More

    ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಿ

    ಬೆಳಗಾವಿ: ಬೇಡ ಜಂಗಮ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಮಾತನಾಡಿ, ಡಿಸೆಂಬರ್ ಒಳಗೆ ಸಮಯದಾಯಕ್ಕೆ ಪ್ರಮಾಣ ಪತ್ರ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಜನವರಿಯಲ್ಲಿ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಶೈಕ್ಷಣಿಕವಾಗಿ ತುಳಿತಕ್ಕೊಳಗಾಗಿರುವ ಜಂಗಮರು ಧಾರ್ಮಿಕ ಭಿಕ್ಷಾಟನೆ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ. ಜಾತಿ ಪತ್ರ ಕಾಲಂ ನಂ. 19ರಲ್ಲಿ ಬೇಡ ಜಂಗಮ ದಾಖಲಾತಿ ಇದ್ದರೂ ಪ್ರಮಾಣ ಪತ್ರ ಸಿಗುತ್ತಿಲ್ಲ. ಇದಕ್ಕೆ ಕೆಲ ರಾಜಕಾರಣಿಗಳ ಕೈವಾಡವಿದೆ. ನ್ಯಾಯಾಲಯದಲ್ಲಿ ಬೇಡ ಜಂಗಮರ ಪರ ತೀರ್ಪು ಬಂದರೂ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

    ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಬೇಡಿಕೆ ಈಡೇರಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಇದಕ್ಕಾಗಿ ಪ್ರಾಣ ತ್ಯಾಗಕ್ಕೂ ತಯಾರಿದ್ದೇವೆ ಎಂದರು.

    ಚರ್ಚೆಯ ಭರವಸೆ: ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ವಿಸ್ತೃತ ಚರ್ಚೆಯ ಅವಶ್ಯಕತೆಯಿದೆ. ಅಧಿವೇಶನ ಮುಗಿಯುವುದರ ಒಳಗಾಗಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವ ವಿಷಯವಾಗಿ ಹಿರಿಯ ಹೋರಾಟಗಾರ ಬಿ.ಡಿ. ಹಿರೇಮಠ ಅವರೊಂದಿಗೆ ಎರಡು ಬಾರಿ ಚರ್ಚಿಸಲಾಗಿದೆ. ಅಧಿವೇಶನ ಮುಗಿಯುವುದರೊಳಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಹೊಸೂರು ಬೈಲಹೊಂಗಲ ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಮುತ್ನಾಳ ಹಿರೇಮಠದ ಶಿವಾನಂದ ಸ್ವಾಮೀಜಿ, ಅಥಣಿ ತಾಲೂಕಿನ ಮೊಳೆಯ ಕಾಡಸಿದ್ದೇಶ್ವರ ಮಠದ ಕಾಡಯ್ಯ ಹಿರೇಮಠ, ಸಂಗೊಳ್ಳಿಯ ಗುರುಲಿಂಗ ಸ್ವಾಮೀಜಿ, ದೇವರ ಶಿಗೀಹಳ್ಳಿಯ ಮಡಿವಾಳೇಶ್ವರಮಠದ ವೀರಯ್ಯ ಸ್ವಾಮೀಜಿ, ಮಹಾಂತೇಶ ಶಾಸ್ತ್ರಿ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts