More

    ಗಾಯಾಳುಗಳನ್ನು ಭೇಟಿ ಮಾಡಿದ ಸಚಿವ

    ಹೊಳೆನರಸೀಪುರ: ತಾಲೂಕಿನ ಹಾರಗೌಡನಹಳ್ಳಿ ಗ್ರಾಮದಲ್ಲಿ ಸೋಮವಾರ ಕಾಡುಹಂದಿ ದಾಳಿಗೆ ಸಿಲುಕಿ ಒಬ್ಬ ಮೃತಪಟ್ಟು ಮತ್ತೆ ಮೂವರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಂಗಳವಾರ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ದಾಳಿಗೆ ತುತ್ತಾದವರ ಆರೋಗ್ಯ ವಿಚಾರಿಸಿದರು.

    ಸೋಮವಾರ ಬೆಳಗಿನ ವೇಳೆ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಸಣ್ಣರಾಜಣ್ಣ ಅವರ ಮೇಲೆ ಕಾಡುಹಂದಿ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿತ್ತು. ಹಂದಿಯನ್ನು ಬೆದರಿಸಲು ಹೋದ ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರ ಮೇಲೂ ದಾಳಿ ನಡೆಸಿತ್ತು. ಮಹಿಳೆಯರು ತೀವ್ರವಾಗಿ ಗಾಯಗೊಂಡು ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಪುರುಷರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ವೈದ್ಯಾಧಿಕಾರಿ ಡಾ.ಧನಶೇಖರ್ ಮಾತನಾಡಿ, ಯಾರಿಗೂ ಮೂಳೆ ಮುರಿದಿಲ್ಲ. ಹಂದಿ ಕೋರೆಯಿಂದ ತಿವಿದಿದ್ದು ಮಾಂಸಖಂಡಗಳಿಗೆ ಹಾನಿಯಾಗಿದೆ. ಅಗತ್ಯ ಚಿಕಿತ್ಸೆ ನೀಡುತ್ತಿರುವುದಾಗಿ ವಿವರಿಸಿದರು.

    ಎಸಿಎಫ್ ಮೋಹನ್‌ಕುಮಾರ್ ಮಾತನಾಡಿ, ಮೃತ ಸಣ್ಣರಾಜಣ್ಣ ಅವರ ಕುಟುಂಬಕ್ಕೆ ಈಗಾಗಲೇ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. 5 ವರ್ಷಗಳವರೆಗೆ ಪ್ರತಿ ತಿಂಗಳೂ 4 ಸಾವಿರ ರೂ. ಮಾಸಾಶನ ನೀಡಲಾಗುವುದು. ಪೆಟ್ಟಾಗಿರುವವರಿಗೆ ಸಂಪೂರ್ಣ ಶಾಶ್ವತ ಊನ ಆಗಿದ್ದರೆ 7.5 ಲಕ್ಷ ರೂ., ಹಾಗೂ ಮಾಸಾಶನ 2,000 ರೂ. ನೀಡಲು ಅವಕಾಶ ಇದೆ. ಇತರರಿಗೆ ಗಾಯದ ಪ್ರಮಾಣದ ಅನುಗುಣವಾಗಿ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.

    ತಾಲೂಕಿನ ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್, ಮಾಜಿ ಪುರಸಭಾ ಅಧ್ಯಕ್ಷ ಎಚ್.ಇ.ವಿ.ಪುಟ್ಟರಾಜು, ಹಿರಿಯ ವೈದ್ಯಾಧಿಕಾರಿ ಎಚ್.ಕೆ.ರಮೇಶ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts