More

    ನಿವೃತ್ತ ಸೈನಿಕ ವಿಜಯ್‌ಕುಮಾರ್‌ಗೆ ಅದ್ದೂರಿ ಸ್ವಾಗತ

    ಜಗಳೂರು: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ನಂತರ ತಾಲೂಕಿನ ಸ್ವಗ್ರಾಮ ಮೆದಕೆರೆನಹಳ್ಳಿಗೆ ಸೋಮವಾರ ಆಗಮಿಸಿದ ವಿ. ವಿಜಯ್‌ಕುಮಾರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

    21 ವರ್ಷಗಳಿಂದ ಭಾರತೀಯ ಸೇನೆ ಹಾಗೂ ಪ್ರಧಾನಿ ಸೇರಿ ವಿಐಪಿ ಅಂಗರಕ್ಷಕ ಪಡೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಗ್ರಾಮಕ್ಕೆ ಆಗಮಿಸಿದ ಅವರನ್ನು ಮಹಿಳೆಯರು ಆರತಿ ಬೆಳಗಿ, ತ್ರಿವರ್ಣ ಧ್ವಜ ಹಿಡಿದು ಸ್ವಾಗತಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ತೆರೆದ ವಾಹನದಲ್ಲಿ ವಿಜಯ್ ಕುಮಾರ್ ಅವರನ್ನು ಗ್ರಾಮದ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ದಾರಿಯಲ್ಲಿ ಗ್ರಾಮಸ್ಥರು ಯೋಧನಿಗೆ ಕೈಮುಗಿದು ಸಂತಸ ವ್ಯಕ್ತಪಡಿಸಿದರು.

    ಹಿನ್ನೆಲೆ: ಮೆದಕೇರನಹಳ್ಳಿಯ ವಿ.ಸಿ. ಶೇಖರಪ್ಪ, ಗಿರಿಜಮ್ಮ ಪುತ್ರ ವಿಜಯ್ ಕುಮಾರ್ 2003ರಲ್ಲಿ ಸೇನೆಗೆ ಸೇರಿದ್ದರು. ಎಟಿಸಿ ತರಬೇತಿ ನಂತರ ಜಮ್ಮು ಕಾಶ್ಮೀರದ ಉದಾಂಪುರ್ ಜಿಲ್ಲೆಯಲ್ಲಿ ತರಬೇತಿ ಪೂರ್ಣಗೊಳಿಸಿದರು. ಅಲ್ಲಿಂದ ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾ ಗಡಿಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ್ದರು.

    ತ್ರಿಪುರಾ, ಛತ್ತೀಸ್‌ಗಡ್ ರಾಜ್ಯಗಳಲ್ಲೂ ಸೇವೆ ಸಲ್ಲಿಸಿದರು. 2016ರಲ್ಲಿ ಗುರುಗಾವ್‌ನಲ್ಲಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್‌ಎಸ್‌ಜಿ) ತರಬೇತಿ ಪಡೆದು, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(ಎಸ್‌ಪಿಜಿ)ನಲ್ಲಿ 2022ರವರೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ವಿಐಪಿಗಳಿಗೆ ಭದ್ರತೆ ಒದಗಿಸುವ ತಂಡದಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಂತರ ಒಂದು ವರ್ಷ ರಾಜಸ್ಥಾನದ ಪೋಖ್ರಾನ್ ಗಡಿಯಲ್ಲಿ ಸೇವೆ ನಂತರ ಜಿ.20 ಶೃಂಗ ಸಭೆಯಲ್ಲಿ ಅಂತಾರಾಷ್ಟ್ರೀಯ ನಾಯಕರಿಗೆ ವಿವಿಐಪಿ ಭದ್ರತಾ ಪಡೆಯಲ್ಲಿ ಕೆಲಸ ಮಾಡಿದರು. 2024ನೇ ಮಾ.31ರಂದು ನಿವೃತ್ತರಾಗಿದ್ದಾರೆ.

    ವಿಜಯಕುಮಾರ್ ಗ್ರಾಮಕ್ಕೆ ಆಗಮಿಸಿದ ವೇಲೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್, ಪ್ರಾಣೇಶ್, ಅಜ್ಜಯ್ಯ, ಗ್ರಾಪಂ ಸದಸ್ಯ ಸಿದ್ದೇಶ್, ವಕೀಲರಾದ ಶಿವಕುಮಾರ್, ಬೋರಾಪುರದ ಬಸವರಾಜ್, ನವೀನ್ ಮತ್ತಿತರ ಮುಖಂಡರು, ಸಂಬಂಧಿಕರು ಇದ್ದರು.

    ಸೈನಿಕ ಶಾಲೆ ತೆರೆಯುವ ಉದ್ದೇಶ
    ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ. ನನ್ನ ತಂದೆ-ತಾಯಿ ಆಶೀರ್ವಾದದ ಬಲದಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮನೆಗೆ ಮರಳಿದ್ದೇನೆ. ಮುಂದಿನ ದಿನಗಳಲ್ಲಿ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಸೈನಿಕ ಶಾಲೆ ತೆರೆದು ಮಾರ್ಗದರ್ಶನ ನೀಡಿ ಯುವಕರನ್ನು ಸೇನೆಗೆ ಕಳಿಸುವ ಆಸೆ ಇದೆ ಎನ್ನುತ್ತಾರೆ ವಿ.ವಿಜಯಕುಮಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts