More

    ಆಂಧ್ರ, ತಮಿಳುನಾಡಿಗೆ ನೀರು ಹರಿಸಿದರೆ ವಿರೋಧಿಸಿಲ್ಲ, ಕರ್ನಾಟಕಕ್ಕೆ ಮಾತ್ರ ರಾಗ ಎಳೆಯುತ್ತಾರೆ ಸಚಿವರು

    ಚಿಕ್ಕಬಳ್ಳಾಪುರ: ಬರಪೀಡಿತ ಬಯಲು ಸೀಮೆ ಭಾಗಕ್ಕೆ ಕೃಷ್ಣ ನದಿ ನೀರಿನ ಹಂಚಿಕೆ ಸಾಧ್ಯವಿಲ್ಲ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಯನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಯು ಖಂಡಿಸಿದೆ.
    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೃಷ್ಣ ನದಿ ನೀರನ್ನು ಈ ಭಾಗಕ್ಕೆ ಹರಿಸುವ ಮೂಲಕ ನೀರಾವರಿ ಸೌಲಭ್ಯವನ್ನು ಒದಗಿಸಲು ಮನವಿ ಸಲ್ಲಿಸಿದ್ದು ಇದಕ್ಕೆ ಸಚಿವ ಎಂ.ಬಿ.ಪಾಟೀಲ್ ವಿರೋಧಿಸಿದ್ದಾರೆ. ಬಯಲು ಸೀಮೆ ಭಾಗಕ್ಕೆ ನೀರನ್ನು ಹರಿಸಲು ಬಿಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
    ಉತ್ತರ ಕರ್ನಾಟಕದ ಜಹಾಂಗೀರು ಎಂದು ಭಾವಿಸಿರುವ ಕೃಷ್ಣಾ ನದಿಯಿಂದ ನೂರಾರು ಟಿಎಂಸಿ ನೀರು ಪ್ರವಾಹದ ರೂಪದಲ್ಲಿ ಆಂಧ್ರಕ್ಕೆ ಹರಿದರೆ ಇವರಿಗೇನೂ ನೋವಿಲ್ಲ. ಹಾಗೆಯೇ ಕೇಂದ್ರ ಸರ್ಕಾರವು ಕೈಗೆತ್ತಿಕೊಂಡಿರುವ ಕೃಷ್ಣಾ – ಪೆನ್ನಾರ್ -ಕಾವೇರಿ ನದಿ ಜೋಡಣೆಯ ಯೋಜನೆಯ ಮೂಲಕ ತಮಿಳುನಾಡಿಗೆ ಕೃಷ್ಣಾ ನದಿ ನೀರನ್ನು ಹರಿಸಿದರೂ ವಿರೋಧಿಸಲ್ಲ. ಆದರೆ, ಕರ್ನಾಟಕದ ಬರಪೀಡಿತ ಬಯಲುಸೀಮೆಯ ಜನರಿಗೆ ಕುಡಿಯುವ ನೀರಿಗಾಗಿ ಮಾತ್ರ ಕೃಷ್ಣಾ ನದಿಯಿಂದ ಒಂದು ಹನಿ ನೀರನ್ನು ಹರಿಸಲು ಬಿಡುವುದಿಲ್ಲ ಎನ್ನುತ್ತಾರೆ. ಇವರ ಧೋರಣೆ ಖಂಡನೀಯ ಎಂದು ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಕಿಡಿಕಾರಿದ್ದಾರೆ.
    2013 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರ ಕೊಡುಗೆ ಶೂನ್ಯ. ರಾಜ್ಯದ ನೀರಾವರಿ ಪ್ರದೇಶದ ವಿಸ್ತರಣೆಗೆ ಆದ್ಯತೆ ನೀಡಲಿಲ್ಲ. ಕೇವಲ ವಿಜಯಪುರ ಜಿಲ್ಲೆಗೆ ಮಾತ್ರ ನೀರಾವರಿ ಮಂತ್ರಿ ಎನ್ನುವಂತೆ ಕಾರ್ಯ ನಿರ್ವಹಿಸಿದರು. ಇನ್ನೂ ಬೊಗಸೆ ನೀರು ಹರಿಯುವ ಖಾತ್ರಿಯಿಲ್ಲದಿದ್ದರೂ ದಲ್ಲಾಳಿಗಳ ಜತೆ ಶಾಮೀಲಾಗಿ, ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿಗಳ ಪೈಪ್ ಹಾಕಿಸುವುದರಲ್ಲಿ ತಲ್ಲೀನರಾಗಿದ್ದರು. ಇದಕ್ಕೆ ಬರೋಬ್ಬರಿ 12 ವರ್ಷ ಕಳೆದರೂ ಒಂದು ಹನಿ ನೀರು ಈ ಭಾಗಕ್ಕೆ ಹರಿದಿಲ್ಲ ಎಂದು ಆರೋಪಿಸಿದ್ದಾರೆ.
    ಕೃಷ್ಣಾ – ಆಲಮಟ್ಟಿ – ಪೆನ್ನಾರ್ ಜೋಡಣೆಯ ಕೊಂಡಿ ಯೋಜನೆಯಡಿ (ದಕ್ಷಿಣ ಪಿನಾಕಿನಿ) ಕರ್ನಾಟಕದ ಪೆನ್ನಾರ್ ನದಿ ಜಲಾನಯನ ಪ್ರದೇಶಕ್ಕೆ ಸೇರಿದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 1.82 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಕಾರ್ಯಸಾಧ್ಯತಾ ಯೋಜನಾ ವರದಿಯನ್ನು 2000 ರಲ್ಲಿ ರಾಷ್ಟೀಯ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯು ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರಕ್ಕೆ ಸಲ್ಲಿಸಿದ್ದು ಇದಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಅರಿವಿದ್ದರೂ ಎಂ.ಬಿ.ಪಾಟೀಲ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts