More

    ಕಲಾಪ ಅಂತ್ಯ, ಕದನ ಆರಂಭ: ವರ್ಣರಂಜಿತ 15ನೇ ವಿಧಾನಸಭೆ; ರಾಜಕೀಯ ಪಲ್ಲಟ- ಕೈಬದಲಾದ ಆಡಳಿತ

    ಬೆಂಗಳೂರು: ಹದಿನೈದನೇ ವಿಧಾನಸಭೆ ಕಲಾಪ ಶುಕ್ರವಾರ ಇತಿಹಾಸದ ಪುಟ ಸೇರಿತು. ಮೇ 23ರಂದು ಪ್ರಸಕ್ತ ವಿಧಾನಸಭೆ ಅವಧಿ ಕೊನೆಗೊಳ್ಳಲಿದ್ದು, ಅಷ್ಟರೊಳಗೆ ನಡೆಯುವ ಸಾರ್ವತ್ರಿಕ ಚುನಾವಣೆಯು ಮುಂದಿನ ಶಾಸನಸಭೆಯನ್ನು ರೂಪಿಸಲಿದೆ.

    15ನೇ ವಿಧಾನಸಭೆ ಹಲವು ಅಚ್ಚರಿ ಸಂಗತಿಗಳಿಗೂ ಸಾಕ್ಷಿಯಾಗಿದೆ. ಒಂದಷ್ಟು ರಾಜಕೀಯ ವ್ಯತ್ಯಾಸಗಳು, ಪರಸ್ಪರ ಟೀಕೆ-ಟಿಪ್ಪಣಿಗಳ ನಡುವೆ ಅರ್ಥಪೂರ್ಣ ಚರ್ಚೆಗೂ ಸಾಕ್ಷಿಯಾದ ವಿಧಾನಸಭೆ ಶುಕ್ರವಾರ ತನ್ನ ಕೊನೆಯ ಕಲಾಪ ನಡೆಸಿತು. ಚುನಾವಣೆ ಸುಧಾರಣೆ, ಸಂವಿಧಾನ ಕುರಿತ ವಿಶೇಷ ಚರ್ಚೆಗೂ ಅವಕಾಶ ಸೃಷ್ಟಿಯಾಗಿತ್ತು. ದೇಶವೇ ತಿರುಗಿ ನೋಡುವಂತಹ ಬೃಹನ್ನಾಟಕವನ್ನೊಳಗೊಂಡ ರಾಜಕೀಯ ಪಲ್ಲಟ, ಸಾಂವಿಧಾನಿಕ ಬಿಕ್ಕಟ್ಟಿನ ಸನ್ನಿವೇಶ, ಮಹತ್ವದ ಕಾನೂನು ಜಾರಿಗೂ ಸಾಕ್ಷಿಯಾಯಿತು. ಅಲ್ಲದೇ ರಾಜ್ಯದ ಪ್ರಮುಖ ನಾಯಕನೊಬ್ಬನ ಚುನಾವಣಾ ರಾಜಕೀಯದ ನಿವೃತ್ತಿಯನ್ನೂ ಕಂಡಿತು. ಮುಂದಿನ ಎರಡೂವರೆ ತಿಂಗಳು ರಾಜಕೀಯ ಬಹಿರಂಗ ಕದನ ನಡೆಯಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಗರಿಷ್ಠತಮ ಹೋರಾಟ ನಿಚ್ಚಳ. ಮಾರ್ಚ್ ಎರಡನೇ ವಾರದ ಹೊತ್ತಿಗೆ ನೀತಿಸಂಹಿತೆ ಜಾರಿಯಾಗಲಿದೆ.

    ಮೇ ನಾಲ್ಕನೇ ವಾರದಲ್ಲಿ ಹೊಸ ಸರ್ಕಾರ ರಚನೆಯ ಸಡಗರವಿರಲಿದೆ. ಆರಂಭದಲ್ಲಿ ಅತಂತ್ರ ವಿಧಾನಸಭೆ ನಡುವೆಯೇ ಎರಡು ದಿನದ ಸರ್ಕಾರ, ಬಳಿಕ ಪರಸ್ಪರ ಅಪನಂಬಿಕೆ ಹೊಂದಿದ ಮೈತ್ರಿ ಸರ್ಕಾರ ರಚನೆ, ಆಪರೇಷನ್ ಕಮಲದ ಪರಿಣಾಮ ವಿಶ್ವಾಸಮತದಲ್ಲಿ ಸೋಲಾಗಿ ಮೈತ್ರಿ ಸರ್ಕಾರ ಪತನ, ಬಿಜೆಪಿಯಿಂದ ಸರ್ಕಾರ ರಚನೆ, ಉಪ ಚುನಾವಣೆಯಲ್ಲಿ ಗೆಲುವಿನೊಂದಿಗೆ ಬಹುಮತ ಗಳಿಕೆ- ಈ ಅವಧಿಯ ಸಾರಾಂಶ.

    ಇದನ್ನೂ ಓದಿ: ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ

    ನೆನಪಿನ ಹೆಜ್ಜೆ: 2018ರ ಮೇ 12ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸೋಲೊಪ್ಪಿಕೊಂಡಿತು. ಯಾವುದೇ ಪಕ್ಷ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಹೊಂದಿಲ್ಲದ ಕಾರಣ ರಾಜ್ಯಪಾಲರು ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು (104 ಸ್ಥಾನ) ಆಹ್ವಾನಿಸಿದ್ದರು. ಮೇ 17ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯಪಾಲರು 15 ದಿನದೊಳಗೆ ಬಹುಮತ ಸಾಬೀತಿಗೆ ಅವಕಾಶ ನೀಡಿದ್ದರು. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಸುಪ್ರಿಂಕೋರ್ಟ್ ಮೆಟ್ಟಿಲೇರಿತು. 24 ಗಂಟೆಯಲ್ಲೇ ಬಹುಮತ ಸಾಬೀತಿಗೆ ಕೋರ್ಟ್ ಸೂಚಿಸಿತು. ಮೇ 19ರಂದು ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಬೇಕಿತ್ತು. ಬಹುಮತ ಸಾಬೀತು ಕಷ್ಟ ಎಂದರಿತ ಯಡಿಯೂರಪ್ಪ ಭಾವನಾತ್ಮಕ ಭಾಷಣ ಮಾಡಿ ರಾಜೀನಾಮೆ ನೀಡಿದರು. ಇದು ಅತೀ ಕಡಿಮೆ ಅವಧಿಯ ಸಿಎಂ ಎಂಬ ದಾಖಲೆ ಸೃಷ್ಟಿಸಿತು.

    ಈ ಬೆಳವಣಿಗೆಗೆ ಮುನ್ನ ಕಾಂಗ್ರೆಸ್ ನಾಯಕರು ದೇವೇಗೌಡರ ಮನೆ ಕದ ತಟ್ಟಿ ಮೈತ್ರಿ ಸರ್ಕಾರ ರಚನೆಯನ್ನು ಖಾತ್ರಿ ಮಾಡಿಕೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗುವಂತೆ ದೇವೇಗೌಡರು ಸಲಹೆಯನ್ನೂ ನೀಡಿದ್ದರು. ಆದರೆ, ಖರ್ಗೆಯವರು ರಾಜಕೀಯ ಬೆಳವಣಿಗೆಯ ದೂರದೃಷ್ಟಿ ಅರಿತು ಈ ಅವಕಾಶ ಒಪ್ಪಲಿಲ್ಲ. ಅಂತಿಮವಾಗಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಅವಕಾಶ ಒದಗಿಬಂತು. 2018ರ ಮೇ 23ರಿಂದ 2019ರ ಜುಲೈ 23ರವರೆಗೂ ಎಚ್​ಡಿಕೆ ತೂಗುಯ್ಯಾಲೆಯಲ್ಲೇ ಸರ್ಕಾರ ನಡೆಸಿದರು. ಮುಂಬೈನಲ್ಲಿ ಶಾಸಕರ ವಾಸ್ತವ್ಯ, ಶಾಸಕರ ರಾಜೀನಾಮೆ, ಬಹುಮತ ಸಾಬೀತುಪಡಿಸುವಲ್ಲಿ ವಿಫಲದ ಬಳಿಕ ಎಚ್​ಡಿಕೆ ಅವಧಿ ಮುಕ್ತಾಯವಾಯಿತು.

    ಇದನ್ನೂ ಓದಿ: ಆಸ್ತಿ ಆಸೆಗೆ ಒಂದೇ ಮನೆಯ ನಾಲ್ವರ ಕೊಲೆ; ಮಕ್ಕಳಿಬ್ಬರ ಪ್ರಾಣ ಉಳಿಸಿತೇ ನಿದ್ರೆ-ಆಟ!?

    ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಅತೃಪ್ತ ಶಾಸಕರು ಅನರ್ಹತೆ ಶಿಕ್ಷೆಗೂ ಗುರಿಯಾದರು. ಈ ನಡುವೆ ಸಂಖ್ಯಾಬಲದ ವ್ಯತ್ಯಾಸದಿಂದ ಬಿಜೆಪಿಗೆ ಅಧಿಕಾರ ದಕ್ಕಿದರೆ, ಶಾಸಕರ ಅನರ್ಹತೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಶಾಸಕರು ಪುನಃ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಪಡೆದರು. ಬಹುಪಾಲು ಮಂದಿ ಗೆದ್ದರು, ಕೆಲವರು ಸೋತರು. ಗೆದ್ದವರಲ್ಲಿ ಪ್ರಭಾವಿಗಳು ಸಚಿವ ಸ್ಥಾನಕ್ಕೆ ಗಿಟ್ಟಿಸಿದರು ಎಂಬಲ್ಲಿಗೆ ಡೋಲಾಯಮಾನ ರಾಜಕೀಯ ಬೆಳವಣಿಗೆ ಸಹಜತೆಗೆ ಮರಳಿತು.

    ಇದಕ್ಕೂ ಮುನ್ನ ಜುಲೈ 29ರಂದು ಯಡಿಯೂರಪ್ಪ ಬಹುಮತ ಯಾಚಿಸಿ ಗೆಲುವಿನ ನಗೆ ಬೀರಿದ್ದರು. ಶಾಸಕರ ಅನರ್ಹತೆಯಿಂದ ವಿಧಾನಸಭೆ ಬಲ 208ಕ್ಕೆ ಕುಸಿದಿತ್ತು. 105 ಶಾಸಕ ಬಲ ಹೊಂದಿದ್ದ ಬಿಎಸ್​ವೈ ಧ್ವನಿಮತದಿಂದ ಗೆಲುವು ಸಾಧಿಸಿದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದರಿಂದ ಮ್ಯಾಜಿಕ್ ನಂಬರ್ ದಾಟಿ ತನ್ನ ನೆಲೆ ಭದ್ರಪಡಿಸಿಕೊಂಡಿತ್ತು.

    ಇದನ್ನೂ ಓದಿ: 140 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸದ ಸರ್ಕಾರ; ಬೇಸತ್ತು ವಿಷ ಕುಡಿದಿದ್ದ ಶಿಕ್ಷಕ ಸಾವು, ಇನ್ನೊಬ್ಬರು ತೀವ್ರ ಅಸ್ವಸ್ಥ

    ನಂತರದ ಬೆಳವಣಿಗೆಯಲ್ಲಿ ಬಿಎಸ್​ವೈ ರಾಜೀನಾಮೆ ಪರ್ವ ಮಹತ್ವದ್ದೆನಿಸಿತು. 2021ರ ಜುಲೈ 26ರಂದು ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಎಸ್​ವೈ ಆಪ್ತ ವಲಯದಲ್ಲಿದ್ದ ಬಸವರಾಜ ಬೊಮ್ಮಾಯಿಯವರಿಗೆ ಸಿಎಂ ಸ್ಥಾನ ಅರಸಿ ಬಂತು. ಜುಲೈ 28ರಂದು ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಈವರೆಗೂ ಮುಂದುವರಿದಿದ್ದಾರೆ.

    ಸದನದ ಜವಾಬ್ದಾರಿ ಹೊತ್ತವರಿವರು

    15ನೇ ವಿಧಾನಸಭೆಯಲ್ಲಿ ರಮೇಶ್​ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಪತಿ ಸ್ಥಾನ ಅಲಂಕರಿಸಿ ಶಾಸನಸಭೆ ಮುನ್ನಡೆಸಿದರೆ, ಯಡಿಯೂರಪ್ಪ ಎರಡು ಬಾರಿ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ವಿಧಾನಸಭೆ ಪ್ರತಿಪಕ್ಷ ಸ್ಥಾನವನ್ನು ಮೂರೂವರೆ ವರ್ಷ ಸಿದ್ದರಾಮಯ್ಯ ನಿಭಾಯಿಸಿದರೆ, ಆ ಜವಾಬ್ದಾರಿ ಒಂದೂವರೆ ವರ್ಷ ಯಡಿಯೂರಪ್ಪ ಹೆಗಲೇರಿತ್ತು. ಮೇಲ್ಮನೆಯ ಈ ಅವಧಿಯ ಬಹುಪಾಲು ಅವಧಿ ಕಾಂಗ್ರೆಸ್ ಹಿಡಿತದಲ್ಲೇ ಇತ್ತು. ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಬಹುಮತ ಗಳಿಸಿತು. ಹೊರಟ್ಟಿ ಬಿಜೆಪಿಯಿಂದಲೇ ಕಣಕ್ಕಿಳಿದು ಸಭಾಪತಿಯಾಗಿ ಆಯ್ಕೆಯಾದರು. ಮೇಲ್ಮನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಭಾನಾಯಕರಾದರೆ, ಬಿ.ಕೆ. ಹರಿಪ್ರಸಾದ್ ಪ್ರತಿಪಕ್ಷ ನಾಯಕನಾಗಿ ಅವಕಾಶ ಸದುಪಯೋಗಪಡಿಸಿಕೊಂಡರು.

    ಐದು ಪ್ರಮುಖ ತೀರ್ಮಾನಗಳು

    • ಗೋಹತ್ಯೆ ನಿಷೇಧ ಕಾಯ್ದೆ ಜಾರಿ
    • ಬಲವಂತದ ಮತಾಂತರ ನಿಷೇಧ ಕಾಯ್ದೆ
    • ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳ
    • ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ಒಪ್ಪಿಗೆ
    • ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆ ಜಾರಿ

    ಐದು ವರ್ಷದಲ್ಲಿನ ಮಹತ್ವದ ಘಟನೆಗಳು

    • 2019ರ ಜುಲೈ 23ರಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಎಚ್​ಡಿಕೆ ನೇತೃತ್ವದ ಮೈತ್ರಿ ಸರ್ಕಾರಕ್ಕೆ 99 ಮತಗಳು ಬಂದರೆ ವಿರುದ್ಧವಾಗಿ 105 ಮತ ಚಲಾವಣೆಯಾಗಿತ್ತು. 20 ಶಾಸಕರು ಗೈರಾಗಿದ್ದರು.
    • 2019ರ ಜುಲೈ 28ರಂದು ಕಾಂಗ್ರೆಸ್​ನ 11 ಹಾಗೂ ಜೆಡಿಎಸ್​ನ ಮೂವರು ಶಾಸಕರನ್ನು ಅಂದಿನ ಸ್ಪೀಕರ್ ರಮೇಶ್​ಕುಮಾರ್ ಅಮಾನತು ಮಾಡಿದರು. ಅದಕ್ಕೂ ಮೊದಲು ಮೂರು ಶಾಸಕರನ್ನು ಅನರ್ಹಗೊಳಿಸಲಾಗಿತ್ತು.
    • ಸಚಿವರಾಗಿದ್ದ ಉಮೇಶ್ ಕತ್ತಿ ಹಾಗೂ ವಿಧಾನಸಭೆ ಉಪ ಸಭಾನಾಯಕ ವಿಶ್ವನಾಥ ಚಂದ್ರಶೇಖರ ಮಾಮನಿ ನಿಧನರಾದರು. ಸಾರ್ವತ್ರಿಕ ಚುನಾವಣೆ ಸಮೀಪ ಇದ್ದಿದ್ದರಿಂದ ಈ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿಲ್ಲ.
    • 2019ರ ಡಿಸೆಂಬರ್​ನಲ್ಲಿ 14 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರಕ್ಕೆ ಸ್ಪಷ್ಟ ಬಹುಮತ
    • ಬಿ.ಎಸ್. ಯಡಿಯೂರಪ್ಪ ಹಾಗೂ ಆರ್.ವಿ. ದೇಶಪಾಂಡೆ ಉತ್ತಮ ಶಾಸಕ ಪ್ರಶಸ್ತಿಗೆ ಭಾಜನ. ಸದನದಲ್ಲಿ ಲೋಕಸಭೆ ಸ್ಪೀಕರ್ ಅವರ ವಿಶೇಷ ಭಾಷಣಕ್ಕೂ ಅವಕಾಶ.
    • ಕೋವಿಡ್ ಕಾರಣಕ್ಕೆ ಎರಡು ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿಲ್ಲ. 2022ರ ಡಿಸೆಂಬರ್​ನಲ್ಲಿ ನಡೆದ ಕಲಾಪದ ವೇಳೆ ಸಾವರ್ಕರ್ ಫೋಟೋ ವಿಧಾನಸಭೆ ಸಭಾಂಗಣದಲ್ಲಿ ಅಳವಡಿಕೆ
    • 2020ರ ಡಿಸೆಂಬರ್ 15ರಂದು ವಿಧಾನ ಪರಿಷತ್​ನಲ್ಲಿ ಆಡಳಿತ- ಪ್ರತಿಪಕ್ಷ ಸದಸ್ಯರ ನಡುವೆ ಗುದ್ದಾಟ ನಡೆದು, ಸಭಾಪತಿ ಸ್ಥಾನದಲ್ಲಿದ್ದವರನ್ನು ಎಳೆದು ಹಾಕುವ ಪ್ರಯತ್ನ ನಡೆಯಿತು.
    • ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರಿಂದ ಅಡ್ಡ ಮತದಾನ. ಎಚ್.ಡಿ. ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವಿರೋಧ ಆಯ್ಕೆ.

    ರಾಜಧಾನಿಯಲ್ಲಿ ಬಿಬಿಎಂಪಿ ಖಾತಾ ಆಂದೋಲನ, ಆಸ್ತಿವಂತರಿಗೆ ಸದವಕಾಶ: ಎಂದಿನಿಂದ, ಎಲ್ಲೆಲ್ಲಿ?; ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts