More

    ಆತ್ಮಸ್ಥೈರ್ಯವೊಂದೇ ಸವಾಲನ್ನು ಪರಾಭವಗೊಳಿಸುವುದು

    ಆತ್ಮಸ್ಥೈರ್ಯವೊಂದೇ ಸವಾಲನ್ನು ಪರಾಭವಗೊಳಿಸುವುದುಯಾರಿಗೆ ದುಃಖ ಇಲ್ಲ ಹೇಳಿ? ಸಿರಿವಂತರಿಗೂ, ಬಡವರಿಗೂ, ಜ್ಞಾನಿಗೂ, ಅಜ್ಞಾನಿಗೂ… ಎಲ್ಲರನ್ನೂ ಅದು ಆವರಿಸಿಕೊಂಡಿದೆ. ಈಗಂತೂ ಕರೊನಾ ಎರಡನೇ ಅಲೆಯ ನಿಮಿತ್ತ ಬಹುತೇಕರು ಆತಂಕ, ದುಃಖದ ಕೋಟೆಯಲ್ಲಿ ಬಂಧಿಯಾಗಿದ್ದೇವೆ. ನಿಜ, ವಿಚಿತ್ರ ಬಗೆಯ ಮಾನವೀಯ ಸಂಕಟ ತಲೆದೋರಿದೆ. ಪ್ರಶ್ನೆಗಳು ಹತ್ತು ಹಲವಾರು ಇವೆ. ನಿಖರ ಉತ್ತರ ಮಾತ್ರ ಸಿಗುತ್ತಿಲ್ಲ. ಕಾಲಜ್ಞಾನಿಗಳು ‘ಇದೆಲ್ಲ ಕಾಲದ ಆಟಾರೀ. ಆ ಕಾಲದ ಮುಂದ ಮನುಷ್ಯಾ ದೊಡ್ಡವ ಆಗಲಿಕ್ಕ ಶಕ್ಯ ಇಲ್ಲ ಬಿಡ್ರಿ’ ಎಂದು ಹೇಳುತ್ತಿದ್ದರೆ, ವೈದ್ಯಕೀಯ ರಂಗ ಲಸಿಕೆ, ಇನ್ನಿತರ ಔಷಧಗಳ ಮೂಲಕ ಹೋರಾಟವೇ ಅನಿವಾರ್ಯ ಎಂಬುದನ್ನು ಸಾರಿದೆ. ಈ ಸೋಂಕಿನ ಕಾಟದಿಂದ ಹೇಗೆ, ಯಾವಾಗ ಮುಕ್ತಿ ಸಿಗಲಿದೆ? ನಿಖರ ಉತ್ತರ ಯಾರ ಬಳಿಯೂ ಇಲ್ಲ. ಹಾಗಾದರೆ ಮುಂದೇನು?

