More

    ಯುವಪೀಳಿಗೆಗೆ ತಲುಪಬೇಕು ದಾರ್ಶನಿಕರ ತತ್ವ

    ಶೃಂಗೇರಿ: ಮಹಾಪುರುಷರ ಜಯಂತಿ ಆಚರಣೆಗಳು ಆಯಾ ಜನಾಂಗಕ್ಕೆ ಸೀಮಿತವಾಗಬಾರದು. ದಾರ್ಶನಿಕರ ತತ್ವಗಳು ಯುವಪೀಳಿಗೆಗೆ ತಿಳಿಯಬೇಕಾದರೆ ಶಾಲಾ ಕಾಲೇಜುಗಳಲ್ಲಿ ಜಯಂತಿಗಳನ್ನು ಆಚರಿಸಿ, ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಜೀವನದಲ್ಲಿ ಅಳವಡಿಸಿಕೊಳ್ಳಲು ಮನದಟ್ಟು ಮಾಡಿಕೊಡಬೇಕು ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಎನ್.ಕೆ.ವಿಜಯಕುಮಾರ್ ತಿಳಿಸಿದರು.

    ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಂಗಳವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ, ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಮತ್ತು ಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಆಧ್ಯಾತ್ಮಿಕ ಶ್ರದ್ಧೆಯಿಂದ ನಮ್ಮೊಳಗಿನ ಅಹಂ ಕಡಿಮೆಯಾಗಲು ಸಾಧ್ಯ. ವಿಚಾರಧಾರೆಗಳನ್ನು ಕೇಳುವ ಮನಸ್ಸುಗಳು ಹೆಚ್ಚಾಗಬೇಕು. ಸಾಹಿತ್ಯ ಜನಜೀವನದ ಪ್ರತಿಬಿಂಬ. ಸಮಾಜವನ್ನು ತಿದ್ದಿದ ವಚನ ಸಾಹಿತ್ಯ ಇಂದಿಗೂ ಶ್ರೇಷ್ಠ. ಸರ್ವರಿಗೂ ಸಮಬಾಳು-ಸಮಪಾಲು ಎಂಬ ಶರಣರ ತತ್ವ ಅಳವಡಿಸಿಕೊಂಡ ಮಡಿವಾಳ ಮಾಚಿದೇವ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದವರು ಎಂದರು.
    ನಿವೃತ್ತ ಮುಖ್ಯಶಿಕ್ಷಕ ಮಂಡಗಾರು ಜನಾರ್ದನ್ ಮಾತನಾಡಿ, 12ನೇ ಶತಮಾನದಲ್ಲಿ ಜ್ಞಾನ ಪ್ರಚುರಪಡಿಸಿದವರಲ್ಲಿ ಅಂಬಿಗರ ಚೌಡಯ್ಯ, ಬಸವಣ್ಣ, ಶಿವಾಜಿ, ಸರ್ವಜ್ಞ, ಸಂತ ಸೇವಾಲಾಲ್, ಮಡಿವಾಳ ಮಾಚೀದೇವರು ಶ್ರೇಷ್ಠರು. ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಎಲ್ಲರೂ ಶ್ರಮಿಸಿದ್ದಾರೆ. ಜನ ಸಾಮಾನ್ಯರಲ್ಲಿ ಭಕ್ತಿಪ್ರಧಾನ ಚಿಂತನೆಗಳನ್ನು ತುಂಬಿಸಿದ ಮಾಚಯ್ಯ ಮೂರು ಲಕ್ಷಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಶರಣರ ಸಂಸ್ಕೃತಿ ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದ ತಳಮಟ್ಟದ ಜನರನ್ನು ಮೇಲೆತ್ತುವ ಕಾಯಕಕ್ಕಾಗಿ ಅಹಿಂಸಾ ತತ್ವ ಅಳವಡಿಸಿಕೊಂಡ ಮಾಚಿದೇವ ಅವರ ವಿಶಾಲತೆ ಸರ್ವರಿಗೂ ಮಾದರಿ ಎಂದರು.
    ತಹಸೀಲ್ದಾರ್ ಗೌರಮ್ಮ ಮಾತನಾಡಿ, ಆಧುನಿಕ ಜೀವನದಲ್ಲಿ ಅಧಿಕಾರ, ಹಣಕ್ಕಾಗಿ ನಾವು ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ದೇಶದ ಸಂತರು, ಸಂಸ್ಕೃತಿ ಹಾಗೂ ಇತಿಹಾಸ ತಿಳಿದುಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ. ಮಾಚಿದೇವ ಅವರ ಸತ್ಕಾರ್ಯ ಚಿರನೂತನ. ವಚನ ಸಾಹಿತ್ಯವನ್ನು ಜತನದಿಂದ ಕಾಪಾಡಿಕೊಂಡು ಬಸವೇಶ್ವರರು ಅವರಿಂದ ಮಾಚಿತಂದೆ ಎಂದು ಕರೆಯಲ್ಪಟ್ಟ ಅವರ ಜೀವನ ಆದರ್ಶವಾದದ್ದು ಎಂದರು.
    ತಾಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಕೃಷ್ಣಪ್ಪ, ವಾಸು, ಸುರೇಶ್, ನಾಗಭೂಷಣ, ಸುಬ್ಬಣ್ಣ, ಚಂದ್ರಶೇಖರ್, ಕಂದಾಯ ಇಲಾಖೆ ಅಧಿಕಾರಿಗಳಾದ ಪ್ರವೀಣ್, ಅನಿಲ್, ಬಿ.ಜಿ.ನಾಗೇಶ್, ಮಾನಸಾ ಶೆಟ್ಟಿ, ಪರ್ವಿನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts