More

    ಒಂದು ವರ್ಷದೊಳಗೆ ಠಾಣೆ ಕಟ್ಟಡ ಪೂರ್ಣ

    ಕಾರ್ಗಲ್: ಈ ಪ್ರದೇಶದ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಪೊಲೀಸ್ ಠಾಣಾ ಕಟ್ಟಡವನ್ನು 1.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಜತೆಗೆ ಸಿಬ್ಬಂದಿಗೆ ಸುಸಜ್ಜಿತ ಮನೆಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಇದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

    ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್ ಸಿಬಂದಿ ಕೊರತೆಯಿದೆ. ಶೀಘ್ರವೇ 8 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶ ದೊಡ್ಡದು. ಹಾಗಾಗಿ ಇದಕ್ಕೆ ಅನುಗುಣವಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
    ಜೋಗ ಜಲಪಾತ ಪ್ರದೇಶದಲ್ಲಿ ಸುಮಾರು 180 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅದಕ್ಕೆ ನಮ್ಮ ಸರ್ಕಾರ ಬಂದ ಮೇಲೆ 20 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಸಂಸದರು 81 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಪಟ್ಟಿ ಮಾಡಿದ್ದಾರೆ. ಆದರೆ ಯಾವುದೇ ಹಣ ಬಿಜೆಪಿ ಅವಧಿಯಲ್ಲಿ ಬಂದಿಲ್ಲ ಎಂದರು.
    ಜೋಗ ಜಲಪಾತದ ಅಭಿವೃದ್ಧಿ ಕಾಮಗಾರಿಗಳಲ್ಲಿ ಸುತ್ತಮುತ್ತಲಿನ ಜನರಿಗೆ ಅಗತ್ಯವಿರುವ ಸಂಪರ್ಕ ಸೇತುವೆಗಳು ಹಾಗೂ ರಸ್ತೆಗಳ ನಿರ್ಮಾಣಕ್ಕೂ ಅವಕಾಶವಿದ್ದು, ಪರಿಶೀಲಿಸಿ ನೀಡಲಾಗುವುದು ಎಂದು ಹೇಳಿದರು.
    ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಜೋಗ ಜಲಪಾತ, ಅಣೆಕಟ್ಟುಗಳು, ವಿದ್ಯುದಾಗರಗಳು ಸೇರಿ ನಾಡಿನ ಅಮೂಲ್ಯ ಸಂಪತ್ತುಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಪೊಲೀಸ್ ಠಾಣೆಯ ಬೇಡಿಕೆಗೆ ಅನುಗುಣವಾಗಿ ಕೊರತೆ ಆಗದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಕಾರ್ಗಲ್ ಠಾಣೆಗೂ ಒಂದು ಹೊಸ ಜೀಪ್ ನೀಡಲಾಗುವುದು ಎಂದರು.
    ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ, ಸಿಪಿಐ ನಾಗರಾಜ್, ಸಬ್‌ಇನ್ಸ್‌ಪೆಕ್ಟರ್ ಹೊಳೆಬಸಪ್ಪ ಹೊಳಿ, ಪಪಂ ಮಾಜಿ ಅಧ್ಯಕ್ಷೆ ವಾಸಂತಿ ರಮೇಶ್, ಮಾಜಿ ಉಪಾಧ್ಯಕ್ಷ ಪಿ.ಮಂಜುನಾಥ್, ಸದಸ್ಯರಾದ ಜಯಲಕ್ಷ್ಮೀ, ಕೆ.ಸಿ.ಹರೀಶ್, ಲಕ್ಷ್ಮೀರಾಜು, ಬಾಲಸುಬ್ರಹ್ಮಣ್ಯ, ಉಮೇಶ್, ಜಿಪಂ ಮಾಜಿ ಸದಸ್ಯೆ ಅನಿತಾಕುಮಾರಿ, ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸಂತೋಷ್‌ಕುಮಾರ್, ಪ್ರಮುಖರಾದ ಎಚ್.ಎಸ್.ಸಾದಿಕ್, ಕಳಸೆ ಚಂದ್ರಪ್ಪ, ಹೊಳಿಯಪ್ಪ, ಶ್ರೀಧರ್ ಲಿಂಗನಮಕ್ಕಿ, ಬಿ.ಉಮೇಶ್, ಲತಾ ಸತ್ಯನ್, ಗೀತಾ ಮುನಿಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts