More

    ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು

    ಹುಬ್ಬಳ್ಳಿ: ತಾಲೂಕಿನ ತಾರಿಹಾಳ ಹತ್ತಿ ಖರೀದಿ ಕೇಂದ್ರದಲ್ಲಿ ಹತ್ತಿ ಖರೀದಿಸಲು ನಿರಾಕರಿಸಿದ ಅಧಿಕಾರಿಗಳನ್ನು ರೈತರು ಕೂಡಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ಜರುಗಿತು.

    ವಿವಿಧೆಡೆಯ ರೈತರು 30ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಲ್ಲಿ ಹತ್ತಿ ತುಂಬಿಕೊಂಡು ಬಂದಿದ್ದರು. ಸಂಜೆ ವೇಳೆ ನಾಲ್ಕೈದು ಟ್ರ್ಯಾಕ್ಟರ್​ಗಳು ಬಾಕಿ ಉಳಿದುಕೊಂಡಿದ್ದವು. ಬೆಳಗ್ಗೆ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿ ಹೊರಟಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಸಂಜೆ 6.30ಕ್ಕೆ ಪ್ರದೀಪ ಮತ್ತು ಪ್ರಶಾಂತ ಎಂಬ ಅಧಿಕಾರಿಗಳನ್ನು ಹತ್ತಿ ಕೇಂದ್ರದ ಕಚೇರಿಯಲ್ಲೇ ಕೂಡಿ ಹಾಕಿ, ಬೀಗ ಜಡಿದು ಪ್ರತಿಭಟಿಸಿದರು. ರಾತ್ರಿ 8 ಗಂಟೆಗೆ ಮೇಲಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿದ ಬಳಿಕ ಬಾಗಿಲು ತೆರೆದರು. ನಂತರ ಕೆಲಕಾಲ ಅಧಿಕಾರಿಗಳು- ರೈತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

    ‘ಮಂಗಳವಾರ ರಾತ್ರಿ ಟ್ರ್ಯಾಕ್ಟರ್​ನಲ್ಲಿ ಹತ್ತಿ ತುಂಬಿಕೊಂಡು ಬಂದಿದ್ದೆ. ಆಗ 30ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಿದ್ದವು. ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಅಧಿಕಾರಿಗಳು ಸರತಿಯಂತೆ ಹತ್ತಿ ಖರೀದಿಸದೇ ತಮಗೆ ಬೇಕಾದವರನ್ನು ಮೊದಲು ಕರೆಸಿಕೊಂಡು ಖರೀದಿಸಿದರು. ಸಂಜೆ ಆಗುತ್ತಿದ್ದಂತೆ ನಾಲ್ಕೈದು ಟ್ರ್ಯಾಕ್ಟರ್ ಉಳಿದಿದ್ದವು. ಎಷ್ಟು ಮನವಿ ಮಾಡಿದರೂ ನಿಮ್ಮ ಹತ್ತಿಯನ್ನು ನಾಳೆ ಖರೀದಿಸುತ್ತೇವೆ’ ಎಂದು ಹೇಳಿದರು. ತಾರತಮ್ಯ ಮತ್ತು ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ಮಾಡಬೇಕಾಯಿತು ಎಂದು ಕುಂದಗೋಳ ತಾಲೂಕು ಚಿಕ್ಕನರ್ತಿ ಗ್ರಾಮದ ರೈತ ಕಲ್ಮೇಶ ಬೆಳವಟಗಿ ಹೇಳಿದರು.

    ರಾತ್ರಿ 10 ಗಂಟೆವರೆಗೆ ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆದು, ಗುರುವಾರ ಬೆಳಗ್ಗೆ ಆರಂಭದಲ್ಲೇ ಹತ್ತಿ ಖರೀದಿಸುವುದಾಗಿ ತಿಳಿಸಿದ ಅಧಿಕಾರಿಗಳು ರೈತರಿಗೆ ಟೋಕನ್ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts