More

    ಅಭಿವೃದ್ಧಿಯಾಗಲಿ ಶಿರಸಂಗಿ ಲಿಂಗರಾಜರ ಜನ್ಮಸ್ಥಳ

    ಶಿಗ್ಲಿ: ತ್ಯಾಗವೀರ ಶಿರಸಂಗಿ ಲಿಂಗರಾಜರ ಜನ್ಮ ದಿನ ಹಾಗೂ ಪುಣ್ಯತಿಥಿಯನ್ನು ಸರ್ಕಾರ, ಸಂಘ- ಸಂಸ್ಥೆಗಳು ಒಂದು ದಿನಕ್ಕೆ ಸೀಮಿತವಾಗಿ ಅದ್ದೂರಿಯಾಗಿ ಆಚರಿಸಿ ಮರೆತು ಬಿಡುತ್ತವೆ. ಆದರೆ, ಲಿಂಗರಾಜರ ಜನ್ಮ ಸ್ಥಳವನ್ನು ಅಭಿವೃದ್ಧಿಗೊಳಿಸಲು ಕಿಂಚಿತ್ತೂ ಕಾಳಜಿ ತೋರದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

    ತ್ಯಾಗವೀರ ಶಿರಸಂಗಿ ಲಿಂಗರಾಜರು ಶಿಗ್ಲಿ ಗ್ರಾಮದ ದಿ. ಗೂಳಪ್ಪ ಮಡ್ಲಿ ಹಾಗೂ ಯಲ್ಲಮ್ಮ ಮಡ್ಲಿ ಅವರ ಮಗನಾಗಿ 1861ರ ಜನವರಿ 10 ರಂದು ಜನಿಸಿದರು. 12ನೇ ವಯಸ್ಸಿಗೆ ನವಲಗುಂದ ಹಾಗೂ ಶಿರಸಂಗಿ ಸಂಸ್ಥಾನದ ದತ್ತುಪುತ್ರರಾದರು. ಆದರೆ, ಕಾಲಾನಂತರದಲ್ಲಿ ಸಂಸ್ಥಾನದ ಸಂಪತ್ತು ಅನುಭವಿಸಿ ಮುನ್ನಡೆಸಲು ಲಿಂಗರಾಜರ ಸಂತಾನ ಇಲ್ಲವಾಯಿತು. ಹೀಗಾಗಿ, ಅವರು ಸರ್ವ ಸಂಪತ್ತನ್ನು ಸರ್ಕಾರಕ್ಕೆ ದಾನವಾಗಿ ನೀಡಿದರು. ಸರ್ಕಾರ ದಾನವಾಗಿ ಪಡೆದ ಅಪಾರ ಆಸ್ತಿ- ಪಾಸ್ತಿ ಏನು ಮಾಡಿತು? ಬಂಗಾರದ ಆಭರಣ, ನಗದು ಎಲ್ಲಿ ಹೋದವು? ಬೆಳಗಾವಿ, ವಿಭಜನಾಪೂರ್ವ ಧಾರವಾಡ ಜಿಲ್ಲೆ ಸೇರಿ ರಾಜ್ಯದ ನಾನಾ ಕಡೆಗಳಲ್ಲಿ ಇದ್ದ ಅರಮನೆ, ಜಮೀನು ಏನಾದವು? ಇವೆಲ್ಲ ಯಾರ ಹೆಸರಿನಲ್ಲಿವೆ? ಕೇಂದ್ರ ಅಥವಾ ರಾಜ್ಯ ಸರ್ಕಾರದ ಹೆಸರಿನಲ್ಲಿದೆಯೋ? ಅಥವಾ ಯಾವುದಾದರೂ ಸಂಘ- ಸಂಸ್ಥೆಗಳ ಹೆಸರಿನಲ್ಲಿವೆಯೇ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.

    ಈ ತರನಾಗಿ ಚರ್ಚೆಯಾಗುವುದಕ್ಕೆ ಕಾರಣ ಲಿಂಗರಾಜರ ತ್ಯಾಗ ಗುಣ. ಸರ್ವಸ್ವವನ್ನು ದಾನ ಮಾಡಿದರೂ, ಶಿರಸಂಗಿ ಲಿಂಗರಾಜರು ಹುಟ್ಟಿದ ಊರಾದ ಗದಗ ಜಿಲ್ಲೆಯ ಲಕ್ಷೆ್ಮೕಶ್ವರ ತಾಲೂಕಿನ ಶಿಗ್ಲಿಯಲ್ಲಾಗಲಿ, ದತ್ತು ಪುತ್ರರಾಗಿ ಬಂದ ನವಲಗುಂದ ಮತ್ತು ಶಿರಸಂಗಿ ಗ್ರಾಮದಲ್ಲಾಗಲಿ, ಅವರನ್ನು ನೆನಪಿಸುವ ಕುರುಹುಗಳಿಲ್ಲ. ಕೊನೆ ಪಕ್ಷ ಅವರ ಪರಿಚಯ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯವೂ ಆಗಿಲ್ಲ. ಅವರು ಹುಟ್ಟಿದ ಊರನ್ನು ಅಭಿವೃದ್ಧಿಗೊಳಿಸಿ ಮಾದರಿಯಾಗಿಸುವ ಜವಾಬ್ದಾರಿ ಸರ್ಕಾರದ ಮೇಲಿತ್ತು. ಇಂಥ ಯಾವುದೇ ಪ್ರಯತ್ನಗಳು ನಡೆದಿಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸುತ್ತಾರೆ.

    ಇನ್ನೂ ಇದೆ ತೊಟ್ಟಿಲು!

    ಶಿರಸಂಗಿ ಲಿಂಗರಾಜರು ಮಗುವಿದ್ದಾಗ ಅವರನ್ನು ಮಲಗಿಸುತ್ತಿದ್ದ ತೊಟ್ಟಿಲು ಇನ್ನೂ ಇದೆ. ಶಿಗ್ಲಿ ಗ್ರಾಮದಲ್ಲಿ ಶಿರಸಂಗಿ ಲಿಂಗರಾಜರು ಹುಟ್ಟಿದ ಮನೆತನವಾದ (ಮಡ್ಲಿ) ಈಗಿನ ಬಸವರಾಜ ಬಾಳಪ್ಪಾ ಮಡ್ಲಿ ಅವರ ಮನೆಯಲ್ಲಿ ಇಂದಿಗೂ ತೊಟ್ಟಿಲು ಕಾಣಬಹುದು.

    ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುವ ಜತೆಗೆ ಬಡತನ ನಿಮೂಲನೆಗಾಗಿ ಲಿಂಗರಾಜರು ಮಾಡಿದ ಸತ್ಕಾರ್ಯ ಅವಿಸ್ಮರಣೀಯ. ಅವರು ಹುಟ್ಟಿದ ಊರಾದ ಶಿಗ್ಲಿ, ಶಿರಸಂಗಿ ಗ್ರಾಮದಲ್ಲಿ ಸರ್ಕಾರ ಉನ್ನತ, ತಾಂತ್ರಿಕ ಶಿಕ್ಷಣ ಸಂಸ್ಥೆ ತೆರೆಯಬೇಕು. ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಬೇಕು. ಅಂದಾಗ ಲಿಂಗರಾಜರ ಸದಾಶಯ ಪೂರ್ಣವಾಗುತ್ತದೆ.

    ಎಸ್. ವ್ಹಿ. ಡಾಣಗಲ್, ಶಿಗ್ಲಿ ನಿವಾಸಿ

    ಲಿಂಗರಾಜರ ಜನ್ಮ ಸ್ಥಳ ಶಿಗ್ಲಿ ಗ್ರಾಮವು ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ. ಸರ್ಕಾರ ಸಂಘ-ಸಂಸ್ಥೆಗಳು ಗ್ರಾಮಾಭಿವೃದ್ಧಿಗೆ ಒತ್ತು ನೀಡಬೇಕು. ಮುಂದಿನ ಪೀಳಿಗೆ ನೆನಪಿಡುವ ಮಾದರಿ ಗ್ರಾಮ ನಿರ್ವಣವಾಗಬೇಕಿದೆ.

    ಬಸಪ್ಪ ಶಿರಹಟ್ಟಿ, ಅಧ್ಯಕ್ಷರು ಶ್ರೀ ಶಿರಸಂಗಿ ಲಿಂಗರಾಜ ವಿವಿದ್ಧೋದೇಶಗಳ ವೇದಿಕೆ ಶಿಗ್ಲಿ

    ನಾವು ಶಿರಸಂಗಿ ಲಿಂಗರಾಜರ ವಂಶಸ್ಥರಾಗಿರುವುದು ಹೆಮ್ಮೆ. ಆದರೆ ಅವರ ಜನ್ಮ ಸ್ಥಳ ಶಿಗ್ಲಿ ಗ್ರಾಮದಲ್ಲಿ ಅವರ ಹೆಸರು ಹೇಳಲು ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಸ್ಥಳೀಯ ಉದ್ಯೋಗ ಸೃಷ್ಟಿಯಾಗುವ ಜತೆಗೆ ಲಿಂಗರಾಜ ಹೆಸರು ಚಿರಸ್ಥಾಯಿಯಾಗುವ ಕಾರ್ಯಗಳು ಸರ್ಕಾರದಿಂದಾಗಲಿ.

    ಬಸವರಾಜ ಬಾಳಪ್ಪ ಮಡ್ಲಿ

    ಶಿರಸಂಗಿ ಲಿಂಗರಾಜರ ವಂಶಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts