More

    ಜಿಲ್ಲೆಯಲ್ಲಿ ಮುಷ್ಕರ ನೀರಸ

    ಹಾವೇರಿ: ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ನೀತಿ ಖಂಡಿಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ವಿವಿಧ ಕಾರ್ವಿುಕ ಸಂಘಟನೆಗಳು ರಾಷ್ಟ್ರವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

    ಕೆಲ ಸಂಘಟನೆಗಳು ರ‍್ಯಾಲಿ ಹಾಗೂ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಯಾವ ಭಾಗದಲ್ಲೂ ಬಂದ್​ನ ವಾತಾವರಣ ಕಂಡು ಬರಲಿಲ್ಲ. ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಜನಜೀವನ ಎಂದಿನಂತೆ ಆರಂಭಗೊಂಡಿತ್ತು. ಸಾರಿಗೆ ಬಸ್​ಗಳು ಕಾರ್ಯ ಪ್ರಾರಂಭಿಸಿದವು. ಹೋಟೆಲ್, ಅಂಗಡಿ, ಪೆಟ್ರೋಲ್ ಬಂಕ್, ತರಕಾರಿ, ಬ್ಯಾಂಕ್​ಗಳು, ಮಾರುಕಟ್ಟೆ ಸೇರಿ ಎಲ್ಲ ವ್ಯಾಪಾರ ವಹಿವಾಟುಗಳು, ಶಾಲಾ, ಕಾಲೇಜ್​ಗಳು ಕಾರ್ಯನಿರ್ವಹಿಸಿದವು. ಆಟೋರಿಕ್ಷಾ ಸೇವೆಗಳಲ್ಲೂ ವ್ಯತ್ಯಾಸ ಕಂಡುಬರಲಿಲ್ಲ.

    ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿಬಿ ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಮೈಲಾರ ಮಹದೇವ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.

    ಕೇಂದ್ರ ಸರ್ಕಾರದ ಕ್ರಮದಿಂದಾಗಿ ದೇಶದ ಭವಿಷ್ಯ ಆತಂಕಕಾರಿ ಹಂತಕ್ಕೆ ತಲುಪಿದೆ. ಆರ್ಥಿಕ ಹಿಂಜರಿತ, ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆಯಿಂದ ಕಾರ್ವಿುಕರು ಜೀವನ ನಡೆಸುವುದು ಕಷ್ಟವಾಗಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ 44 ಕಾರ್ವಿುಕ ಕಾನೂನುಗಳನ್ನು ನಾಶ ಮಾಡಿ, ವೇತನ ಸಂಹಿತೆ ಮತ್ತು ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಅಂಗೀಕರಿಸಿದೆ. ಇದನ್ನು ಕೈಬಿಡಬೇಕು. ಗುತ್ತಿಗೆ ಕಾರ್ವಿುಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರೈಲ್ವೆ, ಗಣಿ, ಕಲ್ಲಿದ್ದಲು ಸೇರಿ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಬಾರದು. ಬಿಸಿಯೂಟ, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ವಿುಕರೆಂದು ಪರಿಗಣಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

    ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರಬರ, ಡಿವೈಎಫ್​ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಸಿಐಟಿಯು, ಡಿವೈಎಫ್​ಐ, ಎಸ್​ಎಫ್​ಐ, ಜಿಲ್ಲಾ ವಿದ್ಯುತ್ ವಿತರಣಾ ಹಾಗೂ ಹೊರಗುತ್ತಿಗೆ ಕಾರ್ವಿುಕರ ಸಂಘ ಸೇರಿ ವಿವಿಧ ಕಾರ್ವಿುಕ ಸಂಘಟನೆಗಳು ಪಾಲ್ಗೊಂಡು ಬೆಂಬಲ ಸೂಚಿಸಿದ್ದವು.

    ಅಂಚೆ ನೌಕರರ ಪ್ರತಿಭಟನೆ: ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದ ಅಖಿಲ ಭಾರತ ಅಂಚೆ ನೌಕರರ ಒಕ್ಕೂಟದಿಂದ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ನೀತಿ ವಿರುದ್ಧ ಅಂಚೆ ನೌಕರರು ಆಕ್ರೋಶವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎನ್.ಎಸ್. ಕೊಪ್ಪಳ, ಪಿ.ಎಂ. ರಾಯ್ಕರ, ಶಿವಾನಂದ ಸಿದ್ದಾಪುರ, ಬಿ.ಡಿ. ಈಳಗೇರ, ಐ.ಎಸ್. ಬಾಗನವರ, ಪಿ.ಎಸ್. ದೊಡ್ಡಮನಿ, ಜೆ.ಡಿ. ನಿಂಗೋಜಿ, ಸಿ.ಎಚ್. ಗದಗ, ಆರ್.ಎನ್. ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts