

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ರಸ್ತೆ ತುಂಬೆಲ್ಲಾ ಸಾಲು ಗಟ್ಟಿ ನಿಂತ ವಾಹನಗಳೇ ಕಾಣುತ್ತಿವೆ. ಸೂಜಿ ಇಡದಷ್ಟು ಜಾಗವಿಲ್ಲದಂತೆ ರಸ್ತೆಯ ಮೇಲೆ ವಾಹನಗಳು ನಿಂತಿವೆ.
ಮಳೆ ಬಿದ್ದಾಗ ಅಥವಾ ಅಪಘಾತ ಸಂದರ್ಭದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲಿ ಈಗ ಬೇರೆ ಕಾರಣಕ್ಕೆ ರಸ್ತೆಯುದ್ಧಕ್ಕೂ ವಾಹನಗಳು ಸಾಲು ಸಾಲು ನಿಂತಿವೆ.
ದೆಹಲಿ-ಗುರುಗಾಂವ್ ಹೆದ್ದಾರಿಯಲ್ಲಿ ಕಾರುಗಳು ಕಿಲೋಮೀಟರ್ ಗಟ್ಟಲೆ ನಿಂತಿವೆ. ಅಷ್ಟೇ ಅಲ್ಲದೇ ನೋಯ್ಡಾ-ದಿಲ್ಲಿ, ಮೀರತ್ ಎಕ್ಸ್ಪ್ರೆಸ್ವೇ, ಆನಂದ್ವಿಹಾರ್, ಪ್ರಗತಿ ಮೈದಾನ ಹೀಗೆ ಎಲ್ಲಾ ರಸ್ತೆಯಲ್ಲೂ ಸಹ ಟ್ರಾಫಿಕ್ ಜಾಮ್ ಕಂಡುಬಂದಿದೆ. ಬೆಳಗ್ಗೆಯಿಂದ ಅಲ್ಲೇ ನಿಂತಿರುವ ವಾಹನ ಸವಾರರು ಮಾತ್ರ ಹೈರಾಣಾಗಿದ್ದಾರೆ.
ಇದಕ್ಕೆ ಕಾರಣ ಇಷ್ಟೇ.. ಅಗ್ನಿಪಥ ಯೋಜನೆ ವಿರೋಧಿಸಿ ಕೆಲವರು ಬುಧವಾರ ಭಾರತ್ ಬಂದ್ ಘೋಷಿಸಿದ್ದಾರಂತೆ. ಅದಕ್ಕಾಗಿಯೇ ದೆಹಲಿ ಒಳಗೆ ಪ್ರವೇಶಿಸುವ ಪ್ರತಿಯೊಂದು ವಾಹನ ತಪಾಸಣೆ ಮಾಡುವ ಸಲುವಾಗಿ ಪೊಲೀಸರು ಒಂದೊಂದೇ ವಾಹನವನ್ನು ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕಾಗಿಯೇ ಇಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ಈಗಾಗಲೇ ಪ್ರತಿಭಟನೆಯ ಹೆಸರಲ್ಲಿ ಹಿಂಸಾಚಾರ ನಡೆದಿರುವ ಕಾರಣದಿಂದಲೇ ಇದನ್ನು ತಡೆಗಟ್ಟಲು ಪೊಲೀಸರು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. (ಏಜೆನ್ಸೀಸ್)