More

    ಕಾವೇರಿ ರಕ್ಷಣೆಗಾಗಿ ಬಲ ತುಂಬಿ

    ಹೊಳೆನರಸೀಪುರ : ದೇಶದಲ್ಲಿ ಮೋದಿ ಅವರನ್ನು ಬಿಟ್ಟರೆ ಪ್ರಧಾನಿಯಾಗಲು ಯಾರು ಅರ್ಹರಲ್ಲ. ಕರ್ನಾಟಕ ರಾಜ್ಯದ ಕಾವೇರಿ ಹೋರಾಟಕ್ಕೆ ಕೂಡ ಮೋದಿ ಪ್ರಧಾನಿ ಆದರೆ ನಮಗೆ ಶಕ್ತಿ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

    ತಾಲೂಕಿನ ನಗರನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ಈ ಭಾಗದಲ್ಲಿ ಯಾವುದೇ ನದಿ ಮೂಲಗಳಿಲ್ಲದ ಕಾರಣ ಕೃಷಿ ಭೂಮಿಗಳು ಬಂಜರು ಭೂಮಿಗಳಾಗಿವೆ. ಇದನ್ನು ನೋಡಿ ನನ್ನ ಮನಸ್ಸಿಗೆ ತುಂಬ ಬೇಸರವಾಗಿದೆ. ಮುಂದಿನ ದಿನಗಳಲ್ಲಿ ಹೇಮಾವತಿ ನದಿ ನೀರನ್ನು ಈ ಭಾಗಕ್ಕೆ ಹರಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

    ರಾಜ್ಯದ ರೈತರು ಇಂದು ತೀವ್ರ ಬರ ಪರಿಸ್ಥಿತಿ ಎದುರಿಸಲು ಕಾವೇರಿ ನದಿ ನೀರು ತಮಿಳಿಗರ ಪಾಲಾಗಿದ್ದೇ ಕಾರಣವಾಗಿದೆ. ಆದ್ದರಿಂದ ಕಾವೇರಿ ನದಿ ನೀರಿನ ರಕ್ಷಣೆಗಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದೇನೆ. ಅದರಂತೆ ಈಗಾಗಲೇ ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಬೆಂಗಳೂರು ಚಿತ್ರದುರ್ಗ ಚಿಕ್ಕಮಗಳೂರು, ತುಮಕೂರು, ಸೇರಿದಂತೆ ಎಲ್ಲ ಕಡೆ ಅಭ್ಯರ್ಥಿಗಳ ಗೆಲುವಿಗೆ ಹೋರಾಟ ಮಾಡುತ್ತಿದ್ದೇನೆ ಎಂದರು.

    ಚಿಕ್ಕಬಳ್ಳಾಪುರದಲ್ಲಿ ಮೋದಿ ಅವರೊಂದಿಗೆ ಮಾತನಾಡುವಾಗ ಕಾವೇರಿ ನದಿ ನೀರು ತಮಿಳು ನಾಡಿನ ಪಾಲಾಗುತ್ತಿರುವ ಬಗ್ಗೆ ಅವರ ಗಮನಕ್ಕೆ ತಂದಿದ್ದು ನಾನು ಸಾಯುವ ಒಳಗಾಗಿ ಕಾವೇರಿ ನೀರನ್ನು ರಾಜ್ಯದ ಜನರ ಬಳಕೆಗೆ ಉಳಿಸಿ ಕೃಷ್ಣಾ ನದಿ ನೀರನ್ನು ಕರ್ನಾಟಕ ರಾಜ್ಯಕ್ಕೆ ಹರಿಸಿ ಅದನ್ನು ನನ್ನ ಕಣ್ಣಿನಿಂದ ನೋಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

    ನನ್ನ ಅಧಿಕಾರದ ಅವಧಿಯಲ್ಲಿ ದಲಿತರು, ಮುಸ್ಲಿಮರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಬದುಕಲು ಹಕ್ಕುಗಳನ್ನು ಕೊಟ್ಟು ಆಯಾ ಸಮುದಾಯಕ್ಕೆ ಅನುಗುಣವಾಗಿ ಮೀಸಲಾತಿಗಳನ್ನು ಹೆಚ್ಚಿಸಿ ರಾಜಕೀಯವಾಗಿಯೂ ಮುಂದೆ ಬರಲು ಯೋಜನೆ ರೂಪಿಸಿದ್ದೇನೆ ಎಂದು ತಿಳಿಸಿದರು.

    ಎಂಎಲ್ಸಿ ಸೂರಜ್ ರೇವಣ್ಣ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ರಂಗೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಕೇಂದ್ರ ನಾಯಕರ ಜತೆ ಚರ್ಚಿಸಿ ಯೋಜನೆಯನ್ನು ಕಾರ್ಯಗತ ಮಾಡಲು ಮನವಿ ಮಾಡಲಾಗುವುದು ಎಂದರು.

    ನೀರಾವರಿಗೆ ದೇವೇಗೌಡರ ಕೊಡುಗೆ ಅಪಾರ. ಅನೇಕ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನೀರಾವರಿ ಭೀಷ್ಮ ಎಂದು ಕರೆಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಶಕ್ತಿ ತುಂಬಬೇಕಿದೆ. ಆಗ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಮಾಡುವುದು ಶತಃಸಿದ್ಧ ಎಂದರು. ಶಾಸಕ ಎ.ಮಂಜು, ಜೆಡಿಎಸ್ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts