಾ ಕಥೆಯು ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಾಗ, ಅವರ ಸ್ಥಿತಿಗತಿ ಅರಿಯಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಾಜಿ ಹೈಕಮಿಷನರ್ ಮೇರಿ ರಾಬಿನ್ಸನ್ ಭೇಟಿ ಮಾಡಿದರು. ನಂತರ ಬಿಬಿಸಿ ಜತೆ ಮಾತನಾಡಿದ ರಾಬಿನ್ಸನ್, ‘ಲತೀಫಾ ದುರ್ಬಲ, ತೊಂದರೆಗೊಳಗಾದ ಮಹಿಳೆ. ವಿಡಿಯೋ ಮಾಡಿದ್ದಕ್ಕಾಗಿ ಈಗ ಆಕೆ ವಿಷಾದಿಸುತ್ತಿದ್ದಾಳೆ’ ಎಂದು ಹೇಳಿದ್ದರು.

    VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts