More

    ಸಾಧನೆಗೆ ಹತ್ತು ಕೌಶಲಗಳ ಸೂತ್ರ

    ವಿಜಯಪುರ: ದೈಹಿಕ ಸದೃಢತೆಯೇ ಮಾನಸಿಕ ಸದೃಢತೆಗೆ ಸಹಕಾರಿ. ದೈಹಿಕ ಮತ್ತು ಮಾನಸಿಕ ಸದೃಢತೆಯ ಜತೆಗೆ ಪರಿಪೂರ್ಣ ವ್ಯಕ್ತಿತ್ವ ತಮ್ಮದಾಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಸಾಧನೆಯ ಶಿಖರವೇರಲು ಸಾಧ್ಯ ಎಂದು ನಿವೃತ್ತ ಮೇಜರ್ ಸಿ.ಎಸ್. ಆನಂದ ಹೇಳಿದರು. ಜೀವನ ಕೌಶಲಗಳು, ಒತ್ತಡ ನಿರ್ವಹಣೆ, ಭಾವನೆಗಳ ನಿರ್ವಹಣೆ ಹಾಗೂ ದೃಷ್ಟಿಕೋನ ಬದಲಾವಣೆ ಹೀಗೆ ಮುಂತಾದ ವಿಷಯಗಳ ಕುರಿತು ಅವರು ಎಜುಕೇಷನ್ ಎಕ್ಸಪೋ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

    ಆರೋಗ್ಯ ಸುಧಾರಣೆ ಜತೆಗೆ ಜೀವನ ಕೌಶಲಗಳನ್ನು ಕಲಿತು ರೂಢಿಸಿಕೊಳ್ಳಬೇಕು. ಕೇವಲ ಅಂಕ ಗಳಿಕೆಯೇ ಆದ್ಯತೆಯಾಗಬಾರದು. ಜೀವನ ನಿರ್ವಹಣೆ ವಿಧಾನವನ್ನೂ ಕಲಿಯಬೇಕು. ಅದಕ್ಕಾಗಿ ಮನಸ್ಸು ಮಾಡಬೇಕು. ಈ ಮನಸ್ಸು ನಮ್ಮ ದೇಹದ ಒಂದು ಭಾಗವಾಗಿರುತ್ತದೆ. ದೇಹದ ಯಾವುದೇ ಭಾಗದಲ್ಲಿ ಗಾಯವಾದರೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.

    ಬದಲಾದ ಜೀವನ ಶೈಲಿ ಇಂದು ಎಲ್ಲರ ಬದುಕು ನರಕಸದೃಶಗೊಳಿಸುತ್ತಿದೆ. ಶೇ. 80 ರಷ್ಟು ಜನ ಇಂದು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಾರಣ ತಪ್ಪಾದ ಜೀವನಶೈಲಿ. ಹೀಗಾಗಿ ದೇಹ, ಮನಸ್ಸು ಮತ್ತು ಬುದ್ಧಿಯ ಸಮತೋಲನ ಕಾಯ್ದುಕೊಳ್ಳಬೇಕು. ಮನಸ್ಸು ಸದಾ ಚಂಚಲವಾಗಿರುತ್ತದೆ. ಅದನ್ನು ನಿಯಂತ್ರಿಸದೆ ಹೋದರೆ ಬದುಕು ಹಾಳಾಗುತ್ತದೆ. ಎಷ್ಟೋ ಜನ ತಮ್ಮ ಮನಸ್ಸನ್ನು ನಿಯಂತ್ರಿಸಿಕೊಳ್ಳಲಾಗದೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಹೀಗಾಗಿ ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದರು.

    ಹತ್ತು ಸೂತ್ರಗಳು:

    ಉತ್ತಮ ಜೀವನ ಶೈಲಿಗಾಗಿ ವಿಶ್ವ ಸಂಸ್ಥೆ ಶಿಫಾರಸು ಮಾಡಿರುವ ಹತ್ತು ವಿಧಾನಗಳನ್ನು ವಿವರಿಸಿದ ಸಿ.ಎಸ್. ಆನಂದ ಅವರು ಅವುಗಳನ್ನು ಅನುಷ್ಠಾನಗೊಳಿಸುವ ಬಗೆ ತಿಳಿಸಿಕೊಟ್ಟರು. ಆ ಪ್ರಕಾರ ಸಮಸ್ಯೆಗಳನ್ನು ಪರಿಹರಿಸುವ ಕೌಶಲ, ನಿರ್ಧಾರ ತೆಗೆದುಕೊಳ್ಳುವುದು, ಸೃಜನಶೀಲ ಚಿಂತನೆ, ವಿಮರ್ಶಾತ್ಮಕ- ತುಲನಾತ್ಮಕ ಚಿಂತನೆ, ಸಂವಹನಾ ಕೌಶಲ, ಪರಸ್ಪರ ಸಂಬಂಧಗಳ ನಿರ್ವಹಣೆ, ಸ್ವಯಂ ಅರಿವು, ಅನುಭೂತಿ, ಭಾವನೆಗಳು ಹಾಗೂ ಒತ್ತಡಗಳ ನಿರ್ವಹಣೆ ಕುರಿತ ಕೌಶಲಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಅನುಸರಿಸಬೇಕೆಂದರು.

    ಕೇವಲ ಅರಿವಿದ್ದರೆ ಸಾಲದು ಅನುಷ್ಠಾನವೂ ಮುಖ್ಯ. ಎಂಥದ್ದೇ ಸನ್ನಿವೇಶವನ್ನು ನಿಭಾಯಿಸುವ ಕೌಶಲ ಬೆಳೆಸಿಕೊಳ್ಳಬೇಕು. ಆ ಕೌಶಲ ಯಾರಲ್ಲೂ ಇರಲ್ಲ; ಅದನ್ನು ನಾವೇ ಬೆಳೆಸಿಕೊಳ್ಳಬೇಕೆಂದರು. ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ನಿರ್ವಹಿಸಿದರು. ಸಿದ್ಧೇಶ್ವರ ಕೋಚಿಂಗ್ ಸೆಂಟರ್ ಮುಖ್ಯಸ್ಥ ಸುರೇಶ ಜತ್ತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts