More

    ಪುಲ್ವಾಮ ದಾಳಿಯಲ್ಲಿ ಮೃತನಾದ ಯೋಧನಿಗೆ ಕುಟುಂಬ ಮತ್ತು ಗ್ರಾಮಸ್ಥರಿಂದ ಸಿಕ್ಕಿತು ಭಾರಿ ಗೌರವ…

    ತಮುಲ್ಪರ್​: ಕಳೆದ ವರ್ಷ ಪುಲ್ವಾಮ ದಾಳಿಯಲ್ಲಿ ಮೃತನಾದ ಯೋಧನೊಬ್ಬನಿಗೆ ಆತನ ಊರಿನಲ್ಲಿ ನಿನ್ನೆ ಗೌರವಾರ್ಪಣೆ ಮಾಡಲಾಗಿದೆ. ಸ್ವತಃ ಗ್ರಾಮಸ್ಥರು ಮತ್ತು ಕುಟುಂಬಸ್ಥರೇ ಹಣ ಸಂಗ್ರಹ ಮಾಡಿ ಯೋಧನ ಪ್ರತಿಮೆಯನ್ನು ನಿರ್ಮಿಸುವುದರ ಮೂಲಕ ಗೌರವಾರ್ಪಣೆ ಮಾಡಿದ್ದಾರೆ.

    ಕಳೆದ ವರ್ಷ ಫೆ.14ರಂದು ಉಗ್ರಗಾಮಿಗಳು ನಡೆಸಿದ ಸ್ಫೋಟದಿಂದ ಮರಣ ಹೊಂದಿದ ಸಿಆರ್​ಪಿಎಫ್​ ಯೋಧರಿಗೆ ಸ್ಮಾರಕ ಭವನ ನಿರ್ಮಿಸುವ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರದಿಂದ ಈ ಗೌರವಕ್ಕೆ ಕಾಯದ ಆಸ್ಸಾಂನಲ್ಲಿರುವ ತಮಲ್ಪುರ್​ನ ಬಕ್ಸಾ ಗ್ರಾಮದ ಜನರು ತಮ್ಮ ಊರಿನ ಯೋಧನ ಪ್ರತಿಮೆಯನ್ನು ನಿರ್ಮಿಸಿ ನಿನ್ನೆ ಉದ್ಘಾಟನೆ ಮಾಡಿದ್ದಾರೆ. ಮೃತ ಯೋಧ ಮುನೇಶ್ವರ್​ ಬಸುಮಾಟರಿ ಅವರಿಗೆ ಗೌರವ ಸೂಚಿಸುವ ಪ್ರಯುಕ್ತ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.

    ಪುಲ್ವಾಮ ದಾಳಿಯಲ್ಲಿ ಮುನೇಶ್ವರ್​ ಹತರಾದಾಗಿನಿಂದ ಸರ್ಕಾರ ಆತನ ಕುಟುಂಬದ ಬಗ್ಗೆ ಕಾಳಜಿ ವಹಿಸಿದೆ. ಸಿಪಿಆರ್​ಎಫ್​ನವರೂ ಸಹ ಆಗಾಗ ಕುಟುಂಬದ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆದರೆ ವೀರ ಯೋಧನ ಚರಿತ್ರೆಯನ್ನು ಜಗತ್ತಿಗೆ ತಿಳಿಸಬೇಕೆಂದುಕೊಂಡಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹಣ ಸಂಗ್ರಹ ಮಾಡಿದ್ದಾರೆ. ಸುಮಾರು 10 ಲಕ್ಷ ಹಣವನ್ನು ಸಂಗ್ರಹ ಮಾಡಿ ಆ ಹಣದಲ್ಲಿ ಯೋಧನ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

    ಪ್ರತಿಮೆ ನಿರ್ಮಾಣದ ಕುರಿತಾಗಿ ಮಾತನಾಡಿರುವ ಮೃತ ಯೋಧನ ಮಗ ಧನಂಜೋಯ್​ ಬಸುಮಾಟರಿ, “ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಉಳಿಸಿಕೊಂಡಿದೆ. ಆದರೆ ನಾವು ಸಾಂಕೇತಿಕತೆಯನ್ನು ಮೀರಿ ಬೇರೆಯದ್ದನ್ನೇ ಬಯಸಿದ್ದೆವು. ಆದ್ದರಿಂದಲೇ ಈ ಪ್ರತಿಮೆಯನ್ನು ನಿರ್ಮಿಸಿದ್ದೇವೆ. ಇದನ್ನು ನೋಡಿದ ಜನರು ನನ್ನ ಅಪ್ಪನ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾರೆ. ಅದು ಅವರಿಗೆ ನಾವು ನೀಡಬಹುದಾದ ಗೌರವ” ಎಂದು ತಿಳಿಸಿದ್ದಾರೆ.

    ಈ ಪ್ರತಿಮೆ ನಿರ್ಮಾಣದಿಂದಾಗಿ ತಮ್ಮ ಊರಿನ ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿ ಅವರೂ ಸಹ ಸೇನೆಗೆ ಸೇರುತ್ತಾರೆ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಮುನೇಶ್ವರ್​ ಸಿಪಿಆರ್​ಎಫ್​ನಲ್ಲಿ ಹೆಡ್​ ಕಾನ್ಸ್ಟೇಬಲ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2019ರ ಫೆ.14ರಂದು ಜಮ್ಮುವಿನಿಂದ ಶ್ರೀನಗರಕ್ಕೆ ಸೇನೆಯ ವಾಹನದಲ್ಲಿ ತೆರಳುತ್ತಿದ್ದಾಗ, ಉಗ್ರಗಾಮಿಗಳಿಂದ ನಡೆದ ಆರ್​ಡಿಎಕ್ಸ್​ ಸ್ಫೋಟದಿಂದಾಗಿ ಮುನೇಶ್ವರ್​ ಮೃತರಾಗಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts