More

    ಶತಮಾನದ ಅಂಚೆ ಕಚೇರಿಗಿಲ್ಲ ಸ್ವಂತ ಸೂರು

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ಪಟ್ಟಣದಲ್ಲಿನ ಅಂಚೆ ಕಚೇರಿ ಪ್ರಾರಂಭವಾಗಿ ಶತಮಾನ ಕಳೆದರೂ ಇಂದಿಗೂ ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

    ಪತ್ರ ವ್ಯವಹಾರ, ತಂತಿ ಸಂದೇಶಗಳ ಕಾರ್ಯ ಸೇವೆಗಷ್ಟೇ ಮೀಸಲಾಗಿದ್ದ ಅಂಚೆ ಕಚೇರಿಗಳು ಕಾಲಕ್ಕೆ ತಕ್ಕಂತೆ ಬದಲಾಗಿವೆ. ಅಂಚೆ ಕಚೇರಿಗಳಲ್ಲಿ ವಾಣಿಜ್ಯ ಉದ್ದೇಶದ ಪತ್ರವ್ಯವಹಾರ ದ್ವಿಗುಣಗೊಂಡಿದೆ. ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ, ಚಲನ್ ಸ್ವೀಕೃತಿ, ಸ್ಪೀಡ್​ಪೋಸ್ಟ್, ರಿಜಿಸ್ಟರ್ ಪತ್ರ, ಉಳಿತಾಯ ಖಾತೆ ಸೇವೆ, ಠೇವಣಿ, ಸುಕನ್ಯಾ ಸಮೃದ್ಧಿ ಯೋಜನೆ, ಹಣ ವರ್ಗಾವಣೆ ಸೇರಿದಂತೆ 107ಕ್ಕೂ ಅಧಿಕ ಸೇವೆಗಳು ಅಂಚೆ ಇಲಾಖೆಯಲ್ಲಿವೆ.

    ಸುತ್ತಲಿನ ಹತ್ತಾರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪಟ್ಟಣದ ಅಂಚೆ ಕಚೇರಿಗೆ ನಿತ್ಯ ನೂರಾರು ಜನರು ಬಂದು ಹೋಗುತ್ತಾರೆ. ಅಂಚೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆ ಪಡುವಂತಾಗಿದೆ. ಪಟ್ಟಣದ ಉಡುಪಿಯವರ ಚಾಳದಲ್ಲಿ ಮಾಸಿಕ 5 ಸಾವಿರ ರೂ. ಬಾಡಿಗೆ ನೀಡಿ ಅತ್ಯಂತ ಇಕ್ಕಟ್ಟಾದ ಸ್ಥಳದಲ್ಲಿ ಅಂಚೆ ಕಚೇರಿ ನಡೆಯುತ್ತಿದೆ. ಗ್ರಾಹಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ನಿಂತು ಅರ್ಜಿ ಫಾಮ್ರ್ ತುಂಬಲು ಸಮರ್ಪಕ ಸ್ಥಳವಿಲ್ಲ. ಕುಡಿಯಲು ಶುದ್ಧ ನೀರಿಲ್ಲ. ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗೆ ಸೂಕ್ತ ಸ್ಥಳಾವಕಾಶವಿಲ್ಲದಂತಾಗಿದೆ.

    ಅಂಚೆ ಕಚೇರಿಗಳಿಗೆ ನಿವೇಶನ ನೀಡುವಂತೆ ರಾಜ್ಯ ಸರ್ಕಾರ 2011ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿದೆ. ಆದರೆ, ಇದುವರೆಗೆ ಪ.ಪಂ. ವತಿಯಿಂದ ಅಂಚೆ ಕಚೇರಿಗೆ ನಿವೇಶನ ನೀಡಲಾಗಿಲ್ಲ. ಬಾಡಿಗೆಯ ಚಿಕ್ಕ ಮನೆಯಲ್ಲಿ ಅಂಚೆ ಕಚೇರಿ ನಡೆಸುವುದು ಸಿಬ್ಬಂದಿಗೂ ಕಷ್ಟವಾಗುತ್ತಿದೆ.

    ನರೇಗಲ್ಲ ಅಂಚೆ ಕಚೇರಿ ಶತಮಾನದಷ್ಟು ಹಳೆಯದಾಗಿದ್ದು, ಇದುವರೆಗೆ ಸ್ವಂತ ಕಟ್ಟಡವಿಲ್ಲದಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಅಧಿಕಾರಿಗಳು ಈ ಕಚೇರಿಗೆ ಒಂದು ಸುಸಜ್ಜಿತ ಕಟ್ಟಡ ನಿರ್ವಣಕ್ಕೆ ಮುಂದಾಗಬೇಕು.

    | ಡಾ. ಗಜಾನನ ಕಾಳೆ, ನರೇಗಲ್ಲನ ಹಿರಿಯ ನಾಗರಿಕರು

    ನರೇಗಲ್ಲನ ಅಂಚೆ ಕಚೇರಿಗೆ ನಿವೇಶನ ನೀಡುವಂತೆ ಪ.ಪಂ. ಅಧಿಕಾರಿಗಳಿಗೆ ಈ ಹಿಂದೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ನಿವೇಶನ ನೀಡಿಲ್ಲ. ಪ.ಪಂ. ವತಿಯಿಂದ ಸೂಕ್ತ ಸ್ಥಳದಲ್ಲಿ ನಿವೇಶನ ನೀಡಿದಲ್ಲಿ, ಕಟ್ಟಡ ನಿರ್ವಣಕ್ಕೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ.

    | ಚಿದಾನಂದ ಪದ್ಮಶಾಲಿ, ಅಂಚೆ ಅಧೀಕ್ಷಕರು ಗದಗ ವಿಭಾಗ

    ಅಂಚೆ ಕಚೇರಿಗೆ ನಿವೇಶನ ನೀಡುವ ಕುರಿತು ಮುಂಬರುವ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ನಿಯಮಾವಳಿಗಳನ್ನು ನೋಡಿಕೊಂಡು ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.

    | ಅಕ್ಕಮ್ಮ ಮಣ್ಣೊಡ್ಡರ, ನರೇಗಲ್ಲ ಪ.ಪಂ. ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts