More

    ನದಿ ಜೋಡಣೆ ಕಾರ್ಯ ಸಾಧುವಲ್ಲ

    ಶಿರಸಿ: ಬೇಡ್ತಿ- ವರದಾ ನದಿ ಜೋಡಣೆ ಯೋಜನೆಗೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆ ಅನುಷ್ಠಾನಗೊಂಡರೆ ಪರಿಸರ ಅಸಮತೋಲನವಾಗುತ್ತದೆ. ಕುಡಿಯುವ ನೀರಿನ ನೆಪವೊಡ್ಡಿ ಈ ಯೋಜನೆ ಜಾರಿ ಮಾಡಬಾರದು ಎನ್ನುವುದು ಪರಿಸರ ಪ್ರಿಯರ ಆಗ್ರಹ.

    ಬೇಡ್ತಿ ನದಿ ಪ್ರದೇಶವು ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟದಿಂದ ಜೀವ ವೈವಿಧ್ಯದ ಸಕ್ರಿಯ ಪ್ರದೇಶಗಳೆಂದು ಘೊಷಿಸಲ್ಪಟ್ಟಿವೆ. ಈ ಪ್ರದೇಶದಲ್ಲಿ 1741 ಬಗೆಯ ಹೂ ಬಿಡುವ ಸಸ್ಯಗಳು, 420 ಪ್ರಬೇಧದ ಪಕ್ಷಿಗಳು ಹಾಗೂ ಇತರ ವನ್ಯಜೀವಿಗಳ ನೆಲೆಯೆಂದು ಗುರುತಿಸಲಾಗಿದೆ. ಜತೆ, ರಾಜ್ಯ ಸರ್ಕಾರದ ಪಶ್ಚಿಮಘಟ್ಟ ಕಾರ್ಯಪಡೆಯು ಖುದ್ದಾಗಿ ಈ ಭಾಗವನ್ನು ಸಂರಕ್ಷಿತ ಪ್ರದೇಶವೆಂದು ಘೊಷಿಸಿದೆ. ಇಷ್ಟೆಲ್ಲ ರಕ್ಷಣಾ ಕವಚ ಬೇಧಿಸಿ ನದಿ ತಿರುವು ಯೋಜನೆ ಕಷ್ಟಸಾಧ್ಯವಾಗಿರುವ ಕಾರಣಕ್ಕೆ ಸರ್ಕಾರ ಯೋಜನೆಯ ಸ್ವರೂಪ ಬದಲಿಸಿ ಅನುಷ್ಠಾನಕ್ಕೆ ಉತ್ಸಾಹ ತೋರಿದೆ ಎಂಬುದು ಪರಿಸರ ಕಾರ್ಯಕರ್ತರ ಆರೋಪ.

    ಕಡತದಲ್ಲಿ ಜೀವಂತವಿದ್ದ ಯೋಜನೆ: 1992ರಲ್ಲಿ ಬೇಡ್ತಿ ನದಿ ತಿರುವು ಯೋಜನೆ ವಿರೋಧಿಸಿ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಜನಾಂದೋಲನ ನಡೆದ ಕಾರಣ ಯೋಜನೆಯನ್ನು ಹಿಂಪಡೆಯಲಾಗಿತ್ತು. ಇದು ಅರಣ್ಯ ಜಿಲ್ಲೆಯಲ್ಲಿ ನದಿ ತಿರುವಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ದೇಶಕ್ಕೆ ನೀಡಿತ್ತು. ಆದರೆ, ಸರ್ಕಾರಿ ಕಡತಗಳಲ್ಲಿ ಯೋಜನೆಯು ಜೀವಂತವಾಗಿತ್ತು.

    2002ರಲ್ಲಿ ಅಂದಿನ ಎನ್​ಡಿಎ ಸರ್ಕಾರವು ಕಾರ್ಯಪಡೆ ರಚಿಸಿ ನದಿ ಪಾತ್ರಗಳ ಜೋಡಣೆಯ ಕ್ರಿಯಾ ಯೋಜನೆಗಳನ್ನು ಸಿದ್ಧಗೊಳಿಸಿ, ಅದಕ್ಕೆ ಬೇಕಾದ ವೆಚ್ಚ, ಬಂಡವಾಳದ ಮೂಲ ಗುರುತಿಸಿ 2016ರ ವೇಳೆಗೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು. ಆ ಕಾರಣದಿಂದಲೇ ಹೋರಾಟ ನಡೆದು 2 ದಶಕದ ಬಳಿಕವೂ ದೇಶದ ನದಿಗಳ ಜೋಡಣೆ ಪಟ್ಟಿಯಲ್ಲಿ ಬೇಡ್ತಿ- ವರದಾ ನದಿಗಳ ಹೆಸರು ಕೂಡ ಇತ್ತೆಂಬುದು ವಿಶೇಷ.

    ರೂಪಾಂತರ: ಹಿಂದೆ ಬೇಡ್ತಿ-ವರದಾ ಯೋಜನೆಯ ಉದ್ದೇಶ ಬೇಡ್ತಿ ಜಲಾನಯನ ಅಣೆಕಟ್ಟುಗಳಲ್ಲಿ ಸಂಗ್ರಹಿಸಿದ ನೀರನ್ನು ವರದಾ ನದಿಯ ಮೂಲಕ ತುಂಗಭದ್ರಾ ಎಡದಂಡೆಗೆ ಹರಿಸುವುದು. ಬೇಡ್ತಿ ನದಿಯ ನೀರನ್ನು ಗದಗ ಸಮೀಪದ ಹಿರೇವಡ್ಡತ್ತಿಗೆ ಹರಿಸುವುದು ಈಗ ಹೊಸ ಬದಲಾವಣೆ. ಬೇಡ್ತಿ ಜಲಾನಯನ ಪ್ರದೇಶದಲ್ಲಿ ಎರಡು ಅಣೆಕಟ್ಟನ್ನು ನಿರ್ವಿುಸಿ ಈ ಅಣೆಕಟ್ಟುಗಳ ಮೂಲಕ ಗದಗಿನ ಹಿರೇವಡ್ಡತ್ತಿಯ ಈಗಾಗಲೇ ಗುರುತಿಸಿದ ಜಾಗದಲ್ಲಿ ಶೇಖರಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಶಿರಸಿ ಬಳಿ ಶಾಲ್ಮಲಾ-ಬೇಡ್ತಿಯ ಎರಡು ಅಣೆಕಟ್ಟಿನ ಮೂಲಕ ಹೆಚ್ಚುವರಿ ನೀರನ್ನು ರಾಯಚೂರು, ಗದಗ, ಕೊಪ್ಪಳದ ಜನರಿಗೆ ನೀಡುವುದಕ್ಕೆ ಈ ಯೋಜನೆ ಮಾರ್ಪಡಿಸಲಾಗಿದೆ ಎನ್ನಲಾಗುತ್ತಿದೆ.

    ಬತ್ತುವ ಬೇಡ್ತಿ: ಉತ್ತರ ಕನ್ನಡದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಬೇಡ್ತಿ ನದಿ ಬೇಸಿಗೆ ಆರಂಭದೊಂದಿಗೆ ತನ್ನ ಹರಿವು ನಿಲ್ಲಿಸುತ್ತದೆ. ಸರ್ವಋತು ಹರಿಯುವ ನದಿಯಲ್ಲ ಎಂಬ ಪ್ರಾಥಮಿಕ ಮಾಹಿತಿಯಿದ್ದರೂ ಸರ್ಕಾರವು ಬಜೆಟ್​ನಲ್ಲಿ ಮಳೆಗಾಲದಲ್ಲಷ್ಟೇ ಹರಿಯುವ ಬೇಡ್ತಿ- ವರದಾ ನದಿಗಳನ್ನು ಜೋಡಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಈ ಯೋಜನೆಯಲ್ಲಿ ನೀರನ್ನು ಎತ್ತಲು 61 ಮೆಗಾ ವ್ಯಾಟ್ ವಿದ್ಯುಚ್ಛಕ್ತಿ ಬೇಕಾಗಬಹುದು ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

    ಜಾಲತಾಣ ಅಭಿಯಾನ:ಸಾಮಾಜಿಕ ಜಾಲತಾಣಗಳಲ್ಲಿ ಸೇ ನೋ ಟು ಬೇಡ್ತಿ ವರದಾ ಪ್ರೊಜೆಕ್ಟ್ ಎಂದು ಹ್ಯಾಶ್​ಟ್ಯಾಗ್ ಬಳಸಿ ಅಭಿಯಾನ ಆರಂಭಿಸಲಾಗಿದೆ. ಅಭಿಯಾನದಲ್ಲಿ ಸಾಕಷ್ಟು ಜನರು ಬೆಂಬಲ ಸೂಚಿಸಿದ್ದಾರೆ. ಜತೆ ಮಾ.24ರಂದು ಶಿರಸಿಯಲ್ಲಿ ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಆಯೋಜಿಸಿರುವ ಸಮಾಲೋಚನಾ ಸಭೆಗೂ ಬೆಂಬಲ ಸೂಚಿಸಿದ್ದಾರೆ.

    ನದಿಪಾತ್ರಕ್ಕೆ ಸ್ವಾಮೀಜಿ: ಯೋಜನೆ ಅನುಷ್ಠಾನದ ಕಾವು ಹೆಚ್ಚುತ್ತಿದ್ದಂತೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ದೇಶಿತ ಯೋಜನಾ ಅನುಷ್ಠಾನ ಸ್ಥಳವಾದ ಬೇಡ್ತಿ ನದಿಪಾತ್ರಕ್ಕೆ ಭಾನುವಾರ ಭೇಟಿ ನೀಡಿದರು. ಸದ್ಯ ಹರಿವನ್ನು ನಿಲ್ಲಿಸಿದ ಸ್ಥಿತಿಯಲ್ಲಿರುವ ನದಿ ಪರಿಶೀಲಿಸಿದರು.

    ಬೇಡ್ತಿ- ವರದಾ ಜೋಡಣೆ ಯೋಜನೆ ಗಂಭೀರ ಚಿಂತನೆ ಅಗತ್ಯ. ಬಯಲು ಸೀಮೆ ಪ್ರದೇಶಕ್ಕೆ ನೀರು ನೀಡಬಾರದೆಂಬ ಭಾವನೆಯಿಲ್ಲ. ಆದರೆ, ಇಲ್ಲಿಯೇ ನೀರಿನ ಕೊರತೆ ಇದೆ. ಇದರ ನಡುವೆ ಇರುವ ನೀರನ್ನು ಕೊಂಡೊಯ್ಯುವುದು ಅಸಾಧು. ಸದ್ಯ ಎತ್ತಿನ ಹೊಳೆ ಯೋಜನೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಅನುಭವವಾಗಿದೆ. ಇನ್ನೂ ಫಲಾನುಭವಿ ಜಿಲ್ಲೆಗಳಿಗೆ ನೀರು ಮುಟ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪರ್ಯಾಯ ಉಪಾಯ ಹುಡುಕಬೇಕು.

    | ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲೀ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts