More

    ವಿಧಾನ ಪರಿಷತ್ ಆಗ್ನೇಯ ಅಖಾಡ ಸಿದ್ಧ!

    ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಅಂತಿಮ ಅಖಾಡ ಸಿದ್ಧಗೊಂಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಜತೆಗೆ ‘ಬಂಡಾಯ’ ಬಿಜೆಪಿ ಅಭ್ಯರ್ಥಿಗಳಿಬ್ಬರು ಕಣದಲ್ಲಿ ಉಳಿದುಕೊಂಡಿರುವುದು ಚುನಾವಣೆಯನ್ನು ರಂಗೇರಿಸಿದೆ.

    ಉಮೇದುವಾರಿಕೆ ಹಿಂಪಡೆಯಲು ಕೊನೇ ದಿನವಾದ ಸೋಮವಾರ, ನಾಮಪತ್ರ ಸಲ್ಲಿಸಿದ್ದ ಒಟ್ಟು 18 ಅಭ್ಯರ್ಥಿಗಳಲ್ಲಿ ಮೂವರು ನಾಮಪತ್ರ ಹಿಂಪಡೆದಿದ್ದಾರೆ. 15 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪೆಪ್ಸಿ ಬಸವರಾಜು ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಪಕ್ಷದ ವರಿಷ್ಠರ ಒತ್ತಾಯಕ್ಕೆ ಮಣಿದು ಕಣದಿಂದ ಹಿಂದೆ ಸರಿದಿದ್ದಾರೆ. ಅ.28ರಂದು ಚುನಾವಣೆ ನಡೆಯಲಿದೆ.

    ರಮೇಶ್‌ಬಾಬು, ತೂಪಲ್ಲಿ, ಚಿದಾನಂದ: ವಿಧಾನ ಪರಿಷತ್‌ಗೆ ಜೆಡಿಎಸ್ ಎಂಎಲ್ಸಿ ಆರ್.ಚೌಡರೆಡ್ಡಿ ತೂಪಲ್ಲಿ ಮತ್ತೊಮ್ಮೆ ಮರು ಆಯ್ಕೆಯ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನವರಾದ ಚೌಡರೆಡ್ಡಿ ತೂಪಲ್ಲಿ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವರಾದರೂ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲವೆಂಬ ಅಸಮಾಧಾನ ಇದೆ. ಚುನಾವಣಾ ರಾಜಕಾರಣವನ್ನು ಚೆನ್ನಾಗಿ ಬಲ್ಲ ತೂಪಲ್ಲಿ ‘ಸುಶಿಕ್ಷಿತ’ ಮತದಾರರನ್ನು ಸೆಳೆಯುವ ಚಾಕಚಕತ್ಯೆ ಬಲ್ಲವರಾಗಿದ್ದಾರೆ.

    ಜೆಡಿಎಸ್ ತೊರೆದು ಇತ್ತೀಚೆಗೆ ಕಾಂಗ್ರೆಸ್ ಕೈ ಹಿಡಿದಿರುವ ಮಾಜಿ ಎಂಎಲ್ಸಿ ರಮೇಶ್‌ಬಾಬು ಟಿಕೆಟ್ ಖಚಿತ ಪಡಿಸಿಕೊಂಡೇ ಪಕ್ಷಾಂತರ ನಿರ್ಧಾರ ಕೈಗೊಂಡಿದ್ದರು. ಅಲ್ಲದೆ, ಶಿಕ್ಷಕರ, ಪದವೀಧರರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಪ್ರಬಲ ಆಕಾಂಕ್ಷಿಗಳಿಲ್ಲದೇ ಇರುವುದರಿಂದ ಬಾಬು ಹಾದಿ ಬಹುತೇಕ ಸುಗಮವಾಗಿತ್ತು. ಪರಿಷತ್ ಉಪಚುನಾವಣೆಯಲ್ಲಿ ಒಮ್ಮೆ ಗೆದ್ದು ಪರಿಷತ್ ಪ್ರವೇಶಿಸಿದ್ದ ಚಿಕ್ಕನಾಯಕನಹಳ್ಳಿ ಪಟ್ಟಣದ ರಮೇಶ್‌ಬಾಬು ಈ ಕ್ಷೇತ್ರದ ಹಾಗೂ ಮತದಾರರ ನಾಡಿಮಿಡಿತ ಬಲ್ಲವರಾಗಿದ್ದಾರೆ. ಐದು ಜಿಲ್ಲೆಗಳ ವಿಸ್ತಾರ ಹೊಂದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ 13 ಶಾಸಕರನ್ನು ಹೊಂದಿದ್ದು ಎಲ್ಲ ಶಾಸಕರು ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದಲ್ಲಿ ಬಾಬು ನಿಸ್ಸಂದೇಹವಾಗಿ ಪ್ರಬಲ ಪೈಪೋಟಿ ನೀಡಲಿದ್ದಾರೆ.

    ಬಿಜೆಪಿಗೆ ಬಂಡಾಯ ಕಾಟ: ಸುಶಿಕ್ಷತ ಮತದಾರರ ಒಲವು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರ ಇರಲಿದೆ ಎಂಬ ವಾದವಿದೆ. ಅಲ್ಲದೆ, ಈ ಐದು ತಾಲೂಕುಗಳಲ್ಲಿ 13 ಶಾಸಕರು, ನಾಲ್ವರು ಸಂಸದರು (ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ) ಬಿಜೆಪಿಯವರಾಗಿದ್ದು ಆಡಳಿತರೂಢ ಬಿಜೆಪಿಗೆ ಗೆಲ್ಲುವ ಸುವರ್ಣಾವಕಾಶ ಇದೆ. ಆದರೆ, ಬಿಜೆಪಿ ಅಧಿಕೃತ ಅಭ್ಯರ್ಥಿ ಚಿದಾನಂದ ಎಂ.ಗೌಡ ವರ್ಷದ ಹಿಂದೆ ಜೆಡಿಎಸ್ ತೊರೆದು ಪಕ್ಷಕ್ಕೆ ಸೇರಿದ್ದು ಅವರ ಓಟಕ್ಕೆ ರೆಬೆಲ್ ಅಭ್ಯರ್ಥಿಗಳಿಬ್ಬರು ಬ್ರೇಕ್ ಹಾಕಿದ್ದಾರೆ.

    ಬಿಜೆಪಿ ಬಂಡಾಯದಲ್ಲೂ ಬಿರುಕು?: ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್, ತುಮಕೂರಿನ ಹಾಲನೂರು ಎಸ್.ಲೇಪಾಕ್ಷ ಕಣಕ್ಕಿಳಿದಿದ್ದಾರೆ. ಆದರೆ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ 8 ಮಂದಿ ರಚಿಸಿಕೊಂಡಿದ್ದ ಒಕ್ಕೂಟ (ಸಿಂಡಿಕೇಟ್)ದಲ್ಲಿ ಈಗ ಒಡಕು ಮೂಡಿದೆ ಎನ್ನಲಾಗಿದೆ. ಸಿಂಡಿಕೇಟ್‌ನಿಂದ ಲೇಪಾಕ್ಷ, ಪೆಪ್ಸಿ ನಾಮಪತ್ರ ಸಲ್ಲಿಸಿದ್ದು ಪೆಪ್ಸಿ ಬಸವರಾಜ್ ಕಣದಿಂದ ಹಿಂದೆ ಸರಿದಿದ್ದಾರೆ. ಲೇಪಾಕ್ಷ ಚುನಾವಣೆ ಹೊತ್ತಿಗೆ ಏಕಾಂಗಿ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

    ಪರಿಷತ್‌ನಲ್ಲಿ ಪ್ರಮುಖ ಪಕ್ಷೇತರರು: ಆಗ್ನೇಯ ಕ್ಷೇತ್ರದ ಅಖಾಡದಲ್ಲಿ ಪ್ರಮುಖ ಪಕ್ಷೇತರರು ಕಣದಲ್ಲಿದ್ದು ಸ್ಪರ್ಧಾ ಚೈತ್ರದ ಡಾ.ಸುರೇಶ್, ಶಿವರಾಮಯ್ಯ ಹಾಗೂ ಟಿ.ಶ್ರೀನಿವಾಸ್ ಸಹ ಇದ್ದಾರೆ. ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಬಿಜೆಪಿ ರೆಬೆಲ್ ಅಭ್ಯರ್ಥಿಗಳಲ್ಲದೆ 12 ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಒಟ್ಟು 1,06,000 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಅತಿಹೆಚ್ಚು 28404 ಮತದಾರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts