More

    ಮಳೆಗೆ ತುಂಬಿ ಹರಿದ ಕೆರೆ ಕಟ್ಟೆಗಳು

    ಹನೂರು: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ಸಂಜೆ ಸುಮಾರು 2 ಗಂಟೆಗಳ ಕಾಲ ಉತ್ತಮ ಜೋರು ಮಳೆಯಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿಯಿತು. ಇದರಿಂದ ವಾಹನ ಸವಾರರು ಸಂಚರಿಸಲು ಪರದಾಡಿದರೆ ಕೆರೆ- ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮನೆ ಮಾಡಿದೆ.


    ತಾಲೂಕಿನಲ್ಲಿ ಕಳೆದ ವಾರದಿಂದ ಆಗಾಗ್ಗೆ ಜೋರು ಮಳೆಯಾಗುತ್ತಿದ್ದು, ಬತ್ತಿ ಹೋಗಿದ್ದ ಕೆರೆ ಕಟ್ಟೆ, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾಗುತ್ತಿರುವುದು ಒಂದೆಡೆಯಾದರೆ, ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದೆ. ತಾಲೂಕಿನ ರಾಮಾಪುರ, ಲೊಕ್ಕನಹಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಹಾಗೂ ಹನೂರು ಪಟ್ಟಣದಲ್ಲೂ ಸುಮಾರು 2 ಗಂಟೆಗಳ ಕಾಲ ಜೋರು ಮಳೆ ಎಡೆಬಿಡದೇ ಸುರಿಯಿತು. ಇದರಿಂದ ಕೌದಳ್ಳಿಯಿಂದ ಹನೂರಿನವರೆಗೂ ರಸ್ತೆಯ ಇಕ್ಕೆಲ್ಲಗಳಲ್ಲಿ ನೀರು ತುಂಬಿ ಹರಿಯಿತು. ಸಂಜೆಯಾದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡಿದರು. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಇನ್ನು ಹನೂರು ಪಟ್ಟಣದಲ್ಲಿ ಕೆ-ಶಿಪ್ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಕಡೆ ಮಳೆ ನೀರು ನಿಲ್ಲುವಂತಾಯಿತು. ಇದರಿಂದ ಅಂಗಡಿ- ಮುಂಗಟ್ಟುಗಳಿಗೆ ತೆರಳುವ ಸಾರ್ವಜನಿಕರು ಹರಸಾಹಸಪಟ್ಟರು. ಲೊಕ್ಕನಹಳ್ಳಿಗೆ ತೆರಳುವ ರಸ್ತೆಯು ಹದಗೆಟ್ಟಿರುವ ಕಾರಣ ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸಿದರು.


    ಇನ್ನು ಉತ್ತಮ ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದರೆ ಕೆಲವು ಕೆರೆಗಳು ಭರ್ತಿಯತ್ತ ಸಾಗಿದ್ದು, ಆರ್.ಎಸ್. ದೊಡ್ಡಿಯ ಮಹದೇಶ್ವರ ದೇಗುಲ ಸಮೀಪವಿರುವ ಕೆರೆ ಭರ್ತಿಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಕೊಂಚ ಸುಧಾರಣೆ ಕಂಡಿದೆ. ಈಗಾಗಲೇ ತಾಲೂಕಿನ ಬಹುತೇಕ ಕಡೆಗಳಲ್ಲಿ ರೈತರು ಎಳ್ಳು ಹಾಗೂ ಸಜ್ಜೆಯನ್ನು ಬಿತ್ತನೆ ಮಾಡಿದ್ದು, ಆಗಾಗ್ಗೆ ಸುರಿಯುತ್ತಿರುವ ಮಳೆ ಕೃಷಿಗೆ ಪೂರಕವಾಗುತ್ತಿದೆ. ಇದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts