More

    ಹೆಬ್ಬಾರ ನಾಮಪತ್ರ ಸಲ್ಲಿಕೆ

    ಶಿರಸಿ: ಕೆಡಿಸಿಸಿ ಬ್ಯಾಂಕ್​ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆಯಲ್ಲಿರುವ ಚುನಾವಣೆಗೆ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮತದಾರ ಕ್ಷೇತ್ರದಿಂದ ಯಲ್ಲಾಪುರ ತಾಲೂಕು ಪ್ರತಿನಿಧಿಯಾಗಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಸುಜಾತಾ ಬಂಟ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಶನಿವಾರ ನಾಮಪತ್ರ ಸಲ್ಲಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಭಾರತಿ ಪಕ್ಷಾತೀತ ಸಂಘಟನೆಯಾಗಿದ್ದು, ಎಲ್ಲ ಪಕ್ಷಗಳ ಸಹಕಾರಿ ಪ್ರಮುಖರು ಇದರಲ್ಲಿ ಭಾಗಿಯಾಗಿ ಕೆಡಿಸಿಸಿ ಬ್ಯಾಂಕ್ ಚುನಾವಣೆ ಎದುರಿಸಲಿದ್ದಾರೆ. ಉತ್ತಮ ಸಹಕಾರಿಗಳ ತಂಡ ರಚಿಸಿದರೆ, ಬ್ಯಾಂಕ್ ಅನ್ನು ನಂಬಿದ ರೈತರು, ನಿರುದ್ಯೋಗಿಗಳ ಶ್ರೇಯೋಭಿವೃದ್ಧಿಯ ಜತೆ ಬ್ಯಾಂಕ್​ನ ಠೇವಣಿಗೂ ಒಳ್ಳೆಯದು. ಈ ನಿಟ್ಟಿನಲ್ಲಿ ಉತ್ತಮ ಸದಸ್ಯರ ಗೆಲುವಿಗಾಗಿ ಸಹಕಾರ ಭಾರತಿ ಮುಂದಾಗಿದೆ ಎಂದರು.

    ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಇರಬಾರದು. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಐದು ಬಾರಿ ಆಯ್ಕೆಯಾದರೂ ಈವರೆಗೂ ರಾಜಕೀಯ ಮಾಡಿಲ್ಲ . ಬ್ಯಾಂಕ್ ರಾಜಕೀಯೇತರವಾಗಿ ಇರಬೇಕು. ಎಲ್ಲ ರಾಜಕೀಯ ಪಕ್ಷದವರು ಬ್ಯಾಂಕ್ ಆಡಳಿತ ಮಂಡಳಿಗೆ ಹೋಗಬೇಕೆಂಬುದು ಸರಿಯಾದರೂ ಅಲ್ಲಿ ಹೋದ ನಂತರ ರಾಜಕೀಯ ಮಾಡಬಾರದು ಎಂದರು.

    ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಸಹಕಾರಿ ಧುರೀಣರಾದ ಶ್ರೀಕಾಂತ ಶೆಟ್ಟಿ, ನರಸಿಂಹ ಕೋಣೆಮನೆ, ದ್ಯಾಮಣ್ಣ ದೊಡ್ಮನಿ, ಪ್ರಮುಖರಾದ ವಿಜಯ ಮಿರಾಶಿ, ಬಾಲಕೃಷ್ಣ ನಾಯಕ ಹಾಗೂ ಸಹಕಾರಿ ಸಂಘಗಳ ಪ್ರತಿನಿಧಿಗಳು ಇದ್ದರು.

    ಶಿರಸಿ-ಕುಮಟಾ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಗುತ್ತಿಗೆದಾರರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು.

    | ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts