More

    ರಸ್ತೆಗಳಾಗಿವೆ ಗುಂಡಿಗಳ ಆಗರ

    ಗೌಡಪ್ಪ ಬನ್ನೆ ಶಿಗ್ಗಾಂವಿ: ನಿಗದಿಗಿಂತ ಹೆಚ್ಚುವರಿ ಭಾರದ ಕಲ್ಲಿನ ಖಡಿ, ಮಣ್ಣು, ಮರಳು ಹೊತ್ತು ಸಂಚರಿಸುತ್ತಿರುವ ಟಿಪ್ಪರ್ ವಾಹನಗಳ ಆರ್ಭಟಕ್ಕೆ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗುತ್ತಿವೆ. ಇದರಿಂದಾಗಿ ವಾಹನ, ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

    ಬಂಕಾಪುರ, ಶಿಗ್ಗಾಂವಿ, ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ವಿುಸಿದ ರಸ್ತೆಗಳು ಕೆಲ ತಿಂಗಳಲ್ಲೇ ಕಿತ್ತು ಹೋಗಿವೆ.

    ತಡಸ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಕುಮಟಾ-ತಡಸ ರಾಜ್ಯ ಹೆದ್ದಾರಿ ಮೇಲೆ ಎಕ್ಸಲ್​ಗೆ ನಿಗದಿಪಡಿಸಿರುವ ಭಾರಕ್ಕಿಂತಲೂ ಹೆಚ್ಚುವರಿಯಾಗಿ ಕಲ್ಲಿನ ಖಡಿ ತುಂಬಿಕೊಂಡು ಸಂಚರಿಸುವ ವಾಹನಗಳಿಂದ ತಾಲೂಕಿನಲ್ಲಿ ಸುಮಾರು 126.10 ಕಿ.ಮೀ. ರಸ್ತೆ ಹಾಳಾಗಿದೆ. ತಕ್ಷಣ ಈ ವಾಹನ ಸಂಚಾರ ನಿಷೇಧಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಾದೇಶಿಕ ಸಾರಿಗೆ ಇಲಾಖೆ (ಆರ್​ಟಿಒ) ಹಾಗೂ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೂ ಭಾರಿ ವಾಹನಗಳ ಸಂಚಾರ ನಿರಾತಂಕವಾಗಿ ಸಾಗಿದೆ.

    ಸರ್ಕಾರದ ವಿವಿಧ ಯೋಜನೆಯಡಿ ಲಕ್ಷಾಂತರ ರೂ. ವೆಚ್ಚದಲ್ಲಿ ತಾಲೂಕಿನಲ್ಲಿ ಹೊಸದಾಗಿ ನಿರ್ವಿುಸಿದ ರಸ್ತೆಗಳು, ಮರಳು, ಕಲ್ಲಿನ ಖಡಿ ವಾಹನಗಳ ಸಂಚಾರದಿಂದಲೇ ಕಿತ್ತು ಹೋಗಿದ್ದಾಗಿ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ. ವಾಹನಗಳ ಮಾಲೀಕರಿಂದ ಹಾಳಾದ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

    ಬೇಕಾಬಿಟ್ಟಿಯಾಗಿ ಓಡಾಡುವ ವಾಹನದಿಂದ ಲಕ್ಷಾಂತರ ರೂ. ವೆಚ್ಚದ ರಸ್ತೆಗಳು ಹಾಳಾಗುತ್ತಿವೆ. ಸರ್ಕಾರದ ಯೋಜನೆ ಉದ್ದೇಶ ಈಡೇರಿಕೆಗೆ ತಾಲೂಕು ಆಡಳಿತ ಕಾನೂನು ಮೀರಿ ತಾಲೂಕಿನಲ್ಲಿ ಸಂಚರಿಸುವ ಇಂತಹ ವಾಹನಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚುವರಿಯಾಗಿ ಕಲ್ಲಿನ ಖಡಿ, ಮರಳು ಹೊತ್ತು ಸಂಚರಿಸುವ ವಾಹನಗಳಿಂದ ತಾಲೂಕಿನ ಅನೇಕ ರಸ್ತೆಗಳು ಹಾಳಾಗಿವೆ. ಇಂತಹ ವಾಹನ ಸಂಚಾರ ನಿಷೇಧಿಸಿ ಎಂದು ಆರ್​ಟಿಒ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಪತ್ರ ಬೆರೆದರೂ ಪ್ರಯೋಜನವಾಗಿಲ್ಲ. ಎಷ್ಟೇ ರಸ್ತೆ ಅಭಿವೃದ್ಧಿಪಡಿಸಿದರೂ ಉಪಯುಕ್ತವಾಗುತ್ತಿಲ್ಲ.

    ವಿ.ಎಂ. ಚಿಕ್ಕಮಠ, ಕಾರ್ಯನಿರ್ವಾಹಕ ಅಧಿಕಾರಿ, ಲೋಕೋಪಯೋಗಿ ಇಲಾಖೆ ಶಿಗ್ಗಾಂವಿ

    ಹೆಚ್ಚಿನ ಭಾರದ ವಾಹನಗಳನ್ನು ತಡೆಯುವಂತೆ ಪಿಡಬ್ಲ್ಯುಡಿ ನಮ್ಮ ಇಲಾಖೆಗೆ ಪತ್ರ ಬರೆದಿದೆ. ನಾವು ವಾಹನಗಳನ್ನು ತಡೆಯ ಬಹುದು. ಆದರೆ, ದಂಡ ಹಾಕುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಆರ್​ಟಿಒಗೆ ಮಾತ್ರ ಆ ಅಧಿಕಾರ ಇದೆ.

    | ಎಂ.ಕಲ್ಲೇಶಪ್ಪ, ಡಿವೈಎಸ್​ಪಿ ಶಿಗ್ಗಾಂವಿ

    ನಾನು ಇತ್ತೀಚೆಗೆ ಆರ್​ಟಿಒ ಆಗಿ ನೇಮಕಗೊಂಡಿದ್ದೇನೆ. ಜೊತೆಗೆ ಸಿಬ್ಬಂದಿ ಕೊರತೆ ಇದೆ. ಆದರೂ ಹೆಚ್ಚಿನ ಬಾರದ ವಾಹನಗಳಿಗೆ ದಂಡ ವಿಧಿಸುತ್ತಿದ್ದೇವೆ. ಶಿಗ್ಗಾಂವಿ ತಾಲೂಕಿನಲ್ಲಿನ ಹೆಚ್ಚಿನ ತೂಕದ ವಾಹನಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ.

    ಬಸವರಾಜ ಹರ್ತಿ , ಆರ್​ಟಿಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts