More

    ಸರ್ಕಾರಿ ಡಿಪ್ಲೊಮಾ ಕಾಲೇಜ್ ಖಾಲಿ

    ಕಾರವಾರ: ಇತ್ತೀಚೆಗೆ ನಡೆದ ಸರ್ಕಾರಿ ಡಿಪ್ಲೊಮಾ ಕಾಲೇಜ್ ಬೋಧಕರ ವರ್ಗಾವಣೆ ಕೌನ್ಸೆಲಿಂಗ್​ನಲ್ಲಿ ಕಾರವಾರ ಕಾಲೇಜ್​ನ 12 ಉಪನ್ಯಾಸಕರು ಒಟ್ಟಿಗೇ ಬೇರೆಡೆಗೆ ವರ್ಗಾವಣೆ ಪಡೆದಿದ್ದಾರೆ. ಪರಿಣಾಮ ಪಾಠ, ಪ್ರಯೋಗಗಳಿಗೆ ತೀವ್ರ ಸಮಸ್ಯೆಯಾಗಿದೆ.

    ಕಾಲೇಜ್ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಜುಲೈ 27, 28 ಹಾಗೂ 29 ರಂದು ಸರ್ಕಾರಿ ಡಿಪ್ಲೊಮಾ ಕಾಲೇಜ್​ನ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ನಡೆಸಿತ್ತು. ಅದರಲ್ಲಿ ಕಾಲೇಜ್​ನ ಸಿವಿಲ್ ವಿಭಾಗದ ನಾಲ್ವರು, ಇಲೆಕ್ಟ್ರಿಕಲ್ ವಿಭಾಗದ ಇಬ್ಬರು, ಮೆಕಾನಿಕಲ್ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದ ತಲಾ ಮೂವರು ಸೇರಿ ಒಟ್ಟು 12 ಉಪನ್ಯಾಸಕರು ಹುಬ್ಬಳ್ಳಿ, ಮಂಗಳೂರು, ವಿಜಯಪುರ, ಜೊಯಿಡಾ, ಸಿದ್ದಾಪುರ, ಬೆಳಗಾವಿ ಸೇರಿ ರಾಜ್ಯದ ವಿವಿಧ ಕಾಲೇಜ್​ಗಳಿಗೆ ವರ್ಗಾವಣೆ ಪಡೆದುಕೊಂಡಿದ್ದಾರೆ. ಇದೇ ಕೌನ್ಸೆಲಿಂಗ್​ನಲ್ಲಿ ಮಂಗಳೂರಿನ ಒಬ್ಬ ಉಪನ್ಯಾಸಕಿ ಮಾತ್ರ ಕಾರವಾರ ಕಾಲೇಜ್ ಆಯ್ಕೆ ಮಾಡಿಕೊಂಡು ಇಲ್ಲಿಗೆ ಹಾಜರಾಗಿದ್ದಾರೆ. ವರ್ಗಾವಣೆಯಾದ ಎಲ್ಲರನ್ನೂ ಜುಲೈ 30 ರಿಂದಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ. ಇದರಿಂದ ಕಾರವಾರ ಕಾಲೇಜ್ ಭಾಗಶಃ ಖಾಲಿಯಾಗಿದೆ.

    ಬೋಧನೆಗೆ ಸಮಸ್ಯೆ: ಕಾರವಾರ ಸರ್ಕಾರಿ ಡಿಪ್ಲೊಮಾ ಕಾಲೇಜ್​ನಲ್ಲಿ 6 ವಿಭಾಗಗಳಿವೆ. ಕಮರ್ಷಿಯಲ್ ಪ್ರಾಕ್ಟೀಸ್, ಅಟೊಮೊಬೈಲ್ ಬಿಟ್ಟು ಬೇರೆಲ್ಲ ವಿಭಾಗಗಳಲ್ಲಿ ಪ್ರತಿ ಸೆಮಿಸ್ಟರ್​ಗೆ ಕನಿಷ್ಠ 100 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ 870 ಕ್ಕೂ ಅಧಿಕ ವಿಧ್ಯಾರ್ಥಿಗಳು ಕಲಿಯುತ್ತಿದ್ದು, ಒಟ್ಟು 47 ಮಂಜೂರಾದ ಬೋಧಕ ಹುದ್ದೆಗಳಿದ್ದರೂ 30 ಕಾಯಂ ಉಪನ್ಯಾಸಕರು ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ 19 ಹುದ್ದೆಗಳು ಭರ್ತಿ ಇದ್ದರೂ ಅದರಲ್ಲಿ ಇಬ್ಬರು ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಒಬ್ಬರು ಅನಧಿಕೃತವಾಗಿ ಗೈರಾಗಿದ್ದಾರೆ. ಇನ್ನಿಬ್ಬರು ನಿಯೋಜನೆಯ ಮೇಲೆ ತೆರಳಿದ್ದಾರೆ. ಇದರಿಂದ ಕಾಲೇಜ್​ನಲ್ಲಿ ಸದ್ಯ ಅಟೊಮೊಬೈಲ್ ವಿಭಾಗದಲ್ಲಿ ಒಬ್ಬ, ಇಲೆಕ್ಟ್ರಿಕಲ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್, ವಿಭಾಗದಲ್ಲಿ ತಲಾ ಇಬ್ಬರು, ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದಲ್ಲಿ ಮೂವರು. ಸಿವಿಲ್ ವಿಭಾಗದಲ್ಲಿ ನಾಲ್ವರು ಸೇರಿ ಕೇವಲ 14 ಉಪನ್ಯಾಸಕರು ಉಳಿದುಕೊಂಡಿದ್ದಾರೆ.

    ಸದ್ಯ ಆನ್​ಲೈನ್ ತರಗತಿಗಳು ನಡೆಯುತ್ತಿದ್ದವು, ಈಗಿರುವ ಉಪನ್ಯಾಸಕರು ಆನ್​ಲೈನ್​ನಲ್ಲಿ ಪಾಠ ಮಾಡಿ ಮುಗಿಸಿದ್ದಾರೆ. ಕೆಲವರು ವರ್ಗಾವಣೆಯಾದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಾಠ, ಸಲಹೆ ನೀಡುತ್ತಿದ್ದಾರೆ. ಇದರಿಂದ ತಕ್ಷಣಕ್ಕೆ ಸಮಸ್ಯೆಯಿಲ್ಲ. ಆದರೆ, ಆ. 9 ರಿಂದ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಲಿವೆ. ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೊಂದರೆಯಾಗಲಿದೆ. ಮುಂದೆ ಭೌತಿಕ ತರಗತಿ ಪ್ರಾರಂಭವಾದರೆ, ಉಪನ್ಯಾಸಕರ ತೀವ್ರ ಕೊರತೆ ಎದುರಾಗಲಿದೆ ಎಂಬುದು ವಿದ್ಯಾರ್ಥಿಗಳ ಆತಂಕ.

    ನಾಲ್ಕು ಕಾಲೇಜ್ ಒಬ್ಬ ಪ್ರಾಂಶುಪಾಲ

    ಜಿಲ್ಲೆಯ ಕಾರವಾರ, ಮುಂಡಗೋಡ, ಜೊಯಿಡಾ, ಸಿದ್ದಾಪುರ ಸೇರಿ 4 ಸರ್ಕಾರಿ ಡಿಪ್ಲೊಮಾ ಕಾಲೇಜ್​ಗಳಿವೆ. ಜೊಯಿಡಾ ಬಿಟ್ಟರೆ ಬೇರೆಲ್ಲೂ ಕಾಯಂ ಪ್ರಾಂಶುಪಾಲರಿಲ್ಲ. ಕಾರವಾರದಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದ ಶಾಂತಾರಾಮ ಅವರು ಸಿದ್ದಾಪುರಕ್ಕೆ ವರ್ಗಾವಣೆಯಾಗಿದ್ದಾರೆ. ಇಲ್ಲಿ ವಾಸುದೇವ ಗೌಡ ಎಂಬ ಹಿರಿಯ ಉಪನ್ಯಾಕರು ಪ್ರಭಾರ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಪಾಠದ ಜತೆ ಆಡಳಿತದ ಜವಾಬ್ದಾರಿಯನ್ನೂ ನಿಭಾಯಿಸುವ ಪರಿಸ್ಥಿತಿ ಇದೆ.

    ಸರ್ಕಾರದ ನಿಯಮದಂತೆ ವರ್ಗಾವಣೆ ನಡೆದಿದೆ. 12 ಉಪನ್ಯಾಸಕರು ಇಲ್ಲಿಂದ ವರ್ಗವಾಗಿದ್ದು ಒಬ್ಬರು ಬಂದಿದ್ದಾರೆ. ಅತಿಥಿ ಉಪನ್ಯಾಸಕರನ್ನು ಪಡೆಯಲು ಅವಕಾಶವಿದ್ದು, ಅವರ ಮೂಲಕ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗುವುದು.

    ವಾಸುದೇವ ಗೌಡ, ಸರ್ಕಾರಿ ಡಿಪ್ಲೊಮಾ ಕಾಲೇಜ್ ಪ್ರಭಾರ ಪ್ರಾಂಶುಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts