More

    ಮನ್ನಣೆಯ ದಾಹ: ಪದ್ಮಪ್ರಶಸ್ತಿಯಿಂದ ನಾಡೋಜದವರೆಗೂ…

    ಸಾಮಾಜಿಕ ಜೀವನದಲ್ಲಿ ಅನೇಕ ಕಾರಣಗಳು, ಅವಶ್ಯಕತೆಗಳಿಂದ ಪ್ರಶಸ್ತಿ, ಗೌರವ, ಮನ್ನಣೆಗಳು ಹುಟ್ಟಿಕೊಂಡಿವೆ. ಗಣ್ಯರನ್ನು ಗೌರವಿಸುವ ಈ ಬಿರುದು ಬಾವಲಿಗಳು ಕೆಲವೊಮ್ಮೆ ಟೀಕೆಗೂ ಒಳಗಾಗಿವೆ. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಪುರಸ್ಕಾರದಿಂದ ಹಿಡಿದು ಗೌರವ ಡಾಕ್ಟರೇಟ್​ಗೆ ಸಮನಾದ, ಹಂಪಿ ವಿಶ್ವವಿದ್ಯಾಲಯದ ‘ನಾಡೋಜ’ದವರೆಗೆ ಯಾವುದೂ ಈ ವಿವಾದಕ್ಕೆ ಹೊರತಾಗಿಲ್ಲ.

    | ರಮೇಶ ದೊಡ್ಡಪುರ

    ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೋ

    ಕಡೆಗೆ ಕಾಡೊಳೋ ಮಸಣದೊಳೋ ಮತ್ತೆಲ್ಲೊ

    ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು

    ನೆನೆಯದಾತ್ಮದ ಸುಖವ-ಮಂಕುತಿಮ್ಮ

    ‘ಮನೆ, ಮಠ, ಸಭೆ, ಸಂತೆ ಹೀಗೆ ಎಲ್ಲೇ ಇದ್ದರೂ ನನ್ನನ್ನು ಎಲ್ಲರೂ ಗುರುತಿಸಬೇಕು ಎನ್ನುವ ಹಂಬಲ ಎಲ್ಲರಿಗೂ. ಕಾಡಿಗೆ ಹೋದರೂ ಅಷ್ಟೇ, ಸ್ಮಶಾನ ಸೇರಿದರೂ ಅಷ್ಟೇ. ಶಾಶ್ವತವಾಗಿರುವ ಆತ್ಮದ ಸುಖ ಮತ್ತು ಉದ್ಧಾರಕ್ಕೆ ಯಾರೂ ಆಲೋಚಿಸುವುದಿಲ್ಲ…’ ಆತ್ಮೋದ್ಧಾರಕ್ಕೆ ಮಾರಕವಾದ ಮನ್ನಣೆಯ ಹಂಬಲದ ಬಗ್ಗೆ ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ. ಗುಂಡಪ್ಪನವರು ಉಲ್ಲೇಖಿಸಿರುವುದು ಹೀಗೆ.

    ಇಂತಹ ಪ್ರಶಸ್ತಿ, ಗೌರವಗಳ ಪೈಕಿ ಅತಿ ಹೆಚ್ಚು ಚರ್ಚೆಗೆ, ಟೀಕೆಗೆ ಒಳಗಾಗಿರುವುದು ಗೌರವ ಡಾಕ್ಟರೇಟ್. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅದು ಮಾರಾಟದ ಸರಕಾಗಿದೆ. ಶಾಸಕರಾಗಿದ್ದ, ಈಗ ಶಿಕ್ಷಣ ಸಚಿವರಾಗಿರುವ ಎಸ್. ಸುರೇಶ್ ಕುಮಾರ್ ಅವರಿಗೆ 2017ರಲ್ಲಿ ಪತ್ರವೊಂದು ಬಂದಿತ್ತು. ಯುನೈಟೆಡ್ ಕಿಂಗ್​ಡಮ್ ವಿಶ್ವವಿದ್ಯಾಲಯದ ಹೆಸರಿನಲ್ಲಿ ಬಂದಿದ್ದ ಆ ಪತ್ರದಲ್ಲಿ, ತಮ್ಮ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದ್ದು, 1.75 ಲಕ್ಷ ರೂ. ಶುಲ್ಕ ನೀಡಿ ಎಂದು ತಿಳಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಂದಿನ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಉಪಸ್ಥಿತರಿರಲಿದ್ದಾರೆ. 40 ಪದವಿಗಳು ಮಾತ್ರ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ. ಕಾರ್ಯಕ್ರಮದ ವಿಡಿಯೋ, ಫೋಟೊ ಬೇಕಿದ್ದರೆ ಹೆಚ್ಚುವರಿ 7 ಸಾವಿರ ರೂ. ನೀಡಬೇಕು ಎಂದು ಬರೆದಿತ್ತು. ಆಶ್ಚರ್ಯದಿಂದ ದತ್ತಾ ಅವರಿಗೆ ಸುರೇಶ್ ಕುಮಾರ್ ಕರೆ ಮಾಡಿದಾಗ, ಅಂತಹ ವಿಷಯ ತಿಳಿದಿಲ್ಲ ಎಂದರು. ಕೂಡಲೆ ಇದರ ವಿರುದ್ಧ ಸುರೇಶ್​ಕುಮಾರ್ ಪೊಲೀಸ್ ದೂರು ದಾಖಲಿಸಿದರು.

    ಗೌರವ ಡಾಕ್ಟರೇಟ್ ವಿಚಾರದಲ್ಲಿ ತುಮಕೂರು ವಿವಿಯೂ ಕೆಲಕಾಲ ವಿವಾದದಲ್ಲಿತ್ತು. 2009ರಿಂದ 2013ರವರೆಗೆ ವಿವಿ ಕುಲಪತಿಯಾಗಿದ್ದ ಡಾ. ಶರ್ಮಾ ಅವರು ಗೌರವ ಡಾಕ್ಟರೇಟ್, ಡಿಲಿಟ್, ಡಿಎಸ್​ಸಿ ಪದವಿಗಳನ್ನು ಹಂಚಿದ ರೀತಿಗೆ ರಾಜ್ಯವೇ ಬೇಸ್ತುಬಿದ್ದಿತ್ತು. 2012ರಲ್ಲಿ ನಡೆದ 4ನೇ ಘಟಿಕೋತ್ಸವದಲ್ಲಿ ಬರೊಬ್ಬರಿ 25 ಜನರಿಗೆ ಗೌರವ ಡಾಕ್ಟರೇಟ್ ನೀಡುವುದಾಗಿ ಘೋಷಿಸಿಬಿಟ್ಟರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದರಿಂದಲೋ ಏನೋ ಘಟಿಕೋತ್ಸವವನ್ನು ಬೆಂಗಳೂರಿನ ರಾಜಭವನಕ್ಕೆ ಸ್ಥಳಾಂತರಿಸಲಾಯಿತು. 17 ಜನರಿಗೆ ಗೌರವ ಡಾಕ್ಟರೇಟ್, 11 ಜನರಿಗೆ ಡಿಲಿಟ್/ಡಿಎಸ್​ಸಿ ಪ್ರದಾನ ಮಾಡಲಾಯಿತು. ಗೋಪಾಲಕೃಷ್ಣ ಗಾಂಧಿ, ಸ್ವಾಮಿ ಜಪಾನಂದಜಿ ಸೇರಿ ಕೆಲವು ಗಣ್ಯರು ಈ ಪಟ್ಟಿಯಲ್ಲಿದ್ದರಾದರೂ ಅನೇಕ ಇತರ ಹೆಸರುಗಳೂ ಇದ್ದವು.

    ರಾಜ್ಯೋತ್ಸವ ಪ್ರಶಸ್ತಿಗೂ ಅಂಟಿತ್ತು ಕಳಂಕ

    ರಾಜ್ಯೋತ್ಸವ ಪ್ರಶಸ್ತಿಗೂ ಸಾಕಷ್ಟು ವರ್ಷ ಕಳಂಕ ಅಂಟಿಕೊಂಡಿತ್ತು. ಅಧಿಕಾರಸ್ಥರು ತಮಗಿಷ್ಟ ಬಂದವರಿಗೆ ಕಡ್ಲೆಪುರಿಯಂತೆ ಹಂಚಿಕೆ ಮಾಡುತ್ತಾರೆ ಎಂಬ ಆರೋಪವಿತ್ತು, ಬಹುಪಾಲು ಅದು ಸತ್ಯವೂ ಆಗಿತ್ತು. ಇಂತಿಷ್ಟೆ ಪ್ರಶಸ್ತಿ ನೀಡಬೇಕೆಂಬ ನಿಬಂಧನೆಯೂ ಇರಲಿಲ್ಲ. ಕಾರ್ಯಕ್ರಮದ ಅಂತಿಮ ಕ್ಷಣದಲ್ಲಿ ಕರೆದು ಔಪಚಾರಿಕವಾಗಿ ಪ್ರಶಸ್ತಿ ನೀಡಿ, ನಂತರ ಪದಕ, ಪ್ರಮಾಣಪತ್ರ ಮುದ್ರಿಸಿಕೊಟ್ಟ ಉದಾಹರಣೆಗಳೂ ಇವೆ. ತಮ್ಮ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಬೆಂಗಳೂರಿನ ಬಿ.ವಿ. ಸತ್ಯನಾರಾಯಣ ಎಂಬ ಸಾಹಿತಿ ನ್ಯಾಯಾಲಯದಲ್ಲಿ ಹೂಡಿದ ದಾವೆ ಸಾಕಷ್ಟು ಪರಿಣಾಮ ಬೀರಿತು. ಹೈಕೋರ್ಟ್ ಸೂಚನೆ ಮೇರೆಗೆ ಸರ್ಕಾರ ಸಮಿತಿ ರಚಿಸಿ, ಪ್ರಶಸ್ತಿಗೆ ಆಯ್ಕೆ ಮಾಡಬೇಕಾದ ಕ್ಷೇತ್ರಗಳು, ವಯಸ್ಸು, ಪ್ರಶಸ್ತಿಯ ಸಂಖ್ಯೆ ಮುಂತಾದ ವಿಚಾರಗಳಲ್ಲಿ ಮಾರ್ಗಸೂಚಿ ರೂಪಿಸಿತು. ಪ್ರಾದೇಶಿಕ ತಾರತಮ್ಯವೂ ಆಗದಂತೆ, ಜಿಲ್ಲೆಗೆ ಕನಿಷ್ಠ ಒಂದು ಪ್ರಶಸ್ತಿ ನೀಡಬೇಕು ಎಂದು ತೀರ್ವನಿಸಲಾಯಿತು. ಕೆಲವು ಆಪಾದನೆಗಳನ್ನು ಇರಿಸಿಕೊಂಡೇ ಇತ್ತೀಚಿನ ವರ್ಷಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

    ಪದ್ಮಗಳಿಗೆ ಮರಳಿದ ವೈಭವ

    ಕೇಂದ್ರ ಸರ್ಕಾರ ಪ್ರತಿ ವರ್ಷ ಪ್ರದಾನ ಮಾಡುವ ಪದ್ಮ ಪ್ರಶಸ್ತಿಗಳನ್ನೂ (ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ) ಕಂಡಕಂಡವರಿಗೆ ನೀಡಿದ ಉದಾಹರಣೆಗಳಿದ್ದವು. ಆದರೆ ಕಳೆದ ಏಳೆಂಟು ವರ್ಷದಿಂದ ಪರಿಸ್ಥಿತಿ ಬದಲಾಗಿದೆ. ಮೊದಲು ರಾಜ್ಯ ಸರ್ಕಾರದಿಂದಷ್ಟೇ ಶಿಫಾರಸು ಪಡೆಯುತ್ತಿದ್ದ ಕೇಂದ್ರ ಸರ್ಕಾರ, ಈಗ ಪ್ರಶಸ್ತಿಗೆ ಅರ್ಹರನ್ನು ಸೂಚಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದೆ. ಸುಕ್ರಿ ಬೊಮ್ಮಗೌಡ, ಸೂಲಗಿತ್ತಿ ನರಸಮ್ಮ ಅವರಂತಹ ನೂರಾರು ‘ತೆರೆಮರೆಯ ಸಾಧಕರು’ ಈ ಸರಣಿಯಲ್ಲಿ ಆಯ್ಕೆಯಾಗಿದ್ದಕ್ಕೆ ಇದೇ ಕಾರಣ. ವಶೀಲಿಬಾಜಿಗೆ ಹೆಚ್ಚು ಅವಕಾಶವಿಲ್ಲದ ಕಾರಣ ಪದ್ಮ ಪ್ರಶಸ್ತಿಗಳೂ ತಮ್ಮ ಗತಕಾಲದ ವೈಭವಕ್ಕೆ ಮರಳುತ್ತಿವೆ.

    10 ಜ್ಞಾನಪೀಠ ಆಗಬೇಕಿತ್ತು!

    ದೇಶದ ಸಾರಸ್ವತ ಲೋಕದ ಅತ್ಯುನ್ನತ ಗೌರವಗಳಲ್ಲೊಂದಾದ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಕರ್ನಾಟಕದ ಎಂಟು ಸಾಧಕರು ಆಯ್ಕೆಯಾಗಿದ್ದಾರೆ. ಖಾಸಗಿ ಸಂಸ್ಥೆಯ ಟ್ರಸ್ಟ್ ನೀಡುವ ಈ ಪ್ರಶಸ್ತಿಯನ್ನು ಸರ್ಕಾರವೇ ನೀಡುತ್ತದೆ ಎಂದು ಕೆಲವರು ತಿಳಿಯುವಷ್ಟು ಇದು ಜನಮನದಲ್ಲಿ ವ್ಯಾಪಿಸಿದೆ. ಈಗ ದೊರಕಿರುವ ಎಂಟು ಜನರ ಜತೆಗೆ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಜ್ಞಾನಪೀಠ ಲಭಿಸಬೇಕು ಎಂಬ ಕೂಗು ಅನೇಕ ವರ್ಷಗಳಿಂದ ಇದೆ. ಜ್ಞಾನಪೀಠದಷ್ಟೆ, ಕೆಲವು ಪ್ರದೇಶದಲ್ಲಿ ಅದಕ್ಕಿಂತಲೂ ಒಂದು ಕೈ ಮೇಲೆಂದು ಪರಿಗಣಿಸಲ್ಪಡುವ ಸರಸ್ವತಿ ಸಮ್ಮಾನ್ ಗೌರವ ಭೈರಪ್ಪ ಅವರಿಗೆ ದೊರಕಿದಾಗ ಸಾಕಷ್ಟು ಜನರಿಗೆ ಸಂತಸವಾಯಿತಾದರೂ, ಜ್ಞಾನಪೀಠ ಲಭಿಸಬೇಕು ಎಂಬ ಕೂಗು ಇಂದಿಗೂ ಇದೆ. ಡಿ.ವಿ. ಗುಂಡಪ್ಪನವರಿಗೆ ಜ್ಞಾನಪೀಠ ಸಿಗದ ಕುರಿತು 2014ರಲ್ಲಿ ಗೋಪಾಲ ವಾಜಪೇಯಿ ಹೊಸ ವಿಚಾರ ಹೊರಹಾಕಿದ್ದರು. 1966ರಲ್ಲಿ, ಅಂದರೆ ಕುವೆಂಪು ಅವರಿಗೆ ಜ್ಞಾನಪೀಠ ದೊರಕುವ ವರ್ಷ ಮೊದಲು ಆಯ್ಕೆಯ ಅಂತಿಮ ಪಟ್ಟಿಯಲ್ಲಿ ಡಿವಿಜಿ ಹೆಸರು ಮೊದಲಿತ್ತು. ಆದರೆ ಕಾರಣಾಂತರಗಳಿಂದ ಆ ಬಾರಿ ಬಂಗಾಳಿ ಕವಿಗೆ ದೊರಕಿತು ಎಂದಿದ್ದರು. ಆದರೆ ‘ಕಾರಣ’ ಮಾತ್ರ ಬಹಿರಂಗವಾಗಲಿಲ್ಲ.

    ನಾಡೋಜ ವಿವಾದ

    ಗೌರವ ಡಾಕ್ಟರೇಟ್​ಗೆ ಹಂಪಿಯ ಕನ್ನಡ ವಿವಿಯು ನಾಡೋಜ ಎಂದು ನಾಮಕರಣ ಮಾಡಿದೆ. 1995ರಲ್ಲಿ ಕುವೆಂಪು ಅವರಿಂದ ಆರಂಭವಾಗಿ ಗಂಗೂಬಾಯಿ ಹಾನಗಲ್, ಪುತಿನ, ಶಿವರಾಮ ಕಾರಂತ ಸೇರಿ ಗಣ್ಯಾತಿಗಣ್ಯರಿಗೆ ಪ್ರದಾನ ಮಾಡಲಾಗಿದೆ. ಅರ್ಹರಿಗೆ ನೀಡಿರುವ ಪ್ರತಿಷ್ಠೆಯನ್ನು ಇದು ಹೊಂದಿದೆಯಾದರೂ ಕೆಲ ಅಪಸ್ವರಗಳು ಅಲ್ಲಲ್ಲಿ ಇವೆ. ಇತ್ತೀಚೆಗಷ್ಟೆ ನಾಡೋಜ ಗೌರವವನ್ನು ಸಕ್ಕರೆ ಉದ್ಯಮಿ ಜಗದೀಶ ಎಸ್. ಗುಡಗುಂಟಿ ಹಾಗೂ ನೇತ್ರತಜ್ಞ ಡಾ. ಕೆ. ಕೃಷ್ಣಪ್ರಸಾದ್ ಅವರಿಗೆ ನೀಡಿದ್ದರ ಕುರಿತು ಚರ್ಚೆಗಳು ನಡೆಯುತ್ತಿವೆ. ಕನ್ನಡ ವಿವಿಗೂ ಉದ್ಯಮಿ, ವೈದ್ಯರಿಗೂ ಏನು ಸಂಬಂಧ ಎಂಬ ಮಾತುಗಳಿವೆ. ಇದಕ್ಕಿಂತಲೂ ಹೆಚ್ಚಾಗಿ, ಕನ್ನಡಕ್ಕೆ ಸೇವೆಗೈದಿರುವ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ, ಅ.ರಾ. ಮಿತ್ರ, ಮಲ್ಲೇಪುರಂ ಜಿ. ವೆಂಕಟೇಶ್ ಸೇರಿ ಅನೇಕರು ಇರುವಾಗ ಬೇರೆ ಕ್ಷೇತ್ರದವರನ್ನು ಹುಡುಕಿ ನೀಡುವ ಅವಶ್ಯಕತೆಯೇನಿತ್ತು? ಎಂಬ ಪ್ರಶ್ನೆ ಕೇಳಿಬಂದಿದೆ. ನಾಡೋಜ ರಾಜಕೀಯ ಪಡಸಾಲೆಯಲ್ಲಿ ನಿರ್ಧಾರ ವಾಗುತ್ತಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.

    ಸಂಸ್ಥೆಗಳ ಹೊಣೆಗಾರಿಕೆ

    ಅಪಖ್ಯಾತಿಗೆ ಪಾತ್ರವಾಗಿದ್ದ ಪ್ರಶಸ್ತಿಗಳು, ಗೌರವ ಡಾಕ್ಟರೇಟ್​ಗಳು ತಮ್ಮ ಘನತೆಯನ್ನು ಹೆಚ್ಚಿ್ಚಕೊಳ್ಳುತ್ತಿವೆ. ಆ ಅವಕಾಶ ಎಲ್ಲ ಪ್ರಶಸ್ತಿಗಳಿಗೂ ಇದೆ. ಆದರೆ, ತಾವು ಆಯ್ಕೆ ಮಾಡಿರುವ ವ್ಯಕ್ತಿಯು ಯಾವ ರೀತಿಯಲ್ಲಿ ಅರ್ಹ ಎಂಬುದನ್ನು ನಿರೂಪಿಸುವ ಹೊಣೆ ಆ ಸಂಸ್ಥೆಯ ಮೇಲೆಯೇ ಇರುತ್ತದೆ. ಇದಕ್ಕೆ ಕೆಲವು ಮಾರ್ಗಗಳೆಂದರೆ,

    1. ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುವುದು

    2. ಅರ್ಜಿ ಆಹ್ವಾನಿಸಿ ಪ್ರಶಸ್ತಿ ನೀಡುವುದಕ್ಕಿಂತಲೂ, ಎಲೆಮರೆ ಕಾಯಿಗಳನ್ನು ಗುರುತಿಸಿ ಗೌರವಿಸುವುದು

    3. ರಾಜಕಾರಣಿಗಳು, ಸಂಬಂಧವಿಲ್ಲದ ಅಧಿಕಾರಿಗಳು ಮಧ್ಯಪ್ರವೇಶಿಸದಂತೆ ನೋಡಿಕೊಳ್ಳುವುದು

    4. ಅನಿರೀಕ್ಷಿತ, ಅಪರಿಚಿತ ವ್ಯಕ್ತಿಗಳನ್ನು ಆಯ್ಕೆ ಮಾಡಿದಾಗ, ಅವರು ಯಾವ ರೀತಿ ಈ ಗೌರವಕ್ಕೆ ಅರ್ಹರು ಎಂಬ ವಿಸõತ ವಿವರಣೆಯನ್ನು ಸಾರ್ವಜನಿಕರಿಗೆ ನೀಡುವುದು

    5. ಸಿಕ್ಕಸಿಕ್ಕವರಿಗೆ ಹಂಚದೆ, ಪ್ರಶಸ್ತಿ ಸಂಖ್ಯೆಯನ್ನು ಮಿತಿಗೊಳಿಸುವುದು

    6. ಸಾಮಾಜಿಕ-ಪ್ರಾದೇಶಿಕ ನ್ಯಾಯ, ಲಿಂಗ ಸಮಾನತೆಯನ್ನು ಪರಿಗಣಿಸ ಬೇಕಾಗುತ್ತದಾದರೂ, ಅದರ ನಡುವೆ ಇತರ ಅರ್ಹರು ಕಳೆದುಹೋಗದಂತೆ ಎಚ್ಚರ ವಹಿಸುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts