More

    ಕಲ್ಲು ಕ್ವಾರಿಗಳಲ್ಲಿ ಭಯಾನಕ ಸ್ಫೋಟ

    ಕಾರವಾರ: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಕಲ್ಲು ಗಣಿ ಸ್ಫೋಟ ಜಿಲ್ಲೆಯ ಜನರಲ್ಲೂ ಆತಂಕ ಮೂಡಿಸಿದೆ. ಜಿಲ್ಲೆಯ ಕ್ವಾರಿಗಳ ಸುತ್ತ ಇರುವವರು ಭಯಭೀತರಾಗಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಸಿದ್ದಾಪುರ ತಾಲೂಕಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಕ್ವಾರಿ ಸ್ಪೋಟದ ಪರಿಣಾಮ ಉಂಟಾಗಿದ್ದು, ದೊಡ್ಡ ಶಬ್ದದ ಜತೆ ಭೂಮಿ ನಡುಗಿದ ಅನುಭವವಾಗಿದೆ. ಆದರೆ, ಯಾವುದೇ ಹಾನಿಯಾಗಿಲ್ಲ. ಜಿಲ್ಲೆಯಲ್ಲಿ ಇಂಥ ಸ್ಪೋಟದ ಸದ್ದು ಕೇಳಿಸಿದ್ದು ಇದೇ ಮೊದಲಲ್ಲ. ಆದರೆ, ಅದಕ್ಕೆ ಕಾರಣ ಏನು ಎಂಬುದು ಇಂದಿಗೂ ಪತ್ತೆಯಾಗಿಲ್ಲ. 2020 ರ ಫೆ. 19 ರಂದು ಕಾರವಾರ, ಅಂಕೋಲಾ ಹಾಗೂ ಪಕ್ಕದ ಗೋವಾ ರಾಜ್ಯದ ಕಾಣಕೋಣ ಭಾಗದಲ್ಲಿ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಭಾರಿ ಶಬ್ದ ಬಂದಿತ್ತು. ಕಟ್ಟಡಗಳು ಕಂಪಿಸಿದ್ದವು. ಸೀಬರ್ಡ್ ನೌಕಾನೆಲೆಯ ಮೇಲೆ ಬಾಂಬ್ ದಾಳಿಯಾಗಿದೆ. ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಪೋಟವಾಗಿದೆ ಎಂಬ ವದಂತಿಗಳು ಕ್ಷಣ ಮಾತ್ರದಲ್ಲಿ ಹರಡಿ ಜನ ಭಯಭೀತರಾಗಿದ್ದರು. ಜನವರಿ ತಿಂಗಳಲ್ಲಿಯೂ ಅಂಥದ್ದೇ ಶಬ್ದ ಬಂದಿತ್ತು.

    ರಾಮನಗರದ ಜನರ ಆತಂಕ: ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ವಾರಿ ಹಾಗೂ ಕ್ರಶರ್ ಇರುವುದು ಜೊಯಿಡಾ ತಾಲೂಕಿನ ರಾಮನಗರದಲ್ಲಿ. ಅಲ್ಲಿನ ಅಡಾಳಿಯ 30 ಎಕರೆ ಪ್ರದೇಶದಲ್ಲಿ ಕ್ವಾರಿ ನಡೆಸಲು 8 ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಕಾಳಿ ಜಲವಿದ್ಯುತ್ ಯೋಜನೆಯ ನಿರಾಶ್ರಿತರಿಗೆ ಕೃಷಿ ಮಾಡಲು ನೀಡಿದ ಭೂಮಿಯಲ್ಲಿ ಕಲ್ಲು ಗಣಿಮಾಡಲು ಅನುಮತಿಸಿದ ಬಗ್ಗೆ ಸ್ಥಳೀಯರ ಆಕ್ಷೇಪವಿದೆ. ಕ್ವಾರಿಯಿಂದ ಕೇವಲ 1 ಕಿಮೀ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶವಿದೆ. ಅಲ್ಲಿ ನಡೆಯುವ ಭಾರಿ ಸ್ಪೋಟಗಳಿಂದ ಸುತ್ತಲಿನ ಪ್ರದೇಶದ ಜನರ ಮನೆಗಳು ಬಿರುಕು ಬಿಡುತ್ತಿವೆ.

    ಕಾರವಾರದ ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ಕಾಮಗಾರಿಗಾಗಿ ಒಟ್ಟು 60 ಎಕರೆ ಗಣಿ ಮಾಡಲು ಅನುಮತಿ ನೀಡಲಾಗಿದೆ. ಅದನ್ನು ಬಿಟ್ಟು ಕಾರವಾರದಲ್ಲಿ ಇನ್ನೊಂದು ಅಧಿಕೃತ ಕ್ವಾರಿಯಿದೆ. ಅಂಕೋಲಾದ ಗುಂಡಬಾಳದಲ್ಲಿ 7.18 ಎಕರೆ ಪ್ರದೇಶದಲ್ಲಿ 2, ಕುಮಟಾದ ಹನೇಹಳ್ಳಿಯಲ್ಲಿ 10.20 ಎಕರೆ ಪ್ರದೇಶದಲ್ಲಿ 3, ಭಟ್ಕಳದ ಬೇಂಗ್ರೆಯ 10 ಎಕರೆ ಪ್ರದೇಶದಲ್ಲಿ 2 ಕ್ವಾರಿಗಳಿಗೆ ಅನುಮತಿ ನೀಡಲಾಗಿದೆ. ಈ ಎಲ್ಲವೂ ಜನವಸತಿ ಪ್ರದೇಶಗಳ ಸುತ್ತಲೇ ಇದ್ದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಜನರಲ್ಲಿ ಮೂಡಲಾರಂಭಿಸಿದೆ.

    ಮೀನು ಹಿಡಿಯಲೂ ಜಿಲೆಟಿನ್

    ಕಲ್ಲು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡುತ್ತದೆ. ಆದರೆ, ಸ್ಪೋಟಕ್ಕೆ ಅನುಮತಿ ನೀಡುವುದಿಲ್ಲ. ಸ್ಫೋಟ ನಡೆಸಲು ಮಂಗಳೂರಿನಲ್ಲಿರುವ ಪೆಟ್ರೋಲಿಯಂ ಹಾಗೂ ಎಕ್ಸ್​ಪ್ಲೋಸಿವ್ ಆರ್ಗನೈಜೇಶನ್​ನಿಂದ ಅನುಮತಿ ಪಡೆಯಬೇಕಿದೆ. ಜಿಲ್ಲೆಯ ಹಲವು ಗಣಿ ಮಾಲೀಕರು ಆ ಅನುಮತಿ ಹೊಂದಿಲ್ಲ. ಕಲ್ಲು ಗಣಿಗಳಲ್ಲಿ ಸ್ಪೋಟಕ್ಕಾಗಿ ಬೇರೆ ಜಿಲ್ಲೆಯವರನ್ನು ಕರೆಸುತ್ತಾರೆ. ಗಣಿಯಲ್ಲಿ ಸ್ಪೋಟಕ್ಕಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಲಾಗುತ್ತದೆ. ಆದರೆ, ಆ ಕಡ್ಡಿಗಳು ಎಕ್ಸ್​ಪ್ಲೋಸಿವ್ ಲೈಸೆನ್ಸ್ ಪಡೆದವರನ್ನು ಬಿಟ್ಟು ಬೇರೆಯವರಿಗೂ ಕಳ್ಳ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುತ್ತದೆ. ಜಿಲ್ಲೆಯ ಹಲವು ನದಿ ಹಾಗೂ ಸಮುದ್ರಗಳಲ್ಲಿ ಮೀನು ಹಿಡಿಯಲು, ಕಾಡು ಪ್ರಾಣಿಗಳನ್ನು ಹಿಡಿಯಲು ಜಿಲೆಟಿನ್ ಕಡ್ಡಿಗಳನ್ನು ಹಾಕಿ ಸ್ಫೋಟ ನಡೆಸಿದ ಉದಾಹರಣೆಗಳು ಸಾಕಷ್ಟಿವೆ.

    ಹೆದ್ದಾರಿ ಪಕ್ಕದಲ್ಲಿ ಸ್ಫೋಟ

    ರಾಷ್ಟ್ರೀಯ ಹೆದ್ದಾರಿ 66 ರ ವಿಸ್ತರಣೆ ಕಾಮಗಾರಿಗಾಗಿ ವಿವಿಧೆಡೆ ದಿನನಿತ್ಯ ಸ್ಫೋಟ ಮಾಡುತ್ತಲೇ ಇರುತ್ತದೆ. ಹಲವು ಸಂದರ್ಭದಲ್ಲಿ ವಾಹನ ಸಂಚಾರ ನಿಲ್ಲಿಸಿ ಸ್ಫೋಟ ಮಾಡಿದ್ದಿದೆ. ಸ್ಪೋಟದ ಸಂದರ್ಭದಲ್ಲಿ ಕಲ್ಲುಗಳು ಸಿಡಿದು ವಾಹನಗಳು ಜಖಂಗೊಂಡಿದ್ದು, ಜನರಿಗೂ ಪೆಟ್ಟಾದ ಉದಾಹರಣೆಗಳು ಕಳೆದ ಐದು ವರ್ಷಗಳಲ್ಲಿ ನಡೆದಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ, ಜಿಲ್ಲಾಡಳಿತವಾಗಲೀ ಹೆದ್ದಾರಿ ಪಕ್ಕದ ಸ್ಪೋಟದ ಬಗ್ಗೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೆದ್ದಾರಿಗಾಗಿ ನಡೆಯುತ್ತಿರುವ ಸ್ಪೋಟದಿಂದ ಮನೆಗಳಿಗೆ ಹಾನಿಯಾದ ಅದೆಷ್ಟೋ ಉದಾಹರಣೆಗಳಿವೆ.

    ರಾಮನಗರದಲ್ಲಿ ಕೃಷಿ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದರಿಂದ ಸುತ್ತಲಿನ ಜನರಿಗೆ ಆತಂಕ ಉಂಟಾಗುತ್ತಿದೆ. ಅಷ್ಟೇ ಅಲ್ಲ, ಪಕ್ಕದಲ್ಲೇ ಇರುವ ಸಂರಕ್ಷಿತ ಅರಣ್ಯದ ಪ್ರಾಣಿಗಳಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಿಗೂ ಗುರುವಾರ ದೂರು ನೀಡಲಾಗಿದೆ.

    ಶರತ್​ಚಂದ್ರ ಗುರ್ಜರ್ , ತಾಪಂ ಸದಸ್ಯ, ಜೊಯಿಡಾ

    ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವವರು ಸ್ಪೋಟಕ ಪರವಾನಗಿ ಹಾಜರುಪಡಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಸಮರ್ಪಕವಾಗಿ ಪರಿಶೀಲಿಸಿ, ನಿಯಮ ಬಾಹಿರವಿದ್ದರೆ ಕ್ರಮ ಕೈಗೊಳ್ಳಲಾಗುವುದು.

    ಸೋಮಶೇಖರ, ಗಣಿ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts