ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ...; ಧ್ರುವ ಸರ್ಜಾ-ಪ್ರೇಮ್ ಕಾಂಬಿನೇಷನ್

Prem Dhruva
Published on

ಬೆಂಗಳೂರು: ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕಾಂಬಿನೇಷನ್​ನಲ್ಲಿ ಸಿನಿಮಾವೊಂದು ಸೆಟ್ಟೇರಲಿದೆ ಎಂದು ಈ ಹಿಂದೆ ‘ವಿಜಯವಾಣಿ’ ಸುದ್ದಿ ಪ್ರಕಟಿಸಿತ್ತು. ಇದೀಗ ಆ ವಿಚಾರ ಅಧಿಕೃತವಾಗಿದೆ. ಈ ಚಿತ್ರದ ಕುರಿತು, ಪ್ರೇಮ್ ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಈ ಜೋಡಿ ಸಿದ್ಧತೆ ಆರಂಭಿಸಿದೆ. ಹಾಗಾದರೆ ಏನಿದು ಸಿನಿಮಾ? ಸದ್ಯ ಸ್ವತಃ ನಿರ್ದೇಶಕರೇ ಆ ಬಗ್ಗೆ ಸುಳಿವು ನೀಡಿದ್ದಾರೆ. ಸ್ಕ್ರಿಪ್ಟ್ ಪೂಜೆ ಸಂದರ್ಭದಲ್ಲಿಯೇ ಶ್ರೀ ಕೃಷ್ಣ ಪರಮಾತ್ಮನ ಫೋಟೋದೊಂದಿಗೆ ಯುದ್ಧ ಶುರು ಎಂಬುದನ್ನು ಬರೆದುಕೊಂಡಿದ್ದರು.

ಇದೀಗ ‘ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ’ ಎಂದಿದ್ದಾರೆ. ಹಾಗಂತ ಇದೇನು ಫ್ಯಾಂಟಸಿ ಅಥವಾ ಪೌರಾಣಿಕ ಕಥೆಯಲ್ಲ. ಪ್ರಸ್ತುತ ಕಾಲಘಟ್ಟದ ಕಥೆಯನ್ನು ಕಮರ್ಷಿಯಲ್ ಕೋನದಲ್ಲಿಯೇ ಹೇಳಲಿದ್ದಾರಂತೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಡಿ ಸುಪ್ರೀತ್ ಮತ್ತು ವೆಂಕಟ್ ಕೋಣಂಕಿ ಜತೆಯಾಗಿ ನಿರ್ವಿುಸುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರದ ಚಿತ್ರೀಕರಣ ಪೂರ್ವ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಶೀರ್ಷಿಕೆ ಅನಾವರಣ ಮಾಡಲಿದೆಯಂತೆ ತಂಡ. ಇತ್ತ ಎ.ಪಿ. ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಮೊದಲು ನಟಿಸಲಿದ್ದು, ಆ ನಂತರ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net