    ಇದೊಂದು ಸತ್ವಪರೀಕ್ಷೆಯ ಸಮಯ. ಹೆದರಿ ಕುಳಿತುಕೊಳ್ಳಲಂತೂ ಸಾಧ್ಯವಿಲ್ಲ. ಕಾಳಜಿ ವಹಿಸುತ್ತಲೇ, ಸುರಕ್ಷಾ ಕ್ರಮಗಳನ್ನು, ಸರ್ಕಾರದ ನಿಯಮಗಳನ್ನು ಅನುಸರಿಸುತ್ತಲೇ ಧೈರ್ಯ ಎಂಬ ಅಸ್ತ್ರದೊಂದಿಗೆ ಹೋರಾಡಬೇಕಿದೆ. ಅಂಥ ಹಲವು ಘಟನೆಗಳು ಕೂಡ ದೇಶದ ವಿವಿಧೆಡೆಯಿಂದ ವರದಿಯಾಗುತ್ತಿವೆ. ಮಧ್ಯಪ್ರದೇಶದ ಭೋಪಾಲ್. ಇಲ್ಲಿ ಸರ್ಕಾರಿ ಅಂಕಿಅಂಶಗಳು ಕೋವಿಡ್​ನಿಂದ ಮೃತರಾದವರ ಸಂಖ್ಯೆ ದಿನಕ್ಕೆ 20-30 ಎಂದು ಹೇಳುತ್ತಿದ್ದರೂ, ಸ್ಮಶಾನಗಳಲ್ಲಿ ದಿನಕ್ಕೆ 100-150 ಶವಗಳನ್ನು ದಹಿಸಲಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತಿತರ ಸಮಸ್ಯೆಗಳ ನಡುವೆಯೂ ಅದೆಷ್ಟೋ ವೈದ್ಯರು ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಭೋಪಾಲ್​ನ ಡಾ.ಅನುರಾಧಾ ಚೌಧರಿ ಕಳೆದ 10 ದಿನಗಳಿಂದ ಕರೊನಾ ಪೀಡಿತರಾಗಿದ್ದಾರೆ. ಹಮಿದಿಯಾ ಆಸ್ಪತ್ರೆಯ ಎ ಬ್ಲಾಕ್​ನ ಎರಡನೇ ಮಹಡಿಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಅವರು ಕಳೆದ ಒಂದು ವಾರದಿಂದ ತಮ್ಮ ಮಹಡಿಯಲ್ಲಿರುವ 20ಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ‘ಈ ಸಂದರ್ಭದಲ್ಲಿ ನಾವು (ವೈದ್ಯರು) ಹತಾಶರಾಗಿ ಕುಳಿತು ಬಿಟ್ಟರೆ ರೋಗಿಗಳ ಗತಿ ಏನು? ಅವರಿಗೆ ಈಗ ಸರಿಯಾದ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಹಾಗಾಗಿ, ನಾನು ಬೆಡ್​ನಿಂದ ಎದ್ದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ’ ಎನ್ನುತ್ತಾರೆ ಅನುರಾಧಾ. ಎಂಡಿ ಮೆಡಿಸನ್ ಮೂರನೇ ವರ್ಷದಲ್ಲಿ ಓದುತ್ತಿರುವ ಡಾ.ಅನುಭವ್ ಅಗ್ರವಾಲ್​ರಿಗೆ ಏಪ್ರಿಲ್ 16ರಂದು ಕರೊನಾ ದೃಢಪಟ್ಟಿದೆ. ಚಿಕಿತ್ಸೆಗೆ ದಾಖಲಾಗಿರುವ ಇವರು ಹಮಿದಿಯಾ ಆಸ್ಪತ್ರೆಯ ಮೊದಲನೇ ಮಹಡಿಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ‘ಇವರ ಚಿಕಿತ್ಸೆ, ಆರೈಕೆ ಮಾಡುತ್ತ ನಾನು ರೋಗಿ ಎಂಬುದನ್ನೇ ಮರೆತು ಬಿಟ್ಟಿದ್ದೇನೆ’ ಎನ್ನುತ್ತಾರೆ ಅನುಭವ್.

    ಇಂಥ ಸಂದರ್ಭದಲ್ಲಿ ಮಾನಸಿಕ ಸ್ಥೈರ್ಯ ಕಾಪಾಡಿಕೊಳ್ಳುವುದು ತುಂಬ ಮುಖ್ಯ. ಕಷ್ಟದ ಹೊತ್ತಿನಲ್ಲಿ ಮತ್ತು ಸುತ್ತಲಿನಿಂದ ನಕಾರಾತ್ಮಕ ಸುದ್ದಿಗಳೇ ಬಂದು ಕಿವಿಗೆ ಅಪ್ಪಳಿಸುವಾಗ ಇಂಥ ಮನೋಬಲ ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ, ಮಾನಸಿಕವಾಗಿ ಧೈರ್ಯ ಕಳೆದುಕೊಂಡು ಬಿಟ್ಟರೆ ಅರ್ಧ ಸೋತಂತೆ. ಕಳೆದ ವರ್ಷವೂ ಭಾರತ ಕರೊನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಿ, ಗೆಲುವಿನ ಅಂಚಿಗೆ ತಲುಪಿತ್ತು. ಅಷ್ಟರಲ್ಲಿ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಇದನ್ನೂ ಗೆಲ್ಲುವ ವಿಶ್ವಾಸದೊಂದಿಗೆ, ಸಮರ ಮುಂದುವರಿಸುವುದು ಈಗಿನ ಅಗತ್ಯ. ಏಕೆಂದರೆ, ಎಷ್ಟೋ ಬಾರಿ ಪರಿಸ್ಥಿತಿಗಿಂತ, ಅದರ ಕುರಿತಾದ ಆಲೋಚನೆಗಳೇ ಭಯಂಕರವಾಗಿ ಹೆದರಿಸಿಬಿಡುತ್ತವೆ.

    ಬೈತುಲ್​ನಲ್ಲಿ (ಮ.ಪ್ರ) ಶಿವಮ್ ಮೆಹತೋ ಎಂಬ ಯುವಕ ಮತ್ತು ಆತನ ತಂದೆ-ತಾಯಿಗೆ ಸೋಂಕು ಬಾಧಿಸಿತು. ಮೂರೂ ಜನ ಆಸ್ಪತ್ರೆಗೆ ದಾಖಲಾದರು. ಶಿವಮ್ ಪಾಲಕರು ಮಧುಮೇಹಿ ರೋಗಿಗಳು ಬೇರೆ. ಮೊದಲೆರಡು ದಿನ ಆತಂಕದಲ್ಲಿ ಕಳೆದಿದ್ದರಿಂದ ಜ್ವರ ಜಾಸ್ತಿಯಾಯಿತು. ಬಳಿಕ ವೈದ್ಯರೊಂದಿಗೆ ಸಮಾಲೋಚಿಸಿದರು. ಮೂರೂ ಜನ ಪರಸ್ಪರ ಧೈರ್ಯ ಹೇಳಿಕೊಂಡರು ಮತ್ತು ಅವರು ಕೃಷಿ ಕುಟುಂಬಕ್ಕೆ ಸೇರಿದ್ದರಿಂದ, ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಗದ್ದೆಯಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ರ್ಚಚಿಸತೊಡಗಿದರು. ಆ ಬಗ್ಗೆಯೇ ಯೋಚಿಸಿ, ಯೋಜನೆ ರೂಪಿಸತೊಡಗಿದರು. ಪರಿಣಾಮ, ತಾವು ಕರೊನಾ ಪೀಡಿತರೆಂದೇ ಮರೆತು ಬಿಟ್ಟರು ಮತ್ತು ಒಂದೇ ವಾರದಲ್ಲಿ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಸಕಾರಾತ್ಮಕ ಚಿಂತನೆಯ ಶಕ್ತಿಯೇ ಅಷ್ಟು ವಿಶಿಷ್ಟ.

    ಕಠಿಣ ಸಂದರ್ಭಗಳು ಬಂದಾಗಲೆಲ್ಲ ಎಲ್ಲ ದಾರಿಗಳೂ ಮುಚ್ಚಿಹೋದವೇನೋ ಎನಿಸಿಬಿಡುತ್ತದೆ. ವಾಸ್ತವದಲ್ಲಿ ಅದು ಮನಸ್ಸಿನ ಆತಂಕವಷ್ಟೇ. ನೈಜ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಸ್ಪಂದಿಸತೊಡಗಿದರೆ ಪರಿಹಾರದ ಮಾರ್ಗಗಳು ಸಿಕ್ಕೇ ಸಿಗುತ್ತವೆ. ಕಳೆದ ವರ್ಷ ಕರೊನಾದ ಹಲವು ಅಡ್ಡಪರಿಣಾಮಗಳನ್ನು ನೋಡಿದ್ದೇವೆ. ಅಂದರೆ ಆರ್ಥಿಕ ಕುಸಿತ, ಉದ್ಯೋಗ ನಷ್ಟ, ಉದ್ಯಮ ನಷ್ಟ ಹೀಗೆ. ಇಂಥ ಕ್ಲಿಷ್ಟ ಪರಿಸ್ಥಿತಿಗಳನ್ನು ಕೂಡ ಸಮರ್ಥವಾಗಿ ಎದುರಿಸಿ, ಹೊಸ ಪಯಣ ಆರಂಭಿಸಿದವರ ಸಂಖ್ಯೆ ಕಡಿಮೆಯೇನಲ್ಲ. ಎಷ್ಟೋ ಜನ ನಗರಗಳನ್ನು ಶಾಶ್ವತವಾಗಿ ತೊರೆದು, ಅವರ ಹಳ್ಳಿಗಳಿಗೆ ಮರಳಿದರು. ಪರಿಣಾಮ, ಈ ಹಿಂದೆ ‘ವೃದ್ಧಾಶ್ರಮ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಗ್ರಾಮಗಳು ಜೀವಕಳೆ ಪಡೆದುಕೊಂಡವು. ಯುವಕರು ಕೃಷಿಯತ್ತ ವಾಲಿದರು, ಸ್ವಯಂ ಉದ್ಯೋಗ ಕೈಗೊಂಡು ಇತರರಿಗೂ ಕೆಲಸ ನೀಡಿದ್ದು, ಗ್ರಾಮೀಣ ಆರ್ಥಿಕತೆಗೆ ಆಶಾದಾಯಕ ಸಂಗತಿಯಾಯಿತು. ಸಾವಯವ ಕೃಷಿಗೆ ಉತ್ತೇಜನ ದೊರಕಿದ್ದು, ಮಾರುಕಟ್ಟೆ ವ್ಯವಸ್ಥೆಯೂ ಬಲಗೊಂಡಿದೆ. ಗ್ರಾಮದಲ್ಲಿರುವ ಅವಕಾಶಗಳು ಅನಾವರಣಗೊಂಡಿದ್ದು, ಸ್ವಾವಲಂಬನೆಯ ಮಹತ್ವವೂ ಮನದಟ್ಟಾಗಿದೆ. ಕೆಡುಕುಗಳ ಜತೆಗೆ ಒಳ್ಳೆಯ ಸಂಗತಿಗಳೂ ಬೆಸೆದು ಕೊಂಡಿರುತ್ತವೆ. ಅವುಗಳನ್ನು ಗುರುತಿಸುವ ವ್ಯವಧಾನ ಬೇಕಷ್ಟೇ.

    ಸ್ಥಳೀಯವಾಗಿ ಕಂಡ ಇಂಥ ಸಕಾರಾತ್ಮಕ ಸಂಗತಿಗಳನ್ನೆಲ್ಲ ಪೋಣಿಸಿ, ಅದನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ ಹಿರಿಯ ಲೇಖಕ ನಾ.ಕಾರಂತ ಪೆರಾಜೆ. ‘ಮುಸ್ಸಂಜೆಯ ಹೊಂಗಿರಣ-ಕರೊನಾ ಕೃಪೆಯ ವರಗಳತ್ತ ಇಣುಕು ನೋಟ’ ಎಂಬ ಪುಸ್ತಕವನ್ನು ‘ದ ರೂರಲ್ ಮಿರರ್ ಪ್ರಕಾಶನ’ ಪ್ರಕಟಿಸಿದೆ. ಗ್ರಾಮ್ಯ ಬದುಕಿನ ಸಕಾರಾತ್ಮಕ ಬದಲಾವಣೆಗಳನ್ನು, ಕರೊನಾ ಕಾಲದ ಪಲ್ಲಟಗಳನ್ನು ಸೂಕ್ಷ್ಮವಾಗಿ ಗುರುತಿಸಿ, ಅಕ್ಷರ ತೋರಣ ಕಟ್ಟಿದ್ದಾರೆ ನಾ.ಕಾರಂತರು. ಚನ್ನಪಟ್ಟಣ ತಾಲೂಕಿನ ಚಿಕ್ಕೇನಹಳ್ಳಿಯಲ್ಲಿ ವಿದ್ಯಾರ್ಥಿಗಳು ನೆಟ್​ವರ್ಕ್ ಇಲ್ಲದೆ ಆನ್​ಲೈನ್ ತರಗತಿಯಿಂದ ದೂರವುಳಿದಿದ್ದರು. ಮಾತೃಭೂಮಿ ಸೇವಾ ಫೌಂಡೇಷನ್ ಸಂಸ್ಥೆ ಈ ಗ್ರಾಮದಲ್ಲಿ ಉಚಿತ ನೆಟ್​ವರ್ಕ್ ಒದಗಿಸಿದ್ದು, ಡಿಜಿಟಲ್ ತಂತ್ರಜ್ಞಾನದ ಪ್ರವೇಶದಿಂದ ಹಳ್ಳಿಯ ಚಹರೆಯೂ ಬದಲಾಗಿದೆ. ಯೂತ್ ಬ್ರಾಂಡ್ ಸಹಯೋಗದಲ್ಲಿ, ವೈಫೈ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮಸ್ಥರಿಂದ ಒಂದು ಪೈಸೆಯನ್ನೂ ಪಡೆಯದೆ ಸಂಸ್ಥೆಯೇ ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. ಇದರಿಂದ, 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್​ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಧಾರವಾಡದ ಮಾಲತಿ ಮುಕುಂದ ಮೂಗೂರ ಹನ್ನೆರಡು ಬಗೆಯಲ್ಲಿ ಮೌಲ್ಯವರ್ಧನೆ ಮಾಡಿ, ಮಾವಿನಹಣ್ಣಿಗೆ ರಾಜಮರ್ಯಾದೆ ಸಿಗುವಂತೆ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಮನೆಯ ಎಲ್ಲ ಸದಸ್ಯರು ಬೆಂಬಲವಾಗಿ ನಿಂತಿರುವುದು ವಿಶೇಷ. ಹೀಗೆ ಕೌಟುಂಬಿಕ ಬಾಂಧವ್ಯಗಳು ಗಟ್ಟಿಗೊಂಡಿದ್ದು, ಹಳ್ಳಿ ಮನಸುಗಳ ಸಹಕಾರ ಭಾವನೆ ವೃದ್ಧಿಯಾಗಿದ್ದು, ಶುದ್ಧ ಆಹಾರದ ಬೇಡಿಕೆ ಹೆಚ್ಚಿದ್ದು, ರಾಸಾಯನಿಕಗಳನ್ನು ಬಳಸದೆ ತರಕಾರಿಗಳನ್ನು ಬೆಳೆಸಿದ್ದು, ಸ್ಥಳೀಯ ಸಮಸ್ಯೆಗಳಿಗೆ ಜನರೇ ಪರಿಹಾರ ಕಂಡುಕೊಂಡಿದ್ದು- ಜೀವನೋತ್ಸಾಹ ಹೆಚ್ಚಿಸುವಂಥ, ಆಶಾವಾದ ಮೂಡಿಸುವಂಥ ಹಲವು ಸಂಗತಿಗಳನ್ನು ಈ ಪುಸ್ತಕದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.

    ಹೌದು, ನಮ್ಮೆಲ್ಲರ ದೃಷ್ಟಿಕೋನವೂ ಬದಲಾಗಬೇಕಿದೆ. ಸಮಸ್ಯೆ ಇಲ್ಲ ಅಂತಲ್ಲ. ಆದರೆ, ಅದನ್ನು ಕಂಡು ಹೆದರಿ, ಹತಾಶರಾಗುವುದಕ್ಕಿಂತ ಹೋರಾಟಕ್ಕೆ ಅಣಿಗೊಳ್ಳುವುದು ಉತ್ತಮ ಅಲ್ಲವೇ? ಈಗಲೂ ಅಷ್ಟೇ. ಮುಂಬೈ, ಪುಣೆ, ಬೆಂಗಳೂರಿನಿಂದ ಮರುವಲಸೆ ಆರಂಭಗೊಂಡಿದೆ. ಹಳ್ಳಿಗಳಿಗೆ ಮರಳಿದವರು ಅಲ್ಲಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆ ಕಂಡು ಧೃತಿಗೆಡದೆ, ಇರುವ ಅವಕಾಶಗಳನ್ನು ಮೊದಲು ಗಮನಿಸಬೇಕು. ಹೊಸದಾಗಿ ಏನೆಲ್ಲ ಮಾಡಲು ಸಾಧ್ಯವಿದೆ ಎಂಬುದನ್ನು ಯೋಚಿಸಿ, ಅನುಷ್ಠಾನಕ್ಕೆ ತರಬೇಕು. ಮಾನವೀಯ ಸಂಕಟದ ಕಾಲದಲ್ಲಿ ಮಾನವೀಯತೆಯ ದರ್ಶನ ಆಗಬೇಕು. ಯಾವುದೂ ಶಾಶ್ವತವಲ್ಲ, ಸ್ಥಿರವಾದದ್ದು ಅಲ್ಲ ಎಂಬುದನ್ನು ಕಾಲದ ಓಟ ಮತ್ತೆ ಮತ್ತೆ ಎಚ್ಚರಿಕೆಯ ಗಂಟೆ ಮೊಳಗಿಸುತ್ತಲೇ ಇದೆ. ಆದ್ದರಿಂದ, ಪರಸ್ಪರ ಸ್ಥೈರ್ಯ ತುಂಬುವಂಥ, ನೆರವಿಗೆ ನಿಲ್ಲುವಂಥ ಪ್ರಯತ್ನಗಳು ಜಾಸ್ತಿಯಾಗಲಿ. ಕೌಟುಂಬಿಕ, ಸಾಮಾಜಿಕ ಬಾಂಧವ್ಯಗಳು ಹೆಚ್ಚಲಿ. ಮಾನವೀಯ ಮೌಲ್ಯಕ್ಕಿಂತ ಮಿಗಿಲಾದ ಸಂಗತಿ ಇಲ್ಲ. ಯಾರದೋ ನೋವು ಎಂದು ನಿರ್ಲಕ್ಷಿಸುವಂತಿಲ್ಲ. ಕರೊನಾ ರೂಪದ ಸಂಕಟ ಮನೆಬಾಗಿಲಿಗೇ ಬಂದು ನಿಲ್ಲುತ್ತಿದೆ. ಹಾಗಾಗಿ, ಮೊದಲು ಎಲ್ಲರೂ ಕರೊನಾ ಸೇನಾನಿಗಳಾಗೋಣ. ಧೃತಿಗೆಡದೆ, ಮನೋಬಲದಿಂದ ಮುಂದುವರಿಯುತ್ತ, ಇತರರನ್ನೂ ಹುರಿದುಂಬಿಸುತ್ತ ಸಾಗೋಣ.

    ಈ ಸವಾಲನ್ನೂ ಗೆದ್ದು ಬರುವ ವಿಶ್ವಾಸ ಇದ್ದೇ ಇದೆ. ಅದಕ್ಕಾಗಿ, ನಮ್ಮ ಆತ್ಮಸ್ಥೈರ್ಯ ಅನಾವರಣಗೊಳ್ಳಲಿ. ಸಂವೇದನೆಯೂ ಜಾಗೃತಗೊಂಡು, ಮತ್ತೊಬ್ಬರ ದುಃಖ, ನೋವನ್ನು ನಿವಾರಿಸುವ ಸಂಕಲ್ಪ ಒಡಮೂಡಲಿ. ಆಗಲೇ ಬದುಕು ಮತ್ತೆ ನೆಮ್ಮದಿಯ ನಿಲ್ದಾಣಕ್ಕೆ ತಲುಪಬಲ್ಲದು… ಏನಂತೀರಿ?

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts